![](https://blogger.googleusercontent.com/img/b/R29vZ2xl/AVvXsEjHornUJHqD1sXQiPdfJB3Moekter8w85bAQhZc6Ex4tHz0vnhdXdrD3IGU_Hgp-pS5x36DuYhM8OU3CbW0G3VBrJICUGagAd8fEgcialp8cew8LBJ9Q1iGGqmkQZvzPyv2BMzWuU11o_Pw/w400-h179-rw/D30-BDVT2-725394.jpeg)
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ಅ. ೩೦: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರಸಭೆ ನೂತನ ಅಧ್ಯಕ್ಷೆ ಗೀತಾ ಕೆ.ಜಿ ರಾಜ್‌ಕುಮಾರ್ ಮತ್ತು ಉಪಾಧ್ಯಕ್ಷ ಚನ್ನಪ್ಪ ಅವರಿಗೆ ಭಾರತರತ್ನ ಸರ್.ಎಂ ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್, ಶ್ರೀ ಡಿ. ದೇವರಾಜ ಅರಸು ಜನಸ್ಪಂದನ ವೇದಿಕೆ ಹಾಗು ಸುವಣ ಮಹಿಳಾ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಕೈಗೊಂಡಿರುವ ಒಳಚರಂಡಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಅಲ್ಲದೆ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲವೆಡೆ ಕಾಮಗಾರಿ ಮುಕ್ತಾಯಗೊಂಡಿದ್ದರೂ ಸಹ ಮನೆಗಳಿಗೆ ಒಳಚರಂಡಿ ಸಂಪರ್ಕದ ಸೌಲಭ್ಯ ಕಲ್ಪಿಸಿಲ್ಲ. ಇನ್ನೂ ಕೆಲವು ಭಾಗಗಳಲ್ಲಿ ಕೊಳವೆಗಳ ಜೋಡಣೆ ಕಾಮಗಾರಿ ಕೈಗೊಳ್ಳದ ಕಾರಣ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಹಿನ್ನಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ತುರ್ತು ಸಭೆ ಕರೆದು ಕಾಮಗಾರಿ ಸಮರ್ಪಕವಾಗಿ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಜನ್ನಾಪುರ ಕರೆ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಈಗಾಗಲೇ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಟೆಂಡರ್ ಪ್ರಕ್ರಿಯೆ ಮುಗಿದ್ದಿದ್ದು, ಅಭಿವೃದ್ಧಿ ಕಾಮಗಾರಿಗಳು ನಡೆಯಲು ಕೆಲವು ತಾಂತ್ರಿಕ ತೊಂದರೆ ಇರುವುದರಿಂದ ಈ ಸಂಬಂಧ ಸಹ ತುರ್ತು ಸಭೆ ಕರೆದು ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗು ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೭೦ ಕೆರೆಗಳಿದ್ದು, ಸರ್ಕಾರಕ್ಕೆ ಕೋಟ್ಯಾಂತರ ರು. ಉಳಿತಾಯವಾಗುವ ನಿಟ್ಟಿನಲ್ಲಿ ಕೆರೆಗಳನ್ನು ಅಭಿವೃದ್ಧಿಪಡಿಸಲು ಸಮೀಪವಿರುವ ರೈತರಿಗೆ ಕೆರೆಗಳ ಹೂಳು ತೆಗೆಯಲು ಅನುಮತಿ ನೀಡುವಂತೆ ಆಗ್ರಹಿಸಲಾಗಿದೆ.
ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ನಿಯೋಜಕರಿಗೆ ಸೇವಾ ಭದ್ರತೆಯ ದೃಷ್ಟಿಯಿಂದ ಹಾಗು ಕುಟುಂಬ ನಿರ್ವಹಣೆಯ ದೃಷ್ಟಿಯಿಂದ ಇವರಿಗೂ ಸಹ ಪಿ.ಎಫ್, ಇ.ಎಸ್.ಐ ಸೌಲಭ್ಯ ಕಲ್ಪಿಸಿಕೊಡುವ ಜೊತೆಗೆ ನಗರಸಭೆ ವತಿಯಿಂದಲೇ ವೇತನ ಪಾವತಿಸುವಂತೆ ಮನವಿ ಮಾಡಲಾಗಿದೆ.
ವೇದಿಕೆ ಪ್ರಮುಖರಾದ ಆರ್. ವೇಣುಗೋಪಾಲ್, ರಮಾವೆಂಕಟೇಶ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ನೂತನ ಸದಸ್ಯರಾದ ಸರ್ವಮಂಗಳ ಭೈರಪ್ಪ, ಶೃತಿ ವಸಂತ್, ಅನುಸುಧ ಮೋಹನ್, ಕಾಂತರಾಜ್, ಟಿಪ್ಪು ಸುಲ್ತಾನ್ ಮತ್ತು ಆರ್. ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.