Wednesday, June 15, 2022

ಜೂ.೧೮ರಂದು ವದಿಯೂರು ಗ್ರಾಮದಲ್ಲಿ ವಿದ್ಯುತ್ ಅದಾಲತ್

    ಭದ್ರಾವತಿ, ಜೂ. ೧೫: ಮೆಸ್ಕಾಂ ವತಿಯಿಂದ ಗ್ರಾಮೀಣ ಪ್ರದೇಶದಲ್ಲಿನ ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕಾಗಿ ವಿದ್ಯುತ್ ಅದಾಲತ್ ನಡೆಸಲು ಉದ್ದೇಶಿಸಿದ್ದು, ಜೂ.೧೮ರಂದು ಬೆಳಿಗ್ಗೆ ೧೦.೩೦ಕ್ಕೆ ಗ್ರಾಮಾಂತರ ಉಪವಿಭಾಗ ಘಟಕ-೨, ಬಿ.ಆರ್.ಪಿ ಶಾಖೆಯಲ್ಲಿನ ಸಿಂಗನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವದಿಯೂರು ಗ್ರಾಮದಲ್ಲಿ ವಿದ್ಯುತ್ ಅದಾಲತ್ ನಡೆಯಲಿದೆ.
    ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಅದಾಲತ್‌ನಲ್ಲಿ ಭಾಗವಹಿಸಿ ವಿದ್ಯುತ್ ಸಮಸ್ಯೆಗಳ ಬಗ್ಗೆ ಅಹವಾಲುಗಳಿದ್ದಲ್ಲಿ ಪರಿಹರಿಸಿಕೊಳ್ಳಲು ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರು ಕೋರಿದ್ದಾರೆ.

ಮಕ್ಕಳಲ್ಲಿನ ಕೌಶಲ್ಯಗಳನ್ನು ಗುರುತಿಸಲು ಪೂರ್ವ ಪ್ರಾಥಮಿಕ ಶಾಲೆಗಳು ಸಹಕಾರಿ : ಸಚಿವ ಬಿ.ಸಿ ನಾಗೇಶ್

ಭದ್ರಾವತಿ ಸಿದ್ದರೂಢನಗರದ ಶಂಕರಮಠ ಸಮೀಪದಲ್ಲಿ ಎಚ್.ಎಸ್ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್, ಶಂಕರ್ ಸಾ ಮಿಲ್, ಶೃಶಿ ಕ್ಲಾಮ್ಸ್ ಮತ್ತು ಸಂಸ್ಥಾನ ಪ್ರಾಪರ್ಟಿ ಗ್ರೂಪ್ಸ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಯುರೋ ಕಿಡ್ಸ್ ಶಾಲೆಯ ಕಟ್ಟಡವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್ ಉದ್ಘಾಟಿಸಿದರು.
    ಭದ್ರಾವತಿ, ಜೂ. ೧೫: ಪೂರ್ವ ಪ್ರಾಥಮಿಕ ಶಾಲೆಗಳು ಮಕ್ಕಳಲ್ಲಿನ ಕೌಶಲ್ಯಗಳನ್ನು ಗುರುತಿಸಲು ಸಹಕಾರಿಯಾಗಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್ ಹೇಳಿದರು.
    ಅವರು ಬುಧವಾರ ಸಿದ್ದರೂಢನಗರದ ಶಂಕರಮಠ ಸಮೀಪದಲ್ಲಿ ಎಚ್.ಎಸ್ ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್, ಶಂಕರ್ ಸಾ ಮಿಲ್, ಶೃಶಿ ಕ್ಲಾಮ್ಸ್ ಮತ್ತು ಸಂಸ್ಥಾನ ಪ್ರಾಪರ್ಟಿ ಗ್ರೂಪ್ಸ್ ವತಿಯಿಂದ ನೂತನವಾಗಿ ನಿರ್ಮಿಸಲಾಗಿರುವ ಯುರೋ ಕಿಡ್ಸ್ ಶಾಲೆಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
    ಮಕ್ಕಳು ತಾಯಿಯ ಗರ್ಭದಲ್ಲಿರುವಾಗಲೇ ಜ್ಞಾನದ ಕೌಶಲ್ಯಗಳನ್ನು ಹೊಂದಿರುತ್ತವೆ ಎಂಬುದನ್ನು ಮಹಾಭಾರತ ಸೇರಿದಂತೆ ಹಲವು ಪುರಾಣ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಆದರೆ ನಾವುಗಳು ಇವುಗಳ ಮೇಲೆ ನಂಬಿಕೆ ಹೊಂದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಪುರಾಣ ಗ್ರಂಥಗಳಲ್ಲಿ ಉಲ್ಲೇಖವಾಗಿರುವುದು ದೃಢವಾಗುತ್ತಿದೆ. ಚಿಕ್ಕಮಕ್ಕಳಲ್ಲಿನ ಕೌಶಲ್ಯಗಳನ್ನು ಸಹ ಗುರುತಿಸಬೇಕೆಂಬ ಮನೋಭಾವನೆ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳು ಹೆಚ್ಚು ಸಹಕಾರಿಯಾಗಿವೆ. ಮಕ್ಕಳ ಉತ್ತಮ ಶಿಕ್ಷಣಕ್ಕೆ ಪೂರಕವಾದ ಕಲಿಕೆಗಳು ಈ ಶಾಲೆಗಳಲ್ಲಿ ನಡೆಯುವಂತಾಗಬೇಕು. ಹೊಸ ಶಿಕ್ಷಣ ನೀತಿಯ ಉದ್ದೇಶ ಸಹ ಇದೆ ಆಗಿದೆ ಎಂದರು.
    ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸೂಡಾ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿಪ್ರಕಾಶ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ನಗರಸಭಾ ಸದಸ್ಯರಾದ ಬಿ.ಕೆ ಮೋಹನ್, ಆರ್. ಶ್ರೇಯಸ್(ಚಿಟ್ಟೆ), ಶಾಲೆಯ ಅಧ್ಯಕ್ಷ ಎಚ್.ಎಸ್ ಶಂಕರ್, ಕಾರ್ಯದರ್ಶಿ ಆರ್. ದೀಪ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಚಿವರು ಶಾಲಾ ಮಕ್ಕಳಿಗೆ ಬ್ಯಾಗ್‌ಗಳನ್ನು ವಿತರಿಸಿದರು. ಅಲ್ಲದೆ ಒಂದೂವರೆ ವರ್ಷವಿರುವಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ದಿಶಾಂಕ್ ಮಲ್ಲಿಕಾರ್ಜುನ ಪುಟಾಣಿ ಮಗುವನ್ನು ಸನ್ಮಾನಿಸಿ ಗೌರವಿಸಿದರು.


ಒಂದೂವರೆ ವರ್ಷವಿರುವಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ದಿಶಾಂಕ್ ಮಲ್ಲಿಕಾರ್ಜುನ ಪುಟಾಣಿ ಮಗುವನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ಬಿ.ಸಿ ನಾಗೇಶ್ ಸನ್ಮಾನಿಸಿ ಗೌರವಿಸಿದರು.

ವಿಇಎಸ್ ವಿದ್ಯಾಸಂಸ್ಥೆಗೆ ಶಿಕ್ಷಣ ಸಚಿವರ ಭೇಟಿ : ಸನ್ಮಾನ

ಭದ್ರಾವತಿ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬುಧವಾರ ಭೇಟಿ ನೀಡಿದರು. ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸುವ ಜೊತೆಗೆ ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಜೂ. ೧೫: ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಗೆ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬುಧವಾರ ಭೇಟಿ ನೀಡಿದರು.  ವಿದ್ಯಾ ಸಂಸ್ಥೆ ಆಡಳಿತ ಮಂಡಳಿ ವತಿಯಿಂದ ಸಚಿವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.
    ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಎಸ್ ಜ್ಯೋತಿ ಪ್ರಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ, ವಿದ್ಯಾಸಂಸ್ಥೆ ಪದನಿಮಿತ್ತ ಅಧ್ಯಕ್ಷ ಬಿ. ಸಿದ್ದಬಸಪ್ಪ, ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ,  ಉಪಾಧ್ಯಕ್ಷೆ ಡಿ. ನಾಗರತ್ನ, ಕಾರ್ಯದರ್ಶಿ ಡಿ.ಎಸ್ ರಾಜಪ್ಪ , ಖಜಾಂಚಿ ಎಸ್.ಕೆ ಮೋಹನ್,   ಕಾರ್ಯಾಧ್ಯಕ್ಷರಾಗಿ ಬಿ.ಎಲ್ ರಂಗಸ್ವಾಮಿ, ಗೌರವಧ್ಯಕ್ಷ ರಂಗನಾಥ ಪ್ರಸಾದ್, ಬಸವಂತರಾವ್ ದಾಳೆ, ಯು ಮಹಾದೇವಪ್ಪ, ರೇವಣಪ್ಪ, ಎ. ತಿಪ್ಪೇಸ್ವಾಮಿ, ಆಡಳಿತಾಧಿಕಾರಿ ರಾಕೇಶ್, ದೈಹಿಕ ಶಿಕ್ಷಕ ಶಿವಲಿಂಗೇಗೌಡ, ತಾಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕರು, ಪಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು  ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು. ಸಚಿವರನ್ನು ವಿದ್ಯಾಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೇಂದ್ರ, ರಾಜ್ಯ ಸರ್ಕಾರಗಳಿಂದ ಹಲವು ಯೋಜನೆಗಳು : ಸಚಿವ ಬಿ.ಸಿ ನಾಗೇಶ್

ಭದ್ರಾವತಿ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಸಿಂಚನ ಮತ್ತು ವಿದ್ಯಾಶ್ರೀ ಅವರನ್ನು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಬುಧವಾರ ಸನ್ಮಾನಿಸಿ ಗೌರವಿಸಿದರು.
    ಭದ್ರಾವತಿ, ಜೂ. ೧೫ : ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಇದರ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸ್ವಾಭಿಮಾನಿ, ಸ್ವಾವಲಂಬಿ ಬದುಕಿಗೆ ಪೂರಕವಾದ ಶಿಕ್ಷಣ ಪಡೆದುಕೊಳ್ಳಬೇಕೆಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದರು.
    ಅವರು ಬುಧವಾರ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ಭೇಟಿ ನೀಡಿ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಮಾತನಾಡಿದರು.
    ಈ ಹಿಂದೆ ಶಾಲೆಗಳಲ್ಲಿ ಶೌಚಾಲಯ, ಕೊಠಡಿಗಳ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಹೆಣ್ಣು ಮಕ್ಕಳು ಶಾಲೆಗಳಿಗೆ ಬರಲು ಹಿಂದೇಟು ಹಾಕುತ್ತಿದ್ದರು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ರೂಪಿಸಿವೆ. ಈ ಯೋಜನೆಗಳು ಎಲ್ಲಾ ಸರ್ಕಾರಿ ಶಾಲೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
    ಸರ್ಕಾರಿ ಶಾಲೆಗಳಲ್ಲಿ ಪರಿಣಿತ ಶಿಕ್ಷಕರಿದ್ದು, ಗುಣಮಟ್ಟದ ಶಿಕ್ಷಣ ನೀಡಲು ಹಗಲಿರಳು ಶ್ರಮಿಸುತ್ತಿದ್ದಾರೆ. ಸ್ವಾವಲಂಬ, ಸ್ವಾಭಿಮಾನಿ ಬದುಕಿಗೆ ಪೂರಕವಾದ ಶಿಕ್ಷಣ ಪಡೆದುಕೊಳ್ಳುವಂತಾಗಬೇಕು. ಕಲಿಕೆಯಲ್ಲಿ ಯಾವುದೇ ರೀತಿಯ ಸಂಕೋಚವಿರಬಾರದು. ಯಾವುದೇ ರೀತಿಯ ಅನುಮಾನಗಳಿದ್ದರೂ ಸಹ ಶಿಕ್ಷಕರಿಂದ ಕೇಳಿ ತಿಳಿದುಕೊಳ್ಳಬೇಕು. ಶಿಕ್ಷಣಕ್ಕೆ ಹೆಚ್ಚಿನ ಗಮನ ಹರಿಸಬೇಕು. ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿನಿಯರು ಸಹ ಹೆಚ್ಚಿನ ಅಂಕಗಳನ್ನು ಪಡೆಯಲು ಪ್ರಯತ್ನಿಸಬೇಕೆಂದರು.
    ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ಸಿಂಚನ ಮತ್ತು ವಿದ್ಯಾಶ್ರೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಕಾಲೇಜಿನ ಉಪಪ್ರಾಚಾರ್ಯರಾದ ಟಿ.ಎಸ್ ಸುಮನ ಅಧ್ಯಕ್ಷತೆ ವಹಿಸಿದ್ದರು. ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಹಾಗು ಕಾಲೇಜಿನ ಪ್ರೌಢಶಾಲಾ ವಿಭಾಗದ  ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tuesday, June 14, 2022

ವಿಐಎಸ್‌ಎಲ್ ಕಾರ್ಖಾನೆ ವತಿಯಿಂದ ವಿಶಿಷ್ಟವಾಗಿ ಪರಿಸರ ದಿನ ಆಚರಣೆ

ಸುಮಾರು ೬೨೫ ಸಸಿಗಳನ್ನು ವಿತರಿಸಿ ನೆಡಲು ಪ್ರೋತ್ಸಾಹ

    ಭದ್ರಾವತಿ, ಜೂ. ೧೪ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ, ಸೈಲ್ ಸ್ವರ್ಣ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು.
    ತಹಸೀಲ್ದಾರ್ ಆರ್. ಪ್ರದೀಪ್, ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಾಮ, ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್, ನಗರಸಭೆ ಪೌರಾಯುಕ್ತ ಮನುಕುಮಾರ್, ವಲಯ ಅರಣ್ಯಾಧಿಕಾರಿ ಕೆ.ಆರ್ ರಾಜೇಶ್ ಮತ್ತು ಮನೋವೈದ್ಯ ಡಾ. ಹರೀಶ ದೇಲಂತಬೆಟ್ಟು ಸೇರಿದಂತೆ ನಗರದ ವಿವಿಧ ಗಣ್ಯರನ್ನು ಆಹ್ವಾನಿಸುವ ಜೊತೆಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಸುರಜಿತ್ ಮಿಶ್ರ,  ಮುಖ್ಯ ಮಹಾವ್ಯವಸ್ಥಾಪಕ(ಕಾಯಾಚರಣೆ) ಕೆ.ಎಸ್ ಸುರೇಶ್, ಪ್ರಭಾರಿ ಮುಖ್ಯ ವ್ಯವಸ್ಥಾಪಕರ (ಸಿಬ್ಬಂದಿ ಮತ್ತು ಆಡಳಿತ) ಪಿ.ಪಿ ಚಕ್ರವರ್ತಿ, ಮುಖ್ಯ ವ್ಯವಸ್ಥಾಪಕರು(ನಗರಾಡಳಿತ) ಮೋಹನ್‌ರಾಜ್ ಶೆಟ್ಟಿ, ಮುಖ್ಯ ವ್ಯವಸ್ಥಾಪಕ(ಪರಿಸರ ನಿರ್ವಹಣೆ ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗ) ಡಿ. ಲೋಕೇಶ್ವರ್, ಮುಖ್ಯ ವ್ಯವಸ್ಥಾಪಕ(ಸಿಬ್ಬಂದಿ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್ ಹಾಗು ಸಹಾಯಕ ಮುಖ್ಯ ವ್ಯವಸ್ಥಾಪಕ(ನಗರಾಡಳಿತ ಮತ್ತು ಅಗ್ನಿಶಾಮಕ ಸೇವೆಗಳು) ಉಮೇಶ್ ಮಧುಕರ್ ಉಕೆ ಸೇರಿದಂತೆ ಇನ್ನಿತರರು ಒಟ್ಟು ಸುಮಾರು ೫೦ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
    ಅಲ್ಲದೆ ಹಲಸು, ಮಾವು, ಜಾಮೂನ್, ಪೇರಲ, ಹೊಂಗೆ, ಬಿಲ್ವ, ನುಗ್ಗೆ, ಬೇವು, ಶ್ರೀಗಂಧ, ರಕ್ತಚಂದನ, ಕರಿಬೇವು, ನಿಂಬೆ, ಕಿತ್ತಳೆ, ಬೆಟ್ಟದ ನೆಲ್ಲಿಕಾಯಿ, ಬಿದಿರು ಇತ್ಯಾದಿ ಸುಮಾರು ೬೨೫ ಸಸಿಗಳನ್ನು ವಿತರಿಸಲಾಯಿತು.
     ವಿಐಎಸ್‌ಎಲ್ ಟೆನ್ನಿಸ್ ಕ್ಲಬ್ ಮತು ಸಹಕಾರಿ ಬ್ಯಾಂಕ್‌ಗೆ ೨೮ ಸಸಿಗಳನ್ನು, ವಿಐಎಸ್‌ಎಲ್ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ೨೨೫ ಸಸಿಗಳನ್ನು, ಶ್ರೀ ಆದಿಚುಂಚನಗಿರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ೪೦ ಸಸಿಗಳನ್ನು, ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಗೆ ೪೦ ಸಸಿಗಳನ್ನು ಹಾಗು ವಿಐಎಸ್‌ಎಲ್ ನಗರಾಡಳಿತ ಇಲಾಖೆಗೆ ೨೩೨ ಸಸಿಗಳನ್ನು ವಿತರಿಸಿ ಸಸಿಗಳನ್ನು ನೆಡುವ ಮೂಲಕ ಪೋಷಿಸಲು ಕರೆ ನೀಡಲಾಯಿತು. ಈ ಬಾರಿ ವಿಐಎಸ್‌ಎಲ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.  


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ, ಸೈಲ್ ಸ್ವರ್ಣ ಜಯಂತಿ ಮತ್ತು ವಿಶ್ವ ಪರಿಸರ ದಿನಾಚರಣೆ ವಿಶಿಷ್ಟವಾಗಿ ಆಚರಿಸಲಾಯಿತು. ನಗರದ ವಿವಿಧ ಗಣ್ಯರನ್ನು ಆಹ್ವಾನಿಸಿ ಸಸಿಗಳನ್ನು ನೆಡಲಾಯಿತು.


ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ಪೂರಕ ಸ್ಪಂದನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್‌ನಿಲ್ದಾಣ. 
    ಭದ್ರಾವತಿ, ಜೂ. ೧೪ : ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ತಪ್ಪಿಸಿ ಕೆಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಲ್ಲಿಸಲಾಗಿದ್ದ ಮನವಿಗೆ ಬೆಂಗಳೂರಿನ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರು ಪೂರಕವಾಗಿ ಸ್ಪಂದಿಸಿದ್ದಾರೆಂದು ಭದ್ರಾವತಿ ಕ್ಷೇತ್ರ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಜಿ.ಟಿ ಬಸವರಾಜ್ ಹಾಗು ಕಾರ್ಯದರ್ಶಿ ಡಿ. ನರಸಿಂಹಮೂರ್ತಿ ತಿಳಿಸಿದ್ದಾರೆ.
    ವೇದಿಕೆ ವತಿಯಿಂದ ಇತ್ತೀಚೆಗೆ ಸುಮಾರು ೧೧ ಬೇಡಿಕೆಗಳನ್ನು ಈಡೇರಿಸುವಂತೆ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿರುವ ಆಯುಕ್ತರು, ನಗರ ವ್ಯಾಪ್ತಿಯಲ್ಲಿ ಸಂಚರಿಸಲು ೨ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ, ಕೇಂದ್ರಿಯ ವಿಭಾಗದಿಂದ ಅನುಮತಿ ಪಡೆದು ಭದ್ರಾವತಿ ಡಿಪೋದಿಂದ ಮಣಿಪಾಲ್, ಉಡುಪಿಗೆ ಜುಲೈ ತಿಂಗಳಿನಲ್ಲಿ ಬಸ್ ಸಂಚಾರ ವ್ಯವಸ್ಥೆ, ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮಳೆಗಾಲದಲ್ಲಿ ನೀರು ಸೋರಿಕೆಯಾಗದಂತೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳುವುದು, ವಿಕಲಚೇತನರಿಗೆ ಹಾಗು ಹಿರಿಯ ನಾಗರೀಕರಿಗೆ ಅನುಕೂಲವಾಗುವಂತೆ ಶೌಚಾಲಯಗಳಲ್ಲಿ ವೆಸ್ಟ್ರನ್ ಕಮೋಡ್‌ಗಳನ್ನು ಅಳವಡಿಸುವುದು, ವಿದ್ಯುತ್ ದೀಪಗಳ ದುರಸ್ತಿ ಹಾಗು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಗೃಹ ನಿರ್ಮಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
    ಸಾರ್ವಜನಿಕರ ಹಿತದೃಷ್ಟಿಯಿಂದ ವೇದಿಕೆ ವತಿಯಿಂದ ಸಲ್ಲಿಸಲಾಗಿದ್ದ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಕೆಎಸ್‌ಆರ್‌ಟಿಸಿ ಕೇಂದ್ರೀಯ ವಿಭಾಗದ ಆಯುಕ್ತ ಅನ್ಬುಕುಮಾರ್ ಅವರಿಗೆ ಜಿ.ಟಿ ಬಸವರಾಜ್ ಹಾಗು ಡಿ. ನರಸಿಂಹಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.

ಸತ್ಯಲಕ್ಷ್ಮಿ ನಿಧನ

ಸತ್ಯಲಕ್ಷ್ಮಿ 
    ಭದ್ರಾವತಿ ಜೂ ೧೪ : ಇಲ್ಲಿನ ಗಾಂಧಿನಗರದ ನಿವಾಸಿ ಸತ್ಯಲಕ್ಷ್ಮಿ(೬೯) ಸೋಮವಾರ ರಾತ್ರಿ  ನಿಧನ ಹೊಂದಿದ್ದು, ಇವರ ಅಂತ್ಯಕ್ರಿಯೆ ಮಂಗಳವಾರ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
    ಸತ್ಯಲಕ್ಷ್ಮಿ ಅವರಿಗೆ ಪತಿ, ಓರ್ವ ಪುತ್ರಿ, ಇಬ್ಬರು ಪುತ್ರರು ಇದ್ದರು. ಇವರ ನಿಧನಕ್ಕೆ ಆರ್ಯವೈಶ್ಯ ಸಮಾಜ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಗಣ್ಯರು ಸಂತಾಪ ಸೂಚಿಸಿದ್ದಾರೆ.