Sunday, February 21, 2021

ಮಹಿಳೆಯರು ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಿ : ಎಂ.ಎಸ್ ಸುಧಾಮಣಿ

ಭದ್ರಾವತಿಯಲ್ಲಿ ಚುಂಚಾದ್ರಿ ಮಹಿಳಾ ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮವನ್ನು ನಗರಸಭೆ ಪೌರಾಯುಕ್ತ ಮನೋಹರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ತಿಳುವಳಿಕೆ ಹೊಂದುವುದು ಅಗತ್ಯವಾಗಿದೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
   ಅವರು ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ  ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
   ಕೆಮ್ಮು, ಶೀತ, ನೆಗಡಿ, ಚಳಿ ಜ್ವರ, ತಲೆ ನೋವು ಸೇರಿದಂತೆ ಇನ್ನಿತರ ಸಾಮಾನ್ಯ ಕಾಯಿಲೆಗಳ ಹೊರತಾಗಿ ಕ್ಯಾನ್ಸರ್‌ನಂತಹ ಕಾಯಿಲೆಗಳ ಕುರಿತು ಸಹ ಮಹಿಳೆಯರು ತಿಳುವಳಿಕೆ ಹೊಂದಬೇಕಾಗಿದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಆರೋಗ್ಯ ಶಿಬಿರವನ್ನು ವಿಶೇಷವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು.
   ನಗರಸಭೆ ಪೌರಾಯುಕ್ತ ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರು ತಪಾಸಣೆ ನಡೆಸುವ ಜೊತೆಗೆ ಮಾಹಿತಿ ನೀಡಿದರು.
   ವೇದಿಕೆ ಉಪಾಧ್ಯಕ್ಷೆ ಸುಮಾ ಶಂಕರ್, ಕಾರ್ಯದರ್ಶಿ ಲತಾ ಪ್ರಭಾಕರ್, ಸಹ ಕಾರ್ಯದರ್ಶಿ ನಳಿನಾ, ಖಜಾಂಚಿ ಶಶಿಕಲಾ ಹಾಗು ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಬೆಲೆ ಏರಿಕೆ ಖಂಡಿಸಿ ಫೆ.೨೨ರಂದು ಎಸ್‌ಡಿಪಿಐ ಪ್ರತಿಭಟನೆ

ಭದ್ರಾವತಿ, ಫೆ. ೨೧: ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ವತಿಯಿಂದ ಫೆ.೨೨ರಂದು ಬೆಳಿಗ್ಗೆ ೧೧.೩೦ಕ್ಕೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಶ್ರೀಸಾಮಾನ್ಯರು ಬದುಕು ಸಾಗಿಸುವುದು ದುಸ್ತರವಾಗಿದೆ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿವೆ. ಈ ಹಿನ್ನಲೆಯಲ್ಲಿ ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಮುತ್ತಪ ರೈ ಸಾಮಾಜಿಕ ಕಾಳಜಿ ಹೊಂದಿದ್ದ ಅಪರೂಪದ ವ್ಯಕ್ತಿ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
   ಭದ್ರಾವತಿ, ಫೆ. ೨೧: ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕರಾದ ದಿವಂಗತ ಮುತ್ತಪ್ಪ ರೈ ಕುರಿತು ಸಮಾಜದಲ್ಲಿ ತಪ್ಪು ಪರಿಕಲ್ಪನೆ ಮೂಡಿಸಲಾಗಿದ್ದು, ವಾಸ್ತವವಾಗಿ ಮುತ್ತಪ್ಪ ರೈ ಸಾಮಾಜಿಕ ಕಾಳಜಿ ಹೊಂದಿದ್ದರು ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
    ಅವರು ಭಾನುವಾರ ನ್ಯೂಟೌನ್ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಜಯ ಕರ್ನಾಟಕ ತಾಲೂಕು ಘಟಕದ ಪುನರ್ ರಚನೆ ಹಾಗು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
  ಮುತ್ತಪ್ಪ ರೈ ನೆಲ, ಜಲ, ಭಾಷೆ ಅಭಿಮಾನದ ಜೊತೆಗೆ ಬಡವರು, ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಸಮಾಜದಲ್ಲಿ ಹಣ ಹೊಂದಿರುವ ಸಾಕಷ್ಟು  ಜನರಿದ್ದಾರೆ. ಆದರೆ ಬಹುತೇಕ ಮಂದಿ ತಾವು ದುಡಿದ ಹಣ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸುವುದಿಲ್ಲ. ಮುತ್ತಪ್ಪ ರೈ ಯಾರು ಸಹ ನಿರೀಕ್ಷಿಸಲಾರದಷ್ಟು ಸಾವಿರಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದಾರೆ. ಅವರು ಸಮಾಜದಲ್ಲಿ ಅಕ್ರಮ, ಅನೀತಿ ಮಾರ್ಗಗಳಲ್ಲಿ ತೊಡಗಿರುವವರ ವಿರುದ್ಧ ಹೋರಾಟ ನಡೆಸಿದರು ಹೊರತು ಅವರಿಂದ ಸಮಾಜಕ್ಕೆ ಯಾವುದೇ ರೀತಿ ಕೆಡಕು ಉಂಡಾಗಿಲ್ಲ. ಈ ಹಿನ್ನಲೆಯಲ್ಲಿ ಅವರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆಯುವ ಜೊತೆಗೆ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಬೇಕೆಂದರು.
   ಮುಖಂಡರಾದ ಸಿ.ಎಂ ಖಾದರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಹಾಗು ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಮಾತನಾಡಿ,  ಜಯ ಕರ್ನಾಟಕ ಸಂಘಟನೆ ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಸಂಘಟನೆ ಮುಂದಾಳತ್ವವಹಿಸಿಕೊಂಡವರು ಸಂಘಟನೆಯನ್ನು ಒಳ್ಳೆಯ ಮಾರ್ಗದಲ್ಲಿ ಕೊಂಡೊಯ್ಯಲು ಶಕ್ತಿಮೀರಿ ಶ್ರಮಿಸಬೇಕು. ಯಾವುದೇ ಕಾರಣಕ್ಕೂ ಅಕ್ರಮ, ಅನೀತಿ ಮಾರ್ಗಗಳಿಗೆ ಅವಕಾಶ ಕಲ್ಪಿಸಿಕೊಡಬಾರದು ಎಂದರು.
   ಸಂಘಟನೆ ರಾಜ್ಯಾಧ್ಯಕ್ಷ ಡಾ. ಬಿ.ಎನ್ ಜಗದೀಶ್, ರಾಜ್ಯ ಕಾರ್ಯಾಧ್ಯಕ್ಷ ಎಚ್. ರಾಮಚಂದ್ರಯ್ಯ, ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ, ಹರೀಶ್, ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ತ್ಯಾಗರಾಜ್, ಡಿ.ಟಿ ಶಶಿಕುಮಾರ್, ಮುಕುಂದ, ಮುಖಂಡರಾದ ಬಾಲಕೃಷ್ಣ, ಚನ್ನಪ್ಪ, ಬಿ.ಎಸ್ ಬಸವೇಶ್ವರ್, ಶೋಭ ರವಿಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
  ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಿದರು.  
    ಇದಕ್ಕೂ ಮೊದಲು ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಿಂದ ಲಯನ್ಸ್ ಕ್ಲಬ್ ವರೆಗೂ ಬೈಕ್ ರ‍್ಯಾಲಿ ನಡೆಸಲಾಯಿತು. ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Saturday, February 20, 2021

ರಾಮನಕೊಪ್ಪ ಸರ್ಕಾರಿ ಶಾಲೆಯಲ್ಲಿ ಗ್ರಾಮ ವಾಸ್ತವ್ಯ


ಕಂದಾಯ ಇಲಾಖೆ ವತಿಯಿಂದ ಭದ್ರಾವತಿ ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲೂಕು ಆಡಳಿತ ಹಾಗು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಸಲಾಯಿತು.
   ಭದ್ರಾವತಿ, ಫೆ. ೨೦: ಕಂದಾಯ ಇಲಾಖೆ ವತಿಯಿಂದ ತಾಲೂಕಿನ ರಾಮನಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ತಾಲೂಕು ಆಡಳಿತ ಹಾಗು ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ನಡೆಸಲಾಯಿತು.
   ಸರ್ಕಾರದ ಆದೇಶದಂತೆ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳು ಗ್ರಾಮ ವಾಸ್ತವ್ಯದ ಉದ್ದೇಶ ವಿವರಿಸುವ ಜೊತೆಗೆ ಪಿಂಚಣಿ, ಕೆರೆ ಒತ್ತುವರಿ, ಪೋಡಿ ಹಾಗು ಸಾಗುವಳಿ ಚೀಟಿ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಅಹವಾಲು, ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಪಡಿಸುವ ಭರವಸೆ ನೀಡಿದರು.
ಬೆಳಿಗ್ಗೆಯಿಂದ ಸಂಜೆವರೆಗೂ ನಡೆದ ಗ್ರಾಮ ವಾಸ್ತವ್ಯದಲ್ಲಿ ಒಟ್ಟು ೨೪ ಅರ್ಜಿಗಳನ್ನು ಸ್ಥಳದಲ್ಲಿಯೇ ಸ್ವೀಕರಿಸಲಾಯಿತು.
  ಉಪತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಶಿರಸ್ತೇದಾರ್ ಮಂಜನಾಯ್ಕ, ಕಂದಾಯಾಧಿಕಾರಿ ಪ್ರಶಾಂತ್ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು, ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ಶಾಲೆಯಲ್ಲಿ ಮಧ್ಯಾಹ್ನ ಗ್ರಾಮಸ್ಥರೊಂದಿಗೆ ಭೋಜನ ಸವಿದರು.






ಬಟ್ಟೆ ಅಂಗಡಿಗೆ ನುಗ್ಗಿದ ಕಾರು : ದ್ವಿಚಕ್ರ ವಾಹನ ಜಖಂ

 ಬಟ್ಟೆ ಅಂಗಡಿಗೆ ಏಕಾಏಕಿ ಕಾರೊಂದು ನುಗ್ಗಿರುವ ಘಟನೆ ಶನಿವಾರ ಭದ್ರಾವತಿ ಹಳೇನಗರದ ತಾಲೂಕು ಕಛೇರಿ  ರಸ್ತೆಯಲ್ಲಿರುವ ಕಂಚಿಬಾಗಿಲು ವೃತ್ತದ ಬಳಿ ನಡೆದಿದೆ.  
ಭದ್ರಾವತಿ, ಫೆ. ೨೦: ಬಟ್ಟೆ ಅಂಗಡಿಗೆ ಏಕಾಏಕಿ ಕಾರೊಂದು ನುಗ್ಗಿರುವ ಘಟನೆ ಶನಿವಾರ ಹಳೇನಗರದ ತಾಲೂಕು ಕಛೇರಿ ರಸ್ತೆಯಲ್ಲಿರುವ ಕಂಚಿಬಾಗಿಲು ವೃತ್ತದ ಬಳಿ ನಡೆದಿದೆ.
    ಹಲವಾರು ತಿಂಗಳಿನಿಂದ ಈ ಭಾಗದಲ್ಲಿ ಸೀಮೆಂಟ್ ರಸ್ತೆ ಹಾಗು ಚರಂಡಿ ಕಾಮಗಾರಿ ನಡೆಯುತ್ತಿದ್ದು, ರಸ್ತೆ ಅಕ್ಕ-ಪಕ್ಕದಲ್ಲಿ ಇನ್ನೂ ತಡೆಗೋಡೆ ನಿರ್ಮಿಸದ ಕಾರು ಏಕಾಏಕಿ ಕಾರು ನುಗ್ಗಿದೆ. ಈ ಸಂದರ್ಭದಲ್ಲಿ ಅಂಗಡಿ ಮುಂಭಾಗ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಜಖಂಗೊಂಡಿದೆ.
     ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿದ ಆಮ್ ಆದ್ಮಿ ಪಾರ್ಟಿ ತಾಲೂಕು ಉಪಾಧ್ಯಕ್ಷ ಇಬ್ರಾಹಿಂ ಖಾನ್, ಈ  ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ತುಂಡು ಕಾಮಗಾರಿ ನಡೆಸಲಾಗುತ್ತಿದೆ. ಸುಮಾರು ೧ ವರ್ಷ ಕಳೆದರೂ ಸಹ ಪೂರ್ಣಗೊಂಡಿಲ್ಲ. ಇದರಿಂದಾಗಿ ಸ್ಥಳೀಯ ನಿವಾಸಿಗಳು, ಪಾದಚಾರಿಗಳು, ವಾಹನ ಸವಾರರು ತೊಂದರೆ  ಅನುಭವಿಸುವಂತಾಗಿದೆ. ರಸ್ತೆ ಅಕ್ಕ-ಪಕ್ಕದಲ್ಲಿ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿರುವುದು ದುರ್ಘಟನೆಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಫೆ.೨೧ರಂದು ಜಯ ಕರ್ನಾಟಕ ನೂತನ ಪದಾಧಿಕಾರಿಗಳ ಪದಗ್ರಹಣ

    ಭದ್ರಾವತಿ, ಫೆ. ೨೦: ಜಯ ಕರ್ನಾಟಕ ತಾಲೂಕು ಪದಾಧಿಕಾರಿಗಳ ಪುನರ್ ರಚನೆ ಹಾಗು ಅಧ್ಯಕ್ಷರು, ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.೨೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್, ಜಯ ಕರ್ನಾಟಕ ಜಿಲ್ಲಾಧ್ಯಕ್ಷ ಡಾ. ಜೆ.ಆರ್ ದೀಪಕ್, ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಅರ್ ಶಿವಕುಮಾರ್ ಅದ್ವಾನಿ, ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಆಟೋ ಘಟಕದ ಅಧ್ಯಕ್ಷ ಎಚ್.ಬಿ ಶಿವರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.
ನೂತನ ಪದಾಧಿಕಾರಿಗಳಾಗಿ ಆರ್. ಅರುಣ್, ಪಿ. ಶರವಣ, ಜೀವನ್, ಪಿ.ಬಿ ವಿನಯ್ ಸೇರಿದಂತೆ ಇನ್ನಿತರರು ಪದಗ್ರಹಣ ಸ್ವೀಕರಿಸಲಿದ್ದಾರೆ.  
    ಕಾರ್ಯಕರ್ತರು, ಮುತ್ತಪ್ಪ ರೈ ಅಭಿಮಾನಿಗಳು, ವಿವಿಧ ಸಂಘಟನೆಗಳ ಮುಖಂಡರು ಸೇರಿದಂತೆ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.

ಭದ್ರಾವತಿ : ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳಿಗೆ ಆಕ್ರೋಶ

ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ

ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ಭದ್ರಾವತಿಯಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
   ಭದ್ರಾವತಿ, ಫೆ. ೨೦: ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳನ್ನು ಖಂಡಿಸಿ ನಗರದಲ್ಲಿ ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
   ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಾಗು ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಮತ್ತು ನಗರದ ವಿಐಎಸ್‌ಎಲ್ ಮತ್ತು ಎಂಪಿಎಂ ಕಾರ್ಖಾನೆಗಳನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಖಂಡಿಸಿ ನಗರ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಮೆರವಣಿಗೆ ಹಲವು ವಿಭಿನ್ನತೆಗಳಿಗೆ ಸಾಕ್ಷಿಯಾಯಿತು.
ಪ್ರತಿಭಟನಾ ಮೆರವಣಿಗೆಯಲ್ಲಿ ಎತ್ತಿನ ಗಾಡಿ, ಟ್ರ್ಯಾಕ್ಟರ್‌ಗಳು ಒಂದೆಡೆ ಕಂಡು ಬಂದರೆ, ಮತ್ತೊಂದೆಡೆ ಕತ್ತೆಗಳನ್ನು ಸಹ ವಿಶೇಷ ಎಂಬಂತೆ ಹೂವಿನ ಹಾರಗಳೊಂದಿಗೆ ಕರೆತರಲಾಗಿತ್ತು. ಜೊತೆಗೆ ಜಾನಪದ ತಂಡಗಳು ಸೇರಿದಂತೆ ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ಸರ್ಕಾರದ ಶೋಷಣೆಗಳ ವಿರುದ್ಧ ಎಂದಿಗೂ ನಾನು ಜನರ ಪರವಾಗಿ ಹೋರಾಟ ನಡೆಸುತ್ತೇನೆ. ಕ್ಷೇತ್ರದ ಜನರು ಯಾವುದೇ ರೀತಿ ಆತಂಕಕ್ಕೆ ಒಳಗಾಗದಿರಿ. ಕೇಂದ್ರ ಹಾಗು ರಾಜ್ಯ ಸರ್ಕಾರಗಳು ತಕ್ಷಣ ಜನವಿರೋಧಿ ಧೋರಣೆಗಳಿಂದ ಹೊರಬರಬೇಕು.
                                  - ಬಿ.ಕೆ ಸಂಗಮೇಶ್ವರ್, ಶಾಸಕರು, ಭದ್ರಾವತಿ.

    ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಮಾತನಾಡಿ, ಕೇಂದ್ರ ಹಾಗು ರಾಜ್ಯ ಬಿಜೆಪಿ ಸರ್ಕಾರಗಳು ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬರುವ ಮೂಲಕ ಜನಸಾಮಾನ್ಯರನ್ನು ಶೋಷಿಸುತ್ತಿವೆ. ಬಡವರು ಬದುಕುವುದು ದುಸ್ತರವಾಗಿದ್ದು, ಅಗತ್ಯ ವಸ್ತುಗಳಾದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಶ್ರೀಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಲ್ಲದೆ ರೈತ ಹಾಗು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಇವರ ಬದುಕು ಸಹ ಅತಂತ್ರವನ್ನಾಗಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.  
   ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡಿಯಬೇಕು. ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಬೇಕು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಬಡವರ, ರೈತರ, ಕಾರ್ಮಿಕರ ವಿರೋಧಿಗಳಾಗಿದ್ದು, ಬಂಡವಾಳ ಶಾಹಿಗಳ ಪರವಾದ ಸರ್ಕಾರಗಳಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಎರಡು ಸರ್ಕಾರಗಳು ಅಧಿಕಾರದಲ್ಲಿ ಮುಂದುವರೆಯುವುದರಲ್ಲಿ ಯಾವುದೇ ನೈತಿಕತೆ ಇಲ್ಲ.
                             - ಕಿಮ್ಮನೆ ರತ್ನಾಕರ, ಮಾಜಿ ಸಚಿವರು.

     ಪ್ರತಿಭಟನಾ ಮೆರವಣಿಗೆ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಆರಂಭಗೊಂಡು ಬಿ.ಎಚ್ ರಸ್ತೆ ಮೂಲಕ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಮತ್ತು ರಂಗಪ್ಪ ವೃತ್ತ ಮೂಲಕ ತಾಲೂಕು ಕಛೇರಿವರೆಗೂ ಸಾಗಿತು.
    ಪ್ರತಿಭಟನಾ ಮೆರವಣಿಗೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ತಾಲೂಕು ಪಂಚಾಯಿತಿ ಹಾಗು ವಿವಿಧ ಗ್ರಾಮ ಪಂಚಾಯಿತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಕಾಂಗ್ರೆಸ್ ಸಮಿತಿ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕ ಅಧ್ಯಕ್ಷೆ ಶೋಭಾ ರಾಮಚಂದ್ರ, ಯುವ ಘಟಕ ಅಧ್ಯಕ್ಷ ಜಿ. ವಿನೋದ್‌ಕುಮಾರ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.  
      ಸುಮಾರು ೩ ತಾಸು ಸಂಚಾರ ದಟ್ಟಣೆ:
  ಸುಮಾರು ೧೧ ಗಂಟೆಗೆ ಆರಂಭವಾದ ಪ್ರತಿಭಟನೆ ಮಧ್ಯಾಹ್ನ ೨ ಗಂಟೆಗೆ ಮುಕ್ತಾಯಗೊಂಡಿತು. ಪ್ರತಿಭಟನೆ ಆರಂಭಗೊಳ್ಳುತ್ತಿದ್ದಂತೆ ಬಿ.ಎಚ್ ರಸ್ತೆಯಲ್ಲಿ ವಾಹನದಟ್ಟಣೆ ಉಂಟಾಗಿದ್ದು, ಸಂಚಾರಿ ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸಪಡುವಂತಾಯಿತು. ಹೊಸ ಸೇತುವೆ ಮೂಲಕ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದರೂ ಸಹ ರಸ್ತೆ ಕಾಮಗಾರಿ ನಡೆಯುತ್ತಿರುವ ಕಾರಣ ಸುಮಾರು ೩ ತಾಸು ಸಂಚಾರ ದಟ್ಟಣೆ ಕಂಡು ಬಂದಿತು.



      ಪ್ರತಿಷ್ಠೆಯ ಮೆರವಣಿಗೆ :
   ಮಾಜಿ ಶಾಸಕ ಎಂ.ಜೆ ಅಪ್ಪಾಜಿ ನಿಧನದ ನಂತರ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಕೈಗೊಂಡ ಮೊದಲ ಪ್ರತಿಭಟನಾ ಮೆರವಣಿಗೆ ಇದಾಗಿದ್ದು, ಈ ಹಿನ್ನಲೆಯಲ್ಲಿ ಸ್ವತಃ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ಕುಟುಂಬ ವರ್ಗದವರು ಮತ್ತು ಪಕ್ಷದ ಮುಖಂಡರು, ಬೆಂಬಲಿಗರು ಸುಮಾರು ೧೫ ದಿನಗಳ ಹಿಂದೆಯೇ ಪ್ರತಿಭಟನೆ ರೂಪುರೇಷೆ ಸಿದ್ದಪಡಿಸಿಕೊಂಡಿದ್ದರು. ಸಾವಿರಾರು ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಿರುವುದು ಶಾಸಕರ ಪ್ರತಿಷ್ಠೆಯಂತೆ ಕಂಡು ಬರುತ್ತಿದೆ.