ಭದ್ರಾವತಿ, ಜ. ೧೭: ನಗರದ ಕಡದಕಟ್ಟೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ(ಆರ್‌ಓಬಿ) ಕಾಮಗಾರಿ ಆರಂಭಗೊಂಡಿರುವ ಹಿನ್ನಲೆಯಲ್ಲಿ ಸುಗಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಸೋಮವಾರ ಜಿಲ್ಲಾಧಿಕಾರಿ ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.
ಸೌತ್ ವೆಸ್ಟರ್ನ್ ರೈಲ್ವೆ ಉಪ ಮುಖ್ಯ ಅಭಿಯಂತರರು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ.೩೪ರಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಮೆ|| ಎಸ್‌ಆರ್‌ಸಿ ಕಂಪನಿ ಇನ್‌ಫ್ರಾ ಪ್ರೈವೇಟ್ ಲಿಮಿಟೆಡ್, ಹೈದರಬಾದ್ ಅವರಿಗೆ ತ್ವರಿತವಾಗಿ ಮುಕ್ತಾಯಗೊಳಿಸಲು ಗುತ್ತಿಗೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಾಮಗಾರಿ ಆರಂಭಗೊಳ್ಳುತ್ತಿದ್ದು, ಶಿವಮೊಗ್ಗ-ಭದ್ರಾವತಿ ನಡುವೆ ವಾಹನಗಳು ಸುಗಮವಾಗಿ ಸಂಚರಿಸಲು ಅನುಕೂಲವಾಗುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ನೀಡಿರುವ ವರದಿಯನ್ವಯ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ದ್ವಿಚಕ್ರ ವಾಹನಗಳು ಹೊರತುಪಡಿಸಿ ಶಿವಮೊಗ್ಗದಿಂದ ಭದ್ರಾವತಿ ಕಡೆಗೆ ಸಂಚರಿಸುವ ವಾಹನಗಳು ಬಿಳಕಿ ಕ್ರಾಸ್, ಕೃಷ್ಣಪ್ಪ ವೃತ್ತದ ಮೂಲಕ ಭದ್ರಾವತಿ ತಲುಪುವುದು. ಭದ್ರಾವತಿಯಿಂದ ಶಿವಮೊಗ್ಗ ಕಡೆಗೆ ಸಂಚರಿಸುವ ವಾಹನಗಳು ಅಂಡರ್ ಬ್ರಿಡ್ಜ್, ಉಂಬ್ಳೆಬೈಲ್ ರಸ್ತೆ, ಕೃಷ್ಣಪ್ಪ ವೃತ್ತ, ರಾಷ್ಟ್ರೀಯ ಹೆದ್ದಾರಿ ೬೯ರ ಮೂಲಕ ಶಿವಮೊಗ್ಗ ತಲುಪುವುದು.
ಪ್ರಸ್ತುತ ಕೃಷ್ಣಪ್ಪ ವೃತ್ತದಿಂದ ಅಂಡರ್‌ಬ್ರಿಡ್ಜ್‌ವರೆಗೂ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗಿದ್ದು, ರೈಲ್ವೆ ಮೇಲ್ಸೇತುವೆ ಕಾಮಗಾರಿ ಮುಕ್ತಾಯಗೊಳ್ಳುವವರೆಗೂ ಈ ರಸ್ತೆಯಲ್ಲಿ ವಾಹನಗಳ ದಟ್ಟಣೆ ಅಧಿಕವಾಗಲಿದೆ. ಈ ರಸ್ತೆಯಲ್ಲಿ ಪೊಲೀಸ್ ಠಾಣೆ, ವಿದ್ಯಾರ್ಥಿ ನಿಲಯಗಳು, ಶಾಲಾ ಕಾಲೇಜುಗಳು, ಚರ್ಚ್‌ಗಳು, ಲಯನ್ಸ್, ರೋಟರಿ ಸೇರಿದಂತೆ ಸಂಘ-ಸಂಸ್ಥೆಗಳು, ಬ್ಯಾಂಕ್, ಮೆಸ್ಕಾಂ, ಎಲ್‌ಐಸಿ ಕಛೇರಿಗಳು ಇದ್ದು ಜನದಟ್ಟಣೆ ಸಹ ಅಧಿಕವಾಗಿದೆ. ಈ ಹಿನ್ನಲೆಯಲ್ಲಿ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಸಂಬಂಧ ಸಂಚಾರಿ ಪೊಲೀಸರು ಹೆಚ್ಚಿನ ಮುಂಜಾಗ್ರತೆ ವಹಿಸುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುವುದು ಖಚಿತ ಎನ್ನಲಾಗಿದೆ.