![](https://blogger.googleusercontent.com/img/b/R29vZ2xl/AVvXsEhV9bfVnIQxfgfrYc1SIt8W2fxb7RdVWaIPHTccE9WIOhc7bsFXb25_ApJoOcBWC79s6Gik8WgWJye-NU9jFI_uzXoU_s1JoNpAW52hnKb8eGHxHDa2TQfJwfPB5OITymRVctm6bBdLPlYm/w640-h398-rw/D22-BDVT1-793757.jpg)
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ: ದಿನದಿಂದ ದಿನಕ್ಕೆ ಅಗತ್ಯ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದಾಗಿ ಶ್ರೀಸಾಮಾನ್ಯರು ಬದುಕು ಸಾಗಿಸುವುದು ಕಷ್ಟಕರವಾಗಿದ್ದು, ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ವಿಫಲವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆ ಮುಖಂಡರು ಆರೋಪಿಸಿದರು.
ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸೋಮವಾರ ತಾಲೂಕು ಕಛೇರಿ ಮುಂಭಾಗ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ಪ್ರಸ್ತುತ ದೇಶದಲ್ಲಿ ಬಡವರ್ಗದವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಳೆದ ಸುಮಾರು ೧೫ ವರ್ಷಗಳಿಂದ ನಿರಂತರವಾಗಿ ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಅಡುಗೆ ಅನಿಲ, ಆಟೋ ಗ್ಯಾಸ್ ಸೇರಿದಂತೆ ಪೆಟ್ರೋಲಿಯಿಂ ಉತ್ಪನ್ನಗಳ ಬೆಲೆ ಏರಿಕೆಯಾಗುತ್ತಿದೆ. ಇದರ ಹಿಂದೆ ಕಾರ್ಪೊರೇಟ್ ತೈಲ ಕಂಪನಿಗಳ ದೊಡ್ಡ ಮಟ್ಟದ ಹುನ್ನಾರವಿದೆ. ಕೆಲವು ಶ್ರೀಮಂತ ಬಂಡವಾಳಶಾಹಿಗಳ ಹಿಡಿತದಲ್ಲಿ ದೇಶ ಮುನ್ನಡೆಯುತ್ತಿದೆ ಎಂದು ದೂರಿದರು.
ದೇಶದ ಬಹುಭಾಗ ಪೆಟ್ರೋಲಿಯಂ ಉತ್ಪನ್ನಗಳು ಮುಸ್ಲಿಂ ರಾಷ್ಟ್ರಗಳಿಂದ ಆಮದಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿಯಾಗಿದೆ. ಆದರೆ ಕೇಂದ್ರ ಸರ್ಕಾರ ಇದರ ನೇರ ಲಾಭ ತೈಲ ಬಳಕೆದಾರರಿಗೆ ವರ್ಗಾಹಿಸುವ ಬದಲು ಬೊಕ್ಕಸ ತುಂಬಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಕೇಂದ್ರ ಹಾಗು ರಾಜ್ಯ ಎರಡು ಸರ್ಕಾರಗಳು ಗಣನೀಯ ಪ್ರಮಾಣದಲ್ಲಿ ತೈಲೋತ್ಪನ್ನಗಳಿಗೆ ತೆರಿಗೆ ಹಾಕುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ದೇಶದ ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ದಲ್ಲಿ ಆರ್ಥಿಕತೆಯಲ್ಲಿ ಸ್ವಲ್ಪಮಟ್ಟಿಗೆ ಮುಂದಿದೆ. ಈ ಹಿನ್ನೆಯಲ್ಲಿ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿಯದೆ ರಾಜ್ಯದಲ್ಲಾದರೂ ತೈಲೋತ್ಪನಗಳ ಮೇಲಿನ ತೆರಿಗೆ ಸ್ವಲ್ಪ ಕಡಿಮೆ ಮಾಡಬೇಕೆಂದರು ಆಗ್ರಹಿಸಿದರು.
ಎಸ್‌ಡಿಪಿಐ ತಾಲೂಕು ಅಧ್ಯಕ್ಷ ತಾಹಿರ್, ಕಾರ್ಯದರ್ಶಿ ಎಂ.ಡಿ ಗೌಸ್, ಪಿಎಫ್‌ಐ ತಾಲೂಕು ಅಧ್ಯಕ್ಷ ಮಹಮದ್ ಸಾಧಿಕ್‌ವುಲ್ಲಾ, ಕಾರ್ಯದರ್ಶಿ ಅರ್ಷದ್ ಖುರೇಶಿ, ಪ್ರಗತಿಪರ ಸಂಘಟನೆಗಳ ಮುಖಂಡರಾದ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.