Wednesday, July 29, 2020

ಸುರಗಿತೋಪಿನಲ್ಲಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ನೂತನವಾಗಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. 
ಭದ್ರಾವತಿ, ಜು. ೨೯: ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ಕೋವಿಡ್-೧೯ ನಿಯಂತ್ರಣ ಸಂಬಂಧ ನೂತನವಾಗಿ ವಾರ್ಡ್ ಮಟ್ಟದ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ. 
ನಗರಸಭೆ ಸಮುದಾಯ ಸಂಘಟನಾ ಅಧಿಕಾರಿಗಳಾದ ಸುಹಾಸಿನಿ, ಈಶ್ವರಪ್ಪ, ಸ್ಥಳೀಯ ಪ್ರಮುಖರಾದ ನಿರ್ಮಲ ಕುಮಾರಿ, ಉಮೇಶ್, ಕಿರಣ್, ಪರಮೇಶ್, ಅನು, ಚೇತನ್‌ಕುಮಾರ್, ಅಪ್ರೋಜ್ ಮತ್ತು ನಗರಸಭೆ ಸದಸ್ಯೆ ಕೆ.ಆರ್ ಭಾಗ್ಯಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಪುಟ್ಟಮ್ಮ, ಸುಜಾತ, ಲಕ್ಕವ್ವ ಬೀರದಾರ್, ಆಶಾ ಕಾರ್ಯಕರ್ತೆ ಸವಿತಾ, ಪೊಲೀಸ್ ಸಿಬ್ಬಂದಿಗಳಾದ ನಾಯ್ಕ್, ವಿಕ್ರಂ, ವೈದ್ಯ ಡಾ. ಚಂದ್ರೇಗೌಡ ಸೇರಿದಂತೆ ಇನ್ನಿತರರು ಕಾರ್ಯಪಡೆಯಲ್ಲಿದ್ದು, ಮೊದಲ ಸಭೆಯಲ್ಲಿ ಸಮುದಾಯಕ್ಕೆ ಕೊರೋನಾ ಸೋಂಕು ಕುರಿತು ಜಾಗೃತಿ ಮೂಡಿಸುವುದು ಹಾಗೂ ಸೋಂಕು ಹರಡದಂತೆ ಮುನ್ನಚ್ಚರಿಕೆ ವಹಿಸುವುದು ಸೇರಿದಂತೆ ಇನ್ನಿತರ ವಿಚಾರಗಳ ಕುರಿತು ಚರ್ಚಿಸಲಾಯಿತು.

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಇಮ್ಯೂನ್ ಕಿಟ್ ಬಿಡುಗಡೆ

ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿಯನ್ನು ಬುಧವಾರ ಬಿ.ಕೆ ಸಂಗಮೇಶ್ವರ್ ಬಿಡುಗಡೆಗೊಳಿಸಿದರು. 
ಭದ್ರಾವತಿ, ಜು. ೨೯: ನಿದಿಗೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ತಯಾರಿಸಿರುವ (ಇಮ್ಯೂನ್ ಕಿಟ್) ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧ ಬಿಡುಗಡೆ ಸಮಾರಂಭ ಬುಧವಾರ ನಗರಸಭೆ ಸರ್.ಎಂ ವಿಶ್ವೇಶ್ವರಾಯ ಸಭಾಂಗಣದಲ್ಲಿ ನಡೆಯಿತು.
ಶಾಸಕ ಬಿ.ಕೆ ಸಂಗಮೇಶ್ವರ್ ಔಷಧಿ ಬಿಡುಗಡೆಗೊಳಿಸಿದರು. ತಹಸೀಲ್ದಾರ್ ಶಿವಕುಮಾರ್, ನಗರಸಭೆ ಪೌರಾಯುಕ್ತ ಮನೋಹರ್, ಹಿರಿಯ ಉಪ ನೊಂದಾಣಾಧಿಕಾರಿ ಲಕ್ಷ್ಮೀಪತಿ ಹಾಗೂ ಟಿಎಂಎಇ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 

Tuesday, July 28, 2020

ಕಳಪೆ ಗುಣಮಟ್ಟದ ಬೆಲ್ಲ ತಯಾರಿಕೆ : ೨ ಆಲೆಮನೆಗಳ ಮೇಲೆ ದಾಳಿ

ಭದ್ರಾವತಿ ತಾಲೂಕಿನ ಅರಳಿಹಳ್ಳಿ ಗ್ರಾಮದ ೨ ಅಲೆಮನೆಗಳ ಮೇಲೆ ತಹಸೀಲ್ದಾರ್ ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿರುವುದು. 
ಭದ್ರಾವತಿ, ಜು. ೨೮: ತಾಲೂಕಿನ ಅರಳಿಹಳ್ಳಿ ಗ್ರಾಮದ ೨ ಅಲೆಮನೆಗಳ ಮೇಲೆ ತಹಸೀಲ್ದಾರ್ ಶಿವಕುಮಾರ್ ನೇತೃತ್ವದ ತಂಡ ಮಂಗಳವಾರ ದಾಳಿ ನಡೆಸಿರುವ ಘಟನೆ ನಡೆದಿದೆ. 
ಕಳಪೆ ಗುಣಮಟ್ಟದ ಸಕ್ಕರೆ ಹಾಗೂ ಇನ್ನಿತರ ರಾಸಾಯನಿಕ ಪದಾರ್ಥಗಳನ್ನು ಬಳಸಿ ಬೆಲ್ಲ ತಯಾರಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರ ಮೇರೆಗೆ ಅನುಸೂಯಮ್ಮ ಮತ್ತು ಬಿ. ರಾಜು ಎಂಬುವರಿಗೆ ಸೇರಿದ ೨ ಆಲೆಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಳಿ ಸಂದರ್ಭದಲ್ಲಿ ಸುಮಾರು ೧೫೦ ಸಕ್ಕರೆ ಚೀಲ ಹಾಗೂ ಬೆಲ್ಲ ತಯಾರಿಕೆಗೆ ಬಳಸುತ್ತಿದ್ದ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿವೆ. ೨ ಆಲೆಮನೆಗಳನ್ನು ವಶಕ್ಕೆ ಪಡೆದಿದ್ದು, ಹೆಚ್ಚಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. 
ಕಾರ್ಯಾಚರಣೆ ತಂಡದಲ್ಲಿ ಶಿರಸ್ತೇದಾರ್ ಮಂಜಾನಾಯ್ಕ, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ದೇವರಾಜ್, ರಾಜಸ್ವ ನಿರೀಕ್ಷಕ ಜಗದೀಶ್ ಸೇರಿದಂತೆ  ಇನ್ನಿತರರು ಪಾಲ್ಗೊಂಡಿದ್ದರು. 


ಹುಲಿಗಳ ವಾಸಕ್ಕೆ ಯೋಗ್ಯ ಭದ್ರಾ ಅಭಯಾರಣ್ಯ

 ( ಜು.೨೯ ಅಂತರಾಷ್ಟ್ರೀಯ ಹುಲಿ ದಿನ ಅಂಗವಾಗಿ ವಿಶೇಷ ವರದಿ)

ಸುಮಾರು ೪೦ ಹುಲಿಗಳು, ವಾರ್ಷಿಕ ೧ ಕೋ. ರು. ಆದಾಯ 

* ಅನಂತಕುಮಾರ್ 
ಭದ್ರಾ ಅಭಯಾರಣ್ಯದಲ್ಲಿ ವನ್ಯ ಜೀವಿ ಸಮಿತಿ ಸದಸ್ಯರು, ಛಾಯಾಗ್ರಾಹಕರು ಆಗಿರುವ ಬಿಆರ್‌ಪಿ ನಿವಾಸಿ ಸ್ವರೂಪ್ ಜೈನ್‌ರವರು ಛಾಯಾಗ್ರಹಣದ ಮೂಲಕ ಸೆರೆ ಹಿಡಿದಿರುವ ಹುಲಿ ಚಿತ್ರಗಳು. 
ಭದ್ರಾವತಿ, ಜು. ೨೮: ನಮ್ಮ ದೇಶದ ರಾಷ್ಟ್ರ ಪಾಣಿ ಹುಲಿ ವಾಸಿಸಲು ಯೋಗ್ಯವಾದ ಸ್ಥಳಗಳಲ್ಲಿ ತಾಲೂಕಿನ ಭದ್ರಾ ಅಭಯಾರಣ್ಯ ಸಹ ಒಂದಾಗಿದ್ದು, ಅರಣ್ಯ ಇಲಾಖೆಯ ವನ್ಯಜೀವಿ ಇಲಾಖೆ ಮಾಹಿತಿ ಪ್ರಕಾರ ಪ್ರಸ್ತುತ ಅಭಯಾರಣ್ಯದಲ್ಲಿ ಸುಮಾರು ೪೦ ಹುಲಿಗಳಿವೆ. 
ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿಗಳ ಪೈಕಿ ಹುಲಿ ಸಹ ಒಂದಾಗಿದ್ದು, ಇವುಗಳ ಸಂರಕ್ಷಣೆಗಾಗಿ ಸರ್ಕಾರ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಳೆದ ಸುಮಾರು ೧ ವರ್ಷದ ಹಿಂದೆ ಹುಲಿ ಗಣತಿಗೆ ಮುಂದಾಗಿದ್ದು, ವಿಶೇಷ ತಂತ್ರಜ್ಞಾನ ಬಳಸಿ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಆದರೆ ಇಂದಿಗೂ ಹುಲಿ ಗಣತಿ ನಿಖರ ಮಾಹಿತಿ ಲಭ್ಯವಾಗಿಲ್ಲ. 
ಭದ್ರಾ ಅಭಯಾರಣ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ ಛಾಯಾಗ್ರಹಣ(ಫೋಟೋಗ್ರಫಿ)ದ ಮೂಲಕ ಸೆರೆ ಹಿಡಿಯಲಾದ ಚಿತ್ರಗಳ ಆಧಾರದ ಮೇಲೆ ಇದುವರೆಗೂ ಸುಮಾರು ೪೦ ಹುಲಿಗಳಿರುವ ಮಾಹಿತಿ ಇದೆ. ಹುಲಿಗಳ ಜೊತೆಗೆ ಚಿರತೆ, ನರಿ ಸೇರಿದಂತೆ ಇನ್ನಿತರ ಪ್ರಾಣಿಗಳು ಅಭಯಾರಣ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿವೆ. 
ಭದ್ರಾ ಅಭಯಾರಣ್ಯ :-
ತಾಲ್ಲೂಕಿನಲ್ಲಿ ಸುಮಾರು ೧೭೫ ಚ.ಕಿ.ಮೀ ವಿಸ್ತೀರ್ಣವನ್ನು ಹಂಚಿಕೊಂಡಿರುವ ಭದ್ರಾ ಆಭಯಾರಣ್ಯ ೧೯೯೮ ರಿಂದ ಹುಲಿ ಸಂರಕ್ಷಿತ ಪ್ರದೇಶವಾಗಿ ಘೋಷಿಸಲ್ಪಟ್ಟಿದೆ. ದೇಶದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕರ್ನಾಟಕ ಹೊಂದಿದ್ದು, ೨೦೧೩ರ ಗಣತಿಯ ಪ್ರಕಾರ ರಾಜ್ಯದಲ್ಲಿ ಒಟ್ಟು ೩೨೦ಕ್ಕೂ ಅಧಿಕ ಹುಲಿಗಳಿದ್ದು, ಈ ಪೈಕಿ ಭದ್ರಾ ಅಭಯಾರಣ್ಯದಲ್ಲಿ ಸುಮಾರು ೨೬ ಹುಲಿಗಳಿವೆ. ಇದೀಗ ೪೦ಕ್ಕೆ ಏರಿಕೆಯಾಗಿದ್ದು, ಇಂದಿಗೂ ಹುಲಿಗಳ ವಾಸಕ್ಕೆ ಯೋಗ್ಯವಾದ ಅರಣ್ಯವೆಂದು ಗುರುತಿಸಲಾಗಿದೆ. 

        ೫ ಹುಲಿ ಮೀಸಲು ಅರಣ್ಯ : 
ರಾಜ್ಯದಲ್ಲಿ ಒಟ್ಟು ೫ ಹುಲಿ ಮೀಸಲು ಅರಣ್ಯಗಳಿದ್ದು,  ಬಂಡೀಪುರ ರಾಷ್ಟ್ರೀಯ ಉದ್ಯಾನವನ-೮೭೨.೨೪ ಚ.ಕಿ.ಮೀ(೧೯೭೩ರಲ್ಲಿ), ಭದ್ರಾ ವನ್ಯಜೀವಿ ಅಭಯಾ ರಣ್ಯ -೫೦೦.೧೬ ಚ.ಕಿ.ಮೀ(೧೯೯೮ರಲ್ಲಿ), ನಾಗರಹೊಳೆ ರಾಷ್ಟ್ರೀಯ ಉದ್ಯಾನವನ -೬೪೩.೩೯ ಚ.ಕಿ.ಮೀ (೨೦ ೦೦ದಲ್ಲಿ), ಆನ್ಶಿ ರಾಷ್ಟ್ರೀಯ ಉದ್ಯಾನವನ- ದಾಂಡೇಲಿ ವನ್ಯಜೀವಿ ಅಭಯಾರಣ್ಯ-೪೭೫ ಚ.ಕಿ.ಮೀ (೨೦ ೦೬ರಲ್ಲಿ) ಮತ್ತು ಬಿಆರ್ಟಿ ವನ್ಯಜೀವಿ ಅಭಯಾರಣ್ಯ -೫೩೯.೫೨ ಚ.ಕಿ.ಮೀ (೨೦೧೧ರಲ್ಲಿ)ಗಳಾಗಿವೆ.
ಭದ್ರಾ ಅಭಯಾರಣ್ಯ ಒಟ್ಟು ವಿಸ್ತೀರ್ಣ ೫೦೦.೨೬ ಚ.ಕಿ. ಮೀ: 
ಭದ್ರಾ ಸಂರಕ್ಷಿತ ವನ್ಯಜೀವಿ ಅಭಯಾರಣ್ಯವು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಸುಮಾರು ೫೦೦.೧೬ ಚ.ಕಿ. ಮೀ.ಗಳಷ್ಟು ವಿಸ್ತೀರ್ಣ ಹೊಂದಿದೆ. ಈ ಅಭಯಾ ರಣ್ಯವು ಭದ್ರಾ ನದಿಯ ಪರಿಸರದಲ್ಲಿ ಇರುವುದರಿಂದ ಭದ್ರಾ ಅಭಯಾರಣ್ಯವೆಂದೇ ಕರೆಯಲಾಗುತ್ತದೆ. ೧೯೫೧ರಲ್ಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಗಿದ್ದ ಈ ಅಭಯಾ ರಣ್ಯವು ನಂತರ ೧೯೯೮ರಲ್ಲಿ ದೇಶದ ೨೫ನೇ ಹುಲಿ ಸಂರಕ್ಷಿತ ಪ್ರದೇಶವೆಂದು ಸರಕಾರ ಆದೇಶಿಸಿತು. ಮೊದಲು ಜಗರ ಕಣಿವೆ ಎಂದೇ ಹೆಸರಾಗಿದ್ದ ಈ ಅರಣ್ಯವು ನಂತರ ೧೯೭೪ರಲ್ಲಿ ಭದ್ರಾ ಅಭಯಾರಣ್ಯವೆಂದು ಮರುನಾಮಕರಣ ಗೊಂಡಿತು. ಹಲವಾರು ವನ್ಯಜೀವಿಗಳು, ಕಾಡುಪ್ರಾಣಿಗಳು, ಪಕ್ಷಿಗಳು, ಹಾವುಗಳನ್ನು, ಪಾತರಗಿತ್ತಿ ಸೇರಿದಂತೆ ವಿವಿಧ ಜಾತಿಯ ಗಿಡ, ಮರಗಳೊಂದಿಗೆ ಪ್ರಕೃತಿ ಸೌಂದರ್ಯದೊಂದಿಗೆ ನೋಡಿ ಆನಂದಿಸಬಹುದಾದ ಸುಂದರ ತಾಣ ಭದ್ರಾ ಅಭಯಾರಣ್ಯವಾಗಿದೆ. ೧೨೦ಕ್ಕೂ ವಿವಿಧ ಜಾತಿಯ ಗಿಡ, ಮರಗಳಿಗೆ ಆಶ್ರಯ ನೀಡಿರುವ ಈ ಅರಣ್ಯ ಪ್ರದೇಶ ಪ್ರವಾಸಿಗರಿಗೆ ಹೇಳಿ ಮಾಡಿಸಿದ ತಾಣದಂತಿದೆ.
೧ ಲಕ್ಷಕ್ಕೂ ಅಧಿಕ ಚಿತ್ರ ಸೆರೆ : 
ವನ್ಯ ಜೀವಿ ಸಮಿತಿ ಸದಸ್ಯರು, ಛಾಯಾಗ್ರಾಹಕರು ಆಗಿರುವ ಬಿಆರ್‌ಪಿ ನಿವಾಸಿ ಸ್ವರೂಪ್ ಜೈನ್‌ರವರು ಪ್ರತಿವಾರ ಅಭಯಾರಣ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಹುಲಿ ಸೇರಿದಂತೆ ಬಗೆ ಬಗೆಯ ವನ್ಯ ಜೀವಿಗಳನ್ನು ಛಾಯಾಗ್ರಹಣದ ಮೂಲಕ ಸೆರೆ ಹಿಡಿದು ಸಂಗ್ರಹಿಸಿಟ್ಟು ಕೊಳ್ಳುತ್ತಿದ್ದಾರೆ. ಇದುವರೆಗೂ ಸುಮಾರು ೧ ಲಕ್ಷಕ್ಕೂ ಅಧಿಕ ಛಾಯಾಚಿತ್ರಗಳನ್ನು ಸಂಗ್ರಹಿಸಿದ್ದಾರೆ.  
೧ ಕೋ. ರು. ಆದಾಯ: 
ಭದ್ರಾ ಅಭಯಾರಣ್ಯದ ಅಧಿಕಾರಿಗಳ ಮಾಹಿತಿ ಪ್ರಕಾರ ಸಫಾರಿ ಸೇರಿದಂತೆ ಇನ್ನಿತರ ಪ್ರವಾಸಿ ಮೂಲಗಳಿಂದ ಇಲಾಖೆಗೆ ಒಟ್ಟು ವಾರ್ಷಿಕ ಸುಮಾರು ೧ ಕೋ. ರು. ಆದಾಯ ಬರುತ್ತಿದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಕೆಲವು ತಿಂಗಳುಗಳಿಂದ ಸಫಾರಿ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗಿದೆ. 
ಸರ್ಕಾರ ಶೀಘ್ರದಲ್ಲಿಯೇ ಎಲ್ಲಾ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡುವ ವಿಶ್ವಾಸ ಅರಣ್ಯ ಇಲಾಖೆ ಹೊಂದಿದ್ದು, ಈ ನಡುವೆ ಪ್ರವಾಸಿಗರನ್ನು ಸೆಳೆಯಲು ಅರಣ್ಯ ಇಲಾಖೆ ವಿಶೇಷ ಯೋಜನೆಗಳನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಸಹ ಇದೀಗ ಎದುರಾಗಿದೆ. 

ಭದ್ರಾವತಿಯಲ್ಲಿ ಒಂದೇ ದಿನ ೭ ಸೋಂಕು ಪತ್ತೆ

ಭದ್ರಾವತಿ, ಜು. ೨೮: ತಾಲೂಕಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮಂಗಳವಾರ ಒಂದೇ ದಿನ ೭  ಪ್ರಕರಣಗಳು ದಾಖಲಾಗಿವೆ.
ಗಾಂಧಿನಗರದಲ್ಲಿ  ೪೩ ವರ್ಷದ ವ್ಯಕ್ತಿ, ಹೊಸಬುಳ್ಳಾಪುರದಲ್ಲಿ ೩೪ ವರ್ಷದ ವ್ಯಕ್ತಿ, ಮಾಚೇನಹಳ್ಳಿ ೩೫ ವರ್ಷ ವ್ಯಕ್ತಿ, ಹೊಸಮನೆ ವಿಜಯನಗರದಲ್ಲಿ ೩೦ ವರ್ಷದ ವ್ಯಕ್ತಿ, ಹುತ್ತಾ ಕಾಲೋನಿಯಲ್ಲಿ ೩೬ ವರ್ಷದ ವ್ಯಕ್ತಿ ಹಾಗೂ ಕೂಡ್ಲಿಗೆರೆ ಗ್ರಾಮದಲ್ಲಿ ೩೧ ವರ್ಷದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದು, ಸೋಂಕಿತರನ್ನು ಚಿಕಿತ್ಸೆಗಾಗಿ ಕೋವಿಡ್-೧೯ ಆಸ್ಪತ್ರೆಗೆ ದಾಖಲಿಸಲಾಗಿದೆ. 
ಅರಣ್ಯ ಇಲಾಖೆಯಲ್ಲಿ ೩ ಮಂದಿಗೆ ಸೋಂಕು: 
ತಾಲೂಕಿನ ಭದ್ರಾವತಿ ಉಪ ವಲಯ ಅರಣ್ಯ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೩ ಮಂದಿಗೆ ಸೋಂಕು ತಗುಲಿದೆ. ಕೆಲವು ದಿನಗಳ ಹಿಂದೆ ತಳ್ಳಿಕಟ್ಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಾರ್ಡ್‌ಯೊಬ್ಬರಿಗೆ ಸೋಂಕು ತಗುಲಿತ್ತು. ಇದೀಗ ಕೊರಲಕೊಪ್ಪ ಸಸ್ಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಹಾಗೂ ಕೂಡ್ಲಿಗೆರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಬ್ಬರಿಗೆ ಸೋಂಕು ತಗುಲಿದೆ. 
ಕಛೇರಿ ಸೀಲ್‌ಡೌನ್ ಮಾಡಿಲ್ಲ: 
ಅರಣ್ಯ ಇಲಾಖೆಯ ೩ ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರು ವಲಯ ಅರಣ್ಯಾಧಿಕಾರಿಗಳ ಕಛೇರಿಗೆ  ಬಂದು ಹೋಗಿರುತ್ತಾರೆ. ಆದರೂ ಸಹ ಇದುವರೆಗೂ ಕಛೇರಿಯನ್ನು ಸೀಲ್‌ಡೌನ್ ಮಾಡಿಲ್ಲ. ಅಲ್ಲದೆ ಸ್ಯಾನಿಟೈಜರ್ ಸಹ ಕೈಗೊಂಡಿಲ್ಲ. ಇದರಿಂದಾಗಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇತರೆ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. 
ನಗರಸಭೆ ಪೌರಾಯುಕ್ತ ಮನೋಹರ್, ಪರಿಸರ ಅಭಿಯಂತರ ರುದ್ರೇಗೌಡ,  ಆರೋಗ್ಯ ನಿರೀಕ್ಷಕಿ ಲತಾಮಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್ ಗಾಯತ್ರಿ, ಹಿರಿಯ ಆರೋಗ್ಯ ಸಹಾಯಕ ನೀಲೇಶ್‌ರಾಜ್ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳನ್ನೊಳಗೊಂಡ ತಂಡ ಸೋಂಕು ಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಸ್ಯಾನಿಟೈಜರ್ ಕೈಗೊಂಡು ೧೦೦ ಹಾಗೂ ೨೦೦ ಮೀಟರ್ ವ್ಯಾಪ್ತಿಯಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿಸಿದೆ. 


ಬಿಜೆಪಿ ಶಕ್ತಿ ಕೇಂದ್ರದಿಂದ ರುದ್ರಭೂಮಿಯಲ್ಲಿ ವನಮಹೋತ್ಸವ

ಭದ್ರಾವತಿಯಲ್ಲಿ ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷದ ಹುತ್ತಾ ಮಹಾ ಶಕ್ತಿ ಕೇಂದ್ರದವತಿಯಿಂದ ಮಂಗಳವಾರ ಹಿಂದೂ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. 
ಭದ್ರಾವತಿ, ಜು. ೨೯: ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಭಾರತೀಯ ಜನತಾ ಪಕ್ಷದ ನಗರದ ಹುತ್ತಾ ಮಹಾ ಶಕ್ತಿ ಕೇಂದ್ರದವತಿಯಿಂದ ಮಂಗಳವಾರ ಹಿಂದೂ ರುದ್ರಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. 
ಎಂಪಿಎಂ ಕಬ್ಬು ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಕವಲಗುಂದಿ ರಾಜಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಚನ್ನೇಶ್, ಮುಖಂಡರಾದ ವಿ. ಕದಿರೇಶ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್, ಕೆ.ಆರ್ ಸತೀಶ್, ಮೂರ್ತಿ, ಸತೀಶ್‌ಕುಮಾರ್, ಅನ್ನಪೂರ್ಣ ಸಾವಂತ್, ಶೋಭಾ ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. 

ಮದ್ಯದಂಗಡಿ ವಿರುದ್ಧ ಕ್ರಮಕ್ಕೆ ಆಗ್ರಹ


ಭದ್ರಾವತಿ ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಸಂಯುಕ್ತ ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್‌ಗೆ  ಆಗ್ರಹಿಸಿದ್ದಾರೆ.
ಭದ್ರಾವತಿ, ಜು. ೨೮: ನಗರಸಭೆ ವ್ಯಾಪ್ತಿಯ ಉಜ್ಜನಿಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಿಂಭಾಗ ಹೊಸ ಆನೆಕೊಪ್ಪ ಗ್ರಾಮದಲ್ಲಿ ತೆರೆಯಲಾಗಿರುವ ಎಂಎಸ್‌ಐಎಲ್ ಮದ್ಯಂಗಡಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಬೇರೆಡೆಗೆ ಸ್ಥಳಾಂತರಿಸುವಂತೆ ಸಂಯುಕ್ತ ಜನತಾದಳ ರಾಜ್ಯ ಯುವ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್‌ಗೆ  ಆಗ್ರಹಿಸಿದ್ದಾರೆ. 
ಅವರು ಮಂಗಳವಾರ ಉಪತಹಸೀಲ್ದಾರ್ ರಂಗಮ್ಮ ಅವರಿಗೆ ಮನವಿ ಸಲ್ಲಿಸಿದ್ದು, ತಾಲೂಕಿನಲ್ಲಿ ಮದ್ಯದಂಗಡಿಗಳಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದೆ. ಕೆಲವು ದಿನಗಳ ಹಿಂದೆ ಹೊಸ ಆನೆಕೊಪ್ಪ ಗ್ರಾಮಸ್ಥರು ಮದ್ಯದಂಗಡಿ ಎದುರು ಪ್ರತಿಭಟನೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿದ್ದಾರೆ.
ಈ ಮದ್ಯದಂಗಡಿಯಿಂದ ಪ್ರತಿದಿನ ಇಲ್ಲಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಎಂಆರ್‌ಪಿ ದರಗಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ಮದ್ಯ ಸೇವೆನೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಈ ಹಿನ್ನಲೆಯಲ್ಲಿ ಈ ಮದ್ಯದಂಗಡಿ ವಿರುದ್ಧ ಅಬಕಾರಿಗಳು ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಆ.೧೦ರಂದು ತಾಲೂಕು ಕಛೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.