Monday, June 29, 2020

ನಟರಾಜ್ ನಿಧನ

ನಟರಾಜ್ 
ಭದ್ರಾವತಿ, ಜೂ. ೨೯: ನಗರದ ಜನ್ನಾಪುರ ಲಿಂಗಾಯಿತರ ಬೀದಿ ನಿವಾಸಿ, ಹಳೇನಗರದ ಟಿಎಂಎಇಎಸ್ ಕೈಗಾರಿಕಾ ತರಬೇತಿ ಕೇಂದ್ರದ ಕಿರಿಯ ತರಬೇತಿ ಅಧಿಕಾರಿ ಎಂ. ನಟರಾಜ್(೫೪) ಸೋಮವಾರ ಬೆಳಿಗ್ಗೆ ನಿಧನ ಹೊಂದಿದರು.
  ನ್ಯೂಟೌನ್ ಮಹಾತ್ಮಗಾಂಧಿ ಉದ್ಯಾನ ವನದಲ್ಲಿ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಪತ್ನಿ ಹಾಗೂ ಸಹೋದರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ ಅಪ್ಪಾಜಿ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿದ್ದಲಿಂಗಯ್ಯ, ಐಟಿಐ ಪ್ರಾಂಶುಪಾಲ ದಾನಪ್ಪ ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ನಗರದ ಇನ್ನಿತರರು ಗಣ್ಯರು ಸಂತಾಪ ಸೂಚಿಸಿದ್ದಾರೆ. 

Sunday, June 28, 2020

ವೈದ್ಯರು, ಸಿಬ್ಬಂದಿಗಳಿಗೆ ಅಭಿನಂದನಾ ಸಮಾರಂಭ

ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಪರಿಣಾಮ ಪ್ರಸ್ತುತ ಎದುರಾಗಿರುವ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹಳೇನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳಿಗೆ ಜೂ.೨೯ರಂದು ಮಧ್ಯಾಹ್ನ ೩.೩೦ಕ್ಕೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. 
ತಾಲೂಕು ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಳೆದ ಕೆಲವು ದಿನಗಳ ಹಿಂದೆ ನಗರದ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರ ಯಶಸ್ವಿಯಾದ ಹಿನ್ನಲೆಯಲ್ಲಿ ಕಾರಣಕರ್ತರಾದವರಿಗೂ ಸಹ ಅಭಿನಂದನೆ ನಡೆಯಲಿದ್ದು, ಸಮಾರಂಭ ಯಶಸ್ವಿಗೊಳ್ಳುವಂತೆ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಓ ಮಲ್ಲಪ್ಪ ಕೋರಿದ್ದಾರೆ. 

ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ, ನಾಮಫಲಕ ವಿತರಣೆ

ಭದ್ರಾವತಿಯಲ್ಲಿ ರೋಟರಿ ಕ್ಲಬ್ ವತಿಯಿಂದ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. 
ಭದ್ರಾವತಿ, ಜೂ. ೨೮: ಕೊರೋನಾ ವೈರಸ್ ಸಂಕಷ್ಟಗಳಿಗೆ ಸ್ಪಂದಿಸುವ ಜೊತೆಗೆ ಸೇವಾ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೋಟರಿ ಕ್ಲಬ್ ಈ ಬಾರಿ ನಗರದ ವಿವಿಧೆಡೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ಕೊಡುಗೆಯಾಗಿ ನೀಡಿದೆ. 
ಜಿಲ್ಲಾ ಗವರ್ನರ್ ಬಿ.ಎನ್ ರಮೇಶ್‌ರವರು ಕ್ಲಬ್‌ಗೆ ಅಧಿಕೃತ ಭೇಟಿ ನೀಡಿದ ಹಿನ್ನಲೆಯಲ್ಲಿ ಸಂಚಾರಿ ಪೊಲೀಸರಿಗೆ ನೆರವಾಗುವ ಉದ್ದೇಶದೊಂದಿಗೆ ಸಂಚಾರಿ ಸೂಚಕ ಹಾಗೂ ನಾಮಫಲಕಗಳನ್ನು ನಗರದ ರಂಗಪ್ಪ ವೃತ್ತದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಯಿತು. 
  ತಾಲೂಕಿನ ಗ್ರಾಮೀಣಾ ಭಾಗದ ಮಕ್ಕಳ ನೆರವಿಗೆ ಮುಂದಾಗುವ ಉದ್ದೇಶದೊಂದಿಗೆ ಕೊಮಾರನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಕ್ಲಬ್ ವತಿಯಿಂದ ಅಗತ್ಯವಿರುವ ಅಲ್ಮೇರಾ  ಕೊಡುಗೆಯಾಗಿ ನೀಡಲಾಯಿತು. 
ಸಹಾಯಕ ಜಿಲ್ಲಾ ಗವರ್ನರ್ ಮುರುಳಿ, ಕ್ಲಬ್ ಅಧ್ಯಕ್ಷ ತೀರ್ಥಯ್ಯ, ಕಾರ್ಯದರ್ಶಿ ಅಡವೀಶಯ್ಯ,  ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಸಂಚಾರಿ ಪೊಲೀಸ್ ಠಾಣಾಧಿಕಾರಿ ಕವಿತಾ, ಕ್ಲಬ್‌ನ ಪ್ರಮುಖವಾರ ಕೆ. ನಾಗರಾಜ್, ಕೂಡ್ಲಿಗೆರೆ ಹಾಲೇಶ್, ಡಿ. ಪ್ರಭಾಕರ ಬೀರಯ್ಯ, ಸುಂದರ್ ಬಾಬು, ಪಿ.ಸಿ ಜೈನ್, ರಾಘವೇಂದ್ರ ಉಪಾಧ್ಯಾಯ, ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, June 27, 2020

ಕಸ ಸಂಗ್ರಹಕ್ಕೆ ಉಚಿತ ಬುಟ್ಟಿ ವಿತರಣೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಮನೆ ಭೋವಿ ಕಾಲೋನಿ ಕೊಳಚೆ ಪ್ರದೇಶದ ಸುಮಾರು ೩೪೮ ಮನೆಗಳಿಗೆ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಉಚಿತವಾಗಿ ಕಸದ ಬುಟ್ಟಿಗಳನ್ನು(ಡಸ್ಟ್ ಬಿನ್) ವಿತರಿಸಲಾಯಿತು. 
ಭದ್ರಾವತಿ, ಜೂ. ೨೭:  ನಗರಸಭೆ ವ್ಯಾಪ್ತಿಯ ಹೊಸಮನೆ ಭೋವಿ ಕಾಲೋನಿ ಕೊಳಚೆ ಪ್ರದೇಶದ ಸುಮಾರು ೩೪೮ ಮನೆಗಳಿಗೆ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಉಚಿತವಾಗಿ ಕಸದ ಬುಟ್ಟಿಗಳನ್ನು(ಡಸ್ಟ್ ಬಿನ್) ವಿತರಿಸಲಾಯಿತು. 
ಮನೆಯಲ್ಲಿಯೇ ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸಿ ಮನೆ ಬಾಗಿಲಿಗೆ ಬರುವ ಕಸದ ಗಾಡಿಯವರಿಗೆ ನೀಡಬೇಕು. ಎಲ್ಲೆಂದರಲ್ಲಿ ಕಸ ಎಸೆಯದೆ ಪರಿಸರದ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಲಾಯಿತು. ಹಸಿರು ಹಾಗೂ ಕೆಂಪು ಬಣ್ಣದ ಎರಡು ಕಸದ ಬುಟ್ಟಿಗಳನ್ನು ಪ್ರತಿಯೊಂದು ಮನೆಗಳಿಗೂ ವಿತರಿಸಲಾಯಿತು. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ, ಇಂಜಿನಿಯರ್ ಸತೀಶ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಟಿ ನಾಗರಾಜ್, ಅಣ್ಣೋಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.   

ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಬೃಹತ್ ರಕ್ತದಾನ ಶಿಬಿರ : ೬೯ ಮಂದಿ ರಕ್ತದಾನ

ಭದ್ರಾವತಿ ಹೊಸಮನೆ ಮುಖ್ಯ ರಸ್ತೆ, ಸಂತೆ ಮೈದಾನ ಬಳಿ ಇರುವ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 
ಭದ್ರಾವತಿ, ಜೂ. ೨೭: ನಗರದ ಹೊಸಮನೆ ಮುಖ್ಯ ರಸ್ತೆ, ಸಂತೆ ಮೈದಾನ ಬಳಿ ಇರುವ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ೬೯ ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.
ಶಿಬಿರವನ್ನು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಂ.ಬಿ ಹರಿಕೃಷ್ಣ  ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿ ಕೆ. ಪ್ರಸಾದ್ ಮತ್ತು ಸಂಸ್ಥೆಯ ಅಧ್ಯಕ್ಷ ಜಿ. ಅನಂದಕುಮಾರ್ ಉದ್ಘಾಟಿಸಿದರು. 
ಬಿಜೆಪಿ ಪಕ್ಷದ ಹಿರಿಯ ಮುಖಂಡ ವಿ. ಕದಿರೇಶ್, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್.ದತ್ತಾತ್ರಿ, ಮಂಗೋಟೆ ರುದ್ರೇಶ್, ಶಿವಮೊಗ್ಗ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ನಗರಸಭಾ ಸದಸ್ಯರಾದ ಮಣಿ, ಭೈರಪ್ಪ ಗೌಡ, ಸುನಿಲ್ ಗಾಯಕ್ವಾಡ್ ಹಾಗೂ ಸಂಸ್ಥೆಯ ಪದಾಧಿಕಾರಿಗಳಾದ ಬಿ.ಎಸ್ ಶ್ರೀನಾಥ್, ಕೆ ಕುಮಾರ್, ಅರುಣ್, ಮಂಜುನಾಥ್ ಕೊಹ್ಲಿ, ಆದರ್ಶ, ಶಿವು ಮದಕರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಭದ್ರಾವತಿ ಹೊಸಮನೆ ಮುಖ್ಯ ರಸ್ತೆ, ಸಂತೆ ಮೈದಾನ ಬಳಿ ಇರುವ ಆನಂದ ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಕೊರೋನ ವಾರಿಯರ್ಸ್ ಗಳಾದ ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ರಾಜ್ಯ ಸರ್ಕಾರದಿಂದ ನಗರದ ನ್ಯಾಯಾಲಯಕ್ಕೆ ಎಜಿಪಿಯಾಗಿ ನಿಯುಕ್ತಿಗೊಂಡ ಜೆ. ಮೋಹನ್‌ರವರನ್ನು  ಹಾಗೂ ಕೊರೋನ ವಾರಿಯರ್ಸ್ ಗಳಾದ ಪೌರ ಕಾರ್ಮಿಕರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕೆಂಪೇಗೌಡರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು. 
ಭದ್ರಾವತಿ, ಜೂ. ೨೭: ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯಕ್ಕೂ ಮಾದರಿ ವ್ಯಕ್ತಿಯಾಗಿದ್ದು, ಅವರ ಆದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು. 
ಅವರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಸಮಾಜದ ಎಲ್ಲಾ ಆದರ್ಶ ವ್ಯಕ್ತಿಗಳ ವಿಚಾರಧಾರೆಗಳನ್ನು ಅರಿತುಕೊಂಡು ಮುನ್ನಡೆದಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಒಕ್ಕಲಿಗರ ಸಮುದಾಯ ತನ್ನದೇ ಆದ ಕೊಡುಗೆಯನ್ನು ಈ ನಾಡಿಗೆ ನೀಡಿದೆ. ನಗರದಲ್ಲಿ ಈ ಸಮುದಾಯಕ್ಕೆ ಅಗತ್ಯವಿರುವ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧ ಎಂದರು. 
ಚುಂಚಾದ್ರಿ ಮಹಿಳಾ ವೇದಿಕೆ ಮಾಜಿ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರು ಹಲವು ಯೋಜನೆಗಳ ರೂವಾರಿಗಳಾಗಿದ್ದಾರೆ. ಅವರು ಇಂದಿಗೂ ಸಮಾಜಕ್ಕೆ ಸ್ಪೂರ್ತಿದಾಯಕ ಆದರ್ಶ ವ್ಯಕ್ತಿಗಳಾಗಿದ್ದು, ಇಂದಿನ ಯುವ ಪೀಳಿಗೆ ಅವರ ದಾರಿಯಲ್ಲಿ ಸಾಗುವಂತಾಗಬೇಕೆಂದರು. 
ಒಕ್ಕಲಿಗರ ಸಂಘದ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿ,  ಒಕ್ಕಲಿಗರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮುದಾಯ ಭವನದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಶಾಸಕರು ಸರ್ಕಾರದಿಂದ ಜಾಗ ಮಂಜೂರಾತಿ ಮಾಡಿಸಿಕೊಡಬೇಕೆಂದು ಮನವಿ ಮಾಡಿದರು. 
ತಹಸೀಲ್ದಾರ್ ಶಿವಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ರಮೇಶ್ ರಾಮನಗರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಡಾ. ಕೊಟ್ರೇಶಪ್ಪ, ಕಂದಾಯಾಧಿಕಾರಿ ಪ್ರಶಾಂತ್, ಒಕ್ಕಲಿಗ ಮಹಿಳಾ ವೇದಿಕೆ ಅಧ್ಯಕ್ಷೆ ಅನ್ನಪೂರ್ಣ ಸತೀಶ್, ಸಮಾಜದ ಪ್ರಮುಖರಾದ ಎ.ಟಿ ರವಿ, ಲೋಹಿತಾ ನಂಜಪ್ಪ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.   


ಟಿ. ವಿಶ್ವನಾಥ ನಿಧನ

ಟಿ. ವಿಶ್ವನಾಥ
ಭದ್ರಾವತಿ, ಜೂ. ೨೭: ನಗರದ ಭದ್ರಾ ಕಾಲೋನಿ ನಿವಾಸಿ ಟಿ. ವಿಶ್ವನಾಥ(೬೦) ಶುಕ್ರವಾರ ರಾತ್ರಿ ನಿಧನ ಹೊಂದಿದರು.
ಏಕಲವ್ಯ ಪ್ರಶಸ್ತಿ ವಿಜೇತೆ, ಕ್ರೀಡಾಪಟು ನೇತ್ರಾವತಿ ಸೇರಿದಂತೆ ಇಬ್ಬರು ಪುತ್ರಿ, ಓರ್ವ ಪುತ್ರ, ಇಬ್ಬರು ಸಹೋದರಿ ಹಾಗೂ ಬಂಧು-ಬಳಗವನ್ನು ಬಿಟ್ಟಗಲಿದ್ದಾರೆ. ಇವರ ಅಂತ್ಯಸಂಸ್ಕಾರ ಭದ್ರಾ ಕಾಲೋನಿ ತೋಟದಲ್ಲಿ ಶನಿವಾರ ನೆರವೇರಿತು.