Tuesday, July 5, 2022

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಬಿ. ಸಿದ್ದಬಸಪ್ಪ ಸೇರಿದಂತೆ ೧೪ ಮಂದಿ ಅವಿರೋಧ ಆಯ್ಕೆ

ಬಿ. ಸಿದ್ದಬಸಪ್ಪ
ಭದ್ರಾವತಿ, ಜು. ೫ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಶಾಖೆಯ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ೧೪ ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
      ಕಾರ್ಯಕಾರಿ ಸಮಿತಿಯಲ್ಲಿ ಒಟ್ಟು ೧೪ ನಿರ್ದೇಶಕ ಸ್ಥಾನಗಳಿದ್ದು, ಹಳೇನಗರದ ಸಂಚಿಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಬಿ. ಸಿದ್ದಬಸಪ್ಪ, ಎಂ. ದಿವಾಕರ್, ಶಿವಾನಾಯ್ಕ, ಹೊಳೆಹೊನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಪ್ರೌಢ ಶಾಲೆ ವಿಭಾಗ) ನಾಗರಾಜಪ್ಪ, ಹುಣಸೇಕಟ್ಟೆ ಸರ್ಕಾರಿ ಪ್ರೌಢಶಾಲೆಯ ಆರ್. ಓಂಕಾರಪ್ಪ, ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶೇಖರನಾಯ್ಕ, ತರೀಕೆರೆ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಪ್ರೌಢಶಾಲೆ ವಿಭಾಗ) ಅಶ್ವಥ್, ಅಂತರಗಂಗೆಯ ಕರ್ನಾಟಕ ಪಬ್ಲಿಕ್ ಶಾಲೆಯ ನವೀನ್‌ಕುಮಾರ್, ಅರಹತೊಳಲು ಸರ್ಕಾರಿ ಪ್ರೌಢಶಾಲೆಯ ಎಚ್.ಬಿ ಶಿವರಾಜ, ಕೂಡ್ಲಿಗೆರೆ ಹರಿಹರೇಶ್ವರ ಪ್ರೌಢಶಾಲೆಯ ಎಚ್. ಉಮೇಶ್, ಹಳೇನಗರದ ಕನಕ ಪ್ರೌಢಶಾಲೆಯ ಸಿ.ಡಿ ಮಂಜುನಾಥ್, ಹೊಸಮನೆ ಅಕ್ಕಮಹಾದೇವಿ ಪ್ರೌಢಶಾಲೆಯ ವೈ.ಕೆ ರಾಜು, ಹುತ್ತಾ ಕಾಲೋನಿ ಸಹ್ಯಾದ್ರಿ ಪ್ರೌಢಶಾಲೆಯ ಡಿ. ಮಂಜಪ್ಪ ಮತ್ತು ಕಾಗದನಗರ ಪೇಪರ್ ಟೌನ್ ಪ್ರೌಢಶಾಲೆಯ ಕೆ. ಬಸವರಾಜಪ್ಪ ಆಯ್ಕೆಯಾಗಿದ್ದಾರೆ.
      ಹೊಸ ಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್. ಬಸವರಾಜ ಚುನಾವಣಾಧಿಕಾರಿ ಕರ್ತವ್ಯ ನಿರ್ವಹಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ. ಸಿದ್ದಬಸಪ್ಪ ಅವರ ಬಣ ಅವಿರೋಧವಾಗಿ ಆಯ್ಕೆಯಾಗಿದೆ. ನೂತನ ನಿರ್ದೇಶಕರನ್ನು ತಾಲೂಕಿನ ಪ್ರೌಢಶಾಲಾ ಶಿಕ್ಷಕರು, ಸಿಬ್ಬಂದಿಗಳು ಅಭಿನಂದಿಸಿದ್ದಾರೆ.


      ಈ ಬಾರಿ ಚುನಾವಣೆಗೆ ಒಟ್ಟು ೨೩ ಮಂದಿ ಆಕಾಂಕ್ಷಿಗಳಿದ್ದರು. ತಾಲೂಕಿನಲ್ಲಿ ಚುನಾವಣೆ ನಡೆಸುವುದು ಬೇಡ. ಒಂದು ವೇಳೆ ಚುನಾವಣೆ ನಡೆದ್ದಲ್ಲಿ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಒಮ್ಮತದ ಅಭಿಪ್ರಾಯ ಮೂಡಿಬಂದು ಅಂತಿಮವಾಗಿ ೧೪ ಮಂದಿ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆಯಾದ ಎಲ್ಲರೂ ಸಹ ನಮ್ಮ ಬಣದವರಾಗಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಇನ್ನೂ ಕ್ರಿಯಾಶೀಲವಾಗಿ ಹೆಚ್ಚಿನ ಚಟುವಟಿಕೆಗಳು ನಡೆಸಲು ಸಾಧ್ಯವಾಗಿದೆ.  
                                                       - ಬಿ. ಸಿದ್ದಬಸಪ್ಪ ಅಧ್ಯಕ್ಷರು, ತಾಲೂಕು ಸರ್ಕಾರಿ ನೌಕರರ ಸಂಘ, ಭದ್ರಾವತಿ.




ಗಲಾಟೆ ಪ್ರಕರಣದ ನೈಜತೆ ಮರೆಮಾಚುತ್ತಿರುವ ಪೊಲೀಸರು : ಬಜರಂಗದಳ ಕಾರ್ಯಕರ್ತರಿಂದ ಸುಳ್ಳು ದೂರು

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಪತ್ರಿಕಾಗೋಷ್ಠಿಯಲ್ಲಿ ಆರೋಪ

ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
    ಭದ್ರಾವತಿ, ಜು. ೫: ನಗರದ ರಂಗಪ್ಪ ವೃತ್ತದಲ್ಲಿ ಕಳೆದ ಎರಡು ದಿನಗಳ ಹಿಂದೆ ಬಜರಂಗದಳ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ವೇಳೆ ಉಂಟಾಗಿರುವ ಗಲಾಟೆಗೆ ಬಜರಂಗದಳ ಕಾರ್ಯಕರ್ತರು ಕಾರಣಕರ್ತರಾಗಿದ್ದಾರೆ. ಸ್ಥಳೀಯ ಪೊಲೀಸರು ನೈಜತೆ ಮರೆಮಾಡಿ ಪಕ್ಷವೊಂದರ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಿ.ಎಂ ಖಾದರ್ ಆರೋಪಿಸಿದರು.
      ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರು ಎಲ್ಲರೊಂದಿಗೂ ಸರ್ವಸಮನ್ವಯತೆಯನ್ನು ಕಾಯ್ದುಕೊಂಡು ಬದುಕುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯದವರ ಮೇಲೆ ವಿನಾಕಾರಣ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಳೆದ ಎರಡು ದಿನಗಳ ಹಿಂದೆ ಅಂದರೆ ಜು.೩ರಂದು ರಂಗಪ್ಪವೃತ್ತದಲ್ಲಿ ಬಜರಂಗದಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ವಿನಾಕಾರಣ ಬಟ್ಟೆ ಅಂಗಡಿಯೊಂದಕ್ಕೆ ನುಗ್ಗಿ ಅಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಸಾಕ್ಷಿಗಳು ಸಿ.ಸಿ ಕ್ಯಾಮೇರಾದಲ್ಲಿ ದಾಖಲಾಗಿದೆ. ಅದರಂತೆ ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಲ್ಲದೆ ೩ ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ರೀತಿ ಮಾಡದೆ ಬಂಧಿತರನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರು ರಾಜಕೀಯ ಪಕ್ಷವೊಂದರ ಏಜೆಂಟರಂತೆ ನಡೆದುಕೊಂಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
      ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ಬಟ್ಟೆ ಅಂಗಡಿ ಸಿಬ್ಬಂದಿ ೬ ಜನ ಬಜರಂಗದಳ ಕಾರ್ಯಕರ್ತರ ವಿರುದ್ದ ದೂರು ದಾಖಲಿಸಿದ್ದು, ಮುಸ್ಲಿಂ ಸಮುದಾಯದವರು ಯಾವುದೇ ತಪ್ಪು ಮಾಡಿಲ್ಲ. ಪ್ರತಿಭಟನೆ ವೇಳೆ ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿಲ್ಲ. ಆದರೂ ಸಹ ವಿನಾಕಾರಣ ಸುಳ್ಳು ದೂರು ದಾಖಲಿಸಲಾಗಿದೆ ಎಂದು ಆರೋಪಿಸಿದರು.
      ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಕಳಂಕ ತರಬೇಕೆಂಬ ದುರುದ್ದೇಶದಿಂದ ಇತ್ತೀಚಿನ ದಿನಗಳಲ್ಲಿ ಕ್ಷೇತ್ರದಲ್ಲಿ ಆಶಾಂತಿ ವಾತಾವರಣ ನಿರ್ಮಾಣ ಮಾಡಲು ಯತ್ನಿಸಲಾಗುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ. ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯದವರು ಈ ದೇಶದ ಸಂವಿಧಾನ ಹಾಗು ನ್ಯಾಯಾಂಗದ ಮೇಲೆ ವಿಶ್ವಾಸ ಹೊಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಉನ್ನತ ಮಟ್ಟದ ತನಿಖೆ ನಡೆಸಿ ನೈಜ ತಪ್ಪಿತಸ್ಥರು ಯಾರೇ ಆಗಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.  
      ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಫೀರ್‌ಷರೀಫ್, ಮುರ್ತುಜಾಖಾನ್, ತಬ್ರೇಜ್‌ಖಾನ್, ಅಫ್ತಾಬ್ ಅಹಮದ್, ಐಸಾಕ್, ಅಮೋಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ತಾಲೂಕು ಕುರುಬರ ಸಂಘದ ಚುನಾವಣೆ : ಮತದಾರರ ಪಟ್ಟಿಯಲ್ಲಿ ಲೋಪ

ಪಟ್ಟಿ ಪರಿಷ್ಕರಣೆಗೆ ಮನವಿ, ತಾತ್ಕಾಲಿಕವಾಗಿ ಚುನಾವಣೆ ಮುಂದೂಡಲು ಆಗ್ರಹ

 ಭದ್ರಾವತಿ ತಾಲೂಕು ಕುರುಬರ ಸಂಘದಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದೇ ಏಕಾಏಕಿ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಕುರುಬ ಸಮಾಜದ ಪ್ರಮುಖರು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಆಗ್ರಹಿಸಿದ್ದಾರೆ.
 ಭದ್ರಾವತಿ, ಜು. ೫ : ತಾಲೂಕು ಕುರುಬರ ಸಂಘದಲ್ಲಿ ಪ್ರತಿ ಚುನಾವಣೆ ಸಂದರ್ಭದಲ್ಲೂ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು, ಈ ಬಾರಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡದೇ ಏಕಾಏಕಿ ಚುನಾವಣೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಮಂಗಳವಾರ ಕುರುಬ ಸಮಾಜದ ಪ್ರಮುಖರು ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಆಗ್ರಹಿಸಿದ್ದಾರೆ.
      ಹಳೇನಗರದ ಬಸವೇಶ್ವರ ವೃತ್ತದ ಸಮೀಪದ ಕನಕ ವಿದ್ಯಾಸಂಸ್ಥೆಯಲ್ಲಿರುವ ಸಂಘದ ಕಛೇರಿಯಲ್ಲಿ ಸಮಾಜದ ಪ್ರಮುಖರು ಚುನಾವಣಾಧಿಕಾರಿಯನ್ನು ಭೇಟಿ ಮಾಡಿ ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ಲೋಪದೋಷಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಮತದಾರರ ಪಟ್ಟಿಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಸದಸ್ಯರ ಹೆಸರು ಎರಡೆರಡು ಬಾರಿ ಮುದ್ರಣಗೊಂಡಿದ್ದು, ಅಲ್ಲದೇ ಹೊಸ ಮತದಾರರನ್ನು ಪರಿಶೀಲನೆ ಮಾಡದೆ ಚುನಾವಣೆಯನ್ನು ನಡೆಸಲಾಗುತ್ತಿದೆ. ತಕ್ಷಣ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ತಾತ್ಕಾಲಿಕವಾಗಿ ಮುಂದೂಡುವಂತೆ ಆಗ್ರಹಿಸಿದರು.
      ಸಂಘದ ಚುನಾವಣೆ ಸಂದರ್ಭದಲ್ಲಿ ಹಲವಾರು ಬಾರಿ ನ್ಯಾಯಾಲಯದ ಮೆಟ್ಟಿಲೇರಲಾಗಿದೆ. ಈ ಬಾರಿ ಸಹ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ತಕ್ಷಣ ಚುನಾವಣೆ ನಡೆಸುವಂತೆ ಆದೇಶಿಸಲಾಗಿದೆ. ಅಲ್ಲದೆ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕಗೊಳಿಸಲಾಗಿದೆ. ಹೊಸದಾಗಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವಂತೆ ಸೂಚಿಸಲಾಗಿದೆ. ಆದರೆ ಇದನ್ನು ಪಾಲಿಸದೆ ಏಕಾಏಕಿ ಚುನಾವಣೆ ಘೋಷಿಸಲಾಗಿದೆ. ತಕ್ಷಣ ಚುನಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಪಾರದರ್ಶಕವಾಗಿ ಚುನಾವಣೆ ನಡೆಸಲು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದರು.
      ಒಂದು ವೇಳೆ ಚುನಾವಣೆ ನಡೆಸಲು ಮುಂದಾದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ತಾತ್ಕಾಲಿಕವಾಗಿ ಚುನಾವಣೆ ಮುಂದೂಡಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಅಥವಾ ಸಹಕಾರಿ ಇಲಾಖೆ ಹಿರಿಯ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಬೇಕು. ಅಲ್ಲಿಯವರೆಗೂ ಅನಿಷ್ಟಾವಧಿ ಹೋರಾಟ ನಡೆಸಲಾಗುವುದು ಎಂದು ಪಟ್ಟು ಹಿಡಿದ್ದಾರೆ. ನವೀನ್‌ಕುಮಾರ್ ಚುನಾವಣಾಧಿಕಾರಿಯಾಗಿದ್ದು, ಶಾಂತರಾಜ್ ಆಡಳಿತಾಧಿಕಾರಿಯಾಗಿದ್ದಾರೆ.
      ಸಮಾಜದ ಪ್ರಮುಖರಾದ ಬಿ.ಎಸ್ ನಾರಾಯಣಪ್ಪ, ಡಿ.ಎನ್ ತ್ಯಾಗರಾಜ್, ಅಭಿಲಾಷ್, ಹೇಮಾವತಿ ಶಿವಾನಂದ್, ಶಾರದಮ್ಮ, ಕೃಷ್ಣಮೂರ್ತಿ, ಗುರುಶಾಂತಪ್ಪ, ಶ್ರೀನಿವಾಸ್, ರಾಜು ಹೋಬಳಿದಾರ್, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Monday, July 4, 2022

ಅಸಂಘಟಿತ ಕಾರ್ಮಿಕರಿಗೆ ಕಾರ್ಡ್ ವಿತರಣೆ, ಸಾಧಕರಿಗೆ ಅಭಿನಂದನೆ

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ಭದ್ರಾವತಿ ತಾಲೂಕಿನ ಶ್ರೀರಾಮನಗರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣೆ, ಅಭಿನಂದನಾ ಹಾಗು ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಎರಡೂವರೆ ವರ್ಷದ ಲಕಿತ್ ಗೌಡ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೪: ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ವತಿಯಿಂದ ತಾಲೂಕಿನ ಶ್ರೀರಾಮನಗರ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಅಸಂಘಟಿತ ಕಾರ್ಮಿಕರ ಕಾರ್ಡ್ ವಿತರಣೆ, ಅಭಿನಂದನಾ ಹಾಗು ಕೋವಿಡ್ ಜಾಗೃತಿ ಕಾರ್ಯಕ್ರಮವನ್ನು ಸಂಘದ ಗೌರವಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಉದ್ಘಾಟಿಸಿದರು.
      ಕಾರ್ಯಕ್ರಮದಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಮಾಡಿರುವ ಎರಡೂವರೆ ವರ್ಷದ ಲಕಿತ್ ಗೌಡ ಹಾಗು ಬಸಲಿಕಟ್ಟೆ ನಿವಾಸಿ ಯೂತ್ ಗೇಮ್ಸ್ ಅಂತರಾಷ್ಟ್ರೀಯ ಖೋ ಖೋ ಕ್ರೀಡಾಪಟು ಎಂ. ಹರ್ಷಿತ್ ಮತ್ತು ವೀರಾಪುರ ನಿವಾಸಿ ಯೂತ್ ಗೇಮ್ಸ್ ಅಂತರಾಷ್ಟ್ರೀಯ ಟ್ರಿಪಲ್ ಜಂಪ್ ಕ್ರೀಡಾಪಟು ಸಮರ್ಥ ಲೋಕೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
      ಸಂಘದ ಗ್ರಾಮಾಂತರ ಅಧ್ಯಕ್ಷೆ ಶಕುಂತಲಾ ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು. ಯುವ ಮುಖಂಡ ಬಿ.ಎಸ್ ಗಣೇಶ್, ಬಿಜೆಪಿ ಮಂಡಲ ತಾಲೂಕು ಅಧ್ಯಕ್ಷ ಎಂ. ಪ್ರಭಾಕರ್, ಸಂಘದ ಸಂಸ್ಥಾಪಕ ಆಯನೂರ್ ಕುಪೇಂದ್ರ, ರಾಜ್ಯಾಧ್ಯಕ್ಷ ಕೇಶವಮೂರ್ತಿ ಪೇಟ್ಕರ್, ರಾಜ್ಯ ಸಂಘಟನಾ ಕಾರ್ಯದಶಿ ಪ್ರದೀಪ್, ಜಿಲ್ಲಾಧ್ಯಕ್ಷೆ ಸುರೇಖಾ ಪಾಲಾಕ್ಷಪ್ಪ, ತಾಲೂಕು ನಗರ ಅಧ್ಯಕ್ಷ ಬಾರಂದೂರು ಮಂಜುನಾಥ್, ನಗರ ಪ್ರಧಾನ ಕಾರ್ಯದರ್ಶಿ ರೂಪ ನಾಗರಾಜ್, ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಲೋಲಾಕ್ಷಿ ರಂಗಸ್ವಾಮಿ, ಉಪಾಧ್ಯಕ್ಷೆ ಶಶಿಕಲಾ ಶಿವಮೂರ್ತಿ, ಕಾರ್ಯದರ್ಶಿ ಜಬಿವುಲ್ಲಾ, ಮೋಹನ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೊಬೈಲ್ ಆಪ್ ಬಳಸಿ ಶಾಲಾ ಸಂಸತ್ತು ಚುನಾವಣೆ : ನೂತನ ಪ್ರತಿನಿಧಿಗಳ ಆಯ್ಕೆ

ಭದ್ರಾವತಿ, ಜು. ೪: ಶಾಲಾ ಚಟುವಟಿಕೆಯ ಪ್ರತಿಯೊಂದರಲ್ಲೂ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿರುವ ನಗರದ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನಡೆಯಿತು.
      ವಿಶೇಷವಾಗಿ ಶಾಲಾ ಸಂಸತ್ತು ಚುನಾವಣೆಯನ್ನು ಮೊಬೈಲ್ ಆಪ್ ಬಳಕೆ ಮಾಡಿ ಡಿಜಿಟಲ್ ವೋಟಿಂಗ್ ಮುಖಾಂತರ ನಡೆಸಲಾಯಿತು. ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿದರು.
      ಚುನಾವಣೆಯಲ್ಲಿ ಆಯ್ಕೆಯಾದವರು :
      ಉಪಾಧ್ಯಕ್ಷರಾಗಿ ಸುರೇಶ್ ಗೌಡ  ಹಾಗೂ ಸಿ.ಎನ್ ಶ್ರೇಯ ಹಾಗೂ ಕಾರ್ಯದರ್ಶಿಯಾಗಿ ಜಿ.ಎಸ್ ಪುನೀತ್ ಮತ್ತು  ಸಹ ಕಾರ್ಯದರ್ಶಿಯಾಗಿ ಹರ್ಷಿತ್ ಹಾಗೂ ಖಜಾಂಚಿಯಾಗಿ ಪ್ರಿಯಾಂಕ ಆಯ್ಕೆಯಾದರು. ವಿದ್ಯಾಸಂಸ್ಥೆಯ ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ನಡೆಯಲು ಸಹಕರಿಸಿದರು. ಆಡಳಿತಾಧಿಕಾರಿ ವೇಣುಗೋಪಾಲ್, ಪ್ರಾಂಶುಪಾಲ ಕಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಶಾಲಾ ಚಟುವಟಿಕೆಯ ಪ್ರತಿಯೊಂದರಲ್ಲೂ ವಿಶಿಷ್ಟತೆಯನ್ನು ಕಾಯ್ದುಕೊಂಡು ಬರುತ್ತಿರುವ ಭದ್ರಾವತಿ ಅಪ್ಪರ್ ಹುತ್ತಾದಲ್ಲಿರುವ ಅನನ್ಯ ಪೂರ್ವ ಪ್ರಾಥಮಿಕ ಹಾಗು ಪ್ರೌಢಶಾಲೆಯಲ್ಲಿ ಸೋಮವಾರ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನಡೆಯಿತು.

ರೈಲಿಗೆ ಸಿಲುಕಿ ೩೦ಕ್ಕೂ ಹೆಚ್ಚು ಕುರಿಗಳು ಬಲಿ

ಭದ್ರಾವತಿ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.
    ಭದ್ರಾವತಿ, ಜು. ೪ :  ನಗರದ ಉಂಬ್ಳೆಬೈಲು ರಸ್ತೆ ಅಂಡರ್ ಬ್ರಿಡ್ಜ್ ಬಳಿ ಎಲ್‌ಐಸಿ ಕಛೇರಿ ಮುಂಭಾಗ ಸೋಮವಾರ ಸಂಜೆ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಚಲಿಸುತ್ತಿದ್ದ ರೈಲಿಗೆ ಸಿಲುಕಿಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ.


      ಕುರಿಗಾಹಿಗಳು ಉಂಬ್ಳೆಬೈಲು ರಸ್ತೆಯಲ್ಲಿ ಬರುತ್ತಿದ್ದಾರೆ. ವಾಹನ ದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಕುರಿಗಳು ಏಕಾಏಕಿ ರೈಲ್ವೆ ಹಳಿ ಕಡೆಗೆ ತಿರುಗಿವೆ. ಈ ಸಂದರ್ಭದಲ್ಲಿ ತಾಳಗುಪ್ಪ-ಮೈಸೂರು ರೈಲಿಗೆ ಸಿಲುಕಿಕೊಂಡಿವೆ. ಕೆಲವು ಕುರಿಗಳು ರೈಲಿಗೆ ಸಿಲುಕಿ ಛಿದ್ರ ಛಿದ್ರವಾಗಿವೆ. ಸ್ಥಳದಲ್ಲಿಯೇ ಸುಮಾರು ೩೦ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿವೆ.
      ಕುರಿಗಳು ಹಾವೇರಿ ಸವಣೂರಿನ ವ್ಯಕ್ತಿಯೊಬ್ಬರಿಗೆ ಸೇರಿದ್ದಾಗಿದ್ದು, ಘಟನೆ ನಡೆದ ಕೆಲವೇ ಸಮಯದಲ್ಲಿ ಮೃತ ಕುರಿಗಳನ್ನು ತೆರವುಗೊಳಿಸಲಾಯಿತು.



ವಿಇಎಸ್ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

ಭದ್ರಾವತಿ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಕ್ಕಳ ತಜ್ಞ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಜು. ೪: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ನಗರದ ಹೊಸ ಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ರಾಷ್ಟ್ರೀಯ ವೈದ್ಯರ ದಿನಾಚರಣೆ ವಿಶೇಷವಾಗಿ ಆಚರಿಸಲಾಯಿತು.
      ವಿದ್ಯಾಸಂಸ್ಥೆಯ ಹಳೇಯ ವಿದ್ಯಾರ್ಥಿ, ನಗರದ ಪ್ರಗತಿ ಮಕ್ಕಳ ಚಿಕಿತ್ಸಾಲಯದ ವೈದ್ಯ ಡಾ.ಕೆ.ಜೆ ರಾಜೇಂದ್ರ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
      ಈ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಜೆ ರಾಜೇಂದ್ರ, ವಿದ್ಯಾಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ.  ಈ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿರುವುದು ಹೆಮ್ಮೆಯ ವಿಚಾರವಾಗಿದೆ. ಶಾಲಾ ದಿನಗಳು ಇಂದಿಗೂ ಅವಿಸ್ಮರಣೀಯವಾಗಿ ಉಳಿದುಕೊಂಡಿದ್ದು, ವೈದ್ಯರ ದಿನಾಚರಣೆಯಲ್ಲಿ ನನ್ನನ್ನು ಆಹ್ವಾನಿಸಿ ಸನ್ಮಾನಿಸುವ ಮೂಲಕ ಅಭಿನಂದಿಸುತ್ತಿರುವುದು ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು.  
       ವಿದ್ಯಾ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ.ಎಸ್.ಪಿ ರಾಕೇಶ್, ದೈಹಿಕ ಶಿಕ್ಷಣ ನಿರ್ದೇಶಕ ಶಿವಲಿಂಗೇಗೌಡ, ಎಲ್ಲಾ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  
      ಜೆ.ಆರ್ ಆಶಾ ಪ್ರಾರ್ಥಿಸಿದರು. ಕವಿತ ನಿರೂಪಿಸಿದರು. ರೇವತಿ ಸ್ವಾಗತಿಸಿ ರವಿ ವಂದಿಸಿದರು.