Monday, June 14, 2021

ನರೇಗಾ ಯೋಜನೆಯಡಿ ಸಮರ್ಪಕವಾಗಿ ಉದ್ಯೋಗ ನೀಡಿ

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಭಿವೃದ್ಧಿ ಅಧಿಕಾರಿ ಸಿ. ಕುಮಾರ್ ಅವರಿಗೆ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಜೂ. ೧೪: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಿ ಸೋಮವಾರ ತಾಲೂಕಿನ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ನಡೆಸಿ ಅಭಿವೃದ್ಧಿ ಅಧಿಕಾರಿ ಸಿ. ಕುಮಾರ್ ಅವರಿಗೆ ತಾಲೂಕು ಬಂಜಾರ ಯುವಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
   ಕೊರೋನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶದ ನಿವಾಸಿಗಳು ತೀರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ನಡುವೆ ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಉದ್ಯೋಗ ನೀಡುತ್ತಿಲ್ಲ. ಜೂ.೯ ರಿಂದ ೧೨ರ ವರೆಗೆ ಕೇವಲ ೪ ದಿನ ಮಾತ್ರ ಉದ್ಯೋಗ ನೀಡಲಾಗಿದೆ. ಈ ಹಿಂದೆ ೭ ದಿನ ಕೆಲಸ ನೀಡಿರುವುದಿಲ್ಲ. ಇದರಿಂದಾಗಿ ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಸಮರ್ಪಕವಾಗಿ ಉದ್ಯೋಗ ನೀಡುವಂತೆ ಆಗ್ರಹಿಸಲಾಯಿತು.
    ಗ್ರಾಮ ಪಂಚಾಯಿತಿ ಸದಸ್ಯರಾದ ಬಿ. ಆನಂದ್, ಶೋಭಾ ಬಾಯಿ, ತಾಂಡ ಅಭಿವೃದ್ಧಿ ನಿಗಮದ ತಾಲೂಕು ಸಂಪನ್ಮೂಲ ವ್ಯಕ್ತಿ ಹೇಮಂತ್, ಮುಖಂಡರಾದ ಧರ್ಮನಾಯಕ್, ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣ ನಾಯಕ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Sunday, June 13, 2021

ಕೊರೋನಾ ಲಸಿಕಾ ಕೇಂದ್ರಕ್ಕೆ ಚಾಲನೆ


ಭದ್ರಾವತಿ ನಗರಸಭೆ ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕೊರೋನಾ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಭಾನುವಾರ ೪ ವಾರ್ಡ್‌ಗಳ ನಗರಸಭಾ ಸದಸ್ಯರು ಸೇರಿದಂತೆ ಸ್ಥಳೀಯರು ಚಾಲನೆ ನೀಡಿದರು.
    ಭದ್ರಾವತಿ, ಜೂ. ೧೩: ನಗರಸಭೆ ವಾರ್ಡ್ ನಂ.೩೧, ೩೨, ೩೩ ಮತ್ತು ೩೪ರ ನಿವಾಸಿಗಳಿಗೆ ಅನುಕೂಲವಾಗುವಂತೆ ನ್ಯೂಟೌನ್ ಉಂಬ್ಳೆಬೈಲು ರಸ್ತೆಯಲ್ಲಿರುವ ಸೇಂಟ್ ಚಾರ್ಲ್ಸ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಕೊರೋನಾ ಲಸಿಕಾ ಕೇಂದ್ರ ತೆರೆಯಲಾಗಿದ್ದು, ಭಾನುವಾರ ೪ ವಾರ್ಡ್‌ಗಳ ನಗರಸಭಾ ಸದಸ್ಯರು ಸೇರಿದಂತೆ ಸ್ಥಳೀಯರು ಚಾಲನೆ ನೀಡಿದರು.
     ನಗರಸಭೆ ಒಟ್ಟು ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ ೧೨ ಲಸಿಕಾ ಕೇಂದ್ರಗಳನ್ನು ನಗರಸಭೆ ವತಿಯಿಂದ ತೆರೆಯಲಾಗಿದ್ದು, ಈ ಪೈಕಿ ಇದು ಸಹ ಒಂದಾಗಿದೆ. ನಗರಸಭಾ ಸದಸ್ಯರಾದ ಪಲ್ಲವಿ ದಿಲೀಪ್, ಸವಿತಾ ಉಮೇಶ್,  ಆರ್. ಮೋಹನ್‌ಕುಮಾರ್, ಲತಾ ಚಂದ್ರಶೇಖರ್, ಮುಖಂಡರಾದ  ಎನ್. ರಾಮಕೃಷ್ಣ   ಸೇರಿದಂತೆ ಸ್ಥಳೀಯ ಮುಖಂಡರು ಇನ್ನಿತರರು ಉಪಸ್ಥಿತರಿದ್ದರು.
     ಹೊಸೂರು ಸಿದ್ದಾಪುರ ಜಿವಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕರಾದ ಕೆ. ನಾಗರಾಜ ಮತ್ತು ಇಮ್ರಾನ್ ಆಲಿ, ಭಂಡಾರಹಳ್ಳಿ ಜಿಎಚ್‌ಪಿಎಸ್ ಶಾಲೆಯ ಸಹ ಶಿಕ್ಷಕ ರವಿಕುಮಾರ್, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕಿ ಲತಾಮಣಿ ಅವರನ್ನು ಸಿಬ್ಬಂದಿಗಳಾಗಿ ನೇಮಿಸಲಾಗಿದೆ.

ಬಾರ್ ಬೆಂಡ್, ಪೈಂಟರ್ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ

ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
      ಭದ್ರಾವತಿ, ಜೂ. ೧೩:  ಶಾಸಕ ಬಿ.ಕೆ ಸಂಗಮೇಶ್ವರ್ ತಮ್ಮ ಗೃಹ ಕಛೇರಿಯಲ್ಲಿ ಭಾನುವಾರ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡಲಾಗುವ ವೃತಿ ಕೌಶಲ್ಯಗಳಿಗೆ ಅಗತ್ಯವಿರುವ ಪರಿಕರಗಳನ್ನೊಳಗೊಂಡ ಟೂಲ್ ಕಿಟ್‌ಗಳನ್ನು ವಿತರಿಸಿದರು.
    ಅಸಂಘಟಿತ ಕಾರ್ಮಿಕರ ವಲಯದ ವ್ಯಾಪ್ತಿಯಲ್ಲಿ ಬರುವ ಬಾರ್ ಬೆಂಡ್ ಮತ್ತು ಪೈಂಟರ್ ಕಾರ್ಮಿಕರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದು, ಇದೀಗ ವೃತ್ತಿ ಕೌಶಲ್ಯಗಳಿಗೆ ನೆರವಾಗುವಂತೆ ಅಗತ್ಯ ಪರಿಕರಗಳನ್ನು ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ವಿತರಿಸುವ ಮೂಲಕ ಕಾರ್ಮಿಕರಲ್ಲಿ ಆತ್ಮಸ್ಥೈರ್ಯ ಮೂಡಿಸಿದೆ.
   ಕಾರ್ಮಿಕ ನಿರೀಕ್ಷಕಿ ಮಮತಾಜ್ ಬೇಗಂ, ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು, ಜಿಲ್ಲಾ ಉಪಾಧ್ಯಕ್ಷ ಚಂದ್ರು, ತಾಲೂಕು ಕಾರ್ಯದರ್ಶಿ ಅಭಿಲಾಷ್, ಸಂಘಟನಾ ಕಾರ್ಯದರ್ಶಿ ಸುಬ್ಬಣ್ಣ, ಶಂಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Saturday, June 12, 2021

ಎಲ್ಲರಿಗೂ ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿ : ಎಚ್. ರವಿಕುಮಾರ್ ಆಗ್ರಹ


ಎಚ್. ರವಿಕುಮಾರ್
   ಭದ್ರಾವತಿ, ಜೂ. ೧೨: ರಾಜ್ಯ ಸರ್ಕಾರ ತಕ್ಷಣ ವಿದ್ಯುತ್ ಬೆಲೆ ಏರಿಕೆ ಹಿಂಪಡೆಯುವ ಮೂಲಕ ಎಲ್ಲರಿಗೂ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವಂತೆ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಆಗ್ರಹಿಸಿದ್ದಾರೆ.
    ಕೊರೋನಾ ಪರಿಣಾಮ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯುತ್ ದರ ಏರಿಕೆ ಮಾಡಿರುವುದು ಖಂಡನೀಯ. ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರ ಬಂಡವಾಳ ಶಾಹಿಗಳ ಪರವಾಗಿದ್ದು, ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ. ದೆಹಲಿ ಸರ್ಕಾರ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಇದೆ ಮಾದರಿಯಲ್ಲಿ ಕರ್ನಾಟಕ ಸರ್ಕಾರ ಉಚಿತ ವಿದ್ಯುತ್ ನೀಡಬೇಕು.
   ತಕ್ಷಣ ವಿದ್ಯುತ್ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ದರ ನಿಗದಿಯಲ್ಲಿ ಸೂಕ್ತ ನಿಲುವು ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಬಂಡವಾಳಶಾಹಿಗಳ ಲಾಭಿಗೆ ಮಣಿಯಬಾರದು ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ರವಿಕುಮಾರ್ ಒತ್ತಾಯಿಸಿದ್ದಾರೆ.  

ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ


ಭದ್ರಾವತಿ ಜನ್ನಾಪುರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶನಿವಾರ ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೧೨: ನಗರದ ಜನ್ನಾಪುರ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಶನಿವಾರ ಶ್ರೀ ಸತ್ಯಸಂದ ತೀರ್ಥ ಶ್ರೀ ಪಾದಂಗಳವರ ಆರಾಧನೆ ಹಮ್ಮಿಕೊಳ್ಳಲಾಗಿತ್ತು.
     ಆರಾಧನೆ ಹಿನ್ನಲೆಯಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ, ಭಕ್ತರಿಂದ ಪಾರಾಯಣ, ಪಂಡಿತರಾದ ಗಂಟೆ ನಾರಾಯಣಚಾರ್ ಅವರಿಂದ ಉಪನ್ಯಾಸ, ಪಲ್ಲಕ್ಕಿ ಉತ್ಸವ, ಅಲಂಕಾರ ಸೇವೆ ಹಾಗು ಅಷ್ಟಾವಧಾನ ಮತ್ತು ಹಸ್ತೋದಕ ಹಾಗು ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.
    ಆನಂದತೀರ್ಥ ಕಲ್ಲಾಪುರ್, ರಾಮಚಂದ್ರ, ಶ್ರೀನಿವಾಸಚಾರ್, ರಘು ರಾಮಾಚಾರ್, ಪ್ರಧಾನ ಅರ್ಚಕ ಮುರುಳಿಧರ್, ರಮಾಕಾಂತ್, ಎಸ್.ಎನ್ ಬಾಲಕೃಷ್ಣ, ಹಳ್ಳಿಕಟ್ಟೆ ನಾಗರಾಜ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಭಾರತಿ ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.


ಅರುಣ್‌ಕುಮಾರ್ ನಿಧನ

ಅರುಣ್‌ಕುಮಾರ್

   ಭದ್ರಾವತಿ, ಜೂ. ೧೨: ಹಳೇನಗರ ಕುಂಬಾರರ ಬೀದಿ ನಿವಾಸಿ, ಪತ್ರ ಬರಹಗಾರ ಶಾಂತಯ್ಯನವರ ಅಳಿಯ ಅರುಣ್‌ಕುಮಾರ್(೪೫) ಅನಾರೋಗ್ಯದಿಂದ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
   ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹಳೇನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಕಾಂಗ್ರೆಸ್ ಆಕ್ರೋಶ


ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಶನಿವಾರ ಭದ್ರಾವತಿ ಬ್ಲಾಕ್ ಕಾಂಗ್ರೆಸ್ ನಗರ ಹಾಗು ಗ್ರಾಮಾಂತರ ಘಟಕಗಳ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
     ಭದ್ರಾವತಿ, ಜೂ. ೧೨: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಖಂಡಿಸಿ ಶನಿವಾರ ಬ್ಲಾಕ್ ಕಾಂಗ್ರೆಸ್ ನಗರ ಹಾಗು ಗ್ರಾಮಾಂತರ ಘಟಕಗಳ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. 
ನಗರದ ವಿವಿಧೆಡೆ ಪೆಟ್ರೋಲ್ ಬಂಕ್‌ಗಳ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರಬೇಕಾದ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿವೆ ಎಂದು ಆರೋಪಿಸಿದರು. 
ತಕ್ಷಣ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು. ಕೋವಿಡ್ ಸಂಕಷ್ಟದಲ್ಲಿರುವ ಬಡ ಜನರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸಬೇಕು. ಕಾರ್ಮಿಕ ಹಾಗು ರೈತ ವಿರೋಧಿ ಧೋರಣೆಗಳನ್ನು ತಕ್ಷಣ ಕೈಬಿಡಬೇಕೆಂದು ಆಗ್ರಹಿಸಿದರು. 
ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳ ರಾಮಚಂದ್ರ, ಯುವ ಘಟಕದ ಅಧ್ಯಕ್ಷ ಜಿ. ವಿನೋದ್‌ಕುಮಾರ್,  ನಗರಸಭಾ ಸದಸ್ಯರಾದ ಬಿ.ಕೆ ಮೋಹನ್,  ಜಾರ್ಜ್, ಲತಾ ಚಂದ್ರಶೇಖರ್, ಚನ್ನಪ್ಪ, ಬಿ.ಟಿ ನಾಗರಾಜ್, ಕಾಂತರಾಜ್, ಮೊಹಮದ್, ಮುಖಂಡರಾದ ವೆಂಕಟೇಶ್ ಸುಬ್ಬಣ್ಣ, ಗಂಗಾಧರ್, ರಾಘವೇಂದ್ರ ಸರಾಟೆ, ಎಂ. ಶಿವಕುಮಾರ್, ಎಸ್.ಎಸ್ ಭೈರಪ್ಪ, ಆಂಜನಪ್ಪ, ದೇವೇಂದ್ರ ಗಿರಿ, ಲಕ್ಷ್ಮೀದೇವಿ, ಸುಮಿತ್ರ ಅಂಬೋರೆ, ಯುವ ಘಟಕದ ಭರತ್, ಶಂಕರ್, ವರುಣ್, ಉದಯ್, ಸುನಿಲ್ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಪಾಲ್ಗೊಂಡಿದ್ದರು.