ಕಾರ್ಯಕರ್ತರಿಗೆ ಸನ್ಮಾನಿಸಿ ಗೌರವ, ಸೇವಾ ಕಾರ್ಯಕ್ಕೆ ಆರ್ಥಿಕ ನೆರವು
ಭದ್ರಾವತಿಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಶವಸಂಸ್ಕಾರ ಕಾರ್ಯದಲ್ಲಿ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಜರಂಗದಳ ಕಾರ್ಯಕರ್ತರನ್ನು ಭಾವಸಾರ ವಿಜನ್ ಇಂಡಿಯಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.
ಭದ್ರಾವತಿ, ಮೇ. ೨೩: ಒಂದೆಡೆ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಮತ್ತೊಂದೆಡೆ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ನಡುವೆ ಕೊರೋನಾ ಸೋಂಕಿತರ ಮೃತದೇಹಗಳ ಅಂತ್ಯ ಸಂಸ್ಕಾರ ಸಹ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಕೆಲವೆಡೆ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರು ಸಹ ಮುಂದೆ ಬರುತ್ತಿಲ್ಲ. ಉಳಿದಂತೆ ಎಲ್ಲದಕ್ಕೂ ಹಣ ನೀಡಬೇಕಾದ ಇಂದಿನ ಸಂದರ್ಭದಲ್ಲಿ ಕಡು ಬಡಕುಟುಂಬಗಳು ಅಂತ್ಯಸಂಸ್ಕಾರ ನಡೆಸಲು ಅಶಕ್ತರಾಗಿದ್ದಾರೆ. ಇಂತಹ ಹಲವು ಸಮಸ್ಯೆಗಳ ನಡುವೆ ಯಾವುದೇ ಸ್ವಾರ್ಥವಿಲ್ಲದೆ ೧೦ ಜನರ ಯುವಕರ ತಂಡ ಸೋಂಕಿತ ಮೃತದೇಹಗಳ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವ ಮೂಲಕ ಮಾನವೀಯತೆ ಮೆರೆದಿದೆ.
ಬಜರಂಗದಳ ಪ್ರಮುಖರಾದ ವಡಿವೇಲು, ಸುನಿಲ್‌ಕುಮಾರ್, ಕೃಷ್ಣ, ಶಿವಶಂಕರ್, ಅರಳಿಹಳ್ಳಿ ದೇವರಾಜ್, ಕಿರಣ್, ರಂಗನಾಥ್, ಅಜಿತ್, ಶ್ರೀಕಾಂತ್, ಸವಾಯಿ ಸಿಂಗ್, ಮಣಿಕಂಠ ಮತ್ತು ರಮೇಶ್ ಸೇರಿದಂತೆ ಸುಮಾರು ೧೦ ಮಂದಿಯನ್ನು ಒಳಗೊಂಡಿರುವ ತಂಡ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ತಂಡದ ಈ ಕಾರ್ಯವನ್ನು ನಗರದ ಭಾವಸಾರ ವಿಜನ್ ಇಂಡಿಯಾ ಅಭಿನಂದಿಸುವ ಮೂಲಕ ಕೃತಜ್ಞತೆ ಸಹ ಸಲ್ಲಿಸಿದೆ.
ಭಾವಸಾರ ವಿಜನ್ ಇಂಡಿಯಾ ಅಧ್ಯಕ್ಷ ಹಾಗು ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ದುಗ್ಗೇಶ್ ತೇಲ್ಕರ್ ನೇತೃತ್ವದಲ್ಲಿ ಭಾನುವಾರ ಸೇವಾ ಕಾರ್ಯದಲ್ಲಿ ತೊಡಗಿರುವ ಬಜರಂಗದಳದ ೮ ಜನ ಕಾರ್ಯಕರ್ತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಜೊತೆಗೆ ಸೇವಾ ಕಾರ್ಯಕ್ಕೆ ನೆರವಾಗುವ ನಿಟ್ಟಿನಲ್ಲಿ ಸದಸ್ಯರಿಂದ ಸಂಗ್ರಹಿಸಲಾದ ಆರ್ಥಿಕ ನೆರವನ್ನು ಸಹ ತಂಡಕ್ಕೆ ನೀಡಲಾಯಿತು. ಅಲ್ಲದೆ ತಂಡಕ್ಕೆ ಪ್ರತಿದಿನ ಊಟದ ವ್ಯವಸ್ಥೆ ಸಹ ಕೈಗೊಳ್ಳಲಾಗಿದೆ. ಯೋಗೇಶ್‌ಕುಮಾರ್, ಲಕ್ಷ್ಮೀಕಾಂತ್ ಸೇರಿದಂತೆ ಭಾವಸಾರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.