Sunday, December 6, 2020

ಪ್ರತಿಯೊಂದು ಮನೆಯಲ್ಲೂ ಬಾಬಾ ಸಾಹೇಬ್ ಅಂಬೇಡ್ಕರ್ ಆರಾಧಕರಾಗಿ ರಾರಾಜಿಸಲಿ : ಶಾಸಕ ಬಿ.ಕೆ ಸಂಗಮೇಶ್ವರ್

ಭದ್ರಾವತಿ, ಡಿ. ೬: ಈ ದೇಶದ ಪ್ರತಿಯೊಬ್ಬರ ಮನೆಯಲ್ಲಿ ಪ್ರತಿ ದಿನ ಮಹಾ ಮಾನವತಾವಾದಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರನ್ನು ನೆನಪು ಮಾಡಿಕೊಳ್ಳಬೇಕು. ಆಗ ಮಾತ್ರ ಅವರು ಈ ದೇಶಕ್ಕೆ ಸಲ್ಲಿಸಿರುವ ಸೇವೆಗೆ ನಾವೆಲ್ಲರೂ ಗೌರವ ನೀಡಿದಂತಾಗುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಅವರು ಭಾನುವಾರ ನಗರಸಭೆ ವ್ಯಾಪ್ತಿಯ ಎನ್‌ಡಿಬಿ ರಸ್ತೆಯಲ್ಲಿರುವ ಎ.ಕೆ ಕಾಲೋನಿಯಲ್ಲಿ ನೂತನವಾಗಿ ಸುಮಾರು ೯.೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್‌ರವರು ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣ ಮಾಡುವ ಮೂಲಕ ಜಾತಿ, ಜನಾಂಗ, ಧರ್ಮಗಳನ್ನು ಮೀರಿ ಎಲ್ಲರನ್ನು ಸಮಾನತೆ ತತ್ವದಡಿ ಬದುಕುವ ವ್ಯವಸ್ಥೆಯನ್ನು ರೂಪಿಸಿಕೊಟ್ಟಿದ್ದಾರೆ. ಈ ದೇಶದಲ್ಲಿ ಅಂಬೇಡ್ಕರ್‌ರವರ ಹುಟ್ಟು ಈ ದೇಶದ ಜನರ ಸೌಭಾಗ್ಯವಾಗಿದೆ ಎಂದರೆ ತಪ್ಪಾಗಲಾರದು. ಒಂದು ವೇಳೆ ಇಂತಹ ಮಹಾನ್ ವ್ಯಕ್ತಿ ಪ್ರಪಂಚದ ಇತರೆ ಯಾವುದೇ ರಾಷ್ಟ್ರದಲ್ಲಿ ಉದಯಿಸಿದ್ದರೇ ಆ ದೇಶದ ಪ್ರತಿಯೊಂದು ಮನೆಯಲ್ಲಿ ಅಂಬೇಡ್ಕರ್‌ರವರು ರಾರಾಜಿಸುವ ಜೊತೆಗೆ ಪ್ರತಿದಿನ ಆರಾಧನೆಗೆ ಒಳಗಾಗುತ್ತಿದ್ದರು. ಆದರೆ ನಾವುಗಳು ಈ ದೇಶದಲ್ಲಿ  ಅಂಬೇಡ್ಕರ್‌ರವರನ್ನು ಪ್ರತಿದಿನ ನೆನಪುಮಾಡಿಕೊಳ್ಳದಿರುವುದು ವಿಪರ್ಯಾಸದ ಸಂಗತಿಯಾಗಿದೆ. ನಾವುಗಳು ಪ್ರತಿದಿನ ಆರಾಧಿಸುವ ದೇವರ ಸ್ಥಾನದಲ್ಲಿ ಅಂಬೇಡ್ಕರ್‌ರವರಿಗೂ ಒಂದು ಸ್ಥಾನ ಮೀಸಲಿಡಬೇಕೆಂದರು.
ಅಂಬೇಡ್ಕರ್ ಹಾಗು ಸಂವಿಧಾನದ ಬಗ್ಗೆ ಸರಿಯಾಗಿ ಅರಿತುಕೊಳ್ಳದ ಕೆಲವು ಕಿಡಿಗೇಡಿ ರಾಜಕಾರಣಿಗಳು ಸಂವಿಧಾನ ಬದಲಿಸುವ ಹಾಗು ಈ ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ. ಎಂದಿಗೂ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಸಹ ಧರ್ಮದ ಹೆಸರಿನಲ್ಲಿ ಎಂದಿಗೂ ರಾಜಕಾರಣ ಮಾಡಬಾರದು. ಈ ದೇಶದಲ್ಲಿ ಅಜ್ಞಾನ, ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಡಳಿತ ನಡೆಸುವ ಸರ್ಕಾರಗಳು ಇವುಗಳ ಬಗ್ಗೆ ಮೊದಲು ಗಮನ ಹರಿಸಬೇಕೆಂದರು.  
ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಜಿಲ್ಲೆಯಲ್ಲಿಯೇ ಅತಿ ಎತ್ತರದ ಹಾಗು ಅಂಬೇಡ್ಕರ್‌ರವರ ನೈಜತೆಯನ್ನು ಹೊಂದಿರುವ ಸುಂದರವಾದ ಪ್ರತಿಮೆ ನಿರ್ಮಾಣ ಮಾಡಲು ಎಲ್ಲಾ ರೀತಿಯ ಸಹಕಾರ ನೀಡಲು ಬದ್ದನಾಗಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ದಲಿತ ಸಂಘಟನೆಗಳ ಮುಖಂಡರ ಸಭೆ ಕರೆಯಲಾಗುವುದು. ಅಲ್ಲದೆ ಅಂಡರ್ ಬ್ರಿಡ್ಜ್‌ನಲ್ಲಿ ಪ್ರತಿಭಟನೆ, ಹೋರಾಟಗಳನ್ನು ನಡೆಸುವವರಿಗೆ ಅನುಕೂಲವಾಗುವಂತೆ ಶೆಲ್ಟರ್ ಸಹ ನಿರ್ಮಿಸಿ ಕೊಡಲಾಗುವುದು ಎಂದು ಭರವಸೆ ನೀಡಿದರು.  
ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಕಲಾವಿದ ಸಾಸ್ವೆಹಳ್ಳಿ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಮಾತನಾಡಿದರು. ದಲಿತ ನೌಕರರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಶಿವಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾದಿಗ ಸಮಾಜದ ರಾಜ್ಯಾಧ್ಯಕ್ಷ ಎಸ್. ಮಂಜುನಾಥ್ ಕಾರ್ಯಕ್ರಮದ ನೇತೃತ್ವದ ವಹಿಸಿದ್ದರು.
ಭಾರತೀಯ ಸೇನೆಯಲ್ಲಿ ೨೪ ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿರುವ ಯೋಧ ಎಂ. ಮುರುಳಿಧರನ್, ಸಮಾಜದ ಹಿರಿಯ ಮುಖಂಡ ರಂಗಪ್ಪ, ಯುವ ಮುಖಂಡ ಬಿ.ಎಸ್ ಗಣೇಶ್, ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಬಸವರಾಜ ಬಿ. ಆನೇಕೊಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸಿದ್ದಾರ್ಥ ಅಂಧರ ಕೇಂದ್ರದ ಕಲಾವಿದರು ಪ್ರಾರ್ಥಿಸಿದರು. ರಾಜೀವ್ ಗಾಂಧಿ ಬಿಇಡಿ ಕಾಲೇಜಿನ ಉಪನ್ಯಾಸಕ ಪ್ರಭಾಕರ್ ಸ್ವಾಗತಿಸಿದರು. ಪ್ರಿನ್ಸಿಪಾಲ್ ಹನುಮಂತಪ್ಪ ನಿರೂಪಿಸಿದರು. ಕಲಾವಿದ ತಮಟೆ ಜಗದೀಶ್ ವಂದಿಸಿದರು.
ಚಿತ್ರ: ಡಿ೬-ಬಿಡಿವಿಟಿ
ಭದ್ರಾವತಿ ನಗರಸಭೆ ವ್ಯಾಪ್ತಿಯ ಎನ್‌ಡಿಬಿ ರಸ್ತೆಯಲ್ಲಿರುವ ಎ.ಕೆ ಕಾಲೋನಿಯಲ್ಲಿ ನೂತನವಾಗಿ ಸುಮಾರು ೯.೨೫ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನವನ್ನು ಭಾನುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.


Saturday, December 5, 2020

ಕರ್ನಾಟಕ ಬಂದ್ ಬೆಂಬಲಿಸಿ ಕರಾವೇ ನೇತೃತ್ವದಲ್ಲಿ ವಿವಿಧ ಸಂಘಟನೆಗಳಿಂದ ಮನವಿ

ತಕ್ಷಣ ಮರಾಠಿ ಅಭಿವೃದ್ದಿ ಪ್ರಾಧಿಕಾರ ರದ್ದುಗೊಳಿಸಲು ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಭದ್ರಾವತಿಯಲ್ಲಿ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸಿದವು.
   ಭದ್ರಾವತಿ, ಡಿ. ೫: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ನಗರದ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ಕನ್ನಡ ವಿರೋಧಿ ಧೋರಣೆಗಳನ್ನು ಖಂಡಿಸಿದವು.
     ಕನ್ನಡ ನೆಲದಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆಯಿಂದ ಬದುಕುತ್ತಿದ್ದು, ಎಲ್ಲಾ ಧರ್ಮ, ಎಲ್ಲಾ ಜನಾಂಗದವರನ್ನು ಕನ್ನಡಿಗರಾಗಿ ಗುರುತಿಸಿ ಅವರ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ರೂಪಿಸುವ ಬದಲು ಮರಾಠ ಜನಾಂಗದ ಅಭಿವೃದ್ಧಿ ಪ್ರಾಧಿಕಾರ ರಚಿಸುವ ಮೂಲಕ ಭಾಷಾವಾರು ವಿಭಜನೆಗೆ ಮುಂದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ರದ್ದು ಪಡಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಎಂ. ಪರಮೆಶ್ವರ್ ಆಗ್ರಹಿಸಿದರು.
     ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದು, ನಾಡು, ನೆಲ, ಜಲ, ಭಾಷೆ ಸೇರಿದಂತೆ ಸೂಕ್ಷ್ಮ ವಿಚಾರಗಳಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಮಾತುಕತೆ ನಡೆಸದೆ ಏಕಾಏಕಿ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಅಲ್ಲದೆ ಸರ್ಕಾರದ ಶಾಸಕರು, ಕಾರ್ಯಕರ್ತರು ಕನ್ನಡಪರ ಸಂಘಟನೆಗಳ ವಿರುದ್ಧ ಬಾಯಿ ಹರಿಬಿಡುತ್ತಿದ್ದಾರೆ. ಆದರೂ ಸಹ ಮುಖ್ಯಮಂತ್ರಿಗಳು ಮೌನಕ್ಕೆ ಶರಣಾಗಿರುವುದು ಒಳ್ಳೆಯ ಬೆಳೆವಣಿಗೆಯಲ್ಲ. ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಕೈಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ಎಚ್ಚರಿಸಿದರು.
    ಪ್ರಗತಿಪರ ಸಂಘಟನೆಗಳು ಹಾಗು ದಲಿತ ಸಂಘರ್ಷ ಸಮಿತಿ ಮುಖಂಡರು ಮಾತನಾಡಿ, ಸರ್ಕಾರ ಪ್ರತಿಯೊಂದು ಜಾತಿಗಳಿಗೂ ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಸುಮಾರು ೩೦೦ಕ್ಕೂ ಹೆಚ್ಚು ಪ್ರಾಧಿಕಾರ ರಚನೆ  ಮಾಡಿ ಅವುಗಳಿಗೆ ಕೋಟ್ಯಾಂತರ ರು. ನೀಡುವ ಬದಲು ಎಲ್ಲಾ ಜಾತಿಯ, ಎಲ್ಲಾ ಭಾಷೆಯ, ಎಲ್ಲಾ ಧರ್ಮದ ಬಡವರಿಗಾಗಿ ಪ್ರಾಧಿಕಾರ ರಚಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಆರ್. ದಿಲೀಪ್, ತರುಣ, ಎನ್. ರಮೇಶ್, ಲೋಕೇಶ್, ಅಣ್ಣಪ್ಪ, ರಾಜು, ಮಹಿಳಾ ಘಟಕದ ಜಿಲ್ಲಾಪ್ರಧಾನ ಕಾರ್ಯದರ್ಶಿ ಶಾರದ, ಉಪಾಧ್ಯಕ್ಷೆ ಅನಿತಾ, ತಾಲೂಕು ಅಧ್ಯಕ್ಷೆ ಮಹೇಶ್ವರಿ, ಉಪಾಧ್ಯಕ್ಷೆ ಸುಮಿತ್ರ, ಸಂಘಟನಾ ಕಾರ್ಯದರ್ಶಿ ಗೀತಾ, ರಾದ, ಜಯಂತಿ, ಹೇಮಾ, ಜಾನಕಿ, ಪದ್ಮಮ್ಮ, ಶಾಂತ, ನಾಗರತ್ನಮ್ಮ, ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್, ಜಯರಾಜ್, ಈ.ಬಿ ಬಸವರಾಜ್, ಜೆಬಿಟಿ ಬಾಬು, ಜಿ. ರಾಜು, ಪ್ರಾನ್ಸಿಸ್, ಮುಸ್ವೀರ್‌ಪಾಷ, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ನೇತೃತ್ವದಲ್ಲಿ ಭದ್ರಾವತಿಯಲ್ಲಿ ವಿವಿಧ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್ ಬೆಂಬಲಿಸುವ ಮೂಲಕ ರಾಜ್ಯ ಸರ್ಕಾರದ ತಕ್ಷಣ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರದ್ದುಗೊಳಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ಗ್ರೇಡ್-೨ ರಂಗಮ್ಮ ಮೂಲಕ ಮನವಿ ಸಲ್ಲಿಸಿದವು.

ಕರ್ನಾಟಕ ಬಂದ್ ಬೆಂಬಲಿಸಿ ವಿವಿಧ ಸಂಘಟನೆ ಸರ್ಕಾರಕ್ಕೆ ಮನವಿ


ಭದ್ರಾವತಿಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
   ಭದ್ರಾವತಿ: ಕರ್ನಾಟಕ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
      ಜಯಕರ್ನಾಟಕ ಸಂಘಟನೆ ಬೆಂಬಲ:
     ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಮನವಿ ಸಲ್ಲಿಸಿದ ಸಂಘಟನೆ ಮುಖಂಡರು, ರಾಜ್ಯದಲ್ಲಿ ಇಂದಿಗೂ ಗಡಿ ಭಾಗದಲ್ಲಿ ನೆಲ, ಜಲ, ಭಾಷೆ ವಿಚಾರದಲ್ಲಿ ಮರಾಠಿಗರು ಕನ್ನಡಿಗರ ಮೇಲೆ ದೌರ್ಜನ್ಯ ವೆಸಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಅಲ್ಲದೆ ವಿನಾಕಾರಣ ಕನ್ನಡಿಗರ ಸಾರ್ವಭೌಮತ್ವ ಕೆಣಕುವ ಕೆಲಸ ನಡೆಯುತ್ತಿದ್ದು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಲಾಗುತ್ತಿದೆ. ಪರಿಸ್ಥಿತಿ ಈ ರೀತಿ ಇರುವಾಗ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಿ ೫೦ ಕೋ. ರು. ಮೀಸಲಿಟ್ಟಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಪ್ರತಿಯೊಂದು ಜಾತಿಗೂ ಸಹ ನಿಗಮ, ಮಂಡಳಿ ರಚನೆ ಮಾಡುತ್ತಾ ಹೋದರೆ ಜಾತಿ ಜಾತಿಗಳ ನಡುವೆ ವೈಷಮ್ಯ ಹೆಚ್ಚಾಗುವ ಜೊತೆಗೆ ರಾಷ್ಟ್ರಕವಿ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ನಾಡಗೀತೆ ಸಾಲಿನ ಅರ್ಥಕ್ಕೆ ಚ್ಯುತಿ ಬರಲಿದೆ. ಈ ಹಿನ್ನಲೆಯಲ್ಲಿ ತಕ್ಷಣ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಕೈಬಿಡಬೇಕೆಂದು ಆಗ್ರಹಿಸಿದರು.
     ತಾಲೂಕು ಅಧ್ಯಕ್ಷ ತ್ಯಾಗರಾಜ್, ಜಿಲ್ಲಾ ಸಂಚಾಲಕ ಎಂ. ಮುಕುಂದನ್, ನಾಗರತ್ನ, ಕಾಂತರಾಜ್ ಸೇರಿದಂತೆ ಇನ್ನಿತರರು ತಹಸೀಲ್ದಾರ್ ಗ್ರೇಡ್-೨ ರಂಗಮ್ಮರವರಿಗೆ ಮನವಿ ಸಲ್ಲಿದರು.


ಭದ್ರಾವತಿಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ತಾಲೂಕು ವಕೀಲರ ಸಂಘದ ವತಿಯಿಂದ ತಾಲೂಕು ಆಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ತಕ್ಷಣ ಮರಾಠ ಅಭಿವೃದ್ಧಿ ಪ್ರಾಧಿಕಾರ ಕೈಬಿಡುವಂತೆ ಆಗ್ರಹಿಸಲಾಯಿತು.
      ತಾಲೂಕು ವಕೀಲರ ಸಂಘ ಬೆಂಬಲ:
   ತಾಲೂಕು ವಕೀಲರ ಸಂಘದ ವತಿಯಿಂದ ಕರ್ನಾಟಕ ಬಂದ್ ಬೆಂಬಲಿಸಿ ಇಂದು ಶಿರಸ್ತೇದಾರ್ ಮಲ್ಲಿಕಾರ್ಜುನಯ್ಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಾತನಾಡಿದ ಸಂಘದ ಪ್ರಮುಖರು, ಎಂದಿಗೂ ವಕೀಲರ ಸಂಘ ಕನ್ನಡ ನಾಡು, ನೆಲ, ಜಲ, ಭಾಷೆ ಪರವಾಗಿ  ಇದ್ದು, ಕನ್ನಡ ಭಾಷೆ ಪ್ರಾಬಲ್ಯ ಹೆಚ್ಚಿಸಿಕೊಳ್ಳಬೇಕು. ಕನ್ನಡಿಗರಿಗೆ ಹೆಚ್ಚಿನ ಆದ್ಯತೆ ಸಿಗಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುನ್ನಡೆಯಬೇಕೆಂದರು.
ಸಂಘದ ಅಧ್ಯಕ್ಷ ಟಿ ವೆಂಕಟೇಶ್ ಉಪಾಧ್ಯಕ್ಷ ವೈ. ಜಯರಾಮ, ಕಾರ್ಯದರ್ಶಿ ಟಿ.ಎಸ್ ರಾಜು, ಖಜಾಂಚಿ ಎನ್. ರಂಗಪ್ಪ, ಹಿರಿಯ ವಕೀಲರಾದ ಮಂಜಪ್ಪ, ಕೆಎನ್ ಶ್ರೀಹರ್ಷ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜನ್ನಾಪುರ ಕೆರೆ ಅಳತೆ, ಬೌಂಡರಿ ನಿಗದಿ ಸ್ಥಳದಲ್ಲಿ ಕಂದಕ ನಿರ್ಮಾಣ

ಕೆಲವೇ ದಿನಗಳಲ್ಲಿ ಸಂಪೂರ್ಣ ತೆರವು ಕಾರ್ಯಾಚರಣೆ



ಶುಕ್ರವಾರ ಭದ್ರಾವತಿ ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ, ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಳತೆ ಕಾರ್ಯ ನಡೆದು ಬೌಂಡರಿ ನಿಗದಿಪಡಿಸಲಾಗಿತ್ತು. ಶನಿವಾರ ಮೊದಲ ಹಂತದಲ್ಲಿ ಗುರುತು ಮಾಡಲಾದ ಸ್ಥಳದಲ್ಲಿ ಕಂದಕ ನಿರ್ಮಿಸಲಾಗಿದೆ.
    ಭದ್ರಾವತಿ, ಡಿ. ೫ : ಶುಕ್ರವಾರ ನಗರಸಭೆ ವ್ಯಾಪ್ತಿಯ ಜನ್ನಾಪುರ ಸರ್ವೆ ನಂ.೭೦ರ ೪೫ ಎಕರೆ, ೨೦ ಗುಂಟೆ ವಿಸ್ತೀರ್ಣವುಳ್ಳ ಜನ್ನಾಪುರ ಕೆರೆ ಅಳತೆ ಕಾರ್ಯ ನಡೆದು ಬೌಂಡರಿ ನಿಗದಿಪಡಿಸಲಾಗಿತ್ತು. ಶನಿವಾರ ಮೊದಲ ಹಂತದಲ್ಲಿ ಗುರುತು ಮಾಡಲಾದ ಸ್ಥಳದಲ್ಲಿ ಕಂದಕ ನಿರ್ಮಿಸಲಾಗಿದೆ.
    ಪ್ರಭಾವಿ ವ್ಯಕ್ತಿಗಳು ಕೆರೆಯನ್ನು ಕಳೆದ ೪-೫ ದಶಕಗಳಿಂದ ಒತ್ತುವರಿ ಮಾಡಿಕೊಂಡು ಬರುತ್ತಿದ್ದು, ಸಮೃದ್ಧವಾದ ಭೂಮಿಯನ್ನಾಗಿ ಪರಿವರ್ತಿಸಿಕೊಂಡು ಅಡಕೆ, ಬಾಳೆ, ತೆಂಗಿನ ತೋಟಗಳನ್ನು ನಿರ್ಮಿಸಿಕೊಂಡಿದ್ದಾರೆ.  ಪೌರಾಯುಕ್ತರ ಮನೋಹರ್‌ರವರ ದಿಟ್ಟ ಪ್ರಯತ್ನದಿಂದಾಗಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಮೊದಲ ಹಂತದಲ್ಲಿ ಗುರುತು ಮಾಡಲಾಗಿರುವ ಸ್ಥಳದಲ್ಲಿ ಕಂದಕ ನಿಮಿಸಲಾಗಿದೆ. ಕೆಲವೇ ದಿನಗಳಲ್ಲಿ ಸಂಪೂರ್ಣ ತೆರವು ಕಾರ್ಯಾಚರಣೆ ನಡೆಯಲಿದೆ.
    ಇದೆ ರೀತಿ ನಗರಸಭೆ ವ್ಯಾಪ್ತಿಯ ಹಳೇ ಸೀಗೆಬಾಗಿ ಸರ್ವೆ ನಂ.೩೩ರ ಸುಮಾರು ೧೮ ಎಕರೆ ೧೯ ಗುಂಟೆ ವಿಸ್ತೀರ್ಣವುಳ್ಳ ಸರ್ಕಾರಿ ಕೆರೆ ಒತ್ತುವರಿ ಕಾರ್ಯಾಚರಣೆ ಸಹ ನಡೆಸಲಾಗುತ್ತಿದೆ.



Friday, December 4, 2020

ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಭೆ

ಭದ್ರಾವತಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಭೆ ಶುಕ್ರವಾರ ನ್ಯೂಟೌನ್‌ನಲ್ಲಿರುವ ಪರಿಷತ್ ಕಚೇರಿಯಲ್ಲಿ ನಡೆಯಿತು.  
ಭದ್ರಾವತಿ, ಡಿ. ೪: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಭೆ ಶುಕ್ರವಾರ  ನ್ಯೂಟೌನ್‌ನಲ್ಲಿರುವ ಪರಿಷತ್ ಕಚೇರಿಯಲ್ಲಿ ನಡೆಯಿತು.  
   ಪರಿಷತ್ ಅಧ್ಯಕ್ಷ ಅಪೇಕ್ಷ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸುವ ಬಗ್ಗೆ  ಹಾಗೂ ಪರಿಷತ್ತಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.  
     ಕೋಶಾಧ್ಯಕ್ಷ ಜಿ.ಎನ್ ಸತ್ಯಮೂರ್ತಿ, ಕಾರ್ಯದರ್ಶಿಗಳಾದ ವೈ.ಕೆ  ಹನುಮಂತಯ್ಯ ಸಿ. ಚನ್ನಪ್ಪ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸೇರಿದಂತೆ ಇನ್ನಿತರರಿದ್ದರು.

ಜಹರ ಹರ್ಮೈನ್ ವೈದ್ಯಕೀಯ ವಿಭಾಗದಲ್ಲಿ ಡಾಕ್ಟರೇಟ್ ಪದವಿ

ಭದ್ರಾವತಿ ಖಲಂದರ್ ನಗರದ ನಿವಾಸಿ ಜಹರ ಹರ್ಮೈನ್ ವೈದ್ಯಕೀಯ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡರು.
ಭದ್ರಾವತಿ, ಡಿ. ೪: ನಗರಸಭೆ ವ್ಯಾಪ್ತಿಯ ಖಲಂದರ್ ನಗರದ ನಿವಾಸಿ ಜಹರ ಹರ್ಮೈನ್ ವೈದ್ಯಕೀಯ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ.
   ಓರಲ್ ಅಂಡ್ ಮ್ಯಾಕ್ಸಿಲೊಫೇಶಿಯಲ್ ಶಸ್ತ್ರ ಚಿಕಿತ್ಸೆ ವಿಭಾಗದಲ್ಲಿ ಮೊದಲಸ್ಥಾನ ಕಾಯ್ದುಕೊಂಡಿದ್ದಾರೆ. ಇವರು ನಗರದ ಹಫೀಸಿಯ ಮಸೀದಿ ಮತ್ತು ಉಸ್ಮಾನಿಯಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಹಬೀಬುಲ್ಲಾ ಖಾನ್(ನಾಸಿರ್‌ಖಾನ್) ಪುತ್ರಿಯಾಗಿದ್ದಾರೆ. ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ.

ಲೈಂಗಿಕ ಕಿರುಕುಳ ಆರೋಪ : ವೈದ್ಯರೊಬ್ಬರ ವಿರುದ್ಧ ಪ್ರಕರಣ ದಾಖಲು

ಭದ್ರಾವತಿ: ಮೂಲವ್ಯಾಧಿ ವೈದ್ಯರೊಬ್ಬರು ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡುವಾಗ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರಕುಳ ನೀಡಿದ್ದಾರೆಂದು ಆರೋಪಿಸಿ ಹಳೇನಗರ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಪ್ರಕರಣವೊಂದು ದಾಖಲಾಗಿದೆ.  
ಹಳೇನಗರದ ಖಾಜಿ ಮೊಹಲ್ಲಾದಲ್ಲಿ ಕ್ಲಿನಿಕ್ ಹೊಂದಿರುವ ವೈದ್ಯರೊಬ್ಬರು ಲೈಂಗಿಕ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವೈದ್ಯನನ್ನು ಪೊಲೀಸರು ಬಂಧಿಸಿದ್ದಾರೆ.