ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಾಡಹಬ್ಬಕ್ಕೆ ಚಾಲನೆ
ಭದ್ರಾವತಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಚಾಲನೆ ನೀಡಿದರು.
ಭದ್ರಾವತಿ, ಅ. ೧೭: ದೇಶ ರಕ್ಷಣೆಯಲ್ಲಿ ತೊಡಗಿ ನಿವೃತ್ತಿ ಹೊಂದಿರುವ ಸೈನಿಕರನ್ನು ಗುರುತಿಸುವ ಜೊತೆಗೆ ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ಅವರಿಗೆ ಗೌರವ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರವಾಗಿದೆ ಎಂದು ಮಾಜಿ ಸೈನಿಕರ ಸಂಘದ ತಾಲೂಕು ಅಧ್ಯಕ್ಷ, ಸುಬೇದಾರ್ ಎಲ್.ಡಿ ಅಶೋಕ್ ಪ್ರಶಂಸೆ ವ್ಯಕ್ತಪಡಿಸಿದರು.
ಅವರು ಶನಿವಾರ ಹಳೇನಗರದ ಗ್ರಾಮ ದೇವತೆ ಶ್ರೀ ಹಳದಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ನಗರಸಭೆ ವತಿಯಿಂದ ೯ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಸರಳ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಾಜಿ ಸೈನಿಕರನ್ನು ನಿರ್ಲಕ್ಷಿಸುತ್ತಿರುವ ಇಂದಿನ ಸಂದರ್ಭದಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅವರನ್ನು ಗುರುತಿಸುವ ಮೂಲಕ ದಸರಾ ಉದ್ಘಾಟನೆಗೆ ಅವಕಾಶ ಮಾಡಿಕೊಟ್ಟಿರುವುದು ತಾಲೂಕಿನ ಎಲ್ಲಾ ಮಾಜಿ ಸೈನಿಕರಿಗೆ ಸಲ್ಲುವ ಗೌರವಾಗಿದೆ. ಪ್ರತಿಯೊಬ್ಬರ ರಕ್ಷಣೆ ಇಂದು ಅಗತ್ಯವಾಗಿದ್ದು, ನಾಡಹಬ್ಬ ದಸರಾ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ತಾಯಿ ಚಾಮುಂಡೇಶ್ವರಿ ದೇವಿ ಎಲ್ಲರನ್ನು ರಕ್ಷಿಸುವ ಜೊತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಲಿ ಎಂದು ಪ್ರಾರ್ಥಿಸಿದರು.
ವೇದಿಕೆಯಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಡಾ. ನಾಗೇಂದ್ರ ಹೊನ್ನಾಳಿ, ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್, ತಹಸೀಲ್ದಾರ್ ಡಾ. ಎನ್.ಜೆ ನಾಗರಾಜ್, ಸುಬೇದಾರ್ ಬೋರೇಗೌಡ, ಹಲ್ದಾರ್‌ಗಳಾದ ವಿನೋದ್‌ಪೂಜಾರಿ, ಪ್ರಸಾದ್, ನಾಯಕ್ ರಾಜೇಶ್, ಮಾಜಿ ಸೈನಿಕ ಗುಳ್‌ಗುಳೇ, ಮುಖಂಡರಾದ ನರಸಿಂಹಚಾರ್, ರಮಾಕಾಂತ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಗರಸಭೆ ಪೌರಾಯುಕ್ತ ಮನೋಹರ್ ಸ್ವಾಗತಿಸಿದರು. ಕಂದಾಯಾಧಿಕಾರಿ ರಾಜ್‌ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ದಸರಾ ಉದ್ಘಾಟನೆಗೆ ಆಗಮಿಸಿದ ಸುಬೇದಾರ್ ಎಲ್.ಡಿ ಅಶೋಕ್‌ರವರನ್ನು ಸ್ವಾಗತಿಸಲಾಯಿತು. ಶ್ರೀ ಹಳದಮ್ಮ ದೇವಸ್ಥಾನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಕೊರೋನಾ ವಾರಿಯರ್ಸ್‌ಗಳಾದ ಹಳೇನಗರ ಪೊಲೀಸ್ ಠಾಣಾಧಿಕಾರಿ ಶ್ರೀನಿವಾಸ್, ಹಿರಿಯ ಆರೋಗ್ಯ ನಿರೀಕ್ಷಕ ನಿಲೇಶ್‌ರಾಜ್ ಸೇರಿದಂತೆ ಅಂಗನವಾಡಿ ಹಾಗು ಆಶಾಕಾರ್ಯಕರ್ತೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.