ಬುಧವಾರ, ಆಗಸ್ಟ್ 26, 2020

ಭದ್ರಾ ಜಲಾಶಯಕ್ಕೆ ಬಾಗಿನ

ಭದ್ರಾವತಿ ತಾಲೂಕಿನ ಭದ್ರಾ ಜಲಾಶಯದಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ರೈತ ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವದಲ್ಲಿ ಬಾಗಿನ ಸಮರ್ಪಿಸಲಾಯಿತು.
ಭದ್ರಾವತಿ, ಆ. ೨೬:  ತಾಲೂಕಿನ ಜೀವನದಿ ಭದ್ರಾ ನದಿ ಜಲಾಶಯ ಬಹುತೇಕ ಪೂರ್ಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಬಾಗಿನ ಸಮರ್ಪಿಸಲಾಯಿತು.
   ಭದ್ರಾ ಜಲಾಶಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರೈತ ಮುಖಂಡ, ವರಿಷ್ಠ ಕೆ.ಟಿ ಗಂಗಾಧರ್ ನೇತೃತ್ವವಹಿಸಿದ್ದರು.
    ಪ್ರಮುಖರಾದ ಯಶವಂತರಾವ್ ಘೋರ್ಪಡೆ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ವಿ ವೀರೇಶ್, ತಾಲೂಕು ಅಧ್ಯಕ್ಷ ಹಿರಿಯಣ್ಣಯ್ಯ, ಗೊಂದಿ ಜಯರಾಂ, ಮಂಜಪ್ಪ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






ಮಂಗಳವಾರ, ಆಗಸ್ಟ್ 25, 2020

ಆ.೨೭ರಂದು ಶ್ರದ್ದಾಂಜಲಿ ಸಭೆ

ಭದ್ರಾವತಿ, ಆ. ೨೫: ಕಳೆದ ೨ ದಿನಗಳ ಹಿಂದೆ ನಿಧನ ಹೊಂದಿದ ಪ್ರಗತಿಪರ ಚಿಂತಕ, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಂ. ಶ್ರೀನಿವಾಸನ್‌ರವರಿಗೆ ಆ.೨೭ರಂದು ಶ್ರದ್ದಾಂಜಲಿ ಸಭೆ ಹಮ್ಮಿಕೊಳ್ಳಲಾಗಿಇದೆ.
ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಸಂಜೆ ೫ ಗಂಟೆಗೆ ಸಭೆ ನಡೆಯಲಿದ್ದು, ಸಭೆ ಯಶಸ್ವಿಗೊಳಿಸುವಂತೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಕೋರಿದೆ.


ಆ.೨೭ರಂದು ಸಸಿ ನೆಡುವ ಕಾರ್ಯಕ್ರಮ

ಭದ್ರಾವತಿ, ಆ. ೨೫: ಮೈಸೂರು ಕಾಗದ ಕಾರ್ಖಾನೆ  ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಗರಸಭೆ, ಮೆಸ್ಕಾಂ ಹಾಗು ಅರಣ್ಯ ಇಲಾಖೆ ಸಹಯೋಗದೊಂದಿಗೆ ಆನೆಕೊಪ್ಪದಲ್ಲಿರುವ ಎಂಪಿಎಂ ಬಡಾವಣೆಯಲ್ಲಿ ಆ.೨೭ರಂದು ಬೆಳಿಗ್ಗೆ ೧೧.೩೦ಕ್ಕೆ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶಾಸಕ ಬಿ.ಕೆ ಸಂಗಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ಟಿ.ಜಿ ಬಸವರಾಜಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನಗರಸಭೆ ಪೌರಾಯುಕ್ತ ಮನೋಹರ್, ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎನ್.ಎಸ್ ಸತೀಶ್‌ಚಂದ್ರ ಮತ್ತು ವಲಯ ಅರಣ್ಯಾಧಿಕಾರಿ ಕೆ.ಎಚ್ ಮಂಜುನಾಥ್ ಉಪಸ್ಥಿತರಿರುವರು.


ಬೀದಿ ಬದಿ ವ್ಯಾಪಾರಸ್ಥರಿಗೆ ಆರ್ಥಿಕ ನೆರವು

ಭದ್ರಾವತಿಯಲ್ಲಿ ಕೆನರಾ ಬ್ಯಾಂಕ್ ನೆರವಿನೊಂದಿಗೆ ಸುಮಾರು ೪೯ ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸೇವಾ ನಿಧಿಯಿಂದ  ಸಾಲ ಮಂಜೂರಾತಿ ಮಾಡಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.
ಭದ್ರಾವತಿ, ಆ. ೨೫: ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪರ ನಡೆಸುವ ಮೂಲಕ ಜೀವನ ಸಾಗಿಸುತ್ತಿರುವ ಬಡ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್ಥಿಕ ನೆರವು ಕಲ್ಪಿಸಿಕೊಡುವಲ್ಲಿ ನಗರಸಭೆ ಆಡಳಿತ ಯಶಸ್ವಿಯಾಗಿದೆ.
     ಕೆನರಾ ಬ್ಯಾಂಕ್ ನೆರವಿನೊಂದಿಗೆ ಸುಮಾರು ೪೯ ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ ಸೇವಾ ನಿಧಿಯಿಂದ  ಸಾಲ ಮಂಜೂರಾತಿ ಮಾಡಲಾಗಿದ್ದು, ಮಂಗಳವಾರ ಶಾಸಕ ಬಿ.ಕೆ ಸಂಗಮೇಶ್ವರ್ ನಗರಸಭೆ ಸಭಾಂಗಣದಲ್ಲಿ ವ್ಯಾಪಾರಿಗಳಿಗೆ ಸಾಲ ಮಂಜೂರಾತಿ ಪತ್ರ ವಿತರಿಸಿದರು.
    ನಗರಸಭೆ ಪೌರಾಯುಕ್ತ ಮನೋಹರ್, ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ, ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.





ಸೋಮವಾರ, ಆಗಸ್ಟ್ 24, 2020

ಕನ್ನಡಕ್ಕೆ ಮೊದಲ ಆದ್ಯತೆ ನೀಡಿ : ಕರವೇ ಆಗ್ರಹ

ಬ್ಯಾಂಕ್ ಆಫ್  ಬರೋಡ ಶಾಖಾ ಕಛೇರಿ ವ್ಯವಸ್ಥಾಪಕರಿಗೆ ಮನವಿ

ಭದ್ರಾವತಿ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಆ. ೨೪: ನಗರದ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಸೋಮವಾರ ಶಾಖಾ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
       ಬ್ಯಾಂಕಿನ ನಾಮಫಲಕ ಹಾಗು ಎಲ್ಲಾ ವ್ಯವಹಾರಗಳು ಕನ್ನಡ ಭಾಷೆಯಲ್ಲಿ ನಡೆಯಬೇಕು. ಠೇವಣಿ ತೆರೆಯುವ ಅರ್ಜಿ, ಎಟಿಎಂ ಯಂತ್ರದಲ್ಲಿ ಹಾಗು ಇನ್ನಿತರೆ ಅರ್ಜಿ ನಮೂನೆಗಳಲ್ಲಿ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಗಳು ನಮೂದಾಗಿದ್ದು, ಈ ಎಲ್ಲಾ ನಮೂನೆ ಹಾಗು ಹಣ ತೆಗೆಯುವ ಯಂತ್ರದಲ್ಲಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು. ಬ್ಯಾಂಕಿನಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸಬೇಕೆಂದು ಆಗ್ರಹಿಸಲಾಗಿದೆ.
     ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಗ್ರಾಹಕರು ಹಾಗು ಇನ್ನಿತರೆ ವ್ಯವಹಾರಗಳನ್ನು ನಡೆಸಲು ಬ್ಯಾಂಕಿಗೆ ಬರುವವರಿಗೆ ಹಿಂದಿ ಹಾಗು ಆಂಗ್ಲ ಭಾಷೆಗಳು ಸರಿಯಾಗಿ ಅರ್ಥವಾಗದೆ ವ್ಯವಹಾರ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ತಕ್ಷಣ ಅರ್ಜಿ ನಮೂನೆಗಳು, ಎಲ್ಲಾ ವ್ಯವಹಾರಗಳು ಕನ್ನಡದಲ್ಲಿ ನಡೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಗಿದೆ.
    ಕರಾವೇ ತಾಲೂಕು ಶಾಖೆ ಅಧ್ಯಕ್ಷ ಬಿ.ವಿ ಗಿರೀಶ್, ಪ್ರಧಾನ ಕಾರ್ಯದರ್ಶಿ ಜಿ. ಮಂಜುನಾಥ್, ಕಾರ್ಯದರ್ಶಿ ಎ. ಸಂದೇಶ್‌ಕುಮಾರ್, ಜೆಡಿಯು ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ಸೋಂಕು ಪತ್ತೆ ಹಚ್ಚುವಲ್ಲಿ ಪ್ರಯೋಗ ಶಾಲಾ ಶಾಸ್ತ್ರಜ್ಞರ ಸೇವೆ ಅಪಾರ

ಭದ್ರಾವತಿಯಲ್ಲಿ ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್‌ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಪ್ರೈವೇಟ್ ಮೆಡಿಕಲ್ ಲ್ಯಾಬೋರೇಟರಿ ಅಸೋಸಿಯೇಷನ್ ವತಿಯಿಂದ ಕೋವಿಡ್ ೧೯ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪ್ರಯೋಗ ಶಾಲಾ ಶಾಸ್ತ್ರಜ್ಞರಿಗೆ ಅಭಿನಂದನಾ ಕಾರ್ಯಕ್ರಮ  ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ಆ. ೨೪: ಕೊರೋನಾ ಸೋಂಕು ಪತ್ತೆ ಹಚ್ಚುವ ಕಾರ್ಯದಲ್ಲಿ ಪ್ರಯೋಗ ಶಾಲಾ ಶಾಸ್ತ್ರಜ್ಞರ ಸೇವೆ ಹೆಚ್ಚಿನದ್ದಾಗಿದ್ದು, ಪ್ರಸ್ತುತ ದಿನಗಳಲ್ಲಿ ಇವರ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ ಎಂದು ಜಿಲ್ಲಾ ಪ್ರಯೋಗ ಶಾಲಾ ಶಾಸ್ತ್ರಜ್ಞರ ಸಂಘದ ಅಧ್ಯಕ್ಷ ಬಸವರಾಜ್ ಹೇಳಿದರು.
ಅವರು ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್‌ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಮತ್ತು ಶಿವಮೊಗ್ಗ ಜಿಲ್ಲಾ ಪ್ರೈವೇಟ್ ಮೆಡಿಕಲ್ ಲ್ಯಾಬೋರೇಟರಿ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೋವಿಡ್ ೧೯ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಪ್ರಯೋಗ ಶಾಲಾ ಶಾಸ್ತ್ರಜ್ಞರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೈರಸ್ ಪತ್ತೆ ಹಚ್ಚುವ ಕಾರ್ಯದಲ್ಲಿ ಮತ್ತಷ್ಟು ತೊಡಗಿಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್‌ಟೆಕ್ನಾಲಜಿಸ್ಟ್ ಅಸೋಸಿಯೇಷನ್ ಖಜಾಂಚಿ ಸುರೇಶ್ ಮಾತನಾಡಿ, ತೆರೆಮರೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಯೋಗ ಶಾಲಾ ಶಾಸ್ತ್ರಜ್ಞರನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಂಘಟನೆ ಮುಂದಾಗಿದೆ ಎಂದರು.
ಜಿಲ್ಲಾ ಪ್ರಯೋಗ ಶಾಲಾ ಶಾಸ್ತ್ರಜ್ಞರ ಸಂಘದ ಮಾಜಿ ಅಧ್ಯಕ್ಷ ರತನ್‌ಕುಮಾರ್ ಗುಬ್ಬಿ ಉಪಸ್ಥಿತರಿದ್ದರು. ನಿರ್ಮಿಲ ಪ್ರಾರ್ಥಿಸಿದರು. ಮಧು ಲ್ಯಾಬೋರೇಟರಿಯ ಜಗದೀಶ್ ಸ್ವಾಗತಿಸಿದರು. ಪ್ರದೀಪ್ ಕುಮಾರ್ ವಂದಿಸಿದರು. ತಾಲೂಕಿನ ಸುಮಾರು ೨೦ಕ್ಕೂ ಅಧಿಕ ಪ್ರಯೋಗ ಶಾಲಾ ಶಾಸ್ತ್ರಜ್ಞರನ್ನು ಅಭಿನಂದಿಸಲಾಯಿತು.

ದಲಿತ ಮುಖಂಡ ಎಂ. ಶ್ರೀನಿವಾಸನ್ ನಿಧನ

ಎಂ. ಶ್ರೀನಿವಾಸನ್

ಭದ್ರಾವತಿ, ಫೆ. ೨೪: ಶಿವಮೊಗ್ಗ  ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ, ದಲಿತ ಮುಖಂಡ ಎಂ. ಶ್ರೀನಿವಾಸನ್(೭೦) ಸೋಮವಾರ ನಿಧನ ಹೊಂದಿದರು.
    ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರಿದ್ದು, ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್  ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
    ವಿಐಎಸ್‌ಎಲ್ ನಿವೃತ್ತ ಉದ್ಯೋಗಿಯಾಗಿದ್ದ ಶ್ರೀನಿವಾಸನ್ ನಗರಸಭೆ ವ್ಯಾಪ್ತಿಯ ಸುರಗಿತೋಪಿನಲ್ಲಿ ವಾಸವಿದ್ದರು. ಪ್ರಗತಿಪರ  ಸಂಘಟನೆಗಳೊಂದಿಗೆ ಗುರುತಿಕೊಳ್ಳುವ ಜೊತೆಗೆ ಹಲವು ದಲಿತ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಇವರ ನಿಧನಕ್ಕೆ ಪ್ರಗತಿಪರ ಸಂಘಟನೆಗಳು ಹಾಗು ಶಿವಮೊಗ್ಗ  ಜಿಲ್ಲಾ ಪರಿಶಿಷ್ಟ ಜಾತಿ ಆದಿದ್ರಾವಿಡ ತಮಿಳ್ ಹಿತರಕ್ಷಣಾ ಸಮಿತಿ ಮತ್ತು ನಗರದ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.