Friday, March 18, 2022

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ

    ಭದ್ರಾವತಿ, ಮಾ. ೧೮: ಇಲ್ಲಿಗೆ  ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತಾಧಿಗಳು ಆಗಮಿಸಿದ್ದರು. ಕಾವಡಿ ಹರಕೆ ಹೊತ್ತ ಭಕ್ತಾಧಿಗಳು ಗಮನ ಸೆಳೆದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ದೇವಸ್ಥಾನ ಸಮಿತಿಯ ಪ್ರಮುಖರು, ಸೇವಾಕರ್ತರು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಹಕರಿಸಿದರು.


ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಕಾವಡಿ ಹರಕೆ ಹೊತ್ತ ಭಕ್ತಾಧಿಗಳು ಗಮನ ಸೆಳೆದರು.

ಶಾಸಕ ಸಂಗಮೇಶ್ವರ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎಂ.ಆರ್ ಸೀತರಾಮ್

ಕಳೆದ ೨-೩ ದಿನಗಳಿಂದ ಸ್ವಲ್ಪಮಟ್ಟಿಗೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ನ್ನು ಶುಕ್ರವಾರ ಮಾಜಿ ಸಚಿವ ಎಂ.ಆರ್  ಸೀತರಾಮ್ ಭೇಟಿಯಾಗಿ  ಆರೋಗ್ಯ  ವಿಚಾರಿಸಿದರು.
    ಭದ್ರಾವತಿ, ಮಾ. ೧೮: ಕಳೆದ ೨-೩ ದಿನಗಳಿಂದ ಸ್ವಲ್ಪಮಟ್ಟಿಗೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ನ್ನು ಶುಕ್ರವಾರ ಮಾಜಿ ಸಚಿವ ಎಂ.ಆರ್  ಸೀತರಾಮ್ ಭೇಟಿಯಾಗಿ  ಆರೋಗ್ಯ  ವಿಚಾರಿಸಿದರು.
    ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಸೀತರಾಮ್‌ರವರು ಸಂಗಮೇಶ್ವರ್ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸುವ ಮೂಲಕ ಹೆಚ್ಚಿನ ಕಾಳಜಿವಹಿಸುವಂತೆ ಸಲಹೆ ನೀಡಿದರು.
    ಸಹೋದರರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಪುತ್ರರಾದ ಬಿ.ಎಸ್ ಗಣೇಶ್, ಬಸವೇಶ್, ಬಿ.ಎಂ ಮಂಜುನಾಥ್, ಮುಖಂಡರಾದ ಬದರಿನಾರಾಯಣ, ಬಿ. ಗಂಗಾಧರ್, ಅಣ್ಣೋಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೋಳಿ ಸಂಭ್ರಮಾಚರಣೆ : ಮನ್ಮಥ ದೇವರ ಮೆರವಣಿಗೆ

ಭದ್ರಾವತಿಯಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಆಚರಣೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಮೆರವಣಿಗೆ ನಡೆಸಿ ಕೊನೆಯಲ್ಲಿ ದಹಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭದ್ರಾವತಿ, ಮಾ. ೧೮: ನಗರದಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಆಚರಣೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಮೆರವಣಿಗೆ ನಡೆಸಿ ಕೊನೆಯಲ್ಲಿ ದಹಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
     ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲಾಗಿದ್ದ ಮನ್ಮಥ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
    ಬಣ್ಣ ಬಣ್ಣದ ರಂಗಿನಾಟದೊಡನೆ ಮಕ್ಕಳು, ಮಹಿಳೆಯರು, ಪುರುಷರು ಸಂಭ್ರಮಿಸುವ ಮೂಲಕ ಹೋಳಿ ಹಬ್ಬದ ಮಹತ್ವ ಸಾರಿದರು. ಕೊನೆಯಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಮನ್ಮಥ ದೇವರನ್ನು ದಹಿಸಲಾಯಿತು.

ಮಾ.೨೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಮಾ. ೧೮: ಮೆಸ್ಕಾಂ ಮಾಚೇನಹಳ್ಳಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.೨೦ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ  ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇ ಜೇಡಿಕಟ್ಟೆ, ಡೈರಿ ಸರ್ಕಲ್, ನಿದಿಗೆ, ಕೈಗಾರಿಕಾ ಪ್ರದೇಶ, ಶಿವರಾಂನಗರ, ವಿಶ್ವೇಶ್ವರಯ್ಯನಗರ ಸೇರಿದಂತೆ ಇನ್ನಿತರೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಮಾ.೨೧ರಂದು ಪ್ರತಿಭಟನೆ

    ಭದ್ರಾವತಿ, ಮಾ. ೧೮: ನಗರದ ಅಂಬೇಡ್ಕರ್ ವೃತ್ತದ ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಹಾಗು ಕಾಮಗಾರಿ ಬದಲಾಯಿಸಿರುವ ಕ್ರಮ ಖಂಡಿಸಿ ಮಾ.೨೧ರಂದು ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ೧ನೇ ತಿರುವಿನಿಂದ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ದಲಿತರು ಹೆಚ್ಚಾಗಿ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಭದ್ರಾ ನದಿಗೆ ಜಲಾಶಯದಿಂದ ನೀರು ಬಿಟ್ಟಾಗ ಮನೆಗಳು ಮುಳುಗಡೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ೯.೫ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಆದರೆ ಇದೀಗ ಬದಲಾಯಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ  ಕಾಮಗಾರಿ ಬದಲಾವಣೆಗೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಂಡು ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಕಾಮಗಾರಿ ಆರಂಭಿಸುವಂತೆ  ಆಗ್ರಹಿಸಿ ಮಾ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಬಲಿಜ ಸಮಾಜ ಹೆಚ್ಚು ಸಂಘಟಿತಗೊಳ್ಳಲಿ : ಎಂ.ಆರ್ ಸೀತರಾಮ್

ಭದ್ರಾವತಿಯಲ್ಲಿ ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಮಾಜಿ ಸಚಿವ ಎಂ.ಆರ್ ಸೀತರಾಮ್ ಉದ್ಘಾಟಿಸಿದರು. 
    ಭದ್ರಾವತಿ, ಮಾ. ೧೮: ಬಲಿಜ ಸಮುದಾಯದವರು ಹೆಚ್ಚು ಸಂಘಟಿತರಾಗುವ ಜೊತೆಗೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ನಡೆಸಬೇಕಾಗಿದೆ ಎಂದು ಮಾಜಿ ಸಚಿವ ಎಂ.ಆರ್ ಸೀತರಾಮ್ ಹೇಳಿದರು.
    ಅವರು ಶುಕ್ರವಾರ  ತಾಲೂಕು ಬಲಿಜ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ತಾತಯ್ಯನವರ ೧೮೭ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಬಲಿಜ ಸಮುದಾಯ ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದು, ಈ ಹಿಂದೆ ಮೀಸಲಾತಿಯಿಂದ ವಂಚಿತರಾಗಿ ಪುನಃ ಹೋರಾಟದ ಮೂಲಕ ಮೀಸಲಾತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಮ್ಮ ಹೋರಾಟ ಮುಂದುವರೆಯಬೇಕಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಸಮುದಾಯ ಗುರುತಿಸಿಕೊಳ್ಳುವಂತಾಗಬೇಕು. ಮೊದಲು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು. ಶೈಕ್ಷಣಿಕವಾಗಿ, ರಾಜಕೀಯ ಹಾಗು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಸಹಕಾರದೊಂದಿಗೆ ನಮ್ಮ ಹೋರಾಟ ಮುಂದುವರೆಯಬೇಕೆಂದರು.
    ಸಮುದಾಯಕ್ಕೆ ದಾರಿದೀಪವಾಗಿರುವ ತಾತಯ್ಯನವರ ಸಂದೇಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಮುನ್ನಡೆಯಬೇಕು. ಅಲ್ಲದೆ ಸಮುದಾಯದಲ್ಲಿ ಮುಂದೆ ಬಂದವರು ಹಿಂದುಳಿದವರ ನೆರವಿಗೆ ಮುಂದಾಗಬೇಕು. ಸರ್ಕಾರ ತಾತಯ್ಯನವರ ಜಯಂತಿಯನ್ನು ಆಚರಿಸಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಮುದಾಯದ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾತನಾಡಿ, ಕ್ಷೇತ್ರದಲ್ಲಿ ಬಲಿಜ ಸಮುದಾಯದವರು ಅಲ್ಪ ಪ್ರಮಾಣದಲ್ಲಿದ್ದರೂ ಸಹ ಸಮಾಜದಲ್ಲಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಿಷ್ಠವಾಗಿ ರೂಪಿಸಿಕೊಂಡಿದ್ದಾರೆ. ಸಮುದಾಯದ ಬೆಳವಣಿಗೆಗೆ ಇನ್ನೂ ಹೆಚ್ಚಿನ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ಸಮುದಾಯಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಕುಳ್ಳೂರು ಶ್ರೀ ಶಿವಯೋಗಿಶ್ವರ ಸಂಸ್ಥಾನ ಮಠದ ಶ್ರೀ ಸದ್ಗುರು ಬಸವಾನಂದ ಭಾರತಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.  ಸಂಘದ ಅಧ್ಯಕ್ಷ ಜೆ.ಎಸ್ ಸಂಜೀವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.
    ಸಂಘದ ಗೌರವಾಧ್ಯಕ್ಷ ಎಸ್.ಎನ್ ಸುಬ್ರಮಣ್ಯ, ಉಪಾಧ್ಯಕ್ಷ ಜಂಗಮಪ್ಪ, ಸಹಕಾರ್ಯದರ್ಶಿ ಟಿ. ರಮೇಶ್, ಖಜಾಂಚಿ ನರೇಂದ್ರಬಾಬು, ನಿರ್ದೇಶಕರಾದ ಡಿ.ಆರ್ ಶಿವಕುಮಾರ್, ಯು. ಪಂಪಣ್ಣ, ವೈ.ಎಸ್ ರಾಮಮೂರ್ತಿ, ಪದ್ಮಮ್ಮ ಹನುಮಂತಪ್ಪ, ಕೆ.ಜಿ ಕುಮಾರಸ್ವಾಮಿ, ಎಚ್. ನಾರಾಯಣಪ್ಪ, ಎಚ್.ಆರ್ ರಂಗನಾಥ್, ಬಿ. ಯಲ್ಲಪ್ಪ, ದಶರಥಕುಮಾರ, ಪಿ. ಸತೀಶ, ಟಿ.ಕೆ ಪ್ರಹ್ಲಾದ, ರಾಜೇಶ್, ವೆಂಕಟೇಶ್ ಮತ್ತು  ಉದಯಕುಮಾರ್ ಸೇರಿದಂತೆ ಸಮುದಾಯದ  ಪ್ರಮುಖರು ಉಪಸ್ಥಿತರಿದ್ದರು.
ವಿಶ್ವನಾಥ್ ಪ್ರಾರ್ಥಿಸಿದರು. ಪ್ರಧಾನ  ಕಾರ್ಯದರ್ಶಿ ಎಂ. ರಮೇಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಶಕುಂತಲ ನಿರೂಪಿಸಿದರು.
 

ರಂಗು ರಂಗಿನ ಬಣ್ಣದಾಟದೊಡನೆ ಹೋಳಿ ಸಂಭ್ರಮ

ಮಕ್ಕಳು, ಪುರುಷರು ಮತ್ತು ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಭದ್ರಾವತಿ ಹಳೇನಗರದ ವಿವಿಧೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು.
    ಭದ್ರಾವತಿ, ಮಾ. ೧೮:  ಮಕ್ಕಳು, ಪುರುಷರು ಮತ್ತು ಮಹಿಳೆಯರು ವಯಸ್ಸಿನ ಬೇಧಭಾವವಿಲ್ಲದೆ ಹಳೇನಗರದ ವಿವಿಧೆಡೆ ಶುಕ್ರವಾರ ಹೋಳಿ ಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಕಂಡು ಬಂದಿತು.
    ಭೂತನಗುಡಿ, ಹಳೇನಗರದ ಕುಂಬಾರರ ಬೀದಿ, ಬ್ರಾಹ್ಮಣರ ಬೀದಿ, ಉಪ್ಪಾರರ  ಬೀದಿ ಸೇರಿದಂತೆ ಹಲವೆಡೆ ಬೆಳಿಗ್ಗೆಯಿಂದಲೇ ರಂಗು ರಂಗಿನ ಬಣ್ಣದಾಟದೊಡನೆ ಹೋಳಿ ಆಚರಣೆ ನಡೆಸಿದರು. ಮಕ್ಕಳು, ಪುರುಷರು ಮತ್ತು ಮಹಿಳೆಯರು ಒಂದೆಡೆ ಸೇರಿ ಸಂಭ್ರಮಿಸಿದರು. ಕೊನೆಯಲ್ಲಿ ರತಿ-ಮನ್ಮಥರ ದಹನದೊಂದಿಗೆ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಪ್ರತಿ ವರ್ಷ ಈ ಭಾಗದಲ್ಲಿ ವಿಜೃಂಭಣೆಯಿಂದ ರತಿ-ಮನ್ಮಥರ ಪ್ರತಿಷ್ಠಾಪನೆಯೊಂದಿಗೆ ಹೋಳಿ ಹಬ್ಬ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೋನಾ ಹಿನ್ನಲೆಯಲ್ಲಿ ಕಳೆದ ಸುಮಾರು ೨ ವರ್ಷಗಳಿಂದ ಹಬ್ಬದ ಸಂಭ್ರಮ ಕ್ಷೀಣಿಸಿತ್ತು. ಈ ಬಾರಿ ಎಲ್ಲೆಡೆ ಅದ್ದೂರಿ ಆಚರಣೆ  ಕಂಡು ಬಂದಿತು. ಹೋಳಿ ಆಚರಣೆ ಸ್ಥಳದಲ್ಲಿ ಬಿಗಿ ಪೊಲೀಸ್  ಬಂದ್ ಬಸ್ತ್ ಕೈಗೊಳ್ಳಲಾಗಿತ್ತು.