![](https://blogger.googleusercontent.com/img/a/AVvXsEjx09tymDOTKecgpQcZ1hfaqM0U487sXH3T-V77WAFx9SkGdtHgN4xaNX_EdX9pDmA1cZEP3JzWeeakLZQ4po46xilutJ41d4cCwkHRLXtgclwLUfs6FuYqEzOhOYx8gDKGDvAUupheRDUVem3H2aSnvByHny4Z1wbILspR0EIQjjVH-7J4A4M4nr5L-g=w400-h180-rw)
ಭದ್ರಾವತಿ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಶ್ರೀ ಕನಕ ಪತ್ತಿನ ಸಹಕರ ಸಂಘ ನಿಯಮಿತದ ದಶಮಾನೋತ್ಸವ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರಿಗೆ ಗುರು ವಂದನೆ ಸಲ್ಲಿಸಲಾಯಿತು.
ಭದ್ರಾವತಿ, ಸೆ. ೧೧: ಸಹಕಾರ ಸಂಘಗಳಲ್ಲಿ ನಂಬಿಕೆ, ವಿಶ್ವಾಸ ಹಾಗು ಪ್ರಾಮಾಣಿಕತೆ ಬಹಳ ಮುಖ್ಯ ಎಂದು ಶ್ರೀ ಕ್ಷೇತ್ರ ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ಶ್ರೀಗಳು ಭಾನುವಾರ ನಗರದ ಬಿ.ಎಚ್ ರಸ್ತೆ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ಕನಕ ಪತ್ತಿನ ಸಹಕರ ಸಂಘ ನಿಯಮಿತದ ದಶಮಾನೋತ್ಸವ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಸಹಕಾರ ಸಂಘ ಮುನ್ನಡೆಸುವವರಲ್ಲಿ ನಂಬಿಕೆ, ವಿಶ್ವಾಸ ಹಾಗು ಪ್ರಾಮಾಣಿಕತೆ ಎಂಬುದು ಬಹಳ ಮುಖ್ಯವಾಗಿದೆ. ಆಗ ಮಾತ್ರ ಸಹಕಾರ ಸಂಘ ನಿರೀಕ್ಷೆಗೂ ಮೀರಿದ ಬೆಳವಣಿಗೆ ಹೊಂದುತ್ತದೆ. ಕನಕದಾಸರು ತಮ್ಮ ವಚನಗಳಲ್ಲಿ ಇದನ್ನು ಸ್ಪಷ್ಟಪಡಿಸಿದ್ದಾರೆ. ಎಲ್ಲಿ ವಿಶ್ವಾಸ, ನಂಬಿಕೆ ಕಳೆದುಕೊಳ್ಳುತ್ತೇವೆಯೋ ಅಲ್ಲಿ ಬೆಳವಣಿಗೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.
ಸಮಾಜದಲ್ಲಿ ಸಹಕಾರ ಸಂಘಗಳು ಅಗತ್ಯವಾಗಿದ್ದು, ಹಿಂದುಳಿದ ಸಮಾಜಗಳು ಸದೃಢಗೊಳ್ಳಲು ಹೆಚ್ಚು ಸಹಕಾರಿಯಾಗಿವೆ. ಸಹಕಾರ ಸಂಘಗಳ ಬೆಳವಣಿಗೆಗೆ ಎಲ್ಲರೂ ಸಹ ಕೈಜೋಡಿಸಬೇಕು. ನಮ್ಮ ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣಹಾಕಬೇಕು. ಸಮುದಾಯಗಳಲ್ಲಿನ ಕೆಲವು ಮೂಡನಂಬಿಕೆ, ಮೌಢ್ಯ ಆಚರಣೆಗಳಿಂದ ದೂರ ಉಳಿಯಬೇಕು. ಆರ್ಥಿಕ ಶಿಸ್ತಿನ ವಿವೇಚನೆ ಬೆಳೆಸಿಕೊಳ್ಳಬೇಕು. ಅನಗತ್ಯವಾಗಿ ವ್ಯಯ ಮಾಡುವ ಹಣವನ್ನು ಸಹಕಾರ ಸಂಘಗಳಲ್ಲಿ ತೊಡಗಿಸಿದಾಗ ಭವಿಷ್ಯದಲ್ಲಿ ಅದು ನಿಮ್ಮ ನೆರವಿಗೆ ಬರುತ್ತದೆ. ಅಲ್ಲದೆ ಸಮಾಜದಲ್ಲಿ ಮುಂದುವರೆದ ಸಮುದಾಯಗಳಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ನಿರ್ದೇಶಕ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸತೋಷ್, ಕಳೆದ ೧೦ ವರ್ಷಗಳ ಹಿಂದೆ ಆರಂಭಗೊಂಡ ಸಹಕಾರ ಸಂಘ ಪ್ರಸ್ತುತ ೧೦ ಕೋ.ರು. ಗಳಿಗೂ ಹೆಚ್ಚಿನ ವಹಿವಾಟು ಹೊಂದಿದೆ. ಅಲ್ಲದೆ ಸಮಾಜದಲ್ಲಿ ಇತರೆ ಸಂಘಗಳಿಗೆ ಮಾದರಿಯಾಗಿ ಗುರುತಿಸಿಕೊಂಡಿದ್ದು, ಇದಕ್ಕೆ ಸಂಘದ ಹಿರಿಯರ ಮಾರ್ಗದರ್ಶನ, ಮುನ್ನಡೆಸುತ್ತಿರುವವರಲ್ಲಿನ ಪ್ರಾಮಾಣಿಕತೆ, ಬದ್ಧತೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಳವಣಿಗೆ ಹೊಂದುವ ವಿಶ್ವಾಸವಿದೆ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್ ಶೇಖರಪ್ಪ, ಸಂಘದ ಉಪಾಧ್ಯಕ್ಷ ಡಾ. ಎಚ್.ಆರ್ ನರೇಂದ್ರ, ನಗರಸಭಾ ಸದಸ್ಯರಾದ ಕಾಂತರಾಜ್, ಅನಿತಾ ಮಲ್ಲೇಶ್, ಆರ್. ಶ್ರೇಯಸ್(ಚಿಟ್ಟೆ), ಶಶಿಕಲಾ ನಾರಾಯಣಪ್ಪ, ಮಂಜುಳ ಸುಬ್ಬಣ್ಣ, ಜಿಲ್ಲಾ ಸಹಕಾರಿ ಯೂನಿಯನ್ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್, ಸಂಘದ ನಿರ್ದೇಶಕರಾದ ಬಿ.ಎಚ್ ವಸಂತ, ಬಿ.ಎಸ್ ಗೋಪಾಲ್, ವೈ. ನಟರಾಜ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
"ನಾನು ಯಾವುದೇ ಆಹಾರ ಪದ್ದತಿಗೆ ವಿರೋಧವಿಲ್ಲ. ಆಹಾರ ಪದ್ದತಿ ಅವರವರ ಆಯ್ಕೆ. ಆದರೆ ಆಹಾರ ಸೇವನೆಯಲ್ಲಿನ ಇತಿಮಿತಿ ಬಗ್ಗೆ ಎಲ್ಲರೂ ಅರಿವು ಹೊಂದಿರಬೇಕು. ಸಂಪ್ರದಾಯದ ಆಚರಣೆ ನೆಪದಲ್ಲಿ ಅನಗತ್ಯವಾಗಿ ದುಂದು ವೆಚ್ಚ ಮಾಡಬಾರದು."
- ಶ್ರೀ ನಿರಂಜನಾನಂದಪುರಿ ಸ್ವಾಮೀಜಿ
ಸಂಘದ ಅಧ್ಯಕ್ಷ ಡಿ. ಪ್ರಭಾಕರ ಬೀರಯ್ಯ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕ ಎಂ. ರಾಜು ಸ್ವಾಗತಿಸಿದರು. ಪ್ರಶಾಂತ್ ಸಣ್ಣಕ್ಕಿ ಕಾರ್ಯಕ್ರಮ ನಿರೂಪಿಸಿದರು.