Saturday, March 19, 2022

ಬಿಜೆಪಿಯಿಂದ ದುರ್ಬಳಕೆ : ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕರಿಗೆ ಅನ್ಯಾಯ

ಹನುಮಂತನಾಯ್ಕ
    ಭದ್ರಾವತಿ, ಮಾ. ೧೯: ಭಾರತೀಯ ಜನತಾ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಜೊತೆಗೆ ಹಂತ ಹಂತವಾಗಿ ಗುರುತಿಸಿಕೊಂಡು ತಾಲೂಕು ಮಂಡಲ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕ ವಿರುದ್ಧ ಪಕ್ಷದ ಕೆಲವರು ಷಡ್ಯಂತ್ರ ನಡೆಸಿ ಬಲಿಪಶು ಮಾಡಲಾಗಿದೆ ಎಂದು ತಾಲೂಕು ಬಂಜಾರ ಸಮಾಜದ ಪ್ರಮುಖರು ಆರೋಪಿಸಿದ್ದಾರೆ.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ ಹಾಗು ಅವರೊಂದಿಗಿನ ಕೆಲವು ವ್ಯಕ್ತಿಗಳು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಹನುಮಂತನಾಯ್ಕ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಉಚ್ಛಾಟನೆಗೊಳಿಸಿರುವುದು ಸರಿಯಲ್ಲ. ಇದನ್ನು ಬಂಜಾರ ಸಮಾಜ ಖಂಡಿಸುತ್ತದೆ.
    ಮಂಡಲ ಅಧ್ಯಕ್ಷ ಎಂ. ಪ್ರಭಾಕರ್‌ರವರು ಪರಿಶಿಷ್ಟ ಜಾತಿಗೆ ಸೇರಿದ ಹನುಮಂತನಾಯ್ಕರವರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅಲ್ಲದೆ ವಿನಾಕಾರಣ  ಇಲ್ಲಸಲ್ಲದ ಆರೋಪಗಳನ್ನು ಮಾಡಿರುವುದು ವಿಷಾದನೀಯ ಬೆಳವಣಿಗೆಯಾಗಿದೆ. ಪ್ರಭಾಕರ್‌ರವರು ಮಾಡಿರುವ ಆರೋಪಗಳಿಗೆ ನೇರವಾಗಿ ಚರ್ಚಿಸಲು ಸಿದ್ದವಿದ್ದೇವೆ.
    ಪಕ್ಷದ ವರಿಷ್ಠರು ಈ ಸಂಬಂಧ ಗಮನ ಹರಿಸಿ ನ್ಯಾಯ ಒದಗಿಸಿಕೊಡಬೇಕು. ಅಲ್ಲದೆ ಹನುಮಂತನಾಯ್ಕ ಅವರನ್ನು ಪುನಃ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಬಂಜಾರ ಯುವಕರ ಸಂಘದ ಅಧ್ಯಕ್ಷ ಕೃಷ್ಣನಾಯ್ಕ ಹಾಗು ಬಂಜಾರ ಸಂಘದ ಅಧ್ಯಕ್ಷ ಪ್ರೇಮ್‌ಕುಮಾರ್ ಆಗ್ರಹಿಸಿದ್ದಾರೆ.

ವಿಜೃಂಭಣೆಯಿಂದ ಜರುಗಿದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ

ಪ್ರತಿ ವರ್ಷದಂತೆ ಈ ಬಾರಿ ಸಹ ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
    ಭದ್ರಾವತಿ, ಮಾ. ೧೯: ಪ್ರತಿ ವರ್ಷದಂತೆ ಈ ಬಾರಿ ಸಹ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಶನಿವಾರ ವಿಜೃಂಭಣೆಯಿಂದ ನಡೆಯಿತು.
    ಬೆಳಿಗ್ಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ ಮತ್ತು ಮಹಾಮಂಗಳಾರತಿ, ರಥಶುದ್ಧಿ ಪ್ರಧಾನ ಹೋಮ ಜರುಗಿದವು. ಮಧ್ಯಾಹ್ನ ೧೨.೩೦ಕ್ಕೆ ದೇವಸ್ಥಾನದಿಂದ ಆವರಣದಿಂದ ರಥೋತ್ಸವ ಆರಂಭಗೊಂಡಿತು. ದೇವಸ್ಥಾನದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಭಕ್ತರು ವೀರಾಂಜನೇಯ ಸ್ವಾಮಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಭಜನೆ ನೆರವೇರಿತು. ಗ್ರಾಮದ ಅಗಸೆ ಬಾಗಿಲಿನವರೆಗೂ ರಥೋತ್ಸವ ನಡೆಯಿತು. ನಂತರ ಅನ್ನ ಸಂಂತರ್ಪಣೆ ಕಾರ್ಯಕ್ರಮಗಳು ನಡೆದವು. ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಪ್ರಸಾದ ಸೇವೆ ವಿತರಣೆ ನಡೆಯಿತು.
    ಸುಣ್ಣದಹಳ್ಳಿ, ಮಾರುತಿ ನಗರ, ಮೊಸರಹಳ್ಳಿ, ತಾಷ್ಕೆಂಟ್‌ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಹಾಗೂ ನಗರ ಪ್ರದೇಶದ ಸಾವಿರಾರು ಭಕ್ತಾದಿಗಳು, ಗಣ್ಯರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಸುಣ್ಣದಹಳ್ಳಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವದಲ್ಲಿ ಆರ್ಯವೈಶ್ಯ ಸಮಾಜ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳಿಂದ ಭಕ್ತರಿಗೆ ಪಾನಕ, ಮಜ್ಜಿಗೆ, ಪ್ರಸಾದ ಸೇವೆ ವಿತರಣೆ ನಡೆಯಿತು.

Friday, March 18, 2022

ಶ್ರೀ ಕ್ಷೇತ್ರ ಭದ್ರಗಿರಿಯಲ್ಲಿ ವಿಜೃಂಭಣೆಯಿಂದ ಜರುಗಿದ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ

    ಭದ್ರಾವತಿ, ಮಾ. ೧೮: ಇಲ್ಲಿಗೆ  ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.
    ಶ್ರೀ ಕ್ಷೇತ್ರದ ಶ್ರೀ ಮುರುಗೇಶ್ ಸ್ವಾಮೀಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ, ಹೊರ ರಾಜ್ಯಗಳಿಂದ ಭಕ್ತಾಧಿಗಳು ಆಗಮಿಸಿದ್ದರು. ಕಾವಡಿ ಹರಕೆ ಹೊತ್ತ ಭಕ್ತಾಧಿಗಳು ಗಮನ ಸೆಳೆದರು. ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.  ದೇವಸ್ಥಾನ ಸಮಿತಿಯ ಪ್ರಮುಖರು, ಸೇವಾಕರ್ತರು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಹಕರಿಸಿದರು.


ಭದ್ರಾವತಿ ಸಮೀಪದ ಎಂ.ಸಿ ಹಳ್ಳಿ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವ ಸುಬ್ರಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಪಂಗುಣಿ-ಉತ್ತಿರ ತೀರ್ಥ ಕಾವಡಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು. ಕಾವಡಿ ಹರಕೆ ಹೊತ್ತ ಭಕ್ತಾಧಿಗಳು ಗಮನ ಸೆಳೆದರು.

ಶಾಸಕ ಸಂಗಮೇಶ್ವರ್ ಆರೋಗ್ಯ ವಿಚಾರಿಸಿದ ಮಾಜಿ ಸಚಿವ ಎಂ.ಆರ್ ಸೀತರಾಮ್

ಕಳೆದ ೨-೩ ದಿನಗಳಿಂದ ಸ್ವಲ್ಪಮಟ್ಟಿಗೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ನ್ನು ಶುಕ್ರವಾರ ಮಾಜಿ ಸಚಿವ ಎಂ.ಆರ್  ಸೀತರಾಮ್ ಭೇಟಿಯಾಗಿ  ಆರೋಗ್ಯ  ವಿಚಾರಿಸಿದರು.
    ಭದ್ರಾವತಿ, ಮಾ. ೧೮: ಕಳೆದ ೨-೩ ದಿನಗಳಿಂದ ಸ್ವಲ್ಪಮಟ್ಟಿಗೆ ಅನಾರೋಗ್ಯಕ್ಕೆ ಒಳಗಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರುವ ಶಾಸಕ ಬಿ.ಕೆ ಸಂಗಮೇಶ್ವರ್‌ನ್ನು ಶುಕ್ರವಾರ ಮಾಜಿ ಸಚಿವ ಎಂ.ಆರ್  ಸೀತರಾಮ್ ಭೇಟಿಯಾಗಿ  ಆರೋಗ್ಯ  ವಿಚಾರಿಸಿದರು.
    ಖಾಸಗಿ ಕಾರ್ಯಕ್ರಮ ನಿಮಿತ್ತ ನಗರಕ್ಕೆ ಆಗಮಿಸಿದ್ದ ಸೀತರಾಮ್‌ರವರು ಸಂಗಮೇಶ್ವರ್ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸುವ ಮೂಲಕ ಹೆಚ್ಚಿನ ಕಾಳಜಿವಹಿಸುವಂತೆ ಸಲಹೆ ನೀಡಿದರು.
    ಸಹೋದರರಾದ ಬಿ.ಕೆ ಜಗನ್ನಾಥ್, ಬಿ.ಕೆ ಮೋಹನ್, ಪುತ್ರರಾದ ಬಿ.ಎಸ್ ಗಣೇಶ್, ಬಸವೇಶ್, ಬಿ.ಎಂ ಮಂಜುನಾಥ್, ಮುಖಂಡರಾದ ಬದರಿನಾರಾಯಣ, ಬಿ. ಗಂಗಾಧರ್, ಅಣ್ಣೋಜಿರಾವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹೋಳಿ ಸಂಭ್ರಮಾಚರಣೆ : ಮನ್ಮಥ ದೇವರ ಮೆರವಣಿಗೆ

ಭದ್ರಾವತಿಯಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಆಚರಣೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಮೆರವಣಿಗೆ ನಡೆಸಿ ಕೊನೆಯಲ್ಲಿ ದಹಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
    ಭದ್ರಾವತಿ, ಮಾ. ೧೮: ನಗರದಲ್ಲಿ ಶುಕ್ರವಾರ ಸಂಭ್ರಮದ ಹೋಳಿ ಆಚರಣೆಯೊಂದಿಗೆ ಪ್ರಮುಖ ರಸ್ತೆಗಳಲ್ಲಿ ಮನ್ಮಥ ದೇವರ ಮೆರವಣಿಗೆ ನಡೆಸಿ ಕೊನೆಯಲ್ಲಿ ದಹಿಸುವ ಮೂಲಕ ಹಬ್ಬಕ್ಕೆ ತೆರೆ ಎಳೆಯಲಾಯಿತು.
     ಭೂತನಗುಡಿಯಲ್ಲಿ ಶ್ರೀ ನೇತಾಜಿ ಸೇವಾ ಸಮಿತಿ ಮತ್ತು ಶ್ರೀ ನೇತಾಜಿ ಯುವಕರ ಸಂಘದ ವತಿಯಿಂದ ಶ್ರೀ ಕೃಷ್ಣ ರುಕ್ಮಿಣಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲಾಗಿದ್ದ ಮನ್ಮಥ ದೇವರಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
    ಬಣ್ಣ ಬಣ್ಣದ ರಂಗಿನಾಟದೊಡನೆ ಮಕ್ಕಳು, ಮಹಿಳೆಯರು, ಪುರುಷರು ಸಂಭ್ರಮಿಸುವ ಮೂಲಕ ಹೋಳಿ ಹಬ್ಬದ ಮಹತ್ವ ಸಾರಿದರು. ಕೊನೆಯಲ್ಲಿ ಧಾರ್ಮಿಕ ಆಚರಣೆಗಳೊಂದಿಗೆ ಮನ್ಮಥ ದೇವರನ್ನು ದಹಿಸಲಾಯಿತು.

ಮಾ.೨೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ, ಮಾ. ೧೮: ಮೆಸ್ಕಾಂ ಮಾಚೇನಹಳ್ಳಿ ೧೧೦/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.೨೦ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ  ೬ ಗಂಟೆ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ಮಾಚೇನಹಳ್ಳಿ ಕೈಗಾರಿಕಾ ಪ್ರದೇಶ, ಜೇಡಿಕಟ್ಟೆ, ಹಳೇ ಜೇಡಿಕಟ್ಟೆ, ಡೈರಿ ಸರ್ಕಲ್, ನಿದಿಗೆ, ಕೈಗಾರಿಕಾ ಪ್ರದೇಶ, ಶಿವರಾಂನಗರ, ವಿಶ್ವೇಶ್ವರಯ್ಯನಗರ ಸೇರಿದಂತೆ ಇನ್ನಿತರೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.

ತಡೆಗೋಡೆ ನಿರ್ಮಾಣಕ್ಕೆ ಆಗ್ರಹಿಸಿ ಮಾ.೨೧ರಂದು ಪ್ರತಿಭಟನೆ

    ಭದ್ರಾವತಿ, ಮಾ. ೧೮: ನಗರದ ಅಂಬೇಡ್ಕರ್ ವೃತ್ತದ ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಆಗ್ರಹಿಸಿ ಹಾಗು ಕಾಮಗಾರಿ ಬದಲಾಯಿಸಿರುವ ಕ್ರಮ ಖಂಡಿಸಿ ಮಾ.೨೧ರಂದು ಪ್ರಜಾ ರಾಜ್ಯ ದಲಿತ ಸಂಘದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
    ಬಿ.ಎಚ್ ರಸ್ತೆ ೧ನೇ ತಿರುವಿನಿಂದ ವಿಶ್ವ ಸ್ವರೂಪಿಣಿ ಮಾರಿಯಮ್ಮ ದೇವಸ್ಥಾನದವರೆಗೂ ದಲಿತರು ಹೆಚ್ಚಾಗಿ ವಾಸಿಸುತ್ತಿದ್ದು, ಮಳೆಗಾಲದಲ್ಲಿ ಭದ್ರಾ ನದಿಗೆ ಜಲಾಶಯದಿಂದ ನೀರು ಬಿಟ್ಟಾಗ ಮನೆಗಳು ಮುಳುಗಡೆಯಾಗುತ್ತಿವೆ. ಈ ಹಿನ್ನಲೆಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ೯.೫ ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಆದರೆ ಇದೀಗ ಬದಲಾಯಿಸಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ  ಕಾಮಗಾರಿ ಬದಲಾವಣೆಗೆ ಕಾರಣಕರ್ತರಾದವರ ವಿರುದ್ಧ ಕ್ರಮ ಕೈಗೊಂಡು ಬಿ.ಎಚ್ ರಸ್ತೆ ೧ನೇ ತಿರುವಿನಿಂದ ಕಾಮಗಾರಿ ಆರಂಭಿಸುವಂತೆ  ಆಗ್ರಹಿಸಿ ಮಾ.೨೧ರಂದು ಬೆಳಿಗ್ಗೆ ೧೧ ಗಂಟೆಗೆ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.