ಭದ್ರಾವತಿ ಸಿದ್ದಾರೂಢ ನಗರದ ಶ್ರೀ ಭಾರತಿ ತೀರ್ಥ ಸಮುದಾಯ ಭವನದಲ್ಲಿ ನಗರದ ನಾಗರೀಕ ವೇದಿಕೆ ಹಾಗು ಶಿವಮೊಗ್ಗ ಹೊಂಗಿರಣ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬೆಳ್ಳಿ ಹೆಜ್ಜೆ ರಂಗ ಪಯಣ-೧೨' ನಂದಿನಿ ಮಲ್ಲಿಕಾರ್ಜುನ್ ಅಭಿನಯದ 'ನಿರಾಕರಣೆ' ೨ನೇ ಪ್ರದರ್ಶನ ಏಕ ವ್ಯಕ್ತಿ ನಾಟಕವನ್ನು ಹಿರಿಯ ರಂಗ ಕಲಾವಿದ, ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಭದ್ರಾವತಿ, ಜ. ೧೮: ರಂಗ ಅಭಿನಯ ಎಂಬುದು ತುಂಬಾ ಕಷ್ಟದ ಕಲೆ. ಅಭಿನಯಿಸುವಾಗ ಪದಗಳ ಉಚ್ಛಾರಣೆ, ಸಂಭಾಷಣೆ ಸರಿಯಾಗಿರಬೇಕು. ಒಂದೊಂದು ಪದವನ್ನು ಮರೆಯದೆ ನೆನಪಿನಲ್ಲಿಟ್ಟುಕೊಳ್ಳಬೇಕು. ಆಗ ಪ್ರೇಕ್ಷಕರ ಮನ ಮುಟ್ಟಲು ಸಾಧ್ಯ ಎಂದು ಹಿರಿಯ ರಂಗ ಕಲಾವಿದ, ಶಂಕರ ಮಠದ ಧರ್ಮಾಧಿಕಾರಿ ಕೆ.ಆರ್ ಸುಬ್ಬರಾವ್ ಹೇಳಿದರು.
ಅವರು ಸಿದ್ದಾರೂಢ ನಗರದ ಶ್ರೀ ಭಾರತಿ ತೀರ್ಥ ಸಮುದಾಯ ಭವನದಲ್ಲಿ ನಗರದ ನಾಗರೀಕ ವೇದಿಕೆ ಹಾಗು ಶಿವಮೊಗ್ಗ ಹೊಂಗಿರಣ ಸಂಸ್ಥೆವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ಬೆಳ್ಳಿ ಹೆಜ್ಜೆ ರಂಗ ಪಯಣ-೧೨' ನಂದಿನಿ ಮಲ್ಲಿಕಾರ್ಜುನ್ ಅಭಿನಯದ 'ನಿರಾಕರಣೆ' ೨ನೇ ಪ್ರದರ್ಶನ ಏಕ ವ್ಯಕ್ತಿ ನಾಟಕ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಆಧುನಿಕ ಸಲಕರಣೆಗಳು ಇರುವ ಕಾರಣ ಹಿಂದಿನ ಕಾಲದ ಹಾಗೆ ಪಾತ್ರದಲ್ಲಿ ಅಭಿನಯಿಸುವುದು ಕಷ್ಟವಲ್ಲ. ಆದರೆ ಪಾತ್ರಕ್ಕೆ ಭಾವಾಭಿನಯ ತುಂಬಿ ಪ್ರದರ್ಶನ ನೀಡುವುದು ಸವಾಲಿನ ಸಂಗತಿ ಎಂದರು.
ಬೆಂಗಳೂರಿನ ರಂಗಕರ್ಮಿ ಮಲ್ಲಿಕಾರ್ಜುಸ್ವಾಮಿ ಮಹಾಮನೆ ಮಾತನಾಡಿ, ಇಂದು ರಂಗಭೂಮಿ ಕಲೆಯಲ್ಲಿ ಮಹಿಳೆಯರು ಭಾಗವಹಿಸುವುದು ಕಷ್ಟ ಸಾಧ್ಯ ಸಂಗತಿಯಾಗಿದೆ. ಅದರಲ್ಲೂ ಏಕ ವ್ಯಕ್ತಿ ನಾಟಕ ಪ್ರದರ್ಶನದಲ್ಲಿ ಭಾಗವಹಿಸಿ ಅಭಿನಯಿಸುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಇಂತಹ ಪ್ರದರ್ಶನದಲ್ಲಿ ಪ್ರಬುದ್ಧ ಕಲಾವಿದರು ಮಾತ್ರ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಸಾಧ್ಯ. ಪಾತ್ರ ಹಾಗು ಸನ್ನಿವೇಶಕ್ಕೆ ತಕ್ಕಂತೆ ಹಾವಭಾವಾಭಿನಯ ಪ್ರದರ್ಶಿಸಬೇಕು. ಆಗ ಮಾತ್ರ ನಾಟಕ ಜನರ ಮೆಚ್ಚುಗೆಗೆ ಪಾತ್ರವಾಗಲು ಸಾಧ್ಯ ಎಂದರು.
ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿ, ಪ್ರತಿಭೆ ಇರುವವರಿಗೆ ಉತ್ತಮ ವೇದಿಕೆಯನ್ನು ಕಲ್ಪಿಸಬೇಕು. ಅಂತಹ ಪ್ರತಿಭೆ ನಮ್ಮೂರಿನಲ್ಲಿ ಪ್ರದರ್ಶನ ನೀಡುತ್ತಿರುವುದು ನಗರಕ್ಕೆ ಹೆಮ್ಮೆಯ ಸಂಗತಿ ಎಂದರು.
ಪ್ರತಿಮಾ ಸಂಗಡಿಗರು ಪ್ರಾರ್ಥಿಸಿದರು. ಶಾರದಾ ಶ್ರೀನಿವಾಸ್ ಸ್ವಾಗತಿಸಿದರು. ಎಂ.ಎಸ್.ಜನಾರ್ಧನ ಅಯ್ಯಂಗಾರ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಎ.ಟಿ.ರವಿ ವಂದಿಸಿದರು. ಸಂಚಾಲಕ ಸಿದ್ದಲಿಂಗಯ್ಯ, ನಗರಸಭಾ ಸದಸ್ಯರಾದ ಬಿ.ಎಂ ಮಂಜುನಾಥ್, ಆರ್. ಶ್ರೇಯಸ್ಸ್(ಚಿಟ್ಟೆ) ಮತ್ತು ಅನುಪಮ ಚನ್ನೇಶ್, ರಂಗಕಲಾವಿದ ವೈ.ಕೆ ಹನುಮಂತಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.