Friday, January 21, 2022

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು : ಒಂದೇ ದಿನ ೩ ಕಡೆ ಕಂಟೈನ್‌ಮೆಂಟ್ ಜೋನ್ ಘೋಷಣೆ

    ಭದ್ರಾವತಿ, ಜ. ೨೧: ತಾಲೂಕಿನಾದ್ಯಂತ  ಕೋವಿಡ್ ೩ನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ ಒಂದೇ ದಿನ ೧೩೮ ಸೋಂಕು ದೃಡಪಟ್ಟಿವೆ. ಈ ನಡುವೆ ಸೋಂಕು ಕಾಣಿಸಿಕೊಂಡಿರುವ ವ್ಯಾಪ್ತಿಯಲ್ಲಿ ತಹಸೀಲ್ದಾರ್ ಆರ್. ಪ್ರದೀಪ್ ನಿಕ್ಕಮ್ ಕಂಟೈನ್‌ಮೆಂಟ್ ಜೋನ್‌ಗಳನ್ನು ಘೋಷಿಸಿ ಆದೇಶ ಹೊರಡಿಸಿದ್ದಾರೆ.
    ಅಂತರಗಂಗೆ ಗ್ರಾಮದ ಕೆಪಿಎಸ್(ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯ ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೨೫ ವಾಸದ ಮನೆಗಳು, ೬ ಅಂಗಡಿ ಮುಂಗಟ್ಟು, ಕಛೇರಿಗಳಿದ್ದು, ಒಟ್ಟು ೧೩೫ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯನ್ನು ನೇಮಕಗೊಳಿಸಿದ್ದು, ಮೊ: ೯೪೦೮೭೬೨೦೨ಕ್ಕೆ ಕರೆ ಮಾಡಬಹುದಾಗಿದೆ.
    ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಳ್ಳಿಕಟ್ಟೆ ಗ್ರಾಮವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೧೦ ವಾಸದ ಮನೆಗಳು, ೧ ಅಂಗಡಿ ಮುಂಗಟ್ಟು, ಕಛೇರಿ ಇದ್ದು, ಒಟ್ಟು ೫೫ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಹೊಳೆಹೊನ್ನೂರು ಆರೋಗ್ಯ ಸಹಾಯಕಿ ದೀಪಿಕ ಅವರನ್ನು ನೇಮಕಗೊಳಿಸಿದ್ದು, ಮೊ: ೯೯೭೨೦೩೪೩೭೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.
    ಸಿಂಗನಮನೆ ಗ್ರಾಮ ಪಂಚಾಯಿತಿ ಶಾಂತಿನಗರ ನ್ಯಾಷನಲ್ ಫಸ್ಟ್ ಗ್ರೇಡ್ ಕಾಲೇಜ್ ವ್ಯಾಪ್ತಿಯನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ ೨೧೪ ವಾಸದ ಮನೆಗಳು, ೧೦ ಅಂಗಡಿ ಮುಂಗಟ್ಟು, ಕಛೇರಿಗಳಿದ್ದು, ಒಟ್ಟು ೨೩೨ ಜನಸಂಖ್ಯೆಯನ್ನು ಒಳಗೊಂಡಿದೆ. ಈ ಜೋನ್ ನಿರ್ವಹಣೆಗೆ ಅಂತರಗಂಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಓ)ಯನ್ನು ನೇಮಕಗೊಳಿಸಿದ್ದು, ಮೊ: ೯೪೮೦೮೭೬೨೩೧ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೩ನೇ ಪುಣ್ಯಸ್ಮರಣೆ

ಭದ್ರಾವತಿ ತಾಲೂಕಿನ ಬಿಆರ್‌ಪಿ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾನಿಲಯ ಸಮೀಪ ಶುಕ್ರವಾರ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾಮಠದ  ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೩ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
    ಭದ್ರಾವತಿ, ಜ. ೨೧: ತಾಲೂಕಿನ ಬಿಆರ್‌ಪಿ ಶಂಕರಘಟ್ಟ ಕುವೆಂಪು ವಿಶ್ವವಿದ್ಯಾನಿಲಯ ಸಮೀಪ ಶುಕ್ರವಾರ ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ತುಮಕೂರು ಸಿದ್ದಗಂಗಾಮಠದ  ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೩ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು.
    ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಭಕ್ತ ವೃಂದದವರು ಕಳೆದ ೩ ವರ್ಷಗಳಿಂದ ನಿರಂತರವಾಗಿ ಶ್ರೀಗಳ ಪುಣ್ಯಸ್ಮರಣೆ ಆಚರಿಸಿಕೊಂಡು ಬರುತ್ತಿದ್ದು, ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.
    ಪ್ರತಿವರ್ಷ ಪುಣ್ಯಸ್ಮರಣೆಯಂದು ಅನ್ನಸಂತರ್ಪಣೆ ನೆರವೇರಿಸಿಕೊಂಡು ಬರಲಾಗುತ್ತಿದೆ. ಸಿಂಗನಮನೆ, ಶಂಕರಘಟ್ಟ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ೯೦೨ನೇ ಜಯಂತಿ


ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ೯೦೨ನೇ ಜಯಂತಿ ಕಾರ್ಯಕ್ರಮ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಗಂಗಾಮತಸ್ಥ ಸಮಾಜದ ವತಿಯಿಂದ ಶುಕ್ರವಾರ ಭದ್ರಾವತಿ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
    ಭದ್ರಾವತಿ, ಜ. ೨೧: ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ೯೦೨ನೇ ಜಯಂತಿ ಕಾರ್ಯಕ್ರಮ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗು ಗಂಗಾಮತಸ್ಥ ಸಮಾಜದ ವತಿಯಿಂದ ಶುಕ್ರವಾರ ತಾಲೂಕು ಕಛೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಯಿತು.
    ಕೊರೋನಾ ೩ನೇ ಅಲೆ ನಡುವೆ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿಯನ್ನು ಸರ್ಕಾರದ ಮಾರ್ಗಸೂಚಿಗಳನ್ವಯ ಸರಳವಾಗಿ ಆಚರಿಸಲಾಯಿತು. ಚೌಡಯ್ಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ತಹಸೀಲ್ದಾರ್‌ ಆರ್.‌ ಪ್ರದೀಪ್‌ ನಿಕ್ಕಮ್‌ ಅಧ್ಯಕ್ಷತೆ ವಹಿಸಿದ್ದರು. ಗಂಗಾಮತಸ್ಥ ಸಮಾಜದ ಅಧ್ಯಕ್ಷ ಯಲ್ಲಪ್ಪ ಸೇರಿದಂತೆ ಸಮಾಜದ ಪ್ರಮುಖರು, ತಹಸೀಲ್ದಾರ್‌ ಗ್ರೇಡ್‌-೨ ರಂಗಮ್ಮ ಸೇರಿದಂತೆ ತಾಲೂಕು ಕಛೇರಿ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ್ದರು.  

Thursday, January 20, 2022

ಮೊದಲ ಬಾರಿಗೆ ಉಕ್ಕಿನ ನಗರದಲ್ಲಿ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರ

ಭದ್ರಾವತಿ ಸಿದ್ದರೂಢ ನಗರದ ಶ್ರೀ ಸದ್ಗುರು ಸಿದ್ದಾರೂಢ ಆಶ್ರಮ ಮತ್ತು ಕಂಪಾನಿಯೋ ಜನ್ಯ ವೆಲ್ನೆಸ್ ಸೆಂಟರ್ ವತಿಯಿಂದ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿರುವುದು.
    ಭದ್ರಾವತಿ, ಜ. ೨೦: ಸಿದ್ದರೂಢ ನಗರದ ಶ್ರೀ ಸದ್ಗುರು ಸಿದ್ದಾರೂಢ ಆಶ್ರಮ ಮತ್ತು ಕಂಪಾನಿಯೋ ಜನ್ಯ ವೆಲ್ನೆಸ್ ಸೆಂಟರ್ ವತಿಯಿಂದ ಉಚಿತ ಫೂಟ್ ಪಲ್ಸ್ ಥೆರಫಿ ಚಿಕಿತ್ಸಾ ಶಿಬಿರ ಫೆ.೬ರವರೆಗೆ ಹಮ್ಮಿಕೊಳ್ಳಲಾಗಿದೆ.
    ದೇಶದಲ್ಲಿ ಮೊದಲ ಬಾರಿಗೆ ಫೂಟ್ ಪಲ್ಸ್ ಥೆರಫಿ ಚಿಕಿತ್ಸೆಯನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿ ದೇಶಾದ್ಯಂತ ಸುಮಾರು ೩೫೦ ಶಾಖೆಗಳ ಮೂಲಕ ಪರಿಚಯಿಸಲಾಗುತ್ತಿದೆ. ಈ ಚಿಕಿತ್ಸೆ ಮೂಲಕ ರಕ್ತ ಪರಿಚಲನೆ ಮತ್ತು ನರಗಳ ಯಾವುದೇ ವಿಧದ ಸರಳ ಮತ್ತು ದೀರ್ಘಕಾಲಿನ ಸಮಸ್ಯೆಗಳನ್ನು ಔಷಧಿ ರಹಿತವಾಗಿ ಅಡ್ಡ ಪರಿಣಾಮವಿಲ್ಲದೆ ನಿವಾರಿಸಬಹುದಾಗಿದೆ.
    ಮಧುಮೇಹ(ಶುಗರ್), ಅಧಿಕ ರಕ್ತದೊತ್ತಡ(ಬಿ.ಪಿ), ಸಂಧಿವಾತ, ವೆರಿಕೋಸ್ ವೇನ್, ಸ್ನಾಯು ಸೆಳೆತ, ಊತ, ಪಾರ್ಕಿನಸೆನ್, ಸಯಾಟಿಕಾ, ಸರ್ವಿಕಲ್ ಸ್ಪಾಂಡಿಲೈಟಿಸ್, ನಿದ್ರಾಹೀನತೆ, ಪಾರ್ಶ್ವವಾಯು, ಥೈರಾಯ್ಡ್, ಬೆನ್ನುನೋವು, ಮಂಡಿನೋವು ಮತ್ತು ಬೊಜ್ಜು ನಿವಾರಣೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಈ ಚಿಕಿತ್ಸೆ ಮೂಲಕ ಪರಿಹಾರ ಕಂಡು ಕೊಳ್ಳಬಹುದಾಗಿದೆ.
    ಶಿಬಿರ ಶ್ರೀ ಸದ್ಗುರು ಸಿದ್ದಾರೂಢ ಆಶ್ರಮದಲ್ಲಿ ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆವರೆಗೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗೆ ಮೊ: ೯೬೩೨೧೨೦೨೯೯ ಅಥವಾ ೮೧೯೭೭೫೦೬೧೯ ಸಂಖ್ಯೆಗೆ ಕರೆಮಾಡಬಹುದಾಗಿದೆ. ಸಾರ್ವಜನಿಕರು ಉಚಿತ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಎಂದು ಆಶ್ರಮದ ಸೇವಾ ಕರ್ತರಾದ ರಾಮಮೂರ್ತಿ ಕೋರಿದ್ದಾರೆ.

ಸೂಡಾ ಸದಸ್ಯರಾಗಿ ವಿ. ಕದಿರೇಶ್, ಹೇಮಾವತಿ ವಿಶ್ವನಾಥ್


ವಿ. ಕದಿರೇಶ್

    

ಹೇಮಾವತಿ ವಿಶ್ವನಾಥ್
ಭದ್ರಾವತಿ, ಜ. ೨೦: ರಾಜ್ಯ ಸರ್ಕಾರ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಗುರುವಾರ ಹಿರಿಯ ನಗರಸಭಾ ಸದಸ್ಯ ವಿ. ಕದಿರೇಶ್ ಸೇರಿದಂತೆ ಇಬ್ಬರನ್ನು ಸದಸ್ಯರನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದೆ.
    ಹೊಸಮನೆ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿ ಅಧ್ಯಕ್ಷ, ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ, ನಗರಸಭಾ ಸದಸ್ಯರಾದ ವಿ. ಕದಿರೇಶ್ ಈ ಹಿಂದಿನ ಅವಧಿಯಲ್ಲೂ ಪ್ರಾಧಿಕಾರಕ್ಕೆ ಸದಸ್ಯರಾಗಿ ನೇಮಕಗೊಂಡಿದ್ದು, ಇದೀಗ ಪುನಃ ನೇಮಕಗೊಂಡಿದ್ದಾರೆ. ಉಳಿದಂತೆ ಭಾರತೀಯ ಜನತಾ ಪಕ್ಷದ ಮಹಿಳಾ ಮುಖಂಡರಾದ, ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅವರನ್ನು ಮೊದಲ ಬಾರಿಗೆ ಸದಸ್ಯರಾಗಿ ನೇಮಕಗೊಳಿಸಲಾಗಿದೆ.
    ಈ ಕುರಿತು ನಗರಾಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ನೇಮಕಾತಿ ಅಧಿಸೂಚನೆ ಹೊರಡಿಸಿದ್ದಾರೆ.

ಜ.೨೧ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ

    ಭದ್ರಾವತಿ, ಜ. ೨೦: ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಮಣ್ಯ ಸ್ವಾಮಿ ಆಶ್ರಮದಲ್ಲಿ ಜ.೨೧ರಂದು ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ತಮಿಳುನಾಡು ದಿಂಡಿಕಲ್ ವಂಶಪಾರಂಪರೆ ಸಿದ್ಧ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಬೆಳಿಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧ ಗಂಟೆವರೆಗೆ ನಡೆಯಲಿದೆ. ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು, ಸೂಕ್ಷ್ಮ ಕೆಲಸಗಾರರು, ಚಿನ್ನಬೆಳ್ಳಿ, ಕಂಪ್ಯೂಟರ್, ಟೈಲರಿಂಗ್ ಕೆಲಸಗಾರರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರು ಇದರಿಂದ ಉಪಯೋಗ ಪಡೆಯಬಹುದಾಗಿದೆ.
    ಹೆಚ್ಚಿನ ಮಾಹಿತಿಗೆ ಮೊ: ೯೪೮೦೨೮೩೦೩೦ ಅಥವಾ ೯೪೪೮೨೫೫೫೪೪ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಆಶ್ರಮದ ವ್ಯವಸ್ಥಾಪಕರು ತಿಳಿಸಿದ್ದಾರೆ.

Wednesday, January 19, 2022

ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜ. ೧೯: ನಗರದ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆರೋಗ್ಯ ಇಲಾಖೆ ವತಿಯಿಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಹಳೇವಿದ್ಯಾರ್ಥಿಗಳ ಸಂಘ ಮತ್ತು ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ರಾಷ್ಟ್ರೀಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ಟಿ.ಬಿ ಸೋಲಿಸಿ, ಕರ್ನಾಟಕ ಗೆಲ್ಲಿಸಿ ಅಭಿಯಾನದ ಅಂಗವಾಗಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಕಾರ್ಯಕ್ರಮದ ಅಧ್ಯಕ್ಷತೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಗೌಡ ಹಾಗು ಆರೋಗ್ಯ ಇಲಾಖೆ ಸಿಬ್ಬಂದಿಗಳು ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
    ಪ್ರಜ್ವಲ್ ನೇತೃತ್ವದ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು. ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.