ಭದ್ರಾವತಿ ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬುಧವಾರ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಹಳೇನಗರ ಪೊಲೀಸ್ ಠಾಣಾಧಿಕಾರಿ ಹಾಗೂ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶಾಂತಮ್ಮ, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.
ಭದ್ರಾವತಿ, ಜೂ. ೨೪: ರಾಜ್ಯಾದ್ಯಂತ ಗುರುವಾರದಿಂದ ಆರಂಭಗೊಳ್ಳಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ತಾಲೂಕಿನಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಮತ್ತು ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತಾ ಕಾರ್ಯಗಳನ್ನು ಮರು ಪರಿಶೀಲನೆ ನಡೆಸಿದರು.
ಪತ್ರಿಕೆಯೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಒಟ್ಟು ೧೮ ಖಾಸಗಿ ಬಸ್‌ಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಈ ಪೈಕಿ ೧೪ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಸಂಚರಿಸಲಿವೆ. ಉಳಿದಂತೆ ೪ ಬಸ್‌ಗಳು ಹೆಚ್ಚುವರಿಯಾಗಿ ಮೀಸಲಿಡಲಾಗಿದೆ. ೧ ಕೆಎಸ್‌ಆರ್‌ಟಿಸಿ ಬಸ್ ಸಹ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಸ್ ತಾಲೂಕಿನ ಬಂಡಿಗುಡ್ಡ ಮಾರ್ಗವಾಗಿ ಸಂಚರಿಸಲಿದೆ ಎಂದರು.
ತಾಲೂಕಿನಲ್ಲಿ ಒಟ್ಟು ೧೫ ಪರೀಕ್ಷಾ ಕೇಂದ್ರಗಳಿದ್ದು, ಹೆಚ್ಚುವರಿಯಾಗಿ ೩ ಪರೀಕ್ಷಾ ಕೇಂದ್ರಗಳನ್ನು ಕಾಯ್ದಿರಿಸಲಾಗಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ ಈ ಹಿಂದೆ ೨೪ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ನಿರ್ಧರಿಸಲಾಗಿತ್ತು. ಇದೀಗ ೨೦ಕ್ಕೆ ಸೀಮಿತಗೊಳಿಸಲಾಗಿದೆ. ನ್ಯೂಟೌನ್ ಸೇಂಟ್ ಚಾರ್ಲ್ಸ್ ಪರೀಕ್ಷಾ ಕೇಂದ್ರ ತಾಲೂಕಿನಲ್ಲಿ ಅತಿದೊಡ್ಡ ಪರೀಕ್ಷಾ ಕೇಂದ್ರವಾಗಿದ್ದು, ಹೆಚ್ಚಿನ ವಿದ್ಯಾರ್ಥಿಗಳನ್ನು ಒಳಗೊಂಡಿದೆ. ಹೊಳೆಹೊನ್ನೂರಿನ ಸೇಂಟ್ ಮೇರಿಸ್ ಅತಿ ಚಿಕ್ಕ ಪರೀಕ್ಷಾ ಕೇಂದ್ರವಾಗಿದೆ ಕಡಿಮೆ ವಿದ್ಯಾರ್ಥಿಗಳನ್ನು ಒಳಗೊಂಡಿದೆ ಎಂದರು.
ಪರೀಕ್ಷಾ ಕೇಂದ್ರಗಳಲ್ಲಿ ಒಬ್ಬ ವಿದ್ಯಾರ್ಥಿಗೆ ೨ ಮಾಸ್ಕ್ ವಿತರಣೆಗೆ ವ್ಯವಸ್ಥೆ ಕೈಗೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ದಾನಿಗಳು ನೀಡಿರುವ ಮಾಸ್ಕ್‌ಗಳನ್ನು ಆಯಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿಡಲಾಗಿದೆ. ಪ್ರತಿಯೊಂದು ಪರೀಕ್ಷಾ ಕೇಂದ್ರಕ್ಕೂ ೨ ಥರ್ಮೋ ಸ್ಕ್ರೀನಿಂಗ್ ಯಂತ್ರ ಹಾಗೂ ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ. ಅಲ್ಲದೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳಲಾಗಿದೆ ಎಂದರು.
ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಸಲಾಗಿದ್ದು, ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕೈಗೊಳ್ಳಬೇಕಾಗಿರುವ ಕಾರ್ಯಗಳ ಕುರಿತು ಪುನಃ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ ವಿದ್ಯಾರ್ಥಿ ಕರ್ನಾಟಕ ಪರೀಕ್ಷಾ ಮಂಡಳಿ ವತಿಯಿಂದ ಜಾಗೃತಿ ಕರಪತ್ರಗಳನ್ನು ಹಾಗೂ ಪರೀಕ್ಷಾ ಕೇಂದ್ರಗಳಿಗೆ ಪೋಸ್ಟರ್‌ಗಳನ್ನು ವಿತರಿಸಲಾಗಿದೆ. ಎಲ್ಲಾ ಕಾರ್ಯಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನೊಳಗೊಂಡ ವೀಕ್ಷಕರ ತಂಡ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಇದರ ಜೊತೆಗೆ ಹೊಸದಾಗಿ ‘ಬಿ’ ಗ್ರೂಪ್ ಅಧಿಕಾರಿಗಳನ್ನೊಳಗೊಂಡ ಸ್ಥಾನಿಕ ಜಾಗೃತಿ ದಳ ಸಹ ಕಾರ್ಯ ನಿರ್ವಹಿಸಲಿದೆ. ಒಟ್ಟಾರೆ ಪರೀಕ್ಷೆ ಯಶಸ್ವಿಯಾಗಿ ನಡೆಯಲು ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಪೊಲೀಸ್ ಉಪಾಧೀಕ್ಷರ ಸುಧಾಕರ ನಾಯ್ಕ ಮಾತನಾಡಿ, ತಾಲೂಕಿನ ೧೫ ಪರೀಕ್ಷಾ ಕೇಂದ್ರಗಳಲ್ಲಿ ತಲಾ ಇಬ್ಬರು ಪೊಲೀಸರು ಕರ್ತವ್ಯ ನಿರ್ವಹಿಸಲಿದ್ದು, ಒಟ್ಟು ೩೦ ಮಂದಿಯೊಂದಿಗೆ ರೂಟ್ ಕಾರ್ಯಚರಣೆಯಲ್ಲಿ ೭ ಮಂದಿ ಪೊಲೀಸರನ್ನು ನಿಯೋಜನೆಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮತ್ತ ಜನದಟ್ಟಣೆ ಉಂಟಾಗದಂತೆ ಎಚ್ಚರವಹಿಸಲಾಗಿದ್ದು, ಪ್ರತಿಯೊಬ್ಬರು ಮಾಸ್ಕ್ ಧರಿಸಿ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು, ಪರೀಕ್ಷಾ ಕೇಂದ್ರಗಳ ಅಧಿಕಾರಿಗಳು, ಸಿಬ್ಬಂದಿಗಳಿಗೆ ಮಾತ್ರ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶ ಕಲ್ಪಿಸಲಾಗಿದೆ. ಇತರರಿಗೆ ಪ್ರವೇಶ ನಿಬಂಧಿಸಲಾಗಿದೆ ಎಂದರು.