Sunday, July 10, 2022

ಸೇವೆ, ತ್ಯಾಗದ ಮನೋಭಾವ ರೋಟರಿ ಸಂಕೇತ : ಜಿ.ಕೆ ಬಾಲಕೃಷ್ಣನ್

ನೂತನ ಅಧ್ಯಕ್ಷರಾಗಿ ಅಡವೀಶಯ್ಯ ಪದಗ್ರಹಣ

ಭದ್ರಾವತಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರಾಗಿ ಅಡವೀಶಯ್ಯ ಅಧಿಕಾರ ಸ್ವೀಕರಿಸಿದರು.
    ಭದ್ರಾವತಿ, ಜು. ೧೦: ಸೇವೆ, ತ್ಯಾಗದ ಮನೋಭಾವ ರೋಟರಿ ಸಂಕೇತವಾಗಿದ್ದು, ಕ್ಲಬ್ ಧ್ಯೇಯೋದ್ದೇಶಗಳಿಗೆ ಗೌರವ ತರುವಂತೆ ಪ್ರತಿಯೊಬ್ಬರು ನಡೆದುಕೊಳ್ಳಬೇಕೆಂದು ರೋಟರಿ ಕ್ಲಬ್ ಮೈಸೂರು ವಿಭಾಗದ ಎಆರ್‌ಆರ್‌ಎಫ್‌ಸಿ ಜಿ.ಕೆ ಬಾಲಕೃಷ್ಣನ್ ಹೇಳಿದರು.
      ಅವರು ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರದ ನೇತೃತ್ವದ ವಹಿಸಿ ಮಾತನಾಡಿದರು.
      ನೂತನ ಅಧ್ಯಕ್ಷರು, ಪದಾಧಿಕಾರಿಗಳಿಗೆ ಪದಗ್ರಹಣ ಬೋಧಿಸಿ ಕ್ಲಬ್ ನೇತೃತ್ವ ವಹಿಸಿಕೊಂಡವರು ಹೆಚ್ಚಿನ ಜವಾಬ್ದಾರಿಯುತವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸಬೇಕೆಂದರು.
       ನೂತನ ಅಧ್ಯಕ್ಷರಾಗಿ ಎಸ್. ಅಡವೀಶಯ್ಯ, ಕಾರ್ಯದರ್ಶಿಯಾಗಿ ಕೆ.ಎಚ್ ಶಿವಕುಮಾರ್, ಉಪಾಧ್ಯಕ್ಷರಾಗಿ ಪಿ. ಸುಧಾಕರ್ ಶೆಟ್ಟಿ, ಖಜಾಂಚಿಯಾಗಿ ವಾದಿರಾಜ ಅಡಿಗ, ನಿರ್ದೇಶಕರಾಗಿ ಟಿ.ಎಸ್ ದುಷ್ಯಂತ್‌ರಾಜ್, ಪ್ರಭಾಕರ ಬೀರಯ್ಯ, ಕೆ.ಎಚ್ ತೀರ್ಥಯ್ಯ, ಡಾ. ಕೆ. ನಾಗರಾಜ್, ಅಮಿತ್‌ಕುಮಾರ್ ಜೈನ್, ವಿವಿಧ ವಿಭಾಗಗಳ ಛೇರ್‍ಮನ್‌ಗಳಾಗಿ ಜಿ. ರಾಘವೇಂದ್ರ ಉಪಾಧ್ಯಾಯ, ರಾಘವೇಂದ್ರ ರಾವ್, ಡಾ. ಆರ್.ಸಿ ಬೆಂಗಳೂರ್, ಕೆ.ಎಸ್ ಶೈಲೇಂದ್ರ ಮತ್ತು ಹಾಲೇಶ್ ಎಸ್. ಕೂಡ್ಲಿಗೆರೆ, ಆನ್ಸ್ ಕ್ಲಬ್ ಅಧ್ಯಕ್ಷರಾಗಿ ಲತಾ ದುಷ್ಯಂತ್ ರಾಜ್, ಕಾರ್ಯದರ್ಶಿಯಾಗಿ ಡಾ. ಮಯೂರಿ ಮಲ್ಲಿಕಾರ್ಜುನ ಪದಗ್ರಹಣ ಸ್ವೀಕರಿಸಿದರು.
      ನಿರ್ಗಮಿತ ಅಧ್ಯಕ್ಷ ಎಚ್.ವಿ ಆದರ್ಶ್ ಮಾತನಾಡಿ, ನನ್ನ ಅವಧಿಯಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
      ನಿರ್ಗಮಿತ ಕಾರ್ಯದರ್ಶಿ ರಾಘವೇಂದ್ರ ಉಪಾಧ್ಯಾಯ ಕೈಗೊಂಡಿರುವ ಕಾರ್ಯ ಚಟುವಟಿಕೆಗಳ ಕುರಿತು ವರದಿ ಮಂಡಿಸಿದರು. ಸಹಾಯಕ ಗೌವರ್ನರ್ ಸುನೀತ ಶ್ರೀಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಸುಮ ತೀರ್ಥಯ್ಯ ಪ್ರಾರ್ಥಿಸಿದರು.

‎ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಸ್ಥಾಪನ ದಿನ



   ಭದ್ರಾವತಿ, ಜು.10:  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್  ತಾಲೂಕು  ಶಾಖೆ ಯಿಂದ  ಸಂಸ್ಥಾಪನಾ ದಿನ ಮತ್ತು ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಕಾರ್ಯಕ್ರಮ ನಗರದ ಬಿ. ಎಚ್ ರಸ್ತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕಿಯರ ವಸತಿ ನಿಲಯದಲ್ಲಿ ನಡೆಯಿತು. 
       ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜು. 9, 1949 ರಲ್ಲಿ ಸ್ಥಾಪನೆಯಾಯಿತು. ವಿದ್ಯಾರ್ಥಿಗಳ ಹಿತರಕ್ಷಣೆ ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಹಲವು ಹೋರಾಟಗಳ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದೆ.  ಇದು ವಿಶ್ವದಲ್ಲೇ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ.
        ಶಿವಮೊಗ್ಗ ಜಿಲ್ಲಾ ವಿಸ್ತಾರಕಿ ಕೆ. ಶುಚಿತ, ನಗರ ಸಹಕಾರ್ಯದರ್ಶಿ ಸ್ವಾತಿ,  ಎಬಿವಿಪಿ ಕಾರ್ಯಕರ್ತೆ ಅನನ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
 

ಎಸ್‌.ಎಸ್‌ ಜ್ಯೂಯಲರ್ಸ್‌ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ

ಕೋಟ್ಯಾಂತರ ರು. ಮೌಲ್ಯದ ಚಿನ್ನಾಭರಣ ಕಳವು

\

ಭದ್ರಾವತಿ, ಜು. ೧೦: ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿರುವ ಎಸ್.ಎಸ್ ಜ್ಯೂಯಲರ್ಸ್ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು, ಕೋಟ್ಯಾಂತರ ರು. ಮೌಲ್ಯದ ಬೆಳ್ಳಿ ಹಾಗು ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.
      ಮಳಿಗೆಯ ಹಿಂಬದಿಯ ಗೋಡೆ ಹಾಗು ಬಾಗಿಲನ್ನು ಮುರಿದು ಕಳ್ಳತನ ಮಾಡಲಾಗಿದೆ ಎನ್ನಲಾಗಿದೆ. ಈ ಮಳಿಗೆ ವಿಕ್ರಂ ಮತ್ತು ವಿಜಿಯ ಎಂಬ ಸಹೋದರರಿಗೆ ಸೇರಿದ್ದಾಗಿದೆ.
      ಸ್ಥಳದಲ್ಲಿ ಗ್ಯಾಸ್‌ ಕಟರ್‌ ಸೇರಿದಂತೆ ಕಳ್ಳತನಕ್ಕೆ ಬಳಸಲಾಗಿರುವ ವಸ್ತುಗಳು ಪತ್ತೆಯಾಗಿವೆ. ಶ್ವಾನದಳ, ಬೆರಳಚ್ಚು ತಜ್ಞರ ತಂಡ ಮತ್ತು ಫೋರೆನ್ಸಿಕ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿವೆ. ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ವಿಕ್ರಮ್ ಅಮಾತೆ ಹಾಗು ಹಳೇನಗರ ಪೊಲೀಸ್‌ ಠಾಣೆ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಬಿಜೆಪಿ ಹಿರಿಯೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಜಯದೇವ ನಿಧನ

ಜಯದೇವ
    ಭದ್ರಾವತಿ, ಜು. ೧೦ : ಭಾರತೀಯ ಜನತಾ ಪಕ್ಷದ ಹಿರಿಯೂರು ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಜಯದೇವ(೫೧) ಶನಿವಾರ ನಿಧನ ಹೊಂದಿದರು.
      ಪತ್ನಿ, ಓರ್ವ ಪುತ್ರಿ, ಓರ್ವ ಪುತ್ರನನ್ನು ಹೊಂದಿದ್ದರು. ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಗ್ರಾಮದ ಸ್ಮಶಾನ ಭೂಮಿಯಲ್ಲಿ ನೆರವೇರಿತು.   ಸಂಸದ ಬಿ ವೈ ರಾಘವೇಂದ್ರ, ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮ ಪ್ರಸಾದ್, ಕರ್ನಾಟಕ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಯುವ ಮುಖಂಡ ಗೋಕುಲ್ ಕೃಷ್ಣ ಸೇರಿದಂತೆ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

Saturday, July 9, 2022

ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆ ಮಂಜೂರಾತಿ ಮಾಡಿ

ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಮನವಿ

ಭದ್ರಾವತಿ ಹಳೇನಗರದಲ್ಲಿರುವ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಹಾಗು ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.  
    ಭದ್ರಾವತಿ, ಜು. ೯ : ಹಳೇನಗರದಲ್ಲಿರುವ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸುವುದು ಹಾಗು ಹೊಸದಾಗಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವಂತೆ ಒತ್ತಾಯಿಸಿ ತಾಲೂಕು ಆರೋಗ್ಯ ರಕ್ಷಾ ಸಮಿತಿ ನೇತೃತ್ವದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.
      ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ೨೫೦ ಹಾಸಿಗೆಯುಳ್ಳ ಆಸ್ಪತ್ರೆಯನ್ನು ಮಂಜೂರಾತಿ ಮಾಡುವ ಜೊತೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು ಹಾಗು ಪ್ರಸ್ತುತ ಇರುವ ಆಸ್ಪತ್ರೆಯನ್ನು ತಾಯಿ ಮಗು ಆಸ್ಪತ್ರೆಯನ್ನಾಗಿ ಪರಿವರ್ತಿಸಿ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸುವಂತೆ ಮನವಿ ಮಾಡಲಾಗಿದೆ.
      ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಂಕರಪ್ಪ, ಹಿರಿಯ ವೈದ್ಯ ಡಾ. ಶಿವಪ್ರಕಾಶ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ರಾಮನಾಥ್ ಬರ್ಗೆ, ಅನುಷಾ, ರಘುರಾವ್, ಕೃಷ್ಣಮೂರ್ತಿ, ಗಣೇಶ್ ರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್, ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಮುಖಂಡರಾದ ಎಸ್. ಕುಮಾರ್, ಎಂ. ಪ್ರಭಾಕರ್, ಕೆ. ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜದಲ್ಲಿ ವಿಕೃತ ಮನಸ್ಸಿನವರು ಹೆಚ್ಚಾಗುತ್ತಿದ್ದು, ಒಳ್ಳೆಯ ಕೆಲಸಗಳಿಗೆ ಬೆಲೆ ಇಲ್ಲದಂತಾಗಿದೆ

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಭದ್ರಾವತಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಉದ್ಘಾಟಿಸಿದರು.
    ಭದ್ರಾವತಿ, ಜು. ೯: ಪ್ರಸ್ತುತ ಸಮಾಜದಲ್ಲಿ ವಿಕೃತ ಮನಸ್ಸಿನ ಜನರು ಹೆಚ್ಚಾಗುತ್ತಿದ್ದು, ಜನರು ನಮ್ಮನಾಳುವ ಸರ್ಕಾರ ಹಾಗು ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ವಿಷಾದ ವ್ಯಕ್ತ ಪಡಿಸಿದರು.
      ಅವರು ಶನಿವಾರ ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗು ಕಾಗದನಗರದ ಗುರು ಬ್ರದರ್‍ಸ್ ಆರ್ಟ್ಸ್ ವತಿಯಿಂದ ಶ್ರೀಮತಿ ಸರೋಜಮ್ಮನವರ ಮೊದಲ ವರ್ಷದ ಭಾವಸ್ಮರಣೆ ಅಂಗವಾಗಿ ಉಜ್ಜನಿಪುರದ ಡಿ.ಜಿ ಹಳ್ಳಿ ಮುಖ್ಯ ರಸ್ತೆಯಲ್ಲಿರುವ ಬಣ್ಣದ ಮನೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ೨೦೨ನೇ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಇಂದು ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಬೆಲೆ ಇಲ್ಲದಂತಾಗಿದೆ. ವಿಕೃತ ಮನಸ್ಸಿನವರು ಹೆಚ್ಚಾಗಿದ್ದು, ಇಂತಹ ವ್ಯವಸ್ಥೆಗೆ ನಾವುಗಳೇ ಕಾರಣರಾಗಿದ್ದೇವೆ. ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪುಗೊಳ್ಳಬೇಕಾದರೆ ಒಳ್ಳೆಯ ಸರ್ಕಾರ ಆಡಳಿತಕ್ಕೆ ತರಬೇಕೆಂದರು.
       ಇತ್ತೀಚೆಗೆ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಆಯೋಜಿಸಲಾಗಿದ್ದ ಜೊತೆಗಿರುವನು ಚಂದಿರ ನಾಟಕ ಪ್ರದರ್ಶನಕ್ಕೆ ಕಿಡಿಗೇಡಿಗಳು ಅಡ್ಡಿಪಡಿಸಿರುವುದು ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ನಾಡಿನಲ್ಲಿ ಕನ್ನಡ ತೇರು ಎಳೆಯುವವರು ಕಡಿಮೆಯಾಗುತ್ತಿದ್ದು, ಕತ್ತರಿ ಹಾಕುವವರು ಹೆಚ್ಚಾಗುತ್ತಿದ್ದಾರೆಂದು ಆತಂಕ ವ್ಯಕ್ತಪಡಿಸಿದರು.
       ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಮನಷ್ಯನ ಅವಿಭಾಗ್ಯ ಅಂಗಗಳಾಗಿವೆ. ಮನಸ್ಸಿಗೆ ನೆಮ್ಮದಿ ಜೊತೆಗೆ ಸಮಾಜದಲ್ಲಿ ಉತ್ತಮ ವ್ಯವಸ್ಥೆ ರೂಪಿಸಿಕೊಳ್ಳಲು ಸಹಕಾರಿಯಾಗಿವೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ಹುಣ್ಣಿಮೆ ತಿಂಗಳ ಮನೆ-ಮನ-ಸಾಹಿತ್ಯ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಕಲಾವಿದ ಗುರು ಅವರು ಹೊಂದಿರುವ ಕ್ರಿಯಾಶೀಲತೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಸಂಘಟನೆಯ ನೇತೃತ್ವ ವಹಿಸಿರುವವರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಮುನ್ನಡೆಯಬೇಕೆಂದರು.
       ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಡಾ. ಸೀತವ್ವ ಜೋಡಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕ ಬಿ.ಕೆ ಸಂಗಮೇಶ್ವರ್, ಜಾತ್ಯಾತೀತ ಜನತಾದಳ ಮುಖಂಡರಾದ ಶಾರದ ಅಪ್ಪಾಜಿ, ಉಪಾಧ್ಯಕ್ಷ ಚನ್ನಪ್ಪ, ಅಂತರರಾಷ್ಟ್ರೀಯ ಗಾಯಕ ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಷ ಬಿ.ಕೆ ಗುರುರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ಕೋಗಲೂರು ತಿಪ್ಪೇಸ್ವಾಮಿ, ಕೋಡ್ಲು ಯಜ್ಞಯ್ಯ, ಎಂ.ಎಸ್ ಸುಧಾಮಣಿ, ಎಂ.ಎಸ್ ಶಿವಪ್ರಕಾಶ್, ಜಿ. ಬೊಮ್ಮಯ್ಯ, ಬಿ.ಎನ್ ಸುರೇಶ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
      ಹಾಡು-ಹಾಸ್ಯ-ಕವನ-ಹನಿಗವನ-ಕಥೆ-ವಿಚಾರ ಸಾಂಸ್ಕೃತಿಕ ಕಾರ್ಯಕ್ರಮ, ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣೆ, ಕರೋನಾ ಯೋಧರಿಗೆ ಅಭಿನಂದನೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಕಲಾದೇಗುಲ ಶ್ರೀನಿವಾಸ್ ನಿರೂಪಿಸಿದರು. ಕಲಾವಿದ ಬಿ. ಗುರು ಸ್ವಾಗತಿಸಿದರು.

Friday, July 8, 2022

ತಾಲೂಕಿನಾದ್ಯಂತ ಸಾಧಾರಣ ಮಳೆ : ಹೆಚ್ಚಿನ ಹಾನಿ ಇಲ್ಲ

ಭದ್ರಾ ಜಲಾಶಯದಲ್ಲಿ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಿನ ನೀರು ಸಂಗ್ರಹ


ಭದ್ರಾವತಿ, ಜು. ೮: ಕಳೆದ ೫-೬ ದಿನಗಳಿಂದ ತಾಲೂಕಿನಾದ್ಯಂತ ಸಾಧಾರಣ ಮಳೆಯಾಗುತ್ತಿದ್ದು, ಸುಮಾರು ೧೪ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
      ಯಾವುದೇ ಜೀವ ಹಾನಿಯಾಗಿಲ್ಲ, ರಸ್ತೆಗಳು ಕಡಿತಗೊಂಡಿರುವ ಪ್ರಕರಣಗಳು ನಡೆದಿಲ್ಲ. ಪೂರ್ಣ ಪ್ರಮಾಣದಲ್ಲಿ ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿಲ್ಲ. ಎಲ್ಲಿಯೂ ಕಾಳಜಿ ಕೇಂದ್ರ ತೆರೆದಿಲ್ಲ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಸ್ಪಷ್ಟಪಡಿಸಿದ್ದಾರೆ.
      ಅಡಕೆ ತೋಟಕ್ಕೆ ಕೊಳೆರೋಗ ಭೀತಿ :
      ಮಲೆನಾಡು ಭಾಗದಲ್ಲಿ ತೋಟದ ಬೆಳೆಗಳಿಗೆ ರೋಗಬಾಧೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತಾಲೂಕು ಅರೆಮಲೆನಾಡು ಭಾಗವಾಗಿರುವ ಹಿನ್ನಲೆಯಲ್ಲಿ ರೋಗಬಾಧೆಗಳು ಕಡಿಮೆ. ಆದರೂ ಒಂದು ವೇಳೆ ಮಳೆ ಇದೆ ರೀತಿ ಒಂದು ವಾರ ಮುಂದುವರೆದಲ್ಲಿ ಅಡಕೆ ತೋಟಗಳಲ್ಲಿ ಕೊಳೆರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಇದುವರೆಗೂ ತೋಟದ ಬೆಳೆಗಳಿಗೆ ಸಂಬಂಧಿಸಿದಂತೆ ಯಾವುದೇ ನಷ್ಟದ ಮಾಹಿತಿ ಬಂದಿಲ್ಲ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕಾಂತರಾಜ್ ತಿಳಸಿದ್ದಾರೆ.
      ಮೆಕ್ಕೆಜೋಳಕ್ಕೆ ಹಾನಿ :
      ಪ್ರಸ್ತುತ ತಾಲೂಕಿನಲ್ಲಿ ಮೆಕ್ಕೆಜೋಳ ಬೆಳೆ ಮಾತ್ರ ಇದ್ದು, ಉಳಿದಂತೆ ಭತ್ತ, ರಾಗಿ ಬೆಳೆಗಳು ಇನ್ನೂ ನಾಟಿಯಾಗಿಲ್ಲ. ಮಳೆ ಇದೆ ರೀತಿ ಮುಂದುವರೆದು ನೀರು ಹೆಚ್ಚಾದ್ದಲ್ಲಿ ಮೆಕ್ಕೆಜೋಳಕ್ಕೆ ಹಾನಿಯಾಗಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶಶಿಧರ್ ತಿಳಿಸಿದ್ದಾರೆ.
      ಉಳಿದಂತೆ ಕೃಷಿ ಇಲಾಖೆಯಲ್ಲಿ ಈ ಬಾರಿ ಬಿತ್ತನೆ ಬೀಜ ಹಾಗು ಗೊಬ್ಬರ ಸಮಸ್ಯೆ ಇಲ್ಲ. ಈಗಾಗಲೇ ಬಿತ್ತನೆ ಬೀಜ ರೈತರಿಗೆ ವಿತರಿಸಲಾಗುತ್ತಿದೆ ಎಂದರು.
      ಇಳಿಮುಖಗೊಂಡ ಕಬ್ಬು ಬೆಳೆ :
      ನಗರದಲ್ಲಿ ಎಂಪಿಎಂ ಸಕ್ಕರೆ ಕಾರ್ಖಾನೆ ಚಾಲನೆಯಲ್ಲಿದ್ದಾಗ ತಾಲೂಕಿನಲ್ಲಿ ಸುಮಾರು ೬ ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಬೆಳೆ ಬೆಳೆಯಾಗುತ್ತಿತ್ತು. ಇದೀಗ ಕಬ್ಬು ಬೆಳೆ ಕೇವಲ  ೩೦೦ ಹೆಕ್ಟೇರ್ ತಲುಪಿದೆ ಎಂದು ಕೃಷಿ ಅಧಿಕಾರಿ ರಾಕೇಶ್ ತಿಳಿಸಿದ್ದಾರೆ.
      ಒಂದು ಕಾಲದಲ್ಲಿ ಎಲ್ಲೆಡೆ ಕಬ್ಬು ಬೆಳೆ ರಾರಾಜಿಸುತ್ತಿತ್ತು. ಇದೀಗ ೩೦೦ ಹೆಕ್ಟೇರ್ ತಲುಪಿರುವುದು ವಿಷಾದನೀಯ ಸಂಗತಿಯಾಗಿದ್ದು, ಈ ನಡುವೆ ಕೆಲವು ಆಲೆಮನೆಗಳಿಗೆ ಕಬ್ಬಿನ ಕೊರತೆ ಎದುರಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ ಕಬ್ಬು ಸರಬರಾಜು ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ರೈತರು ಕಬ್ಬು ಬೆಳೆ ಬದಲಾಗಿ ಅಡಕೆ ಬೆಳೆಗೆ ಮಾರುಹೋಗಿದ್ದಾರೆ. ಇದರಿಂದಾಗಿ ಕಬ್ಬು ಬೆಳೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎಂದರು.
      ಕಳೆದ ಬಾರಿ ೧೦ ಅಡಿ ಹೆಚ್ಚಿನ ನೀರು:
      ಭದ್ರಾ ಜಲಾಶಯ ವ್ಯಾಪ್ತಿಯ ಸುತ್ತಮುತ್ತ ವ್ಯಾಪಕ ಮಳೆಯಾಗುತ್ತಿದ್ದು, ಇದರಿಂದಾಗಿ ಜಲಾಶಯದ ನೀರಿನ ಮಟ್ಟ ಕಳೆದ ಬಾರಿಗಿಂತ ೧೦ ಅಡಿ ಹೆಚ್ಚಾಗಿದೆ.
      ಶುಕ್ರವಾರ ೧೬೬.೫ ಅಡಿ ಅಡಿ ತಲುಪಿದ್ದು, ೪೯.೦೭೪ ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ಬಾರಿ ೧೫೫.೮ ಅಡಿ ಇದ್ದು, ೩೯.೦೧೪ ಟಿಎಂಸಿ ನೀರು ಸಂಗ್ರಹವಾಗಿತ್ತು. ಪ್ರಸ್ತುತ ಒಳಹರಿವು ೨೯,೯೪೨ ಕ್ಯೂಸೆಕ್ಸ್ ಇದ್ದು, ಹೊರ ಹರಿವು ೧೪೩ ಕ್ಯೂಸೆಕ್ಸ್ ಆಗಿದೆ. ಈ ಬಾರಿ ೧೦ ಅಡಿ ನೀರು ಹೆಚ್ಚಾಗಿರುವುದು ರೈತರ ಮುಖದಲ್ಲಿ ಸಂತಸವನ್ನುಂಟು ಮಾಡಿದೆ.