ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಅರಕ್ಷಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಾಣಿಕೆ ವಿರುದ್ದ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಭದ್ರಾವತಿ, ಜೂ. ೨೪; ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರವಹಿಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಪ್ರಮುಖವಾಗಿದೆ ಎಂದು ಹೊಸಮನೆ ಸರ್ಕಾರಿ ಪ್ರಥಮ ದರ್ಜೇ ಕಾಲೇಜು ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ ಹೇಳಿದರು.
ಅವರು ಶುಕ್ರವಾರ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಅರಕ್ಷಕ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಲಾಗಿದ್ದ ಮಾದಕ ವ್ಯಸನ ಮತ್ತು ಅಕ್ರಮ ಕಳ್ಳಸಾಗಾಣಿಕೆ ವಿರುದ್ದ ಜಾಗೃತಿ ಮಾಸಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ವ್ಯಸನಮುಕ್ತರಾದ ಯುವ ಜನತೆಯಿಂದ ಮಾತ್ರ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ. ಹಿನ್ನಲೆಯಲ್ಲಿ ಪೋಷಕರು ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾವಹಿಸಬೇಕು. ವಿದ್ಯಾರ್ಥಿಗಳು ನೆರೆಹೊರೆಯವರು ಹಾಗೂ ಸಮಾಜದಲ್ಲಿನ ಪ್ರತಿಯೊಬ್ಬರನ್ನೂ ಗೌರವದಿಂದ ಪ್ರೀತಿ, ವಿಶ್ವಾಸದಿಂದ ಕಾಣಬೇಕು. ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಯಾವುದೇ ಕಾರಣಕ್ಕೂ ಮಾದಕ ವ್ಯಸನಕ್ಕೆ ಬಲಿಯಾಗದಂತೆ ಎಚ್ಚರವಹಿಸಬೇಕೆಂದರು.
ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಅರಕ್ಷಕ ಠಾಣಾಧಿಕಾರಿ ಶಾಂತಲಾ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಯ ಕಡೆಗೆ ಗಮನಹರಿಸಬೇಕು. ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ಕಾನೂನು ಬಾಹಿರವಾಗಿದ್ದು, ವಿದ್ಯಾರ್ಥಿಗಳು ಇವುಗಳಿಂದು ದೂರವಿರಬೇಕೆಂದರು.
ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿ ಎನ್. ಕುಮಾರ್ ಮಾತನಾಡಿ, ಇಂದಿನ ಯುವ ಸಮೂಹ ವಿನೋದಕ್ಕಾಗಿ ಕಲಿಯುವ ದುಶ್ಚಟಗಳೇ ಅವರ ಭವಿಷ್ಯವನ್ನು ಬಲಿ ತೆಗೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಉಪನ್ಯಾಸಕರಾದ ಉಮೇಶ್‌ಕುಮಾರ್, ಕೆ.ಬಿ ರೇವಣಸಿದ್ದಪ್ಪ, ಪರಶುರಾಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.