ಕೋವಿಡ್ ನಿಯಮ ಪಾಲಿಸದ ಮತದಾರರು, ಮತದಾರರನ್ನು ಸೆಳೆಯಲು ಹಲವು ಅಮಿಷ, ಈ ಸಹ ಹಾಲಿ-ಮಾಜಿ ಶಾಸಕರ ಅಲೆ
![](https://blogger.googleusercontent.com/img/b/R29vZ2xl/AVvXsEgNYXeLGFa30jW0UfL9KPWBDFXuJXaknlUY2XVTlQNUspuJxmYM07yxPVkpoiCTcu0UDMnyIA1zHzW15eOBhwwxBYFgeDGg2acDTiN8sR1u0UaNWa0x-c-P-vzhyphenhyphenhUCwnpMkPoYaA6RXyvS/w400-h231-rw/D22-BDVT-714315.jpg)
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
ಭದ್ರಾವತಿ, ಡಿ. ೨೨: ತಾಲೂಕಿನ ೩೫ ಗ್ರಾಮ ಪಂಚಾಯಿತಿಗಳ ೩೭೫ ಸ್ಥಾನಗಳಿಗೆ ಮಂಗಳವಾರ ನಡೆದ ಚುನಾವಣೆಯ ಮತದಾನ ಕಾರ್ಯ ಬಹುತೇಕ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ೧೦೭೦ ಮಂದಿ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ. ಸುಮಾರು ಶೇ.೮೨ರಷ್ಟು ಮತದಾನ ನಡೆದಿದೆ.
ಬೆಳಿಗ್ಗೆ ಮತದಾನ ಬಿರುಸಿನಿಂದ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಶೇ.೫೦ರಷ್ಟು ಪ್ರಮಾಣಕ್ಕೆ ತಲುಪಿತ್ತು. ನಂತರ ಮಂದಗತಿಯಲ್ಲಿ ಸಾಗಿ ಪುನಃ ಸಂಜೆ ವೇಳೆಗೆ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿದೆ. ಅದರಲ್ಲೂ ಅರಣ್ಯ ವ್ಯಾಪ್ತಿಯ ಅಂತರಗಂಗೆ, ಗುಡ್ಡದ ಕೆಂಚಮ್ಮನಹಳ್ಳಿ, ಉಕ್ಕುಂದ, ರತ್ನಾಪುರ, ಬಿಸಿಲುಮನೆ, ಬೆಳ್ಳಿಗೆರೆ, ಬದನೆಹಾಳು, ಉದಯಪುರ, ದೊಡ್ಡೇರಿ ಸೇರಿದಂತೆ ಹಲವು ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದು ಗಮನ ಸೆಳೆದಿದೆ.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆ ಬಳಿ ಅಭ್ಯರ್ಥಿಗಳು ಮತಯಾಚನೆ ನಡೆಸಿದರು.
ಎರೇಹಳ್ಳಿ, ಮಾವಿನಕೆರೆ, ಬಾರಂದೂರು, ಕಾರೇಹಳ್ಳಿ, ಹಳ್ಳಿಕೆರೆ, ಹಿರಿಯೂರು, ಅರಳಿಕೊಪ್ಪ, ಕಲ್ಲಹಳ್ಳಿ, ಕಂಬದಾಳು ಹೊಸೂರು, ಸಿಂಗನಮನೆ, ತಾವರಘಟ್ಟ, ಬಿಳಕಿ, ದೊಣಬಘಟ್ಟ, ಗುಡಮಘಟ್ಟ, ತಡಸ, ಕಾಗೆಕೋಡಮಗ್ಗೆ, ಕಲ್ಲಹಳ್ಳಿ, ಕೂಡ್ಲಿಗೆರೆ, ಮಂಗೋಟೆ, ಮಾರಶೆಟ್ಟಿಹಳ್ಳಿ, ಮೈದೊಳಲು, ನಿಂಬೆಗೊಂದಿ, ಸೈದರಕಲ್ಲಹಳ್ಳಿ, ಯಡೇಹಳ್ಳಿ, ಸನ್ಯಾಸಿಕೋಡಮಗ್ಗೆ ಸೇರಿದಂತೆ ಇನ್ನಿತರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮತದಾನ ಯಶಸ್ವಿಯಾಗಿ ನಡೆದಿದೆ.
ಕೋವಿಡ್ ನಿಯಮ ಪಾಲಿಸದ ಮತದಾರರು:
ಈ ಶತಮಾನದ ಮಹಾಮಾರಿ ಕೋವಿಡ್-೧೯ ಸೋಂಕು ಕಳೆದ ಸುಮಾರು ೧೦ ತಿಂಗಳಿನಿಂದ ಪ್ರಪಂಚದಾದ್ಯಂತ ವ್ಯಾಪಕವಾಗಿ ಹರಡುವ ಮೂಲಕ ದಿನದಿಂದ ದಿನಕ್ಕೆ ಸಾವಿನ ಪ್ರಮಾಣ ಏರಿಕೆಯಾಗುವ ಜೊತೆಗೆ ಇದೀಗ ಹೊಸ ರೂಪಾಂತದಲ್ಲಿ ಪುನಃ ಕಾಣಿಸಿಕೊಳ್ಳುತ್ತಿದೆ. ಈ ಬಾರಿ ಕೋವಿಡ್-೧೯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಚುನಾವಣೆಯನ್ನು ನಡೆಸುವಂತೆ ಸರ್ಕಾರ ಸೂಚಿಸಿತ್ತು. ಆದರೆ ಈ ಚುನಾವಣೆಯಲ್ಲಿ ನಿಯಮಗಳು ಕೇವಲ ಚುನಾವಣಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಮಾತ್ರ ಮೀಸಲಿರುವಂತೆ ಕಂಡು ಬಂದಿತು. ಅಭ್ಯರ್ಥಿಗಳು ಮತ್ತು ಮತದಾರರು ಮಾತ್ರ ಯಾವುದೇ ನಿಯಮ ಪಾಲನೆ ಮಾಡದೆ, ಸಾಮಾಜಿಕ ಅಂತರ, ಸ್ಯಾನಿಟೈಜರ್, ಮಾಸ್ಕ್ ಬಳಕೆ ಮಾಡದೆ ಗುಂಪು ಸೇರಿರುವುದು ಕಂಡು ಬಂದಿತು. ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಮತಯಾಚನೆ ನಡೆಸಿದರು.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆ ಮತದಾನದಂದು ಮತಗಟ್ಟೆಗಳ ಬಳಿ ಕೋವಿಡ್-೧೯ರ ನಿಯಮ ಪಾಲನೆ ಮಾಡದೆ ಗುಂಪು ಸೇರಿರುವ ಮತದಾರರು.
ಮತದಾರರನ್ನು ಸೆಳೆಯಲು ಹಲವು ಅಮಿಷಗಳು:
ಗ್ರಾಮ ಪಂಚಾಯಿತಿ ಚುನಾವಣೆ ಸಹ ಯಾವುದೇ ಚುನಾವಣೆಗಳಿಗೆ ಕಡಿಮೆ ಇಲ್ಲದಂತೆ ನಡೆದಿದ್ದು, ಈ ಬಾರಿ ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಹಲವು ರೀತಿಯ ಕಸರತ್ತು ನಡೆಸಿದ್ದು, ಕಳೆದ ೨ ದಿನಗಳಿಂದ ಮತದಾರರಿಗೆ ವಿವಿಧ ರೀತಿಯ ಅಮಿಷದೊಂದಿಗೆ ಅಗತ್ಯವಿರುವ ದಿನ ಬಳಕೆ ವಸ್ತುಗಳ ವಿತರಣೆ, ಮತದಾನದಂದು ಮದ್ಯ, ಬಾಡೂಟ ವ್ಯವಸ್ಥೆ ಹಾಗು ಹಣದ ಹೊಳೆ ಹರಿಸಿರುವುದು ತಿಳಿದು ಬಂದಿದೆ.
ಕೆಲವೆಡೆ ಅನುಕಂಪದ ಅಲೆ, ಕೆಲವೆಡೆ ಪ್ರತಿಷ್ಠೆಯ ಅಲೆ:
ಮತದಾನ ಮುಕ್ತಾಯದ ನಂತರ ಸಮೀಕ್ಷೆಯಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಬಾರಿ ಸಹ ಹಾಲಿ ಶಾಸಕ ಬಿ.ಕೆ ಸಂಗಮೇಶ್ವರ್ ಮತ್ತು ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ಬಣಗಳ ನಡುವೆ ತೀವ್ರ ಪೈಪೋಟಿ ನಡೆದಿರುವುದು ಕಂಡುಬಂದಿದೆ. ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಮೇಲಿನ ಅನುಕಂಪದ ಅಲೆ ಕಂಡು ಬಂದಿದೆ. ಕೆಲವು ಕಡೆ ಶಾಸಕ ಬಿ.ಕೆ ಸಂಗಮೇಶ್ವರ್ ಪ್ರತಿಷ್ಠೆಯ ಅಲೆ ಇರುವುದು ಕಂಡು ಬಂದಿದೆ. ಉಳಿದಂತೆ ಬಿಜೆಪಿ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಸ್ವಲ್ಪ ಹೆಚ್ಚಿನ ಸಾಧನೆ ಕಾಯ್ದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿವೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದವ್ಯಾಪ್ತಿಯಲ್ಲಿ ಬಿಜೆಪಿ ಹೆಚ್ಚು ಪ್ರಬಲವಾಗಿದ್ದು, ಈ ಭಾಗಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ೨ ಮತ್ತು ೩ನೇ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ಭದ್ರಾವತಿ ತಾಲೂಕಿನ ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ತಮ್ಮ ವ್ಯಾಪ್ತಿಯ ಮತಗಟ್ಟೆಯಲ್ಲಿ ಮತದಾನ ನಡೆಸಿದರು.