Friday, June 10, 2022

ಗಾಲಿ ಕುರ್ಚಿ, ಪ್ರೋಟಿನ್ ಪೌಂಡರ್ ವಿತರಣೆ ಕಾರ್ಯಕ್ರಮ

ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಚಾಲನೆ

ಭದ್ರಾವತಿ, ಜೂ. ೧೦: ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.
ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್‌ಬಾಬು, ತಾಲೂಕು ಅಧ್ಯಕ್ಷ ಚಂದ್ರಶೇಖರ್, ಗೌರವಾಧ್ಯಕ್ಷ ಸುರೇಶ್‌ಕುಮಾರ್, ಕಾರ್ಯಾಧ್ಯಕ್ಷ ಅಭಿಲಾಷ್, ಮನೋಹರ್, ಶಿವಣ್ಣಗೌಡ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ರಾಜೇಶ್ವರಿ, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಪುಷ್ಪ, ಕವಿತಾ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ಯುವ ಘಟಕದ ಅಧ್ಯಕ್ಷ ವಿಜಯ್ ಸಾರಥಿ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಮನಾಥ್ ಬರ್ಗೆ, ಪಿ. ಗಣೇಶ್‌ರಾವ್, ವಾಹನ ದುರಸ್ತಿಗಾರರ ಸಂಘದ ಅಧ್ಯಕ್ಷ ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಓರ್ವ ಫಲಾನುಭವಿಗೆ ಗಾಲಿ ಕುರ್ಚಿ ಹಾಗು ಸುಮಾರು ೫ ಮಂದಿ ಕ್ಷಯಾ ರೋಗ ಪೀಡಿತರಿಗೆ ಸುಮಾರು ೬ ತಿಂಗಳಿಗೆ ಅಗತ್ಯವಿರುವಷ್ಟು ಪ್ರೋಟಿನ್ ಪೌಂಡರ್ ಹಾಗು ಮೊಟ್ಟೆ ಉಚಿತವಾಗಿ ವಿತರಿಸಲಾಯಿತು.


ಭದ್ರಾವತಿಯಲ್ಲಿ ಕರ್ನಾಟಕ ಸ್ಟ್ರೇಟ್ ಕನ್‌ಸ್ಟ್ರಕ್ಷನ್ ವರ್ಕರ್‍ಸ್ ಸೆಂಟ್ರಲ್ ಯೂನಿಯನ್ ಹಾಗು ಶ್ರಮ ಶಕ್ತಿ ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಶುಕ್ರವಾರ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಗಾಲಿ ಕುರ್ಚಿ ಹಾಗು ಪ್ರೋಟಿನ್ ಪೌಂಡರ್ ಮತ್ತು ಮೊಟ್ಟೆ ವಿತರಣೆ ನಡೆಯಿತು.


Thursday, June 9, 2022

ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ

ನೂತನ ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕ


ನೂತನವಾಗಿ ಭದ್ರಾವತಿ ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕಗೊಂಡಿದ್ದಾರೆ.
    ಭದ್ರಾವತಿ, ಜೂ. ೯: ನೂತನವಾಗಿ ಭದ್ರಾವತಿ ತಾಲೂಕು ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ದೇವಿಕಾ ನಾಗರಾಜ್ ನೇಮಕಗೊಂಡಿದ್ದಾರೆ.
    ಅಖಿಲ ಕರ್ನಾಟಕ ಬ್ಯೂಟಿಷಿಯನ್ ಅಸೋಸಿಯೇಷನ್ ರಾಜ್ಯಾಧ್ಯಕ್ಷೆ ನಾಗವೇಣಿಯವರ ಅಧ್ಯಕ್ಷತೆಯಲ್ಲಿ ನಗರದ ಅಪ್ಪರ್‌ಹುತ್ತಾ ಶ್ರೀ ಕೆಂಪೇಗೌಡ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ನೂತನ ಪದಾಧಿಕಾರಿಗಳು ನೇಮಕಗೊಂಡಿದ್ದಾರೆ.
    ಗೌರವಾಧ್ಯಕ್ಷರಾಗಿ ಪದ್ಮಾವತಿ, ಉಪಾಧ್ಯಕ್ಷರಾಗಿ ಆರತಿ ಸಿಂಗ್, ಪ್ರಧಾನ ಕಾರ್ಯದರ್ಶಿಯಾಗಿ ಕವಿತಾ ನವೀನ್, ಸಹಕಾರ್ಯದರ್ಶಿಯಾಗಿ ಸುಮಿತ್ರ ಶ್ರೀನಿವಾಸ್, ಖಜಾಂಚಿಯಾಗಿ ಭಾರತಿ ಹಾಗು ಚೈತನ್ಯ ನವೀನ್ ಮತ್ತು ನಿರ್ದೇಶಕರಾಗಿ ಪ್ರೇಮ ಶ್ರೀನಿವಾಸ್, ವೀಣಾ, ತಬಿತ, ರೋಜಾ, ಪವಿತ್ರ, ಆಶಾ, ಸೋನಿ, ಜಾನ್ಸಿ, ಶ್ರೀಲಕ್ಷ್ಮಿ, ಎಸ್. ರೂಪಾ, ಮಾಧುರಿ ಮತ್ತು ಕಮಲ ನೇಮಕಗೊಂಡಿದ್ದಾರೆ.

ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ಗೆ ಚಿನ್ನದ ಪದಕ

೩ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್‌ರವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 
    ಭದ್ರಾವತಿ, ಜೂ. ೯: ೩ನೇ ಅಂತರಾಷ್ಟ್ರೀಯ ಯೋಗಾಸನ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ನಗರದ ವಿವೇಕಾನಂದ ಯೋಗ ಟ್ರಸ್ಟ್‌ನ ಡಿ. ನಾಗರಾಜ್‌ರವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
    ೮ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬೆಂಗಳೂರಿನ ಬಸವನಗುಡಿಯ ಬಿ.ಎಂ.ಎಸ್ ಇಂಜನಿಯರಿಂಗ್ ಕಾಲೇಜಿನಲ್ಲಿ ಯೋಗ ಗಂಗೋತ್ರಿ ವತಿಯಿಂದ ಆಯೋಜಿಸಲಾಗಿದ್ದ ಪಂದ್ಯಾವಳಿಯಲ್ಲಿ ೬೦ ವರ್ಷ ಮೇಲ್ಪಟ್ಟವರ ವಿಭಾಗದ ಯೋಗ ಸ್ಪರ್ಧೆಯಲ್ಲಿ ಡಿ. ನಾಗರಾಜ್‌ರವರು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
    ಕರ್ನಾಟಕ ಯೋಗ ಸಂಸ್ಥೆ ಕಾರ್ಯದರ್ಶಿ ಡಿ. ಪುಟ್ಟೇಗೌಡ ಹಾಗು ಕ್ರೀಡಾಭಿಮಾನಿಗಳು ನಾಗರಾಜ್‌ರವರನ್ನು ಅಭಿನಂದಿಸಿದ್ದಾರೆ.

ಫಸ್ಟ್ ಸ್ಟೆಫ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಣೆ

ಭದ್ರಾವತಿ ತಾಲೂಕಿನ ಅರಳಿಹಳ್ಳಿಯಲ್ಲಿರುವ ಶ್ರೀ ಸತ್ಯನಾರಾಯಣ ಎಜ್ಯುಕೇಷನ್ ಟ್ರಸ್ಟ್‌ನ ಫಸ್ಟ್ ಸ್ಟೆಫ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
    ಭದ್ರಾವತಿ, ಜೂ. ೯: ತಾಲೂಕಿನ ಅರಳಿಹಳ್ಳಿಯಲ್ಲಿರುವ ಶ್ರೀ ಸತ್ಯನಾರಾಯಣ ಎಜ್ಯುಕೇಷನ್ ಟ್ರಸ್ಟ್‌ನ ಫಸ್ಟ್ ಸ್ಟೆಫ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
    ಈ ಹಿಂದೆ ಹೊಸಮನೆ ಮುಖ್ಯ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಫಸ್ಟ್ ಸ್ಟೆಫ್ ಪೂರ್ವ ಪ್ರಾಥಮಿಕ ಶಾಲೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದು, ಶಾಲಾ ಮುಂಭಾಗದಲ್ಲಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಲಾಯಿತು.
    ಪ್ರಗತಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರು, ಶ್ರೀ ಸತ್ಯನಾರಾಯಣ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷರು, ಶಾಲೆಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗು ಮಕ್ಕಳು ಉಪಸ್ಥಿತರಿದ್ದರು.


ವಿಇಎಸ್ ವಿದ್ಯಾಸಂಸ್ಥೆ ಪದನಿಮಿತ್ತ ಅಧ್ಯಕ್ಷರಾಗಿ ಬಿ. ಸಿದ್ದಬಸಪ್ಪ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಸಿದ್ದಬಸಪ್ಪ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜೂ. ೯: ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯ ಪದನಿಮಿತ್ತ ಅಧ್ಯಕ್ಷರಾಗಿ ಬಿ. ಸಿದ್ದಬಸಪ್ಪ ಆಯ್ಕೆಯಾಗಿದ್ದಾರೆ.
    ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಬೈಲಾ ಸಮಗ್ರ ತಿದ್ದುಪಡಿಯಾದ ಹಿನ್ನಲೆಯಲ್ಲಿ ಗೌರವಾಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಾಕ್ಷರಿ, ಅಧ್ಯಕ್ಷರಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ, ಉಪಾಧ್ಯಕ್ಷರಾಗಿ ಡಿ. ನಾಗರತ್ನ, ಕಾರ್ಯದರ್ಶಿಯಾಗಿ ಡಿ.ಎಸ್ ರಾಜಪ್ಪ ಹಾಗು ಖಜಾಂಚಿಯಾಗಿ ಎಸ್.ಕೆ ಮೋಹನ್ ಮತ್ತು ಕಾರ್ಯಾಧ್ಯಕ್ಷರಾಗಿ ಬಿ.ಎಲ್ ರಂಗಸ್ವಾಮಿ ಆಯ್ಕೆಯಾಗಿದ್ದಾರೆ.
    ಉಳಿದಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಚುನಾಯಿತ ನಿರ್ದೇಶಕರು, ವಿದ್ಯಾಸಂಸ್ಥೆಯ ಅಜೀವ ಸದಸ್ಯ/ಕಾಯಂ ಸದಸ್ಯರು ಪದನಿಮಿತ್ತ ನಿರ್ದೇಶಕರುಗಳಾಗಿದ್ದಾರೆ.

ಪ್ರೊ. ಬಿ. ಕೃಷ್ಣಪ್ಪ ಶೋಷಿತರು, ದಲಿತರ ಆಶಾಕಿರಣ : ಸತ್ಯ ಭದ್ರಾವತಿ

ಭದ್ರಾವತಿ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಡಿಎಸ್‌ಎಸ್ ಕಛೇರಿಯಲ್ಲಿ ಗುರುವಾರ  ಪ್ರೊ. ಬಿ. ಕೃಷ್ಣಪ್ಪನವರ ೮೪ನೇ ಜನ್ಮದಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಜೂ. ೯: ಪ್ರೊ. ಬಿ. ಕೃಷ್ಣಪ್ಪನವರು ಹಲವಾರು ಚಳುವಳಿಗಳನ್ನು ನಡೆಸಿ ಶೋಷಿತರು, ದಲಿತರಿಗೆ ನ್ಯಾಯ ಒದಗಿಸಿಕೊಡುವ ಮೂಲಕ ಆಶಾಕಿರಣವಾಗಿದ್ದರು. ಇವರ ಹೋರಾಟ ಇಂದಿಗೂ ನಮ್ಮೆಲ್ಲರೂ ಸ್ಪೂರ್ತಿದಾಯಕವಾಗಿದೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಭದ್ರಾವತಿ ಹೇಳಿದರು.
    ಅವರು ಗುರುವಾರ ನಗರದ ರಂಗಪ್ಪ ವೃತ್ತ ಸಮೀಪದ ಜೈಭೀಮಾ ನಗರದಲ್ಲಿರುವ ಡಿಎಸ್‌ಎಸ್ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರೊ. ಬಿ. ಕೃಷ್ಣಪ್ಪನವರ ೮೪ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಚಿತ್ರದುರ್ಗ ಜಿಲ್ಲೆಯ ಹರಿಹರದಲ್ಲಿ ಶೋಷಿತ ಕುಟುಂಬದಲ್ಲಿ ೯ ಜೂನ್ ೧೯೩೮ರಲ್ಲಿ ಜನಿಸಿದ ಪ್ರೊ. ಬಿ. ಕೃಷ್ಣಪ್ಪನವರು ಶ್ರಮದ ಬದುಕಿನೊಂದಿಗೆ ಶಿಕ್ಷಣ ಪಡೆದವರು. ಸಮಾಜದಲ್ಲಿನ ಜಾತಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು ಶೋಷಿತರು, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಚಳುವಳಿಗಳನ್ನು ರೂಪಿಸಿದರು. ಅವರು ನಗರದಲ್ಲಿ ೧೯೭೪ರಲ್ಲಿ ಚಳುವಳಿ ಕಟ್ಟುವ ಮೂಲಕ ಅದನ್ನು ೧೯೭೫ರಲ್ಲಿ ನೋಂದಾಯಿಸಿದರು. ಮೊದಲ ಬಾರಿಗೆ ತಾಲೂಕಿನ ಅರಕೆರೆ ಗ್ರಾಮದಲ್ಲಿ ಪತ್ರೆ ಸಂಗಪ್ಪ ಎಂಬುವರ ಕಗ್ಗೊಲೆ ಖಂಡಿಸಿ ನಡೆಸಿದ ಹೋರಾಟ ಯಶಸ್ವಿಯಾಗುವ ಜೊತೆಗೆ ನ್ಯಾಯ ಲಭಿಸುವಂತಾಯಿತು. ಈ ಹೋರಾಟ ಮುಂದಿನ ಹೋರಾಟಗಳಿಗೆ ಮತ್ತಷ್ಟು ಸ್ಪೂರ್ತಿಯನ್ನು ತಂದು ಕೊಟ್ಟಿತು ಎಂದರು.
    ಕೃಷ್ಣಪ್ಪನವರು ೧೯೭೮ರಲ್ಲಿ ತಾಲೂಕು ಕಛೇರಿ ಮುಂಭಾಗ ಸುಮಾರು ಒಂದೂವರೆ ವರ್ಷ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಎಸ್.ಸಿ/ಎಸ್.ಟಿ ಭೂ ಪರಭಾರೆ ನಿಷೇಧ ಕಾಯ್ದೆ(ಪಿಟಿಸಿಎಲ್ ಕಾಯ್ದೆ) ಜಾರಿಗೆ ಬರುವ ಮೂಲಕ ಈ ಕಾಯ್ದೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಅನುಷ್ಠಾನ ಗೊಳ್ಳುವಂತಾಯಿತು. ಇದು ಕೃಷ್ಣಪ್ಪನವರ ಹೋರಾಟಕ್ಕೆ ಲಭಿಸಿದ ಬಹುದೊಡ್ಡ ಗೆಲುವು. ನಂತರದ ದಿನಗಳಲ್ಲಿ ಅವರು ರಾಜ್ಯಾದಾದ್ಯಂತ ಹಲವಾರು ಹೋರಾಟಗಳನ್ನು ನಡೆಸಿದ್ದು, ಈ ಪೈಕಿ ಭೂಸ ಚಳುವಳಿ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣದ ವಿರುದ್ಧ ನಡೆಸಿದ ಹೋರಾಟ, ಶೋಷಿತ ಸಮುದಾಯದ ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸುವ ಚಂದ್ರಗುತ್ತಿಯ ಬೆತ್ತಲೆ ಸೇವೆಯ ವಿರುದ್ಧ ನಡೆಸಿದ ಹೋರಾಟ ಪ್ರಮುಖವಾಗಿವೆ ಎಂದರು.
ಕೃಷ್ಣಪ್ಪನವರು ಕೇವಲ ಹೋರಾಟಕ್ಕೆ ಸೀಮಿತವಾಗಿರದೆ ರಾಜಕೀಯವಾಗಿ ಸಹ ಅಸ್ತಿತ್ವ ಕಂಡು ಕೊಳ್ಳುವ ನಿಟ್ಟಿನಲ್ಲಿ ಮುಂದಾಗಿದ್ದರು. ಈ ನಿಟ್ಟಿನಲ್ಲೂ ಅವರು ನಡೆಸಿದ ಪ್ರಯತ್ನ ಸ್ವಲ್ಪಮಟ್ಟಿಗೆ ಯಶಸ್ವಿಯಾಯಿತು. ೧೯೯೨-೯೩ರ ಅವಧಿಯಲ್ಲಿ ರಾಜ್ಯದಲ್ಲಿ ಬಿಎಸ್‌ಪಿ ಪಕ್ಷವನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೋರಾಟದಲ್ಲಿಯೇ ತಮ್ಮ ಬದುಕನ್ನು ಕೊನೆಕೊಳಿಸಿದರು. ಕೃಷ್ಣಪ್ಪನವರು ಚಳುವಳಿಯನ್ನು ಆರಂಭಿಸಿದ ಸ್ಥಳದಲ್ಲಿಯೇ ಅವರ ಜನ್ಮದಿನ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಅವರ ಹೋರಾಟಗಳು, ಆದರ್ಶತನಗಳು ನಮ್ಮೆಲ್ಲರಿಗೂ ಸ್ಪೂರ್ತಿದಾಯಕವಾಗಿವೆ ಎಂದರು.
    ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಪ್ರೊ. ಬಿ. ಕೃಷ್ಣಪ್ಪನವರು ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಆಶಯದಂತೆ ಶಿಕ್ಷಣ, ಹೋರಾಟ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಶೋಷಿತರು, ದಲಿತರರ ಪರವಾದ ಧ್ವನಿಯಾಗಿದ್ದರು. ಇವರ ದಾರಿಯಲ್ಲಿ ನಾವೆಲ್ಲರೂ ಸಾಗುವಂತಾಗಬೇಕಾಗಿದೆ ಎಂದರು.
    ತಾಲೂಕು ಸಂಚಾಲಕ ಕೆ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘಟನಾ ಸಂಚಾಲಕ ಈಶ್ವರಪ್ಪ, ಜಿಲ್ಲಾ ಸಮಿತಿ ಸದಸ್ಯ ವಿ. ವಿನೋದ್, ರಾಜ್ಯ ಸಂಘಟನಾ ಸಂಚಾಲಕಿ ಶಾಂತಿ, ಏಳುಮಲೈ, ಶ್ರೀಧರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, June 8, 2022

ಪ್ರಚೋದನಾಕಾರಿ ಹೇಳಿಕೆ ಮುತಾಲಿಕ್ ವಿರುದ್ಧ ದೂರು

ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ನೇತೃತ್ವದಲ್ಲಿ ಬುಧವಾರ ಭದ್ರಾವತಿಯಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. 
    ಭದ್ರಾವತಿ, ಜೂ. ೮: ಪ್ರಚೋದನಾಕಾರಿ ಹೇಳಿಕೆ ನೀಡಿರುವ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ರಾಜ್ಯ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ನೇತೃತ್ವದಲ್ಲಿ ಬುಧವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.
    ಅಜಾನ್ ಧ್ವನಿವರ್ಧಕ ತಡೆಯೊಡ್ಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮೋದ್ ಮುತಾಲಿಕ್‌ರವರು ನೀಡಿರುವ ಪ್ರಚೋದನಾಕಾರಿ ಹೇಳಿಕೆಯಿಂದ ಸಮಾಜದಲ್ಲಿ ಆಶಾಂತಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ನಗರ ಪೊಲೀಸ್ ವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಅವರಿಗೆ  ದೂರು ಸಲ್ಲಿಸಲಾಯಿತು.  ರಾಜ್ಯ ಯುವ ಕಾಂಗ್ರೆಸ್ ಸಮಿತಿ ವಕ್ತಾರ ಆಮೋಸ್ ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರಾದ ಅಫ್ತಾಬ್ ಅಹಮದ್, ಉಪಾಧ್ಯಕ್ಷ ತಬ್ರೇಜ್‌ಖಾನ್, ಮುಖಂಡರಾದ ಸಯ್ಯದ್ ಮುಬಾರಕ್, ಫೈಜಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.