Saturday, October 30, 2021

ದಶಕದ ಹಿಂದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಣ್ಣನೊಂದಿಗೆ ಉಕ್ಕಿನ ನಗರಕ್ಕೆ ಆಗಮಿಸಿದ್ದರು..!

ಹಳೇಯ ನೆನಪು ಮರುಕಳುಹಿಸುವಂತೆ ಮಾಡುತ್ತಿದೆ ಪೊಲೀಸ್ ಸಿಬ್ಬಂದಿಗಳು ತೆಗೆಸಿಕೊಂಡ ಪೋಟೋ


ಭದ್ರಾವತಿಯಲ್ಲಿ ರಾಜ್‌ಕುಮಾರ್ ಕುಟುಂಬಕ್ಕೆ ಪರಿಚಯಸ್ಥರಾಗಿದ್ದ ರವಿ ಎಂಬುವರ ಮನೆಯಲ್ಲಿ ಭೋಜನ ಕೂಟಕ್ಕೆ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ಹಳೇನಗರದ ಪೊಲೀಸ್ ಠಾಣಾಧಿಕಾರಿಯಾಗಿದ್ದ ನಂಜಪ್ಪ ಹಾಗು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಕುಮಾರ್ ಮತ್ತು ಸಿಬ್ಬಿಂದಿಗಳು ತೆಗೆಸಿಕೊಂಡಿರುವ ಪೋಟೋ ಹಳೇಯ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ.
    ಭದ್ರಾವತಿ, ಅ. ೩೦: ಪವರ್ ಸ್ಟಾರ್ ಪುನಿತ್‌ರಾಜ್‌ಕುಮಾರ್ ೨೦೧೦ರಲ್ಲಿ ಜಾಕಿ ಚಲನಚಿತ್ರ ಬಿಡುಗಡೆಗೊಂಡ ಒಂದು ವಾರದ ನಂತರ ನಗರದ ಸಿ.ಎನ್ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ-ನೇತ್ರಾವತಿ(ಸತ್ಯ) ಚಿತ್ರಮಂದಿರಕ್ಕೆ ಪ್ರಚಾರ ಕಾರ್ಯ ನಿಮಿತ್ತ ಮೊದಲ ಬಾರಿಗೆ ಉಕ್ಕಿನ ನಗರಕ್ಕೆ ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಜೊತೆ ಆಗಮಿಸಿದ್ದರು.
    ಅಂದು ಚಿತ್ರ ಮಂದಿರ ಮಾಲೀಕರಾಗಿದ್ದ ದಿವಂಗತ ಸತ್ಯನಾರಾಯಣರಾವ್ ಹಾಗು ನಗರದ ಗಣ್ಯರು ಮತ್ತು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಸ್ವಾಗತ ಕೋರಿದ್ದರು. ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಜಾಕಿ ಚಲನಚಿತ್ರ ವೀಕ್ಷಣೆಗೆ ಬಂದಿದ್ದ ಅಭಿಮಾನಿಗಳು, ಪ್ರೇಕ್ಷಕರೊಂದಿಗೆ ಸಂಭ್ರಮ ಹಂಚಿಕೊಂಡು ತೆರಳಿದ್ದರು ಎಂದು ಸತ್ಯನಾರಾಯಣರಾವ್ ಅವರ ಪುತ್ರ, ಚಿತ್ರಮಂದಿರ ಮಾಲೀಕ ದುಷ್ಯಂತ್‌ರಾಜ್ ನೆನಪಿಸಿಕೊಳ್ಳುತ್ತಾರೆ.
    ಅಂದು ಹಳೇನಗರದ ಪೊಲೀಸ್ ಠಾಣಾಧಿಕಾರಿಯಾಗಿದ್ದ ನಂಜಪ್ಪ ಹಾಗು ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿಯಾಗಿದ್ದ ಕುಮಾರ್ ಮತ್ತು ಸಿಬ್ಬಿಂದಿಗಳು ರಾಜ್‌ಕುಮಾರ್ ಕುಟುಂಬಕ್ಕೆ ಪರಿಚಯಸ್ಥರಾಗಿದ್ದ ರವಿ ಎಂಬುವರ ಮನೆಯಲ್ಲಿ ಭೋಜನ ಕೂಟಕ್ಕೆ ಆಗಮಿಸಿದ್ದ ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜ್‌ಕುಮಾರ್ ಅವರೊಂದಿಗೆ ತೆಗೆಸಿಕೊಂಡಿರುವ ಪೋಟೋ ಹಳೇಯ ನೆನಪುಗಳನ್ನು ಮರುಕಳುಹಿಸುವಂತೆ ಮಾಡಿದೆ.
    ಕಲಾ ಸಾಮ್ರಾಟ್ ಎಸ್ ನಾರಾಯಣ್, ಹಾಸ್ಯಕಲಾವಿದ ದೊಡ್ಡಣ್ಣ ಸೇರಿದಂತೆ ಅನೇಕ ಕಲಾವಿದರ ನೆಲೆ ಬೀಡಾಗಿರುವ ಉಕ್ಕಿನ ನಗರಕ್ಕೆ ಪುನಃ ಪುನೀತ್ ರಾಜ್‌ಕುಮಾರ್ ಆಗಮಿಸಲೇ ಇಲ್ಲ.

ಅ.೩೧ರಂದು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ



    ಭದ್ರಾವತಿ, ಅ. ೩೦: ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜಿಲ್ಲಾ ಸಮ್ಮೇಳನ ಅ.೩೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ನ್ಯೂಟೌನ್ ಲಯನ್ಸ್ ಕ್ಲಬ್ ಉಂಬ್ಳೆಬೈಲ್ ರಸ್ತೆಯಲ್ಲಿ ನಡೆಯಲಿದೆ.
    ರಾಜ್ಯ ಸಮಿತಿ ಸದಸ್ಯ ಡಾ. ಕೆ. ಪ್ರಕಾಶ್ ಸಮ್ಮೇಳನ ಉದ್ಘಾಟಿಸಲಿದ್ದು, ಜಿಲ್ಲಾ ಸಮಿತಿ ಸದಸ್ಯ, ನ್ಯಾಯವಾದಿ ಜಿ.ಎಸ್ ನಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ.
    ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ಕೆ. ಪ್ರಭಾಕರನ್, ಕೆ. ಮಂಜಣ್ಣ ಮತ್ತು ಎಂ. ಅನಂತರಾಮು ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು. ಸಮ್ಮೇಳನ ಯಶಸ್ವಿಗೊಳಿಸುವಂತೆ ಜಿಲ್ಲಾ ಸಮಿತಿ ಕಾರ್ಯರ್ಶಿ ಎಂ. ನಾರಾಯಣ ಕೋರಿದ್ದಾರೆ.

ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಅ. ೩೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಲ್ಲದೆ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲವೆಡೆ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ಮನೆಗಳಿಗೆ ಒಳಚರಂಡಿ ಸಂಪರ್ಕದ ಸೌಲಭ್ಯ ಕಲ್ಪಿಸಿಲ್ಲ.  ಇನ್ನೂ ಕೆಲವು ಭಾಗಗಳಲ್ಲಿ ಕೊಳವೆಗಳ ಜೋಡಣೆ ಕಾಮಗಾರಿ ಕೈಗೊಳ್ಳದ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ತುರ್ತು ಸಭೆ ಕರೆದು ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
    ಜನ್ನಾಪುರ ಕರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಈಗಾಗಲೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆಯಲು ಕೆಲವು ತಾಂತ್ರಿಕ ತೊಂದರೆ ಇರುವುದರಿಂದ ಈ ಸಂಬಂಧ ಸಹ ತುರ್ತು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರು. ಉಳಿತಾಯವಾಗುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಮೀಪವಿರುವ ರೈತರಿಗೆ ಕೆರೆಗಳ ಹೂಳು ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಲಾಗಿದೆ.
    ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ನಿಯೋಜಕರಿಗೆ ಸೇವಾ ಭದ್ರತೆಯ ದೃಷ್ಟಿಯಿಂದ ಹಾಗು ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ಇವರಿಗೂ ಸಹ ಪಿ.ಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ನಗರಸಭೆ ವತಿಯಿಂದಲೇ ವೇತನ ಪಾವತಿಸುವಂತೆ ಮನವಿ ಮಾಡಲಾಗಿದೆ.
    ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ನೂತನ ಸದಸ್ಯರಾದ ಸರ್ವಮಂಗಳ ಭೈರಪ್ಪ, ಶೃತಿ ವಸಂತ್, ಅನುಸುಧ ಮೋಹನ್, ಕಾಂತರಾಜ್, ಟಿಪ್ಪು ಸುಲ್ತಾನ್ ಮತ್ತು ಆರ್. ಮೋಹನ್  ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೆಂಚಮ್ಮ ಹೋಬಳಿದಾರ್ ಸಗನಪ್ಪ ನಿಧನ

ಕೆಂಚಮ್ಮ ಹೋಬಳಿದಾರ್ ಸಗನಪ್ಪ
    ಭದ್ರಾವತಿ, ಅ. ೩೦: ಹಳೇನಗರದ ಶ್ರೀ ಹಳದಮ್ಮ ದೇವಿ ರಸ್ತೆಯ ನಿವಾಸಿ, ಕನಕ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಗೋಪಿ ಅವರ ತಾಯಿ ಕೆಂಚಮ್ಮ ಹೋಬಳಿದಾರ್ ಸಗನಪ್ಪ(೭೮) ಶನಿವಾರ ನಿಧನ ಹೊಂದಿದರು.
    ೪ ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಭಾನುವಾರ ನಡೆಯಲಿದೆ.
ಇವರ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ, ತಾಲೂಕು ಕುರುಬರ ಸಂಘದ ಸಹಕಾರ್ಯದರ್ಶಿ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಕಾರ್ಪೆಂಟರ್ ನವೀನ್ ನಿಧನ

ನವೀನ್
    ಭದ್ರಾವತಿ, ಅ. ೩೦: ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪದಲ್ಲಿರುವ ಎಬಿನೇಜರ್ ವುಡ್ ವರ್ಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಪೆಂಟರ್ ನವೀನ್(೩೨) ನಿಧನ ಹೊಂದಿದರು.
    ಜನ್ನಾಪುರ ಹಾಲಪ್ಪ ಶೆಡ್‌ನಲ್ಲಿ ವಾಸವಿದ್ದ ನವೀನ್, ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗು ತಾಯಿಯನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಶುಕ್ರವಾರ ಸಂಜೆ ನೆರವೇರಿತು. ಮೃತರ ನಿಧನಕ್ಕೆ ಎಬಿನೇಜರ್ ವುಡ್ ವರ್ಕ್ಸ್ ಮಾಲೀಕ ದಾಸ್ ಹಾಗು ಸಹದ್ಯೋಗಿಗಳು ಸಂತಾಪ ಸೂಚಿಸಿದ್ದಾರೆ.

Friday, October 29, 2021

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶಾರದ ಅಪ್ಪಾಜಿ ಸೇರಿದಂತೆ ಹಲವು ಗಣ್ಯರ ಸಂತಾಪ

ಭದ್ರಾವತಿ ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್‌ರವರು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನೋಟು ಸಂಗ್ರಹದ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ.
    ಭದ್ರಾವತಿ, ಅ. ೨೯: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಸಂತಾಪ ಸೂಚಿಸಿದ್ದಾರೆ.
    ವರನಟ ದಿವಂಗತ ರಾಜ್‌ಕುಮಾರ್‌ರವರ ಪುತ್ರರಾದ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇವರ ನಿಧನ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ.
    ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.
    ನೋಟಿನ ಮೂಲಕ ಸಂತಾಪ :
    ನಗರದ ಹಿರಿಯ ನಾಣ್ಯ, ನೋಟು ಹಾಗು ಅಂಚೆ ಚೀಟಿ  ಸಂಗ್ರಹಗಾರರಾದ ಗಣೇಶ್‌ರವರು ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನೋಟು ಸಂಗ್ರಹದ ಮೂಲಕ ವಿಶಿಷ್ಟವಾಗಿ ಸಂತಾಪ ಸೂಚಿಸಿದ್ದಾರೆ.
    ರಾಜಕಾರಣಿಗಳು, ಮಠಾಧೀಶರು, ಚಲನಚಿತ್ರ ನಟರು, ಸಾಹಿತಿಗಳು, ಕವಿ, ಕ್ರೀಡಾಪಟು ಸೇರಿದಂತೆ ಗಣ್ಯ ವ್ಯಕ್ತಿಗಳಿಗೆ ಸಭೆ ಸಮಾರಂಭಗಳಲ್ಲಿ ಅವರ ಜನ್ಮದಿನಾಂಕ ಹೊಂದಿರುವ ನೋಟು ಉಡುಗೊರೆಯಾಗಿ ನೀಡುವ ಮೂಲಕ ಶುಭ ಹಾರೈಸುವ ಹಾಗು ನಿಧನರಾದ ಸಂದರ್ಭದಲ್ಲಿ ಮರಣ ದಿನಾಂಕ ಹೊಂದಿರುವ ನೋಟಿನ ಮೂಲಕ ಸಂತಾಪ ಸೂಚಿಸುವ ಹವ್ಯಾಸ ಬೆಳೆಸಿಕೊಂಡು ಬಂದಿದ್ದಾರೆ.
    ಎಸ್‌ಎವಿ ವಿದ್ಯಾಸಂಸ್ಥೆಯಲ್ಲಿ ಸಂತಾಪ :
    ನಗರದ ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
    ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಶಾಲಾ ಆವರಣದಲ್ಲಿ ಮೌನಾಚರಣೆ ನಡೆಸುವ ಮೂಲಕ ಪುನೀತ್‌ರಾಜ್‌ಕುಮಾರ್‌ರವರ ನಿಧನಕ್ಕೆ ಗೌರವ ಸಲ್ಲಿಸಲಾಯಿತು.
      ಸ್ನೇಹ ಮಿಲನ ಮಹಿಳಾ ಸಂಘ ಸಂತಾಪ :
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ನಗರದ ಸ್ನೇಹ ಮಿಲನ ಸಂಘ ಸಂತಾಪ ಸೂಚಿಸಿದೆ.     ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂಘದ ಅಧ್ಯಕ್ಷೆ ಕವಿತಾ ಸುರೇಶ್ ಸಂತಾಪ ಸೂಚಿಸಿದ್ದಾರೆ.
      ಜಯಕರ್ನಾಟಕ ಸಂಘಟನೆ ಸಂತಾಪ:
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ಜಯಕರ್ನಾಟಕ ಸಂಘಟನೆ ಜಿಲ್ಲಾ ಶಾಖೆ ಸಂತಾಪ ಸೂಚಿಸಿದೆ. ಪುನೀತ್ ರಾಜ್‌ಕುಮಾರ್‌ರವರ ಅಕಾಲಿಕ ನಿಧನ ನಾಡಿನ ಸಮಸ್ತ ಕನ್ನಡಿಗರ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ.   ಭಗವಂತ ಇವರ ಆತ್ಮಕ್ಕೆ ಚಿರಶಾಂತಿಯನ್ನು ಹಾಗು ಅಭಿಮಾನಿಗಳಲ್ಲಿ ಮತ್ತು ಕುಟುಂಬ ವರ್ಗದವರಲ್ಲಿ ದುಃಖವನ್ನು ಭರಿಸುವ ಶಕ್ತಿಯನ್ನು ಕರುಣಿಸಲೆಂದು ಪ್ರಾರ್ಥಿಸುವುದಾಗಿ ಜಿಲ್ಲಾಧ್ಯಕ್ಷ ತ್ಯಾಗರಾಜ್ ಸಂತಾಪ ಸೂಚಿಸಿದ್ದಾರೆ.
      ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ:
    ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್‌ರವರ ನಿಧನಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ ಸೂಚಿಸಿದೆ. ಇವರ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಪರಿಷತ್ ತಾಲೂಕು ಅಧ್ಯಕ್ಷ, ಜ್ಯೂನಿಯರ್ ವಿಷ್ಣುವರ್ಧನ್ ಅಪೇಕ್ಷ ಮಂಜುನಾಥ್ ಸಂತಾಪ ಸೂಚಿಸಿದ್ದಾರೆ.
       ಅಪರಂಜಿ ಅಭಿನಯ ಶಾಲೆ ಸಂತಾಪ:
    ಕನ್ನಡ ಚಲನಚಿತ್ರ ರಂಗದಲ್ಲಿ ಆಕ್ಷನ್ ಚಿತ್ರಗಳಿಗೆ ಮುನ್ನುಡಿ ಬರೆದಿದ್ದ ಏಕೈಕ ನಟ ಪುನೀತ್ ರಾಜ್‌ಕುಮಾರ್ ನಿಧನ ಮನಸ್ಸಿಗೆ ತುಂಬಲಾರದ ನೋವುಂಟು ಮಾಡಿದೆ.
    ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಹಲವು ಆಯಾಮಗಳ ಮೂಲಕ ವಿಶಿಷ್ಟವಾಗಿ, ಮಾದರಿ ಕಲಾವಿದನಾಗಿ ಇಂದಿನ ಯುವ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ನಟ ಪುನೀತ್‌ರಾಜ್‌ಕುಮಾರ್ ಅವರನ್ನು ವೈಯಕ್ತಿಕವಾಗಿ ಎರಡು ಮೂರು ಬಾರಿ ಭೇಟಿಯಾಗಿದ್ದು, ಅವರದು ಪಾದರಸದಂತಹ ವ್ಯಕ್ತಿತ್ವ, ಸಮಾಜ ಮುಖಿ ಗುಣ ಇಂತಹ ವ್ಯಕ್ತಿ ಚಲನಚಿತ್ರ ರಂಗದಲ್ಲಿ ಮತ್ತೊಬ್ಬ ಇಲ್ಲ ಎಂದರೆ ತಪ್ಪಾಗಲಾರದು. ಇವರ ಇವರ ನಿಧನ ಚಿತ್ರರಂಗಕ್ಕೆ ಮಾತ್ರವಲ್ಲದೆ ಕನ್ನಡ ಸಾರಸ್ವತ ಲೋಕಕ್ಕೂ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ರಂಗಕರ್ಮಿ, ಕಿರುತೆರೆ ಚಲನಚಿತ್ರ ಅಪರಂಜಿ ಶಿವರಾಜ್ ಸಂತಾಪ ಸೂಚಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ

ಭದ್ರಾವತಿ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನೃಪತುಂಗ ಆಟೋ ನಿಲ್ದಾಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
    ಭದ್ರಾವತಿ, ಅ. ೨೯: ಚಲನಚಿತ್ರ ನಟ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಶಾಸಕ ಬಿ.ಕೆ ಸಂಗಮೇಶ್ವರ್ ಸಂತಾಪ ಸೂಚಿಸಿದ್ದಾರೆ.
    ಕನ್ನಡ ಚಿತ್ರರಂಗದಲ್ಲಿ ಚಿಕ್ಕ ವಯಸ್ಸಿನಿಂದಲೇ ಸರಳ, ಸಜ್ಜನಿಕೆಯ ನಟನಾಗಿ ಬೆಳೆಯುವ ಮೂಲಕ ಯುವ ಸಮುದಾಯ, ಮಹಿಳೆಯರು ಹಾಗು ವಯೋವೃದ್ಧರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಕಲಾ ಪ್ರತಿಭೆಗೆ ರಾಷ್ಟ್ರ ಹಾಗು ರಾಜ್ಯಮಟ್ಟದ ಪ್ರಶಸ್ತಿಗಳು ಲಭಿಸಿವೆ. ಇವರ ಅಭಿನಯದ ಅನೇಕ ಚಲನಚಿತ್ರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದುಕೊಂಡಿವೆ.
ಇವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಇವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಇವರ ಕುಟುಂಬ ವರ್ಗಕ್ಕೆ, ಇವರ ಅಭಿಮಾನಿ ಬಂಧುಗಳಿಗೆ ಭಗವಂತ ಕರುಣಿಸಲೆಂದು ಪ್ರಾರ್ಥಿಸುವುದಾಗಿ ಸಂತಾಪ ಸೂಚಿಸಿದ್ದಾರೆ.
    ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಸಂತಾಪ :
    ನಗರದ ಬಿ.ಎಚ್ ರಸ್ತೆ ಚಾಮೇಗೌಡ ಏರಿಯಾ ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ನೃಪತುಂಗ ಆಟೋ ನಿಲ್ದಾಣದಲ್ಲಿ ಪುನೀತ್ ರಾಜ್‌ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
ನಗರಸಭಾ ಸದಸ್ಯ ಜಾರ್ಜ್ ನೇತೃತ್ವದಲ್ಲಿ ಸಂಘದ ಪ್ರಮುಖರು ಹಾಗು ಸ್ಥಳೀಯರು ಪುನೀತ್ ರಾಜ್‌ಕುಮಾರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದರು.