Thursday, May 28, 2020

ಬಲವಂತವಾಗಿ ಶಾಲಾ ಶುಲ್ಕ ವಸೂಲಾತಿ ಮಾಡುವಂತಿಲ್ಲ

ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ತಹಸೀಲ್ದಾರ್ ಶಿವಕುಮಾರ್ ಎಚ್ಚರಿಕೆ 

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಗುರುವಾರ ತಹಸೀಲ್ದಾರ್ ಶಿವಕುಮಾರ್ ನೇತೃತ್ವದಲ್ಲಿ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ನಡೆಯಿತು. 
ಭದ್ರಾವತಿ, ಮೇ. ೨೮: ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಬಲವಂತದಿಂದ ಶಾಲಾ ಶುಲ್ಕ ವಸೂಲಾತಿ ಮಾಡುವಂತಿಲ್ಲ ಎಂದು ತಹಸೀಲ್ದಾರ್ ಶಿವಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. 
ಅವರು ಗುರುವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 
ಪ್ರಸ್ತುತ ಕೊರೋನಾ ವೈರಸ್ ಪರಿಣಾಮ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದು, ಈ ಸಂದಿಗ್ದ ಪರಿಸ್ಥಿತಿಯಲ್ಲಿ ಬಲವಂತವಾಗಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದೆ. ಇದನ್ನು ಪಾಲಿಸುವಂತೆ ಮನವಿ ಮಾಡಿದರು. 
ಸಭೆಯಲ್ಲಿ ಪಾಲ್ಗೊಂಡಿದ್ದ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಮಾತನಾಡಿ, ಶಾಲಾ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ತಾಲೂಕು ಆಡಳಿತ ಹಾಗು ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ತಹಸೀಲ್ದಾರ್‌ರವರು ಪೂರಕವಾಗಿ ಸ್ಪಂದಿಸಿ ಸಭೆ ಕರೆದಿದ್ದು, ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂ ಈ ಬಾರಿ ಶಾಲಾ ಶುಲ್ಕ ವಸೂಲಾತಿ ಮಾಡಬಾರದು. ಅದರಲ್ಲೂ ಭದ್ರಾವತಿಯಂತಹ ನಗರದಲ್ಲಿ ಶ್ರೀಸಾಮಾನ್ಯರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಯಾವುದೇ ಉದ್ಯೋಗವಿಲ್ಲದೆ ದಿನದ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದನ್ನು ಅರ್ಥ ಮಾಡಿಕೊಂಡು ಖಾಸಗಿ ಶಾಲೆಗಳು ಸಹಕರಿಸಬೇಕು. ಅಲ್ಲದೆ ಈ ಸಂಬಂಧ ಸರ್ಕಾರ ಸಹ ಆದೇಶ ಹೊರಡಿಸಿದ್ದು, ಇದನ್ನು ಪಾಲಿಸುವ ಮೂಲಕ ಶ್ರೀಸಾಮಾನ್ಯರ ನೆರವಿಗೆ ಮುಂದಾಗುವಂತೆ ಕೋರಿದರು. 
ಒಂದು ವೇಳೆ ಸರ್ಕಾರದ ಆದೇಶ ಉಲ್ಲಂಘಿಸಿ, ಬಲವಂತವಾಗಿ ಶುಲ್ಕ ವಸೂಲಾತಿ ಮಾಡಿದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಎಚ್ಚರಿಸಿದರು. 
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ರಾಜಶೇಖರ್, ಶಿಕ್ಷಣ ಸಂಯೋಜಕ ರವಿಕುಮಾರ್, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಇಬ್ರಾಹಿಂ ಖಾನ್, ಪೀಟರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸುಮಾರು ೫೨ ಖಾಸಗಿ ಶಾಲೆಗಳ ಮುಖ್ಯಸ್ಥರು ಸಭೆಯಲ್ಲಿ ಪಾಲ್ಗೊಂಡಿದ್ದರು. 

ಗೊಂದಿ ನಾಲೆಗೆ ಹಾರಿ ತಾಯಿ ಸೇರಿದಂತೆ ಇಬ್ಬರು ಮಕ್ಕಳು ಆತ್ಮಹತ್ಯೆ

ಭದ್ರಾವತಿಯಲ್ಲಿ ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಮೃತದೇಹಗಳನ್ನು ಗುರುವಾರ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಿಂದಿರುಗಿಸಲಾಯಿತು. 
ಭದ್ರಾವತಿ, ಮೇ. ೨೮: ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ತಾಯಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. 
ನಗರಸಭೆ ವ್ಯಾಪ್ತಿಯ ನೆಹರು ನಗರ ನಿವಾಸಿ ಚಂದ್ರಕಲಾ(೩೩), ಹೆಣ್ಣು ಮಕ್ಕಳಾದ ಶ್ವೇತಾ(೮) ಮತ್ತು ರೋಹಿಣಿ(೪) ಮೃತಪಟ್ಟಿದ್ದಾರೆ. ಬುಧವಾರ ಸಂಜೆ ಕೋಡಿಹಳ್ಳಿ ಗ್ರಾಮದ ಗೊಂದಿ ನಾಲೆಗೆ ಹಾರಿದ್ದು, ಇದನ್ನು ಸ್ಥಳೀಯರು ಗಮನಿಸಿ ಹುಡುಕಾಟ ನಡೆಸಿದ ಹಿನ್ನಲೆಯಲ್ಲಿ ೩ ಮೃತ ದೇಹಗಳು ಪತ್ತೆಯಾಗಿವೆ. 
ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಮೃತದೇಹಗಳ ಶವ ಪರೀಕ್ಷೆ ನಡೆದು ವಾರಸುದಾರರಿಗೆ ಹಿಂದಿರುಗಿಸಲಾಯಿತು. 
ಆತ್ಮಹತ್ಯೆಗೆ ಕೌಟುಂಬಿಕ ಕಲಹ ಕಾರಣ ಎನ್ನಲಾಗಿದೆ. ಈ ಸಂಬಂಧ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಪತಿ ವೆಂಕಟೇಶ್ ವಿರುದ್ಧ ದೂರು ದಾಖಲಾಗಿದೆ ಎಂದು ವಾರ್ಡ್ ನಗರಸಭೆ ಹಿರಿಯ ಸದಸ್ಯ ಆರ್. ಕರುಣಾಮೂರ್ತಿ ತಿಳಿಸಿದ್ದಾರೆ. 


Wednesday, May 27, 2020

ಅಕ್ಷರ ದಾಸೋಹ ಮಹಿಳೆಯರ ನೆರವಿಗೆ ಮುಂದಾಗಿ : ಸರ್ಕಾರಕ್ಕೆ ಮನವಿ

ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ನೆರವಿಗೆ ಮುಂದಾಗುವಂತೆ ಒತ್ತಾಯಿಸಿ ಭದ್ರಾವತಿಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಮೂಲಕ ಮುಖ್ಯಮಂತ್ರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಮೇ. ೨೭: ಕೊರೋನಾ ವೈರಸ್ ಪರಿಣಾಮ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವ ದುರ್ಬಲ ವರ್ಗದ ಮಹಿಳೆಯರು  ಸಂಕಷ್ಟಕ್ಕೆ ಒಳಗಾಗಿದ್ದು, ಸರ್ಕಾರ ಇವರ ನೆರವಿಗೆ ಮುಂದಾಗಬೇಕೆಂದು ಆಗ್ರಹಿಸಿ ಬುಧವಾರ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಅಕ್ಷರ ದಾಸೋಹ ಯೋಜನೆಯಡಿ ದುರ್ಬಲ ವರ್ಗಕ್ಕೆ ಸೇರಿದ ಸುಮಾರು ೧.೧೮ ಲಕ್ಷ ಮಹಿಳೆಯರು ಹಲವಾರು ವರ್ಷಗಳಿಂದ ದುಡಿಯುತ್ತಿದ್ದು, ಈ ಪೈಕಿ ವಿಧವೆಯರು, ವಿಚ್ಛೇದಿತರು, ಕಡು ಬಡ ಕುಟುಂಬದ ಮಹಿಳೆಯರು ಹೆಚ್ಚಾಗಿದ್ದಾರೆ.  ಬೇಸಿಗೆ ದಿನಗಳಲ್ಲಿ, ಬರಗಾಲದ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂದಿಗ್ದ ಪರಿಸ್ಥಿತಿಯಲ್ಲೂ ಅಕ್ಷರ ದಾಸೋಹ ಯೋಜನೆಯ ಆಹಾರ ಧಾನ್ಯಗಳನ್ನು ಮಕ್ಕಳ ಮನೆಗಳಿಗೆ ತಲುಪಿಸುತ್ತಿದ್ದಾರೆ. ಆದರೆ ಈ ಮಹಿಳೆಯರಿಗೆ ಸರ್ಕಾರದ ಯಾವುದೇ ಸೌಲಭ್ಯಗಳು ಲಭಿಸದೆ ವಂಚಿತರಾಗಿದ್ದಾರೆಂದು ಅಳಲು ವ್ಯಕ್ತಪಡಿಸಲಾಗಿದೆ. 
ಸರ್ಕಾರ ತಕ್ಷಣ ಏಪ್ರಿಲ್ ತಿಂಗಳಿನಿಂದ ಪುನಃ ಶಾಲೆಗಳು ಪ್ರಾರಂಭವಾಗುವವರೆಗೂ ಈ ಮಹಿಳೆಯರ ಜೀವನ ನಿರ್ವಹಣೆಗೆ ಸಂಪೂರ್ಣ ವೇತನ ನೀಡುವುದು. ಎಲ್‌ಐಸಿ ಆಧಾರಿತ ಪೆನ್ಷನ್ ನೀಡುವುದು, ಖಾಯಂ ಗೊಳಿಸುವುದು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರವೇಶ ಶುಲ್ಕ ಮತ್ತು ಇತರೆ ಶುಲ್ಕಗಳಿಂದ ಸಂಪೂರ್ಣ ವಿನಾಯಿತಿ ನೀಡುವುದು ಹಾಗೂ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸಿಕೊಡುವಂತೆ ಒತ್ತಾಯಿಸಲಾಗಿದೆ.
ಅಧ್ಯಕ್ಷೆ ಹನುಮಮ್ಮ, ಕಾರ್ಯದರ್ಶಿ ಬಿ. ಸರಸ್ವತಿ, ಪದಾಧಿಕಾರಿಗಳಾದ ಪಿ. ಶೆಲ್ವಿ, ಶಶಿಕಲಾ, ಜಯಲಕ್ಷ್ಮಿ, ಅನುಸೂಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, May 26, 2020

೩೦೦ ಮಂದಿ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಣೆ

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಛಲವಾದಿ ಮಹಾಸಭಾ ವತಿಯಿಂದ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು. 
ಭದ್ರಾವತಿ, ಮೇ. ೨೬: ಕೊರೋನಾ ವೈರಸ್ ಪರಿಣಾಮ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಛಲವಾದಿ ಮಹಾಸಭಾ ಮುಂದಾಗಿದ್ದು, ಸುಮಾರು ೩೦೦ ಮಂದಿ ಕಡುಬಡವರಿಗೆ ದಿನಸಿ ಸಾಮಗ್ರಿ ವಿತರಿಸಲಾಯಿತು.
ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ನಗರಸಭೆ ಪೌರಾಯುಕ್ತ ಮನೋಹರ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಚಾಲನೆ ನೀಡಿದರು.
  ಛಲವಾದಿ ಮಹಾಸಭಾ ಅಧ್ಯಕ್ಷ ಸುರೇಶ್, ಮುಖಂಡರಾದ ಜಯರಾಜ್, ಇ.ಪಿ ಬಸವರಾಜ್, ಮಹೇಶ್, ಆದಿತ್ಯಶಾಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ನಿವೃತ್ತ ಶಿಕ್ಷಕಿ, ಮಾಜಿ ನಗರಸಭೆ ಸದಸ್ಯೆ ಎ.ಎಸ್ ಜಯಮ್ಮ ನಿಧನ

ಎ.ಎಸ್ ಜಯಮ್ಮ 
ಭದ್ರಾವತಿ, ಮೇ. ೨೬: ಜನ್ನಾಪುರ ಎನ್‌ಟಿಬಿ ರಸ್ತೆ ನಿವಾಸಿ ದಿವಂಗತ ಎಚ್.ಎಸ್ ಗಂಗಾಧರಗೌಡರವರ ಪತ್ನಿ ನಿವೃತ್ತ ಶಿಕ್ಷಕಿ ಎ.ಎಸ್. ಜಯಮ್ಮ(೭೮) ನಿಧನ ಹೊಂದಿದರು.
ಎ.ಎಸ್ ಜಯಮ್ಮ ಈ ಹಿಂದೆ ನಗರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಮೃತರು ಮೂವರು, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು- ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ನಿಧನಕ್ಕೆ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ. 

ಎಂಪಿಎಂ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಖಾಯಂಗೊಳಿಸಿ ಸೇವಾ ಭದ್ರತೆ ನೀಡಿ

ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ 

ಭದ್ರಾವತಿ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭದ್ರಾವತಿ, ಮೇ. ೨೬: ರಾಜ್ಯ ಸರ್ಕಾರಿ ಸ್ವಾಮ್ಯದ ನಗರದ ಮೈಸೂರು ಕಾಗದ ಕಾರ್ಖಾನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬ್ಯಾಕ್‌ಲಾಗ್(ಎಸ್.ಸಿ/ಎಸ್.ಟಿ) ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಿ ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಖಾಯಂ ಸೇವಾ ಭದ್ರತೆ ನೀಡುವಂತೆ ಒತ್ತಾಯಿಸಿ ಮಂಗಳವಾರ ತಹಸೀಲ್ದಾರ್ ಶಿವಕುಮಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. 
ಬ್ಯಾಕ್‌ಲಾಗ್ ಹುದ್ದೆಗಳು ನೇರ ನೇಮಕಾತಿಯಾಗಿದ್ದು, ಕೆಲಸಕ್ಕೆ ಸೇರಿದ ದಿನದಿಂದ ಪೂರ್ಣ ಪ್ರಮಾಣದ ಮೂಲವೇತನ ಮತ್ತು ಇತರೆ ಭತ್ಯೆಗಳನ್ನು ಪಡೆಯಲು ಉದ್ಯೋಗಿಗಳು ಅರ್ಹರಾಗಿರುತ್ತಾರೆ. ಆದರೆ ಬ್ಯಾಕ್‌ಲಾಗ್ ನಿಯಮಗಳನ್ನು ಉಲ್ಲಂಘಸಿ ಕಾರ್ಖಾನೆ ಆಡಳಿತ ಮಂಡಳಿ ೨೦೦೮ರಲ್ಲಿ ನೇಮಕಗೊಂಡಿರುವ ಉದ್ಯೋಗಿಗಳಿಗೆ ತರಬೇತಿ ನಿಗದಿಪಡಿಸಿ ಶಿಷ್ಯ ವೇತನ ನೀಡುವ ಮೂಲಕ ಅನ್ಯಾಯವೆಸಗಿದೆ. ಅಲ್ಲದೆ ತರಬೇತಿ ಮುಗಿದ ನಂತರ ಅತ್ಯಂತ ಕನಿಷ್ಠ ಮೂಲ ವೇತನ ನಿಗದಿಪಡಿಸಿದೆ. ಕೆಲಸಕ್ಕೆ ಸೇರಿದ ದಿನದಿಂದ ಇದುವರೆಗೂ ಯಾವುದೇ ರೀತಿಯ ವೇತನ ಹೆಚ್ಚಳವಾಗಿಲ್ಲ. ಯಾವುದೇ ಭಡ್ತಿ ಸಹ ದೊರೆತ್ತಿಲ್ಲ. ೨೦೧೨ ಮತ್ತು ೨೦೧೭ರ ವೇತನ ಒಪ್ಪಂದಗಳು ಸಹ ಆಗಿರುವುದಿಲ್ಲ ಎಂದು ಉದ್ಯೋಗಿಗಳು ಅಳಲು ವ್ಯಕ್ತಪಡಿಸಿದರು. 
ಈ ನಡುವೆ ಕಾರ್ಖಾನೆಯನ್ನು ನಷ್ಟದ ನೆಪ್ಪವೊಡ್ಡಿ ರಾಜ್ಯ ಸರ್ಕಾರ ಖಾಸಗಿಕರಣಗೊಳಿಸಲು ಮುಂದಾಗಿ ಉದ್ಯೋಗಿಗಳಿಗೆ ವಿಆರ್‌ಎಸ್ ಮತ್ತು ವಿಎಸ್‌ಎಸ್ ಸ್ವಯಂ ನಿವೃತ್ತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಸುಮಾರು ೮೦೦ಕ್ಕೂ ಹೆಚ್ಚು ಉದ್ಯೋಗಿಗಳು ಸ್ವಯಂ ನಿವೃತ್ತಿ ಹೊಂದಿರುತ್ತಾರೆ. ಆದರೆ ೧೧೨ ಬ್ಯಾಕ್‌ಲಾಗ್ ಉದ್ಯೋಗಿಗಳು ಕನಿಷ್ಠ ೧೦ ವರ್ಷ ಸೇವಾವಧಿ ಪೂರ್ಣಗೊಳಿಸಿರುವುದಿಲ್ಲ. ಸುಮಾರು ೧೦ ರಿಂದ ೨೦ ವರ್ಷ ಸೇವಾವಧಿ ಇದ್ದು ಈ ಹಿನ್ನಲೆಯಲ್ಲಿ ಸ್ವಯಂ ನಿವೃತ್ತಿ ಪಡೆದಿರುವುದಿಲ್ಲ. ತಕ್ಷಣ ಬ್ಯಾಕ್‌ಲಾಗ್ ಉದ್ಯೋಗಿಗಳನ್ನು ಸರ್ಕಾರದ ವಿವಿಧ ನಿಗಮ, ಮಂಡಳಿಗಳಲ್ಲಿ ನಿಯೋಜನೆಗೊಳಿಸಿ ಉದ್ಯೋಗಿಗಳಿಗೆ ವೇತನ ಪರಿಷ್ಕರಿಸಬೇಕೆಂದು ಒತ್ತಾಯಿಸಿದರು. 
ಎಂಪಿಎಂ ಬ್ಯಾಲ್‌ಲಾಗ್ ಉದ್ಯೋಗಿಗಳ ಹೋರಾಟ ಸಮಿತಿ ಅಧ್ಯಕ್ಷ ವಿ.ಎನ್ ದೊಡ್ಡಯ್ಯ, ಉಪಾಧ್ಯಕ್ಷ ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಅರ್ನುನ್ ರಾತೋಡ್, ಸಹಕಾರ್ಯದರ್ಶಿ ಆರ್. ನಾಗರಾಜ್, ಖಜಾಂಚಿ ಶಿವರಾಜ್, ಪಾರ್ವತಮ್ಮ, ಲತಾ, ಮಂಜುಳ, ಎಸ್. ರಾಜಪ್ಪ, ನರಸಿಂಹಪ್ಪ, ಓಂಕಾರಪ್ಪ, ವೆಂಕಟೇಶ್ ನಾಯ್ಕ, ಶೆಲ್ವಕುಮಾರ್, ಕೈಲಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

Sunday, May 24, 2020

ಶಾಲಾ ಮಕ್ಕಳ ಮನೆಗಳಿಗೆ ಆಹಾರ ಪದಾರ್ಥ ತಲುಪಿಸುವ ವ್ಯವಸ್ಥೆ ಕೈಗೊಳ್ಳಿ

ಶಾಲಾ ಮಕ್ಕಳಿಗೆ ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವ ತನಕ ಆಹಾರ ಪದಾರ್ಥಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಭದ್ರಾವತಿಯಲ್ಲಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 
ಭದ್ರಾವತಿ, ಮೇ. ೨೪: ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಹಾಲಿನ ಪೌಡರ್ ಮತ್ತು ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ ಸೌಲಭ್ಯಗಳು ಸ್ಥಗಿತಗೊಂಡಿರುವ ಕಾರಣ ಕಳೆದ ೨-೩ ತಿಂಗಳಿನಿಂದ ಆಹಾರ ಪದಾರ್ಥಗಳು ಹಾಳಾಗುತ್ತಿವೆ. ಈ ಹಿನ್ನಲೆಯಲ್ಲಿ ಶಾಲಾ ಮಕ್ಕಳಿಗೆ ಏಪ್ರಿಲ್ ತಿಂಗಳಿನಿಂದ ಶಾಲೆ ಆರಂಭವಾಗುವ ತನಕ ಆಹಾರ ಪದಾರ್ಥಗಳನ್ನು ಅವರ ಮನೆಗಳಿಗೆ ತಲುಪಿಸುವ ವ್ಯವಸ್ಥೆ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಂಯುಕ್ತ ಜನತಾದಳ ಯುವ ಘಟಕದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. 
ಸರ್ಕಾರ ಕೈಗೊಂಡಿರುವ ಯೋಜನೆ ಶಾಲಾ ಮಕ್ಕಳಿಗೆ ಸದ್ಬಳಕೆಯಾಗಬೇಕು. ಈ ಹಿನ್ನಲೆಯಲ್ಲಿ ಶಿಕ್ಷಣ ಇಲಾಖೆ ಗಮನ ಹರಿಸಬೇಕು. ಪ್ರಸ್ತುತ ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಲಾಕ್‌ಡೌನ್ ಜಾರಿ ಹಿನ್ನಲೆಯಲ್ಲಿ ಉದ್ಯೋಗವಿಲ್ಲದೆ ಶ್ರೀ ಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೀವನ ಸಾಗಿಸುವುವೇ ಕಷ್ಟಕರವಾಗಿದೆ.
ಈ ನಡುವೆ ಖಾಸಗಿ ಶಾಲೆಗಳು ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿವೆ.  ಶಾಲೆಗಳಲ್ಲಿ ದಾಖಲಾತಿ ಪ್ರಾರಂಭಿಸುವ ಮೊದಲೇ ಮಕ್ಕಳ ಪೋಷಕರ ಮೊಬೈಲ್‌ಗಳಿಗೆ ಸಂದೇಶ ಕಳುಹಿಸುತ್ತಿದ್ದು, ಮುಂಗಡ ಶುಲ್ಕ ಪಾವತಿಸುವಂತೆ ಒತ್ತಾಯಿಸಲಾಗುತ್ತಿದೆ. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕೈಗೊಳ್ಳಬೇಕು. ಪೋಷಕರ ಆತಂಕ ದೂರ ಮಾಡಿ ಮುಖಂಡ ಹಣ ಪಾವತಿಸಲು ಕಾಲಾವಕಾಶ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.