Thursday, August 12, 2021

೩೫ ಲಕ್ಷ ರು. ವೆಚ್ಚದ ಕುರುಹಿನಶೆಟ್ಟಿ ಸಮುದಾಯ ಭವನ ನಿರ್ಮಾಣಕ್ಕೆ ಭೂಮಿ ಪೂಜೆ

ಭದ್ರಾವತಿ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಭದ್ರಾವತಿ, ಆ. ೧೨: ನಗರದ ಉಜ್ಜನಿಪುರ ಬೈಪಾಸ್ ರಸ್ತೆಯಲ್ಲಿರುವ ಕುರುಹಿನಶೆಟ್ಟಿ ಸಂಘದ ಸುಮಾರು ೩೫ ಲಕ್ಷ ರು. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಗುರುವಾರ ಶಾಸಕ ಬಿ.ಕೆ ಸಂಗಮೇಶ್ವರ್ ಭೂಮಿ ಪೂಜೆ ನೆರವೇರಿಸಿದರು.
ಸಂಘದ ಅಧ್ಯಕ್ಷ ಎನ್.ಆರ್ ಜಯರಾಜ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸಂಘದ ಗೌರವಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥಶೆಟ್ಟಿ, ಸಹಕಾರ್ಯದರ್ಶಿ ನಿತ್ಯಾನಂದ, ಜಯರಾಜ್, ಎಚ್. ತಿಮ್ಮಪ್ಪ ಸೇರಿದಂತೆ ಸಮಾಜದ ಮುಖಂಡರು, ಇನ್ನಿತರರು ಉಪಸ್ಥಿತರಿದ್ದರು.

Wednesday, August 11, 2021

ಆ.೧೨ ರಿಂದ ನೂತನ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮ



    ಭದ್ರಾವತಿ, ಅ. ೧೧: ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆ ೨ನೇ ತಿರುವಿನಲ್ಲಿ ನಿರ್ಮಾಣಗೊಂಡಿರುವ ಶ್ರೀ ಶಿವಪಾರ್ವತಿದೇವಿ ಅಮ್ಮನವರ ಹಾಗು ಶ್ರೀ ಬಸವೇಶ್ವರಸ್ವಾಮಿ ನೂತನ ದೇವಾಲಯ ಲೋಕಾರ್ಪಣೆ ಹಾಗು ವಿಗ್ರಹಗಳ ಪ್ರತಿಷ್ಠಾಪನೆ ಸಮಾರಂಭ ಆ.೧೨ ಮತ್ತು ೧೩ರಂದು ಎರಡು ದಿನ ನಡೆಯಲಿದೆ.
    ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಆ.೧೨ರಂದು ಸಂಜೆ ಗಣಪತಿ, ಗಂಗೆ ಪೂಜೆ, ಗೋಪೂಜೆಯೊಂದಿಗೆ ದೇವಾಲಯ ಪ್ರವೇಶ, ಮಂಗಳವಾದ್ಯ ಶುಭ ಮಂಗಳ ಕೆಲಸಗಳೊಂದಿಗೆ ನಾಂದಿ ಪುಣ್ಯಂ ದೇವಾಯ ಸುದ್ದಿ, ವಾಸ್ತು ಪೂಜೆಯೊಂದಿಗೆ ಗಣಹೋಮ ಮತ್ತು ವಾಸ್ತು ಹೋಮ ಜರುಗಲಿವೆ.
    ಆ.೧೩ರಂದು ಬೆಳಿಗ್ಗೆ ೫ ರಿಂದ ಗಂಗಾಪೂಜೆ, ಗಣಪತಿ, ಉಮಾಮಹೇಶ್ವರ, ಲಕ್ಷ್ಮೀನಾರಾಯಣ, ದುರ್ಗಾದೇವತಾ, ನಂದಿ, ನವಗ್ರಹ, ಪಂಚಕಲಶ, ಅಶ್ವಧಿಪಾಲಕರು, ರುದ್ರಹೋಮ, ಕುಂಭಾಭಿಷೇಕ, ಅಷ್ಟೋತರ ಮತ್ತು ಮಹಾಮಂಗಳಾರತಿ ಜರುಗಲಿದ್ದು, ೯.೩೦ ರಿಂದ ೧೦.೩೦ರ ವರೆಗೆ ದೇವಾಲಯ ಉದ್ಘಾಟನೆ ಹಾಗು ಧಾರ್ಮಿಕ ಸಮಾರಂಭ ನಡೆಯಲಿದೆ.
    ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಾಗಲಕೋಟೆ ಶ್ರೀ ಸಿದ್ದಾರೂಢ ಬಸವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಭದ್ರಗಿರಿ ಮುರುಗೇಶ್ ಸ್ವಾಮೀಜಿ ಮತ್ತು ಹಿರಿಯೂರು ಅಚಲ ಸದ್ಗುರು ಆಶ್ರಮದ ಶ್ರೀ ಲಕ್ಷ್ಮಣಾರ್ಯ ಸ್ವಾಮೀಜಿ ಉಪಸ್ಥಿತರಿರುವರು.
    ಶಾಸಕ ಬಿ.ಕೆ ಸಂಗಮೇಶ್ವರ್ ದೇವಸ್ಥಾನ ಲೋಕಾರ್ಪಣೆಗೊಳಿಸಲಿದ್ದು, ಶಾರದ ಅಪ್ಪಾಜಿ, ಪೊಲೀಸ್ ಉಮೇಶ್, ಪ್ರಭಾಕರ ಬೀರಯ್ಯ, ಶಿವಗಂಗಯ್ಯ, ಎಸ್. ಕುಮಾರ್, ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮನೋಹರ್, ಕೆ. ಪರಮೇಶ್, ಮೆಡಿಕಲ್ ಆನಂದ್, ತಿಮ್ಮೇಗೌಡ್ರು, ಕೋಟೇಶ್ವರರಾವ್, ಆನಂದ್, ಸತೀಶ್‌ಗೌಡ, ಎ. ಮಾಧು, ಎಚ್. ಮಹಾದೇವ, ಸಿದ್ದಲಿಂಗಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.  

ಭದ್ರಾವತಿಯಲ್ಲಿ ಒಂದೇ ದಿನ ೧೪ ಸೋಂಕು : ಇಬ್ಬರು ಬಲಿ

     ಭದ್ರಾವತಿ, ಆ. ೧೧: ತಾಲೂಕಿನಲ್ಲಿ ಕೊರೋನಾ ಸೋಂಕು ಪುನಃ ಏರಿಕೆಯಾಗುತ್ತಿದ್ದು, ಒಂದೇ ದಿನ ೧೪ ಸೋಂಕು ಪತ್ತೆಯಾಗುವುದರೊಂದಿಗೆ ಇಬ್ಬರು ಬಲಿಯಾಗಿದ್ದಾರೆ.
     ಮಂಗಳವಾರ ಕೇವಲ ೪ ಸೋಂಕು ಪತ್ತೆಯಾಗಿದ್ದು, ಬುಧವಾರ ನಗರ ಹಾಗು ಗ್ರಾಮಾಂತರ ಭಾಗದಲ್ಲಿ ತಲಾ ೭ ರಂತೆ ಒಟ್ಟು ೧೪ ಸೋಂಕು ಕಾಣಿಸಿಕೊಂಡಿದೆ. ಅಲ್ಲದೆ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ. ಇದರಿಂದಾಗಿ ಕೊರೋನಾ ೩ನೇ ಅಲೆ ವ್ಯಾಪಿಸಿರುವ ಆತಂಕ ಎದುರಾಗಿದ್ದು, ತಾಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಾಲೂಕಿನಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ.  

ಬೋರಮ್ಮ ಹೊನ್ನಯ್ಯ ನಿಧನ

ಬೋರಮ್ಮ ಹೊನ್ನಯ್ಯ
     ಭದ್ರಾವತಿ, ಆ. ೧೧: ನಗರಸಭೆ ೨೮ನೇ ವಾರ್ಡ್ ನಗರಸಭಾ ಸದಸ್ಯ, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಕಾಂತರಾಜ್‌ರವರ ತಾಯಿ ಬೋರಮ್ಮ ಹೊನ್ನಯ್ಯ(೭೨) ಬುಧವಾರ ನಿಧನ ಹೊಂದಿದರು.
     ಮೃತರು ಕಾಂತರಾಜ್ ಸೇರಿದಂತೆ ೩ ಗಂಡು ಹಾಗು ೫ ಹೆಣ್ಣು ಮಕ್ಕಳು, ಸೊಸೆ, ಅಳಿಯಂದಿರು ಮತ್ತು ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹುತ್ತಾಕಾಲೋನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
     ಶಾಸಕ ಬಿ.ಕೆ ಸಂಗಮೇಶ್ವರ್, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗು ನಗರಸಭಾ ಸದಸ್ಯರು ಮತ್ತು ಕುರುಬ ಸಮಾಜದ ಮುಖಂಡರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.

Tuesday, August 10, 2021

ಅಳಿವಿನಂಚಿನಲ್ಲಿರುವ ಓತಿಕ್ಯಾತ : ಆಕರ್ಷಕ ಚಿತ್ರಗಳು

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಂಡು ಬಂದ ಹಸಿರು ಬಣ್ಣದ ಓತಿಕ್ಯಾತ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿದಿರುವ ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಚಿತ್ರ.
     ಭದ್ರಾವತಿ, ಆ. ೧೦: ಇತ್ತೀಚಿನ ಕೆಲವು ವರ್ಷಗಳಿಂದ ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅಳಿವಿನಂಚಿನಲ್ಲಿರುವ ಜೀವಿಗಳ ಪೈಕಿ ಓತಿಕ್ಯಾತ ಸಹ ಒಂದಾಗಿದೆ. ಇಂತಹ ಅಪರೂಪದ ಜೀವಿಯ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿಯುವ ಮೂಲಕ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ  ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆಯ ನೌಕರ ಮಂಜುನಾಥ್ ಗಮನ ಸೆಳೆದಿದ್ದಾರೆ.
     ಬಯಲು ಸೀಮೆಯಲ್ಲಿ ಹೆಚ್ಚಾಗಿ ಕಂಡು ಬರುವ ಸರಿಸೃಪಗಳ ಜಾತಿಗೆ ಸೇರಿದ ಓತಿಕ್ಯಾತ ಕುರಿತು ಇಂದಿನ ಯುವ ಪೀಳಿಗೆಗೆ ಸರಿಯಾದ ಮಾಹಿತಿಯೇ ಇಲ್ಲ. ಇದಕ್ಕೆ ಕಾರಣ ಓತಿಕ್ಯಾತಗಳು ಅಳಿವಿನಂಚಿನಲ್ಲಿವೆ. ಅದರಲ್ಲೂ ನಗರ ಪ್ರದೇಶದಲ್ಲಿ ಅಪರೂಪವಾಗಿ ಕಂಡು ಬರುವ ಇವುಗಳನ್ನು ವೀಕ್ಷಿಸುವುದೇ ಒಂದು ರೀತಿಯ ವಿಸ್ಮಯವಾಗಿದೆ.
     ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಂಡು ಬಂದ ಹಸಿರು ಬಣ್ಣದ ಓತಿಕ್ಯಾತ ಚಲನವಲನಗಳನ್ನು ಆಕರ್ಷಕವಾಗಿ ಸೆರೆ ಹಿಡಿದಿರುವ ಮಂಜುನಾಥ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್ ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸುನಿಲ್ ನಿವಾಸಕ್ಕೆ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಭೇಟಿ : ಕುಟುಂಬಸ್ಥರಿಗೆ ಸಾಂತ್ವನ

ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆಯಾದ ಭದ್ರಾವತಿ ಜೈಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ಕಾರ್ಮಿಕ ಸುನಿಲ್ ನಿವಾಸಕ್ಕೆ ಭಾರತೀಯ ಜನತಾ ಪಕ್ಷದ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
     ಭದ್ರಾವತಿ, ಆ. ೧೦: ಕ್ಷುಲ್ಲಕ ಕಾರಣಕ್ಕಾಗಿ ಹತ್ಯೆಯಾದ ಜೈಭೀಮಾ ನಗರದ ನಿವಾಸಿ, ನಗರಸಭೆ ಗುತ್ತಿಗೆ ಪೌರ ಕಾರ್ಮಿಕ ಸುನಿಲ್ ನಿವಾಸಕ್ಕೆ ಭಾರತೀಯ ಜನತಾ ಪಕ್ಷದ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಮಂಗಳವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
    ಕೋವಿಡ್-೧೯ರ ಹಿನ್ನಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿಗೊಳಿಸಿದ್ದ ಸಂದರ್ಭದಲ್ಲಿ ಕ್ಷುಲ್ಲಕ ಕಾರಣಕ್ಕೆ ಗುತ್ತಿಗೆ ಪೌರ ಕಾರ್ಮಿಕ ಸುನಿಲ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಎಲ್ಲೆಡೆ ವ್ಯಾಪಕವಾದ ಖಂಡನೆ ವ್ಯಕ್ತವಾಗಿತ್ತು.
ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಸುನಿಲ್ ನಿವಾಸಕ್ಕೆ ಆಗಮಿಸಿ ಸಾಂತ್ವನ ಹೇಳುವ ಮೂಲಕ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದರು. ಇದೀಗ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ಭೇಟಿ ನೀಡಿ ಸಾಂತ್ವನ ಹೇಳಿದರು.
    ಬಿಜೆಪಿ ತಾಲೂಕು ಎಸ್.ಸಿ ಮೋರ್ಚಾ ಅಧ್ಯಕ್ಷ ಗಣೇಶ್‌ರಾವ್ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ೨೦೦ ಮಂದಿಗೆ ಕೋವಿಡ್ ಲಸಿಕೆ

ಕರ್ನಾಟಕ ರಾಜ್ಯ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ಭದ್ರಾವತಿ ತರೀಕೆರೆ ರಸ್ತೆಯಲ್ಲಿರುವ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸುಮಾರು ೨೦೦ ಮಂದಿಗೆ ಕೋವಿಡ್-೧೯ ಲಸಿಕೆ ಹಾಕಿಸಲಾಯಿತು. ಕಾರ್ಯಕ್ರಮವನ್ನು ನಗರಸಭಾ ಸದಸ್ಯ ಜಾರ್ಜ್ ಮತ್ತು ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ, ಆ. ೧೦: ಕರ್ನಾಟಕ ರಾಜ್ಯ ಕನ್‌ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ವತಿಯಿಂದ ನಗರದ ತರೀಕೆರೆ ರಸ್ತೆಯಲ್ಲಿರುವ ಧರ್ಮಶಾಸ್ತ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಸುಮಾರು ೨೦೦ ಮಂದಿಗೆ ಕೋವಿಡ್-೧೯ ಲಸಿಕೆ ಹಾಕಿಸಲಾಯಿತು.
    ನಗರಸಭಾ ಸದಸ್ಯ ಜಾರ್ಜ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಕಾರ್ಯಾಧ್ಯಕ್ಷ ಅಭಿಲಾಷ್, ತಾಂತ್ರಿಕ ಸಲಹೆಗಾರ ಮನೋಹರ್, ಗೌರವಾಧ್ಯಕ್ಷ ಜಿ. ಸುರೇಶ್, ಸಲಹೆಗಾರ ಶಿವಣ್ಣಗೌಡ, ನಿರ್ದೇಶಕ ಅಂತೋಣಿ ಕ್ರೂಸ್, ಕಾರ್ಯದರ್ಶಿ ನಾರಾಯಣಸ್ವಾಮಿ, ಸಹ ಕಾರ್ಯದರ್ಶಿ ಮಂಜುನಾಥ್, ವಿಭಾಗೀಯ ಅಧ್ಯಕ್ಷ ಶ್ರೀನಿವಾಸ್, ಸಂಚಾಲಕ ಮಂಜುನಾಥ್, ಶ್ರೀ ಧರ್ಮಶಾಸ್ತ್ರ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಆರ್. ಮುನಿರಾಜು ಹಾಗು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.