Monday, August 15, 2022

ನಗರಸಭೆ ವ್ಯಾಪ್ತಿ, ಕೆಲವು ಗ್ರಾಮಾಂತರ ಭಾಗಗಳಲ್ಲಿ ನಿಷೇಧಾಜ್ಞೆ ಜಾರಿ

ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ಜನ್ನಾಪುರ ವಾಣಿಜ್ಯ ರಸ್ತೆಯಲ್ಲಿ ಅಂಗಡಿಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಿರುವುದು.
    ಭದ್ರಾವತಿ, ಆ. ೧೫: ಶಿವಮೊಗ್ಗ ನಗರದಲ್ಲಿ ಉಂಟಾಗಿರುವ ಅಹಿತಕರ ಘಟನೆ ಹಿನ್ನಲೆಯಲ್ಲಿ ತಾಲೂಕಿನ ನಗರಸಭೆ ವ್ಯಾಪ್ತಿ ಹಾಗು ಕೆಲವು ಗ್ರಾಮಾಂತರ ಭಾಗದಲ್ಲಿ  ಸೋಮವಾರ ಕಲಂ ೧೪೪ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ತಹಸೀಲ್ದಾರ್ ಆರ್. ಪ್ರದೀಪ್ ಆದೇಶ ಹೊರಡಿಸಿದ್ದಾರೆ.
    ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಅಹಿತಕರ ಘಟನೆಯನ್ನು ಬೆಂಬಲಿಸಿ ಅಥವಾ ವಿರೋಧಿಸಿ ಪ್ರತಿಭಟನೆ ಅಥವಾ ಮೆರವಣಿಗೆಗಳು ನಡೆಯುವ ಸಾಧ್ಯತೆ ಕಂಡು ಬಂದಿರುವ ಹಿನ್ನಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನಗರಸಭೆ ೩೫ ವಾರ್ಡ್‌ಗಳ ವ್ಯಾಪ್ತಿಯಲ್ಲಿ, ಪೇಪರ್‌ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಗು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹುಣಸೇಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್), ವೀರಾಪುರ, ಅರಳಿಹಳ್ಳಿ, ಸೀತಾರಾಮಪುರ, ಕಾಗೇಕೋಡಮಗ್ಗೆ ಮತ್ತು ದೊಣಬಘಟ್ಟ ಗ್ರಾಮದಲ್ಲಿ ಸಂಜೆ ೫ ಗಂಟೆಯಿಂದ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
    ಅಂಗಡಿಮುಂಗಟ್ಟುಗಳು ಬಂದ್:
    ಸಂಜೆ ನಿಷೇಧಾಜ್ಞೆ ಜಾರಿಯಾಗುತ್ತಿದ್ದಂತೆ ಪೊಲೀಸರು ನಗರ ಪ್ರದೇಶ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಗೇಡ್‌ಗಳನ್ನು ಅಳವಡಿಸಿ ಸಂಚಾರ ನಿಯಂತ್ರಿಸುವ ಕಾರ್ಯಕ್ಕೆ ಮುಂದಾದರು. ವಾಣಿಜ್ಯ ರಸ್ತೆಗಳಲ್ಲಿನ ಅಂಗಡಿಮುಂಗಟ್ಟುಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಆಯಾ ಕಟ್ಟುನಿಟ್ಟಿನ ಸ್ಥಳಗಳಲ್ಲಿ ಬಿಗಿಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ರಾತ್ರಿ ೭ರ ನಂತರ ಬಹುತೇಕ ಕಡೆ ಬಂದ್ ವಾತಾವರಣ ಕಂಡು ಬಂದಿದ್ದು, ಪಾದಚಾರಿ, ವಾಹನಗಳ ಸಂಚಾರ ವಿರಳವಾಗಿತ್ತು.
    ಶಾಲಾ-ಕಾಲೇಜುಗಳಿಗೆ ರಜೆ :
    ಮತ್ತೊಂದೆಡೆ ಮುನ್ನಚ್ಚರಿಕೆ ಕ್ರಮವಾಗಿ ತಾಲೂಕಿನಾದ್ಯಂತ ಮಂಗಳವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಈ ನಡುವೆ ಕುವೆಂಪು ವಿಶ್ವವಿದ್ಯಾಲಯ ಸಹ ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದೆ.  

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ : ಸರ್ಕಾರಿ ಶಾಲೆಗಳ ೩ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

ಶಿಕ್ಷಣ ಇಲಾಖೆ ವತಿಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ಭದ್ರಾವತಿ ತಾಲೂಕಿನ ಸರ್ಕಾರಿ ಶಾಲೆಗಳ ೩ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬ್ಯಾಗ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
    ಭದ್ರಾವತಿ, ಆ. ೧೫: ಶಿಕ್ಷಣ ಇಲಾಖೆ ವತಿಯಿಂದ ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ತಾಲೂಕಿನ ಸರ್ಕಾರಿ ಶಾಲೆಗಳ ೩ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಬ್ಯಾಗ್ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
    ಬಾಳೇಮಾರನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಆರ್. ಮೇಘನಾ, ತರೀಕೆರೆ ರಸ್ತೆಯ ಸರ್ಕಾರಿ ಪದವ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ವಿದ್ಯಾರ್ಥಿ ಎಸ್.ಎ ಗಿರೀಶ್ ಮತ್ತು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಜೆ. ಶೋಭಾ ಅವರಿಗೆ ಸೋಮವಾರ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಲ್ಯಾಪ್‌ಟಾಪ್‌ಗಳನ್ನು ವಿತರಿಸಿದರು.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಶಿಕ್ಷಣ ಸಂಯೋಜಕ ರವಿಕುಮಾರ್, ಸಿ. ಚನ್ನಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೭೫ನೇ ಸ್ವಾತಂತ್ರ್ಯೋತ್ಸವ : ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್, ಹಾಲು, ಸಿಹಿ ವಿತರಣೆ

೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ಭದ್ರಾವತಿ ತಾಲೂಕಿನ ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಸೋಮವಾರ ನೋಟ್ ಬುಕ್, ಹಾಲು ಮತ್ತು ಸಿಹಿ ವಿತರಿಸಲಾಯಿತು.
    ಭದ್ರಾವತಿ, ಆ. ೧೫ : ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂಭ್ರಮಾಚರಣೆ ಅಂಗವಾಗಿ ತಾಲೂಕಿನ ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ವತಿಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಸೋಮವಾರ ನೋಟ್ ಬುಕ್, ಹಾಲು ಮತ್ತು ಸಿಹಿ ವಿತರಿಸಲಾಯಿತು.
    ಸಂಘದ ಅಧ್ಯಕ್ಷ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಡಿ. ಆನಂದ್ ಅಧ್ಯಕ್ಷತೆಯಲ್ಲಿ ಕಾಚಗೊಂಡನಹಳ್ಳಿ ಮತ್ತು ವಿಜಯನಗರದ ಸರ್ಕಾರಿ ಶಾಲೆಗಳ ಒಟ್ಟು ಸುಮಾರು ೧೮೦ ಬಡ ಮಕ್ಕಳಿಗೆ ನೋಟ್ ಬುಕ್, ಹಾಲು ಮತ್ತು ಸಿಹಿ ವಿತರಿಸುವ ಜೊತೆಗೆ ಹಾಲಿನ ಮಹತ್ವ ಹಾಗು ಉತ್ಪನ್ನಗಳ ಕುರಿತು ಮಾಹಿತಿ ನೀಡಲಾಯಿತು.
    ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ವತಿಯಿಂದ ಮೊದಲ ಬಾರಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಿಸಲಾಗಿದ್ದು, ಪ್ರತಿ ವರ್ಷ ಸಹ ನೋಟ್ ಬುಕ್‌ಗಳನ್ನು ವಿತರಿಸುವ ಉದ್ದೇಶ ಹೊಂದಲಾಗಿದೆ.
    ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ ಶ್ರೀಪಾದ ಹೆಗಡೆ, ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಬಿ. ಮಂಜುನಾಥ್, ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕ ಹಾಗು ಸಿಬ್ಬಂದಿ ವರ್ಗದವರು, ಕಾಚಗೊಂಡನಹಳ್ಳಿ ಹಾಲು ಉತ್ಪಾದಕರ ಸಂಘದ ಪದಾಧಿಕಾರಿಗಳು, ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

ನಮ್ಮ ಮುಂದಿನ ಹೋರಾಟದ ದಾರಿ ಕಂಡುಕೊಂಡಾಗ ಸ್ವಾತಂತ್ರ್ಯ ಪಡೆದಿರುವುದು ಸಾರ್ಥಕ

ಭದ್ರಾವತಿ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆವರಣದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ಭದ್ರಾವತಿ, ಆ. ೧೫ : ನಮ್ಮ ದೇಶಕ್ಕೆ ಸ್ವಾತಂತ್ರ್ಯ ಹೋರಾಟದಿಂದ ಬಂದಿದ್ದು,  ಲಕ್ಷಾಂತರ ಜನರ ತ್ಯಾಗ, ಬಲಿದಾನ, ಅನೇಕ ಮಹನೀಯರ ಪರಿಶ್ರಮವಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳುವುದರ ಜೊತೆಗೆ ನಮ್ಮ ಮುಂದಿನ ಹೋರಾಟದ ದಾರಿ ಕಂಡು ಕೊಳ್ಳಬೇಕಾಗಿದೆ ಎಂದು ತಹಸೀಲ್ದಾರ್ ಆರ್. ಪ್ರದೀಪ್ ಹೇಳಿದರು.
    ಅವರು ಸೋಮವಾರ ಹೊಸಸೇತುವೆ ರಸ್ತೆಯಲ್ಲಿರುವ ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಆವರಣದಲ್ಲಿ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
    ದೇಶದ ಇತಿಹಾಸ ಅರಿಯದವರು ಭವಿಷ್ಯದ ಇತಿಹಾಸ ಸೃಷ್ಟಿಸಲಾರರು ಎಂಬ ಮಾತು ಸತ್ಯ. ದೇಶಕ್ಕೆ ಸ್ವಾತಂತ್ರ್ಯ ಯಾರು ನೀಡಲಿಲ್ಲ ಬದಲಾಗಿ ಹೋರಾಟದ ಫಲವಾಗಿ ಲಭಿಸಿತು. ನಾವೆಲ್ಲರೂ ಇಂದು ಸ್ವಾತಂತ್ರ್ಯದ ಫಲ ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಸಹ ಹಲವಾರು ಸಮಸ್ಯೆಗಳು ನಮ್ಮ ಮುಂದಿವೆ. ನಮ್ಮ ಮುಂದಿನ ಗುರಿ, ಹೋರಾಟಗಳನ್ನು ಅರ್ಥ ಮಾಡಿಕೊಳ್ಳಬೇಕು. ಆಗ ಮಾತ್ರ ನಮ್ಮ ದೇಶದ ಸ್ವಾತಂತ್ರ್ಯಕ್ಕೆ ನಾವೆಲ್ಲರೂ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ನಿಜವಾದ ನಾಯಕರನ್ನು ನಾವುಗಳು ಗುರುತಿಸಬೇಕು. ಅವರ ಆದರ್ಶತನಗಳನ್ನು ಮೈಗೂಡಿಸಿಕೊಳ್ಳಬೇಕು. ಪ್ರತಿಯೊಬ್ಬರಲ್ಲೂ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿ ಜಾಗೃತಗೊಳ್ಳಬೇಕೆಂದರು.
     ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ಪೌರಾಯುಕ್ತ ಮನುಕುಮಾರ್, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ಪೊಲೀಸ್ ಉಪಾಧೀಕ್ಷಕ ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ ಹಾಗು ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳು ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ಪಥಸಂಚಲನ ನಡೆಯಿತು. ನ್ಯೂಟೌನ್ ಪೊಲೀಸ್ ಠಾಣಾಧಿಕಾರಿ ದೇವರಾಜ್ ಪಥ ವಂದನೆ ಸ್ವೀಕರಿಸಿದರು.  ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸ್ವಾಗತಿಸಿದರು. ದೈಹಿಕ ಶಿಕ್ಷಕ, ಕಲಾವಿದ ಅಪೇಕ್ಷ ಮಂಜುನಾಥ್ ನಿರೂಪಿಸಿದರು.

 

Sunday, August 14, 2022

೭೫ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಸ್ಥಳ ಬದಲಾವಣೆ

    ಭದ್ರಾವತಿ, ಆ. ೧೪: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ೭೫ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆ.೧೫ರಂದು ಬೆಳಿಗ್ಗೆ ೯ ಗಂಟೆಗೆ ಹೊಸ ಸೇತುವೆ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ.
    ಪ್ರತಿವರ್ಷ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು.  ಆದರೆ ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಕಾರ್ಯಕ್ರಮವನ್ನು ವಿಇಎಸ್ ವಿದ್ಯಾಸಂಸ್ಥೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ವಿದ್ಯಾಸಂಸ್ಥೆಗಳು ಮತ್ತು ಸಾರ್ವಜನಿಕರು ಸಹಕರಿಸುವಂತೆ ಸಹಸೀಲ್ದಾರ್ ಆರ್. ಪ್ರದೀಪ್ ಕೋರಿದ್ದಾರೆ.

ವಿಐಎಸ್‌ಎಲ್ ವತಿಯಿಂದ ೭೬ನೇ ಸ್ವಾತಂತ್ರ್ಯೋತ್ಸವ : ಕಾರ್ಖಾನೆ ಮುಂಭಾಗ ಬೃಹತ್ ರಾಷ್ಟ್ರ ಧ್ವಜ ಅನಾವರಣ

ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕರೆ ನೀಡಲಾಗಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಮುಖ್ಯ ದ್ವಾರದ ಬಳಿ ಬೃಹತ್ ರಾಷ್ಟ್ರ ಧ್ವಜ ಅನಾವರಣಗೊಳಿಸಲಾಗಿದೆ.
    ಭದ್ರಾವತಿ, ಆ. ೧೪: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೧೫ರಂದು ಬೆಳಿಗ್ಗೆ ೯ ಗಂಟೆಗೆ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದಲ್ಲಿ ೭೬ನೇ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿದೆ.
    ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಕಾರ್ಖಾನೆಯ ಅಧಿಕಾರಿಗಳು, ಕಾಯಂ ಹಾಗು ಗುತ್ತಿಗೆ ಕಾರ್ಮಿಕರು, ಕಾರ್ಮಿಕ ಸಂಘಟನೆಗಳ ಪ್ರಮುಖರು ಉಪಸ್ಥಿತರಿರುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿಕೊಡುವಂತೆ ಸಾರ್ವಜನಿಕ ಸಂಪರ್ಕ ಇಲಾಖೆಯ ಮುಖ್ಯ ವ್ಯವಸ್ಥಾಪಕ ಎಲ್. ಪ್ರವೀಣ್‌ಕುಮಾರ್ ಕೋರಿದ್ದಾರೆ.
    ಬೃಹತ್ ಧ್ವಜ ಅನಾವರಣ :
   ದೇಶದ ೭೫ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕರೆ ನೀಡಲಾಗಿರುವ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಕಾರ್ಖಾನೆಯ ಮುಖ್ಯ ದ್ವಾರದ ಬಳಿ ಬೃಹತ್ ರಾಷ್ಟ್ರ ಧ್ವಜ ಅನಾವರಣಗೊಳಿಸಲಾಗಿದೆ.
    ಕಾರ್ಖಾನೆ ವತಿಯಿಂದ ಕಳೆದ ಸುಮಾರು ೧ ವರ್ಷದಿಂದ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಹಲವಾರು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಳ್ಳುವ ಜೊತೆಗೆ ಬಹುತೇಕ ಕಾರ್ಯಕ್ರಮಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಕಾರ್ಖಾನೆ ಮುಂಭಾಗ ರಾಷ್ಟ್ರ ಧ್ವಜ ಆ.೧೫ರ ಸಂಜೆವರೆಗೂ ಅನಾವರಣಗೊಳ್ಳಲಿದೆ.

ಸ್ವಾತಂತ್ರ್ಯೋತ್ಸವದ ಸವಿನೆನಪಿಗೆ ಹಿರಿಯ ಸದಸ್ಯರಿಗೆ ಗೌರವಾರ್ಪಣೆ, ನೌಕರರ ವರ್ಗಕ್ಕೆ ಸನ್ಮಾನ

ಭದ್ರಾವತಿ, ಆ. 14: ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ವತಿಯಿಂದ ಹಳೇನಗರದ ವೀರಶೈವ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ, ಉಡಿ ತುಂಬುವ ಕಾರ್ಯಕ್ರಮ ಮತ್ತು ೭೫ನೇ ಸ್ವಾತಂತ್ರ್ಯೋತ್ಸವದ ಸವಿನೆನಪಿಗೆ ಮಹಾಸಭಾದ ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಹಾಗು ಸಮಾಜದ ನೌಕರರ ವರ್ಗಕ್ಕೆ ಸನ್ಮಾನ ಕಾರ್ಯಕ್ರಮವನ್ನು  ಕಾನೂನು ಮತ್ತು ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ ಮಾಧುಸ್ವಾಮಿ ಉದ್ಘಾಟಿಸಿದರು.
      ಮಹಾಸಭಾ ಗೌರವಾಧ್ಯಕ್ಷರಾದ ಹಿರೇಮಠ ಬಿಳಿಕಿ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀ,ಜಿ ದಿವ್ಯ ಸಾನಿಧ್ಯವಹಿದ್ದರು. ಜಿ. ಸುರೇಶಯ್ಯ ಅಧ್ಯಕ್ಷತೆ ವಹಿಸಿದ್ದರು.  ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ ಧನಂಜಯ ಉಪನ್ಯಾಸ ನಡೆಸಿಕೊಟ್ಟರು.  
      ಸಂಸದ ಬಿ.ವೈ ರಾಘವೇಂದ್ರ, ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ಎಸ್. ರುದ್ರೇಗೌಡ,  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಕರ್ನಾಟಕ ರಾಜ್ಯ ಒಳಚರಂಡಿ ಹಾಗು ನೀರು ಸರಬರಾಜು ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಜಿಲ್ಲಾ ಖಜಾನೆ ಉಪನಿರ್ದೇಶಕಿ ಎಚ್.ಎಸ್ ಸಾವಿತ್ರಿ, ಮಹಾಸಭಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ನಟರಾಜ್ ಸಾಗರನಹಳ್ಳಿ, ಜಿಲ್ಲಾಧ್ಯಕ್ಷ ರುದ್ರಮುನಿ ಎಸ್ ಸಜ್ಜನ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಹಟ್ಟಿ ಚಿನ್ನದ ಗಣಿ ನಿರ್ದೇಶಕ ಎಸ್. ಹಾಲೇಶ್ ಕೂಡ್ಲಿಗೆರೆ ಮತ್ತು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಎಸ್. ವಿರುಪಾಕ್ಷಪ್ಪ, ಮಹಾಸಭಾ ತಾಲೂಕು ಉಪಾಧ್ಯಕ್ಷ ವಾಗೀಶ್, ಪ್ರಧಾನ ಕಾರ್ಯದರ್ಶಿ ಕೆ.ಎಸ್ ರೇವಪ್ಪ, ಖಜಾಂಚಿ ಜಿ.ಎಂ ಮೂರ್ತಿ, ನಿರ್ದೇಶಕಿಯರಾದ ಆರ್.ಎಸ್ ಶೋಭಾ, ಸೌಭಾಗ್ಯಮ್ಮ, ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಕವಿತಾ ಸುರೇಶ್, ಯುವ ಘಟಕದ ಅಧ್ಯಕ್ಷ ಎಚ್. ಮಂಜುನಾಥ್, ಆನಂದ, ಬಿ.ಎಂ ರಮೇಶ್  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.