Tuesday, May 31, 2022

ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರಿ : ಡಾ. ಎಂ.ವಿ ಅಶೋಕ್


ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮವನ್ನು ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಉದ್ಘಾಟಿಸಿದರು.
    ಭದ್ರಾವತಿ, ಮೇ. ೩೧: ವಿದ್ಯಾರ್ಥಿಗಳು ತಂಬಾಕು ಉತ್ಪನ್ನಗಳಿಂದ ದೂರವಿರುವ ಮೂಲಕ ಎಚ್ಚರವಹಿಸಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಅವರು ಮಂಗಳವಾರ ನಗರದ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರಸ್ತುತ ತಂಬಾಕು ಪದಾರ್ಥಗಳ ವ್ಯಸನ್ಯಕ್ಕೆ ಬಲಿಯಾಗುತ್ತಿರುವವರ ಪ್ರಮಾಣ ಏರಿಕೆಯಾಗುತ್ತಿದ್ದು, ಈ ಕುರಿತು ಸಮಗ್ರ ಮಾಹಿತಿ ನೀಡುವ ಮೂಲಕ  ಹೆಚ್ಚಿನ ಜಾಗೃತಿ ವಹಿಸುವುದು ಅಗತ್ಯವಾಗಿದೆ ಎಂದರು.
    ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಡಿಜಿಓ ಡಾ. ವರ್ಷ ಋತು ಚಕ್ರ ನೈರ್ಮಲ್ಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. 
    ತಾಲೂಕು ಕಾನೂನು ಸೇವಾ ಸಮಿತಿ ಕಾರ್ಯದರ್ಶಿ, ನ್ಯಾಯಧೀಶ ಆರ್. ಯತೀಶ್ ಕಾರ್ಯಕ್ರಮ ಉದ್ಘಾಟಿಸಿದರು. ತಾಲೂಕು ಶಿಕ್ಷಣ ಆರೋಗ್ಯಾಧಿಕಾರಿ ಕೆ. ಸುಶೀಲಬಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಜಿ ತ್ಯಾಗರಾಜ್, ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ ವಿಶ್ವನಾಥ್, ಪ್ರಾಂಶುಪಾಲ ಟಿ.ಎಲ್ ಮಹಾಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
    ಡಾ. ತಮ್ಮಣ್ಣ ಸ್ವಾಗತಿಸಿದರು. ಹಿರಿಯ ಆರೋಗ್ಯ ಸಹಾಯಕ ಆನಂದಮೂರ್ತಿ, ವಸಂತ ಹಾಗು ಪಾಲಿಟೆಕ್ನಿಕ್ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.



ಭದ್ರಾವತಿ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ತಾಲೂಕು ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಮತ್ತು ವಿಶ್ವ ಋತು ಚಕ್ರ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಪಾಲ್ಗೊಂಡು ಮಾತನಾಡಿದರು.

Monday, May 30, 2022

ಸಾವರ್ಕರ್ ಹೆಸರನ್ನು ಬಿಟ್ಟರೇ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿ ಅಪೂರ್ಣ : ಪ್ರವೀಣ್


ಭದ್ರಾವತಿಯಲ್ಲಿ ಸೋಮವಾರ ಸಂಜೆ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ಸಾವರ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಮೇ. ೩೦: ದೇಶದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ವೀರ ಸಾವರ್ಕರ್ ಹೆಸರನ್ನು ಬಿಟ್ಟರೇ ಆ ಪಟ್ಟಿ ಪೂರ್ಣಗೊಳ್ಳುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರವೀಣ್ ಹೇಳಿದರು.
    ಅವರು ಸೋಮವಾರ ಸಂಜೆ ನಗರದ ತರೀಕೆರೆ ರಸ್ತೆಯ ಮಹಾತ್ಮಗಾಂಧಿ ವೃತ್ತದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವೀರ ಸಾವರ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಾವರ್ಕರ್ ಅವರ ಪಾತ್ರ ಬಹಳ ಮುಖ್ಯವಾಗಿದ್ದು, ಪ್ಲೇಗ್ ಮಾಹಾಮಾರಿ ಕಾಣಿಸಿಕೊಂಡ ಸಂದರ್ಭದಲ್ಲಿ ಬ್ರಿಟಿಷರ ವರ್ತನೆ ವಿರುದ್ದ ಸಿಡಿದೆದ್ದವರನ್ನು ದೇಶ ದ್ರೋಹದ ಆರೋಪದ ಮೇಲೆ ಗಲ್ಲಿಗೇರಿಸಿದ ಘಟನೆ ಸಾವರ್ಕರ್ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಕಾರಣವಾಯಿತು. ಕ್ರಾಂತಿಕಾರಕ ಹೋರಾಟದ ಮೂಲಕ ಯುವಕರನ್ನು ಸಂಘಟಿಸುವಲ್ಲಿ ಯಶಸ್ವಿಯಾದರು. ದೇಶದ ಹೊರಗು ಸಂಘಟನೆಯನ್ನು ರೂಪಿಸಿ ಆ ಮೂಲಕ ದೇಶದಿಂದ ಬ್ರಿಟಿಷರನ್ನು ತೊಲಗಿಸಲು ನಡೆಸಿದ ಹೋರಾಟ ಮಹತ್ವದ್ದಾಗಿದೆ.  ಸಾವರ್ಕರ್ ಅವರ ದೇಶ ಭಕ್ತಿ, ಹೋರಾಟದ ಗುಣಗಳು ಇಂದಿನ ಪೀಳಿಗೆಯವರಿಗೆ ಅವಶ್ಯಕವಾಗಿವೆ ಎಂದರು.
    ಇದಕ್ಕೂ ಸಾವರ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸೂಚಿಸಲಾಯಿತು. ಹಿಂದೂ ಜಾಗರಣ ವೇದಿಕೆ ಹಾಗು ಹಿಂದೂಪರ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗಮನಕ್ಕೆ ಬಾರದೆ ವಾರ್ಡ್‌ಗಳಲ್ಲಿ ಕಾಮಗಾರಿ : ಸದಸ್ಯರ ಆಕ್ರೋಶ

ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆ

ಮುಖ್ಯಾಂಶಗಳು :
- ಪಿಡಬ್ಲ್ಯೂಡಿ ಅಧಿಕಾರಿಗಳ ವರ್ತನೆಗೆ ಜೆಡಿಎಸ್ ಸದಸ್ಯರ ಆಕ್ರೋಶ
- ಎಲ್ಲಾ ಕೆರೆಗಳ ಬೌಂಡರಿ ನಿಗದಿಪಡಿಸಿ, ತೆರವು ಕಾರ್ಯಾಚರಣೆ ಕೈಗೊಳ್ಳಿ
- ನಾಮನಿರ್ದೇಶನ ಸದಸ್ಯರು ಕೇವಲ ಸಲಹೆಗಳನ್ನು ನೀಡಿ.
- ಮನೆ, ನೀರಿನ ಕಂದಾಯ ಕಡಿಮೆಗೊಳಿಸಿ.
-ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷ ಸರಿಪಡಿಸಿಕೊಳ್ಳಿ.
- ದೇವಸ್ಥಾನಗಳಿಗೆ ಜಾಗ, ಮೀನು ಮಾರುಕಟ್ಟೆ ನಿರ್ಮಾಣ ಸೇರಿದಂತೆ ೩೩ ಪ್ರಸ್ತಾವನೆಗಳ ಕುರಿತು ಚರ್ಚೆ
    ಭದ್ರಾವತಿ, ಮೇ. ೩೦: ಸದಸ್ಯರ ಗಮನಕ್ಕೆ ಬಾರದೆ ವಾರ್ಡ್‌ಗಳಲ್ಲಿ ಕಾಮಗಾರಿಗಳು ನಡೆಯುತ್ತಿದ್ದು, ಅಲ್ಲದೆ ಗುದ್ದಲಿ ಪೂಜೆ ಕಾರ್ಯಕ್ರಮಗಳಿಗೂ ನಮ್ಮನ್ನು ಆಹ್ವಾನಿಸುತ್ತಿಲ್ಲ ಎಂದು ಜೆಡಿಎಸ್ ನಗರಸಭಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
    ಸೋಮವಾರ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಮಾತನಾಡಿದ ಜೆಡಿಎಸ್ ನಗರಸಭಾ ಸದಸ್ಯರಾದ ಬಸವರಾಜ ಬಿ. ಆನೇಕೊಪ್ಪ ಹಾಗು ಸದಸ್ಯೆ ಪಲ್ಲವಿ, ವಾರ್ಡ್‌ಗಳಲ್ಲಿ ಸದಸ್ಯರ ಗಮನಕ್ಕೆ ಬಾರದೆ ಕಾಮಗಾರಿಗಳು ಆರಂಭಗೊಳ್ಳುತ್ತಿವೆ. ವಾರ್ಡ್‌ಗಳಲ್ಲಿ ಜವಾಬ್ದಾರಿ ಹೊಂದಿರುವ ನಮಗೆ ೨ ದಿನಗಳ ನಂತರ ಮಾಹಿತಿ ತಿಳಿಯುತ್ತಿದೆ. ನಮಗಿಂತ ಮೊದಲೇ ಬೇರೆಯವರಿಗೆ ಮಾಹಿತಿ ತಿಳಿದಿರುತ್ತದೆ. ಕನಿಷ್ಠ ಪಕ್ಷ ನಮ್ಮನ್ನು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೂ ಆಹ್ವಾನಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಚನ್ನಪ್ಪ ನಗರಸಭೆ ವತಿಯಿಂದ ನಡೆಯುವ ಕಾಮಗಾರಿಗಳ ಬಗ್ಗೆ ಆಯಾ ವಾರ್ಡ್‌ಗಳ ಸದಸ್ಯರ ಗಮನಕ್ಕೆ ತರಲಾಗುತ್ತಿದೆ. ಬೇರೆ ಇಲಾಖೆಗಳಿಂದ ನಡೆಯುವ ಕಾಮಗಾರಿಗಳ ಬಗ್ಗೆ ನಮಗೆ ಮಾಹಿತಿ ಇಲ್ಲ. ಆ ವಿಚಾರಗಳ ಬಗ್ಗೆ ಆಯಾ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿ ಎಂದರು.
    ಈ ಹಿನ್ನಲೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಜೆಡಿಎಸ್ ಸದಸ್ಯರು ತರಾಟೆಗೆ ತೆಗೆದುಕೊಂಡರು. ಸೂಕ್ತ ಉತ್ತರ ನೀಡುವಂತೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದರೂ ಈ ನಡುವೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕೆಲ ಸಮಯ ಮಾತಿನ ಚಕಮಕಿ ನಡೆಸಿದರು.
    ಸದಸ್ಯ ಬಿ.ಕೆ ಮೋಹನ್ ಮಾತನಾಡಿ, ನಗರಸಭಾ ಸದಸ್ಯರು, ಶಾಸಕರು ಮತ್ತು ಲೋಕಸಭಾ ಸದಸ್ಯರು ತಮ್ಮ ಅಧಿಕೃತ ಲೆಟರ್‌ಹೆಡ್‌ಗಳಲ್ಲಿ ಸಲ್ಲಿಸುವ ಪ್ರಸ್ತಾವನೆಗಳನ್ನು ಮಾತ್ರ ಪರಿಶೀಲಿಸಿ ಸಾಮಾನ್ಯಸಭೆಗೆ ತರಬೇಕು. ಬೇರೆ ಯಾವುದೇ ಪ್ರಸ್ತಾವನೆಗಳಿಗೆ ಅವಕಾಶ ನೀಡಬಾರದೆಂದು ಒತ್ತಾಯಿಸಿದರು.
    ಸದಸ್ಯ ಕೋಟೇಶ್ವರರಾವ್ ಮಾತನಾಡಿ, ವಾರ್ಡ್ ವ್ಯಾಪ್ತಿಯಲ್ಲಿರುವ ಕೆರೆಗಳ ಬೌಂಡರಿ ನಿಗದಿ ಮಾಡಿ ಒತ್ತುವರಿ ತೆರವು ಕಾರ್ಯಾಚರಣೆನಡೆಸಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳು ನಗರಸಭೆಗೆ ಸೇರಿಲ್ಲ. ಆದರೆ ಬೌಂಡರಿ ಮಾತ್ರ ಗುರುತಿಸಲಾಗಿದೆ. ಸಂಪೂರ್ಣವಾಗಿ ನಗರಸಭೆ ಸೇರಿರುವ ಕೆರೆಗಳ ಒತ್ತುವರಿ ಕಾರ್ಯಾಚರಣೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಈ ನಡುವೆ ಬಹುತೇಕ ಸದಸ್ಯರು ಮಾತನಾಡಿ, ಮೊದಲು ತಾಲೂಕು ಆಡಳಿತದ ಸಹಕಾರದೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ಕೆರೆಗಳ ಬೌಂಡರಿ ನಿಗದಿಪಡಿಸುವ ಕಾರ್ಯ ಕೈಗೊಳ್ಳಿ ಆನಂತರ ಸಂಬಂಧಿಸಿದ ಇಲಾಖೆಗಳಿಗೆ ಮಾಹಿತಿ ನೀಡಿ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಿ. ಈಗಾಗಲೇ ಹಲವು ಕಡೆ ಕೆರೆ ಜಾಗ ಒತ್ತುವರಿಯಾಗಿ ಅಕ್ರಮವಾಗಿ ಕೋಟ್ಯಾಂತರ ರು. ವಹಿವಾಟು ನಡೆಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಮೊದಲು ತೆರವು ಕಾರ್ಯಾಚರಣೆ ಕೈಗೊಳ್ಳಿ ನಂತರ ಜಾಗವನ್ನು ನಗರಸಭೆಗೆ ಹಸ್ತಾಂತರಿಸಿಕೊಳ್ಳಿ. ಇದರಿಂದ ಮುಂದಿನ ದಿನಗಳಲ್ಲಿ ನಗರಸಭೆಗೆ ಆದಾಯ ಬರುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.  
    ಈ ನಡುವೆ ನಾಮನಿರ್ದೇಶಿತ ಸದಸ್ಯ ಕರೀಗೌಡ ಕೆಲವು ಪ್ರಸ್ತಾವನೆಗಳ ಬಗ್ಗೆ ಪ್ರಶ್ನಿಸಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು. ಇದರಿಂದ ಅಸಮಾಧಾನಗೊಂಡ ಸದಸ್ಯ ಬಿ.ಕೆ ಮೋಹನ್, ನಾಮನಿರ್ದೇಶನ ಸದಸ್ಯರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರ್ಥ ಮಾಡಿಕೊಳ್ಳಿ. ನಿಮಗೆ ಕೇವಲ ಸಲಹೆ ನೀಡುವ ಅಧಿಕಾರವಿದ್ದು, ಆಗ್ರಹಿಸುವ ಅಧಿಕಾರವಿಲ್ಲ ಎಂದರು.
    ಹಳೇನಗರದ ಶ್ರೀ ಹಳದಮ್ಮ ದೇವಸ್ಥಾನಕ್ಕೆ ನ್ಯಾಯಾಲಯದ ಮುಂಭಾಗದಲ್ಲಿರುವ ನಗರಸಭೆಗೆ ಸೇರಿದ ದೊಡ್ಡಿ ಜಾಗವನ್ನು ರಿಯಾಯಿತಿ ದರದಲ್ಲಿ ನೀಡುವ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆ ಕುರಿತು ಚರ್ಚೆ ನಡೆಸಿದ ಸದಸ್ಯರು ಜಾಗವನ್ನು ಯಾರಿಗೂ ನೀಡುವುದಿಲ್ಲ. ನಗರಸಭೆಯೇ ಜಾಗವನ್ನು ಉಳಿಸಿಕೊಳ್ಳಲಿದೆ ಎಂಬ ನಿರ್ಣಯ ಕೈಗೊಂಡರು.
    ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಸೂಕ್ತ ಜಾಗ ಕಲ್ಪಿಸಿಕೊಡುವ ಸಂಬಂಧ ಚರ್ಚೆ ನಡೆದು ಕವಲಗುಂದಿ ಭಾಗದಲ್ಲಿ ಈಗಾಗಲೇ ಸ್ಮಶಾನ ಭೂಮಿ ಇರುವ ಹಿನ್ನಲೆಯಲ್ಲಿ ಸ್ಮಶಾನಕ್ಕಾಗಿ ಮಂಜೂರಾತಿಯಾಗಿರುವ ೩ ಎಕರೆ ಹೆಚ್ಚುವರಿ ಜಾಗವನ್ನು ಬಿಟ್ಟುಕೊಡುವ ನಿರ್ಣಯ ಕೈಗೊಳ್ಳಲಾಯಿತು.
    ಮಳಿಗೆಗಳ ಬಾಡಿಗೆಯನ್ನು ಪಾವತಿಸದೆ, ನ್ಯಾಯಾಲಯದಲ್ಲಿ ದಾವೆ ಹೂಡಿರುವ ಸಂತೆ ಮೈದಾನದಲ್ಲಿರುವ ವಾಣಿಜ್ಯ ಮಳಿಗೆಗಳ ಬಾಡಿಗೆದಾರರೊಂದಿಗೆ ಸಂಧಾನ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.
    ಉಳಿದಂತೆ ವಾರ್ಡ್ ನಂ.೨೨ರ ಉಜ್ಜನಿಪುರದ ಎನ್.ಎಚ್ ೨೦೬ರ ಚತುಷ್ಪಥ ರಸ್ತೆಯ ಪಕ್ಕದಲ್ಲಿರುವ ಸರ್ವೇ ನಂ.೧೩ರ ೬.೧೮ ಎಕರೆ ವಿಸ್ತೀರ್ಣದ ಬಿಳಕಟ್ಟೆ ಕೆರೆ ಮತ್ತು ಸರ್ವೇ ನಂ.೧೬ರ ೪.೦೧ ಎಕರೆ ವಿಸ್ತೀರ್ಣದ ಬಳಸಕಟ್ಟೆ ಕೆರೆಗಳನ್ನು ಅಭಿವೃದ್ಧಿಪಡಿಸಿ ದೋಣಿ ವಿಹಾರ ನಿರ್ಮಿಸಿ  ಪ್ರವಾಸಿ ತಾಣವಾಗಿ ಪರಿವರ್ತಿಸುವುದು ಸೇರಿದಂತೆ ಸಲ್ಲಿಕೆಯಾಗಿದ್ದ ಸುಮಾರು ೩೩ ಪ್ರಸ್ತಾವನೆಗಳ ಬಗ್ಗೆ ಚಿರ್ಚಿಸಲಾಯಿತು.
    ಮನೆ ಹಾಗು ನೀರಿನ ಕಂದಾಯ ವಸೂಲಾತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸದಸ್ಯರು, ಈಗಾಗಲೇ ಶಿವಮೊಗ್ಗದಲ್ಲಿ ಮನೆ ಹಾಗು ನೀರಿನ ಕಂದಾಯ ಕಡಿಮೆ ಮಾಡಲಾಗಿದೆ. ಅದರಂತೆ ಇಲ್ಲೂ ಸಹ ಕಡಿಮೆ ಮಾಡಬೇಕು. ಒಂದೊಂದು ಕಡೆ ಒಂದೊಂದು ರೀತಿಯಾಗಿ ಕಾನೂನು ಮಾಡುವುದು ಬೇಡ. ಈ ಸಂಬಂಧ ಮಾಹಿತಿಯನ್ನು ಸರ್ಕಾರದ ಗಮನಕ್ಕೆ ತಂದು ಕಂದಾಯ ಕಡಿಮೆ ಮಾಡುವಂತೆ ಆಗ್ರಹಿಸಿದರು.
    ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷಗಳ ಕುರಿತು ತೀವ್ರ ಚರ್ಚೆ ನಡೆಯಿತು. ಈ ನಡುವೆ ಸದಸ್ಯ ಟಿಪ್ಪು ಸುಲ್ತಾನ್ ಹಾಗು ಉಪಾಧ್ಯಕ್ಷ ಚನ್ನಪ್ಪ ನಡುವಿನ ವಾಕ್ಸಮರ ಕೆಲ ಸಮಯ ಬಿಗುವಿನ ವಾತಾವರಣಕ್ಕೆ ಸಾಕ್ಷಿಯಾಯಿತು. ಕೆಲವು ಸದಸ್ಯರು ಟೆಂಡರ್ ಸಲ್ಲಿಕೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ನೂತನ ಪೌರಾಯುಕ್ತ ಮನುಕುಮಾರ್ ಉಪಸ್ಥಿತರಿದ್ದರು. ಬಹುತೇಕ ನಗರಸಭಾ ಸದಸ್ಯರು, ವಿವಿಧ ವಿಭಾಗಗಳ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.


ಭದ್ರಾವತಿ ನಗರಸಭೆ ಸಾಮಾನ್ಯ ಸಭೆ ಸೋಮವಾರ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

Sunday, May 29, 2022

ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಣೆ

ಭದ್ರಾವತಿಯಲ್ಲಿ ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಭಾನುವಾರ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
    ಭದ್ರಾವತಿ, ಮೇ. ೨೯: ಶ್ರೀ ವಿನಾಯಕ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಶ್ರೀ ಹರಿಹರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಭಾನುವಾರ ಶ್ರೀರಾಮನಗರದ ಶ್ರಮಜೀವಿ ಮರಿಸಿದ್ದಯ್ಯ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.
    ಹಲವಾರು ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟ್ರಾವೆಲ್ಸ್ ಮಾಲೀಕ ಮತ್ತು ಸಿವಿಲ್ ಗುತ್ತಿಗೆದಾರ ಎ. ಧರ್ಮೇಂದ್ರ ಪ್ರತಿವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್‌ಬುಕ್‌ಗಳನ್ನು ವಿತರಿಸುತ್ತಿದ್ದು, ಈ ಬಾರಿ ಒಟ್ಟು ೧೫೦೦ ನೋಟ್ ಬುಕ್‌ಗಳನ್ನು ವಿತರಿಸಿದರು.
    ಬಾಬಳ್ಳಿ, ಕಾಗೇಕೋಡಮಗ್ಗಿ, ಜಯನಗರ, ವೀರಾಪುರ, ರಾಮನಗರ, ಕುಮರಿನಾರಾಯಣಪುರ ಮತ್ತು ತಳ್ಳಿಕಟ್ಟೆ ಗ್ರಾಮಗಳ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಯಿತು.
    ಯು. ಹರೀಶ್‌ರಾವ್, ಸಿ. ಹರಿಬಾಬು, ಸಿ.ಎಸ್ ನಾಗರಾಜ್, ಮಮತ, ರೂಪವತಿ, ಮಂಗಳ ಗೌರಮ್ಮ, ಶಶಿಕುಮಾರ, ಪರಮೇಶ್ವರಪ್ಪ, ಸತ್ಯನಾರಾಯಣ, ಸುರೇಶ್, ಗಂಗಣ್ಣ, ಕಾವೇರಮ್ಮ ಮತ್ತು ಗಣೇಶ್ ಕಲ್ಲೇರಿ, ಆಶಾರಾಣಿ ಧರ್ಮೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಶಿವಲಿಂಗೇಗೌಡ ಕಾರ್ಯಕ್ರಮ ನಿರೂಪಿಸಿದರು.

ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಅಶೋಕ್ ಹಾರನಹಳ್ಳಿಗೆ ಸನ್ಮಾನ

ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಹಾಗು ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು ಭದ್ರಾವತಿ ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು.

    ಭದ್ರಾವತಿ, ಮೇ. ೨೯: ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಹಾಗು ಲೋಕಶಿಕ್ಷಣ ಟ್ರಸ್ಟ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ ಅವರನ್ನು
    ತಾಲೂಕು ಬ್ರಾಹ್ಮಣ ಮಹಾಸಭಾ ವತಿಯಿಂದ ಭಾನುವಾರ ಸನ್ಮಾನಿಸಿ ಗೌರವಿಸಲಾಯಿತು. ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಎಂ.ಎಸ್ ಜನಾರ್ಧನ್ ಅಯ್ಯಂಗಾರ್ ಅಶೋಕ್ ಹಾರನಹಳ್ಳಿ ಅವರನ್ನು ಸ್ವಾಗತಿಸಿದರು. ಹೊಯ್ಸಳ ಕರ್ನಾಟಕ ಅಧ್ಯಕ್ಷ ಕೃಷ್ಣಸ್ವಾಮಿ, ಉಪಾಧ್ಯಕ್ಷ ಜಿ. ರಮಾಕಾಂತ್, ಗೌರವಾಧ್ಯಕ್ಷರಾದ ಡಾ. ಹರೀಶ್ ದೇಲಂತಬೆಟ್ಟು ಮತ್ತು ರವಿಕುಮಾರ್, ಖಜಾಂಚಿ ಮಂಜುನಾಥ್, ಕಾರ್ಯದರ್ಶಿ ಕೇಶವಮೂರ್ತಿ, ಸುಬ್ರಮಣ್ಯ, ಪಿ.ಕೆ ಮಂಜುನಾಥ್, ನರಸಿಂಹಸ್ವಾಮಿ, ಶೇಷಾದ್ರಿ,  ಎನ್. ಕೃಷ್ಣಮೂರ್ತಿ, ನಾಗೇಶ್, ಶಿವಮೊಗ್ಗ ಅಡುಗೆ ಸಂಘದ ಅಧ್ಯಕ್ಷ ಮಾಧವ ಮೂರ್ತಿ, ಮಧ್ವ ಮಂಡಳಿ ಅಧ್ಯಕ್ಷ ಜಯತೀರ್ಥ ಉಮೇಶ್, ಶೋಭ ಕನಕಲಕ್ಷ್ಮಿ, ಹೇಮಾ ಸೇರಿದಂತೆ ವಿಪ್ರ ಬಾಂಧವರು ಉಪಸ್ಥಿತರಿದ್ದರು.

ಪ್ರತಿಯೊಂದು ಕೆಲಸದ ಹಿಂದೆ ಕಾರ್ಮಿಕರ ಶ್ರಮವಿದೆ : ಬಿಳಿಕಿ ಶ್ರೀ

ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್, ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಭಾನುವಾರ ಭದ್ರಾವತಿ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೯: ಕಾರ್ಮಿಕರ ಶ್ರಮಕ್ಕೆ ಯಾರಿಂದಲೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಕಾರ್ಮಿಕರು ತಮ್ಮ ತಮ್ಮ ವೃತ್ತಿಗಳಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿಂದ ತೊಡಗಿಸಿಕೊಳ್ಳುವ ಜೊತೆಗೆ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಹಾಗು ಸಂಸ್ಕಾರ ನೀಡಬೇಕೆಂದು ಬಿಳಿಕಿ ಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಕರ್ನಾಟಕ ಸ್ಟೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್, ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಭಾನುವಾರ ತಾಲೂಕು ಕಛೇರಿ ರಸ್ತೆಯಲ್ಲಿರುವ ವೀರಶೈವ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕರ ದಿನಾಚರಣೆ ಹಾಗೂ ಸಾಧನ-ಸಲಕರಣೆಗಳ ವಿತರಣಾ ಕಾರ್ಯಕ್ರಮದಲ್ಲಿ  ಶ್ರೀಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
    ಕಾರ್ಮಿಕರಿಲ್ಲದ ಸಮಾಜ ಕಲ್ಪಿಸಿಕೊಳ್ಳುವುದು ಅಸಾಧ್ಯವಾಗಿದ್ದು, ಪ್ರತಿಯೊಂದು ಕೆಲಸದ ಹಿಂದೆ ಕಾರ್ಮಿಕರ ಶ್ರಮವಿದೆ. ಕಾರ್ಮಿಕರು ಶ್ರಮ ಜೀವಿಗಳಾಗಿದ್ದು, ಧರ್ಮ, ಜಾತಿ, ಪಂಥಗಳನ್ನು ಮೀರಿದವರು. ಇವರನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಬ್ಬರು ಅವಲಂಬಿಸಿಕೊಂಡಿದ್ದಾರೆ. ಇಂತಹ ಕಾರ್ಮಿಕರ ಬದುಕು ಸಹ ಉತ್ತಮಗೊಳ್ಳಬೇಕು. ಇವರು ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು. ಆಗ ಮಾತ್ರ ನಿಮ್ಮ ಶ್ರಮ ಸಾರ್ಥಕಗೊಳ್ಳುತ್ತದೆ ಎಂದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ ರಾಘವೇಂದ್ರ, ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಶ್ರಮಜೀವಿಗಳಾದ ಕಾರ್ಮಿಕರ ಸಂಕಷ್ಟಗಳಿಗೆ ಪೂರಕವಾಗಿ ಸ್ಪಂದಿಸುತ್ತಿವೆ. ಈ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳ ಕುರಿತು ಮಾಹಿತಿ ಹೊಂದುವ ಜೊತೆಗೆ ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‌ಸಿಡಬ್ಲ್ಯೂಸಿಯು ತಾಲೂಕು ಅಧ್ಯಕ್ಷ ಕೆ. ಚಂದ್ರಶೇಖರ್, ಗೌರವಾಧ್ಯಕ್ಷ ಜಿ. ಸುರೇಶ್‌ಕುಮಾರ್, ಶಿವಮೊಗ್ಗ ಶಾಖೆಯ ಗೌರವ ಸಲಹೆಗಾರ ಎಂ. ಭೂಪಾಲ್, ಶ್ರಮಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ಗೌರವ ಸಲಹೆಗಾರ ಬಿ.ಕೆ ಶ್ರೀನಾಥ್, ಉದ್ಯಮಿ ಎ. ಮಾಧು, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಸಂಜಯ್‌ಕುಮಾರ್, ಬಾಬು, ವಿಶ್ವನಾಥ್, ಸುಬ್ರಮಣಿ, ಲಕ್ಷ್ಮಣ್, ಸುಪ್ರಿಯ, ಎನ್. ಕುಮಾರ್, ಮನೋಹರ್, ಸುಂದರ್ ಬಾಬು, ಶಿವಣ್ಣಗೌಡ, ನಾಗೇಂದ್ರರೆಡ್ಡಿ, ಕೃಷ್ಣ, ವಿಜಯ್ ಸಿದ್ದಾರ್ಥ, ಕುಮಾರ್ ಹಾಗು ಶಿಕಾರಿಪುರ, ಶಿರಾಳಕೊಪ್ಪ, ಹೊಸನಗರ, ಆನವಟ್ಟಿ, ಸೊರಬ, ತಾಳಗೊಪ್ಪ, ಸಾಗರ, ತೀರ್ಥಹಳ್ಳಿ ಮತ್ತು ಹೊಳೆಹೊನ್ನೂರು ಹೋಬಳಿ ಶಾಖೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.    
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಎಸ್‌ಸಿಡಬ್ಲ್ಯೂಸಿಯು ತಾಲೂಕು ಕಾರ್ಯಾಧ್ಯಕ್ಷ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು.

ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆ ಅನಾವರಣ

ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಸಂದ ಫಲ : ಬಿ.ವೈ ರಾಘವೇಂದ್ರ

ವಿಶ್ವ ಹಿಂದೂ ಪರಿಷತ್ ವತಿಯಿಂದ ಭದ್ರಾವತಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.

    ಭದ್ರಾವತಿ, ಮೇ. ೨೯: ದೇಶದ ಇತಿಹಾಸದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ವಿಶ್ವ ಹಿಂದು ಪರಿಷತ್ ಸೇರಿದಂತೆ ಹಲವಾರು ಹಿಂದೂ ಪರ ಸಂಘಟನೆಗಳ ಹೋರಾಟಕ್ಕೆ ಇದೀಗ ಫಲ ಲಭಿಸುತ್ತಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
ಅವರು ಭಾನುವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೩೮ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಾಗೂ ಧರ್ಮಶ್ರೀ ಸಭಾಭವನ ಮಹಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 
ಹಿಂದಿನ ಇತಿಹಾಸ ಅರಿಯದವರು ಭವಿಷ್ಯದಲ್ಲಿ ಇತಿಹಾಸವನ್ನು ನಿರ್ಮಿಸಲಾರರು. ನಮ್ಮ ದೇಶದ, ನಾಡಿನ ಇತಿಹಾಸ, ಧರ್ಮ, ಸಂಸ್ಕೃತಿಯನ್ನು ನಾವುಗಳು ಅರಿತುಕೊಳ್ಳುವ ಜೊತೆಗೆ ನಮ್ಮ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡಬೇಕು. ಈ ಕಾರ್ಯದಲ್ಲಿ ವಿಶ್ವ ಹಿಂದೂ ಪರಿಷತ್ ನಿರಂತರವಾಗಿ ತೊಡಗಿಸಿಕೊಂಡು ಬಂದಿರುವುದು ಶ್ಲಾಘನೀಯ. ವಿಶ್ವ ಹಿಂದೂ ಪರಿಷತ್ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿರುವ ಹಿಂದೂ ಅಭಿಮಾನಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು. 
ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದಲ್ಲಿ ಮರೆಯಾಗಿರುವ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಇದೀಗ ಅನಾವರಣಗೊಳ್ಳುತ್ತಿದ್ದು, ಜಮ್ಮು-ಕಾಶ್ಮೀರದ ೩೭೦ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಈ ದೇಶದಲ್ಲಿ ಹಿಂದೂ ಧರ್ಮದ ನೆಲೆಗಟ್ಟಿನಲ್ಲಿ ಬದುಕುತ್ತಿರುವ ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಎಲ್ಲಾ ಧರ್ಮದವರು ಸಹ ಒಂದೇ ಎಂಬ ಭಾವನೆಯನ್ನು ಮೂಡಿಸಲಾಗಿದೆ. ಇದೀಗ ಜಮ್ಮು-ಕಾಶ್ಮೀರದಲ್ಲಿ ಮರೆಯಾಗಿದ್ದ ಹಿಂದೂ ಧರ್ಮದ ಹಲವಾರು ಸಂಸ್ಕೃತಿ, ಪರಂಪರೆ ಅನಾವರಣಗೊಳ್ಳುತ್ತಿವೆ. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ನಮ್ಮ ಹಿರಿಯರ ಬಹಳ ವರ್ಷಗಳ ಕನಸು ನನಸಾಗುತ್ತಿದೆ. ಈ ರೀತಿಯ ಕಾರ್ಯಗಳಲ್ಲಿ ಕೈಜೋಡಿಸಿಕೊಂಡು ಬರುತ್ತಿರುವ ವಿಶ್ವ ಹಿಂದೂ ಪರಿಷತ್ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡಿದೆ ಎಂದರು. 
ನಗರದಲ್ಲಿ ವಿಶ್ವ ಹಿಂದೂ ಪರಿಷತ್ ಸ್ವಂತ ನಿವೇಶನ ಹೊಂದುವ ಮೂಲಕ ಸಮುದಾಯ ಭವನ ನಿರ್ಮಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸಮಾಜದ ಎಲ್ಲರ ಸಹಕಾರದೊಂದಿಗೆ ಭವನವನ್ನು ಹಂತ ಹಂತವಾಗಿ ಅಭಿವೃದ್ಧಿಗೊಳಿಸುವ ಕಾರ್ಯ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಭವನದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವುದಾಗಿ ಭರವಸೆ ನೀಡಿದರು. 
ಶಾಸಕ ಬಿ.ಕೆ ಸಂಗಮೇಶ್ವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ವಿಶ್ವ ಹಿಂದು ಪರಿಷತ್ ಕ್ಷೇತ್ರಿಯ ಕಾರ್ಯದರ್ಶಿ ಕೇಶವ ಹೆಗ್ಡೆ, ಪ್ರಾಂತ್ಯ ಉಪಾಧ್ಯಕ್ಷ ಹಾ ರಾಮಪ್ಪ, ಜಿಲ್ಲಾಧ್ಯಕ್ಷ  ವಾಸುದೇವ ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃ ಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ಧರ್ಮಶ್ರೀ ಸಭಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ, ನಗರಸಭಾ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಸದಸ್ಯ ಆರ್. ಶ್ರೇಯಸ್, ದಾನಿ ವೇದಾವತಿ ಶಿವಮೂತಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎನ್ ಶ್ರೀಹರ್ಷ, ಆರ್. ಪೂರ್ವಚಾರ್, ವೈದ್ಯ ಡಾ. ನರೇಂದ್ರ ಭಟ್, ಡಿ.ಆರ್ ಶಿವಕುಮಾರ್, ವೈ.ಎಸ್ ರಾಮಮೂರ್ತಿ, ಮಂಜುನಾಥ ಪವಾರ್, ಎನ್. ಎಸ್ ಮಹೇಶ್ವರಪ್ಪ, ಡಾ. ಬಿ.ಜಿ ಧನಂಜಯ, ಕೆ.ಆರ್ ಸತೀಶ್, ಮಂಜುನಾಥ್ ಕದಿರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  
ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು. ಒಂದು ಜೊತೆ ಸಾಮೂಹಿಕ ವಿವಾಹ ನಡೆಯಿತು. ವೇದಬ್ರಹ್ಮ ಕೃಷ್ಣಮೂರ್ತಿ ಸೋಮಯಾಜಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. 

ದೇಶದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಪರಂಪರೆಯನ್ನು ಮರೆಮಾಚುವ ಷಡ್ಯಂತ್ರಗಳು ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ನಾವುಗಳು ಎಚ್ಚೆತ್ತುಕೊಂಡು ನಮ್ಮ ಪೂರ್ವಿಜರ ಹಿಂದಿನ ಇತಿಹಾಸ, ಸಂಸ್ಕೃತಿ, ಪರಂಪರೆ ಅರಿತುಕೊಳ್ಳುವ ಅಗತ್ಯವಿದೆ. ಈ ಮೂಲಕ ನಮ್ಮ ಹೋರಾಟ ಮುಂದುವರೆಸಬೇಕಾದ ಅನಿರ್ವಾಯತೆ ಇದೀಗ ನಿರ್ಮಾಣಗೊಂಡಿದೆ.
                                                                        - ಬಿ.ವೈ ರಾಘವೇಂದ್ರ, ಸಂಸದರು, ಶಿವಮೊಗ್ಗ