Tuesday, September 27, 2022

7ನೇ ಆಲ್ ಇಂಡಿಯನ್ ನ್ಯಾಷನಲ್-2022 ಷಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಬಹುಮಾನ

 ಕೆ. ಪವನ್ ಕುಮಾರ್ ಅಂತರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆ

ಕೆ. ಪವನ್ ಕುಮಾರ್
    ಭದ್ರಾವತಿ, ಸೆ. 28: ಮೂಲತಃ ಕಾಗದ ನಗರದ 6ನೇ ವಾರ್ಡ್ ನಿವಾಸಿ  ಕೆ. ಪವನ್ ಕುಮಾರ್  7ನೇ ಆಲ್ ಇಂಡಿಯನ್ ನ್ಯಾಷನಲ್-2022 ಷಟಲ್ ಬ್ಯಾಡ್ಮಿಂಟನ್   ಪಂದ್ಯಾವಳಿಯಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.   
     ಸಿಂಗಲ್ಸ್  ಮತ್ತು ಡಬಲ್ಸ್ ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನ ಹಾಗೂ ಮಿಕ್ಸೆಡ್ ಡಬಲ್ಸ್ ನಲ್ಲಿ ಬೆಳ್ಳಿ ಪದಕ ಪಡೆಯುವ ಮೂಲಕ ಕೀರ್ತಿ ತಂದಿದ್ದಾರೆ.  ಅಲ್ಲದೆ ಅಂತರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆಯಾಗಿದ್ದಾರೆ.
      ಕೆ. ಪವನ್ ಕುಮಾರ್ ಅವರನ್ನು ಕ್ರೀಡಾಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಅಭಿನಂದಿಸಿದ್ದಾರೆ.

ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ೪ ಮಂದಿ ನೇಮಕ


ಭದ್ರಾವತಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಹೊಸದಾಗಿ ನೇಮಕಗೊಂಡ ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ವಿತರಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಭದ್ರಾವತಿ, ಸೆ. ೨೭: ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗಕ್ಕೆ ಹೊಸದಾಗಿ ೪ ಮಂದಿ ಪದಾಧಿಕಾರಿಗಳನ್ನು ನೇಮಕಗೊಳಿಸಿ ನಗರ ಬ್ಲಾಕ್ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಬಿ.  ಗಂಗಾಧರ್ ಆದೇಶ ಹೊರಡಿಸಿದ್ದಾರೆ.
    ಶಾಸಕ ಬಿ.ಕೆ ಸಂಗಮೇಶ್ವರ್‌ರವರ ನಿರ್ದೇಶನದ ಮೇರೆಗೆ ಪ್ರಧಾನ ಸಂಚಾಲಕರಾಗಿ ಎಚ್. ಮಂಜಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಬಸವರಾಜ್, ಸಂಘಟನಾ ಕಾರ್ಯದರ್ಶಿಗಳಾಗಿ ಸಂತೋಷ್ ಮತ್ತು ಜಿ. ಹರೀಶ್ ಅವರನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.
    ನೂತನ ಪದಾಧಿಕಾರಿಗಳಿಗೆ ನೇಮಕ ಆದೇಶ ಪ್ರತಿ ವಿತರಿಸಿ ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು. ಪ್ರಮುಖರಾದ ಬಲ್ಕೀಶ್ ಬಾನು, ಸಿ.ಎಂ ಖಾದರ್, ಟಿ.ವಿ ಗೋವಿಂದಸ್ವಾಮಿ, ವೈ. ರೇಣುಕಮ್ಮ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಯುವ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಅಫ್ತಾಬ್ ಅಹಮದ್, ಅಮೀರ್‌ಜಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆ : ಇಬ್ಬರು ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ

ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭದ್ರಾವತಿ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ  ಸಿಂಚನ ಎಂ ಪಾಟೀಲ್ ಹಾಗೂ ಪ್ರಕೃತಿ ಆರ್ ಗೌಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಸೆ. ೨೭: ಶಿವಮೊಗ್ಗದಲ್ಲಿ ನಡೆದ ಮಕ್ಕಳ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ನಗರದ ಸೆಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳಾದ  ಸಿಂಚನ ಎಂ ಪಾಟೀಲ್ ಹಾಗೂ ಪ್ರಕೃತಿ ಆರ್ ಗೌಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಸಿಂಚನ ಎಂ. ಪಾಟೀಲ್ ಹಾಗು ಪ್ರಕೃತಿ ಆರ್. ಗೌಡ ಅವರು ಈಗಾಗಲೇ ತಾಲೂಕು, ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದು, ರಾಜ್ಯಮಟ್ಟಕ್ಕೂ ಸಹ ಆಯ್ಕೆಯಾಗಿ ಕೀರ್ತಿ ತಂದಿದ್ದಾರೆ.
    ಇದೀಗ ದಸರಾ ಕ್ರೀಡಾಕೂಟದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಈ ಇಬ್ಬರು ವಿದ್ಯಾರ್ಥಿಗಳನ್ನು  ಬಾರಂದೂರು ಮಂಜುನಾಥ್ ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.  

ಉಕ್ಕಿನ ನಗರದ ಮೂವರು ಪಿಎಫ್‌ಐ ಕಾರ್ಯಕರ್ತರು ಪೊಲೀಸರ ವಶಕ್ಕೆ

ಭದ್ರಾವತಿ ಖಾಜಿ ಮೊಹಲ್ಲಾ ಕೋಟೆ ಏರಿಯಾದ ಇಬ್ಬರು ಹಾಗೂ ಅನ್ವರ್ ಕಾಲೋನಿಯ ಒಬ್ಬನನ್ನು ಬಂಧಿಸಿ, ಮಂಗಳವಾರ ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಯಿತು. 
    ಭದ್ರಾವತಿ, ಸೆ. ೨೭:  ಹಳೇನಗರ ಠಾಣೆ ಪೊಲೀಸರು ಮಂಗಳ ಬೆಳಿಗ್ಗೆ ನಡೆಸಿದ ದಾಳಿಯಲ್ಲಿ ಬಂಧನಕ್ಕೆ ಒಳಗಾಗಿರುವ ಮೂವರು ಪಿಎಫ್'ಐ ಕಾರ್ಯಕರ್ತರನ್ನು ಒಂದು ವಾರಗಳ ಕಾಲ ಪೊಲೀಸರ ವಶಕ್ಕೆ ವಹಿಸಲಾಗಿದೆ ಎಂಬ ತಿಳಿದು ಬಂದಿದೆ.
    ರಾಜ್ಯದಾದ್ಯಂತ ಬೆಳಗ್ಗಿನ ಜಾವ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರುಗಳ ನಿವಾಸಗಳ ಮೇಲೆ ಪೊಲೀಸರು ದಾಳಿ ನಡೆಸಿರುವಂತೆಯೇ ನಗರದಲ್ಲೂ ಸಹ ದಾಳಿ ನಡೆಸಲಾಗಿದ್ದು, ಹಳೇನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
    ಖಾಜಿ ಮೊಹಲ್ಲಾ ಕೋಟೆ ಏರಿಯಾದ ಇಬ್ಬರು ಹಾಗೂ ಅನ್ವರ್ ಕಾಲೋನಿಯ ಒಬ್ಬನನ್ನು ಬಂಧಿಸಿ, ತಹಸೀಲ್ದಾರ್ ಮುಂದೆ ಹಾಜರುಪಡಿಸಲಾಯಿತು. ಈ ಮೂವರನ್ನು ಒಂದು ವಾರಗಳ ಕಾಲ ಪೊಲೀಸ್ ವಶಕ್ಕೆ ವಹಿಸಿ ತಹಸೀಲ್ದಾರ್‌ರವರು ಆದೇಶಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.
    ಬಂಧಿತರನ್ನು ತಾಹಿರ್, ಸಾಧಿಕ್ ಹಾಗೂ ಖುರೇಷಿ ಎಂದು ಗುರುತಿಸಲಾಗಿದ್ದು, ಬೆಳಗ್ಗಿನ ಜಾವ ಸುಮಾರು ೩ ಗಂಟೆ ಸಮಯದಲ್ಲಿ ಈ ಮೂವರ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗಿದೆ ಎನ್ನಲಾಗಿದೆ.
    ಶಾಂತಿ, ಸುವ್ಯವಸ್ಥೆ ಕದಡುವ ಸಾಧ್ಯತೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಯಕರ್ತರನ್ನು ಬಂಧಿಸಿ, ಸೆಕ್ಷನ್ ೧೦೭, ೧೫೧ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



ಕಾಗವಾಡ ವಿಧಾಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್‌ಗೆ ಪುನಃ ಸಚಿವ ಸ್ಥಾನ ನೀಡಿ

ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘ ಸರ್ಕಾರಕ್ಕೆ ಆಗ್ರಹ

ಭದ್ರಾವತಿ ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಕಾಗವಾಡ ವಿಧಾಸಭಾ ಕ್ಷೇತ್ರದ ಶಾಸಕ ಶ್ರೀಮಂತ ಪಾಟೀಲ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ನೀಡಲು ಸರ್ಕಾರಕ್ಕೆ ಆಗ್ರಹಿಸಿದರು.
    ಭದ್ರಾವತಿ, ಸೆ. ೨೭ : ಕ್ಷತ್ರಿಯ ಮರಾಠ ಸಮುದಾಯದ ನಾಯಕರಲ್ಲಿ ಒಬ್ಬರಾಗಿರುವ ಕಾಗವಾಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀಮಂತ್ ಪಾಟೀಲ್‌ರವರಿಗೆ ಪುನಃ  ಸಚಿವ ಸ್ಥಾನ ನೀಡಬೇಕೆಂದು ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ಅಧ್ಯಕ್ಷ ಸಚಿನ್ ಎಸ್ ಸಿಂಧ್ಯಾ ಅಗ್ರಹಿಸಿದ್ದಾರೆ.
    ಶ್ರೀಮಂತ್ ಪಾಟೀಲ್‌ರವರನ್ನು ಸಂಪುಟದಿಂದ ಕೈ ಬಿಡುವ ಮೂಲಕ ಮರಾಠ ಸಮುದಾಯವನ್ನು ಕಡೆಗಣಿಸಲಾಗಿದೆ. ತಕ್ಷಣ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಸೂಕ್ತ ಸ್ಥಾನಮಾನ ನೀಡಬೇಕು. ಮರಾಠ ಸಮುದಾಯದ ಏಳಿಗೆಗೆ ಮುಂದಾಗಬೇಕೆಂದು ಒತ್ತಾಯಿಸಲಾಗಿದೆ.
    ಸಂಘದ ಮಾಜಿ ಅಧ್ಯಕ್ಷ ಯಸವಂತರಾವ್ ಘೋರ್ಪಡೆ, ಉಪಾಧ್ಯಕ್ಷ ವಿಶ್ವನಾಥ್‌ರಾವ್ ಸಿಂಧೆ, ಪ್ರಧಾನ ಕಾರ್ಯದರ್ಶಿ ವಿಶ್ವೇಶ್ವರ ರಾವ್ ಗಾಯಕ್ವಾಡ್, ಸಹ ಕಾರ್ಯದರ್ಶಿ ಮೋಹನ್ ರಾವ್, ಖಜಾಂಚಿ ರಮೇಶ್ ಪಟತಾರೆ, ನಿರ್ದೇಶಕರಾದ ಮಲ್ಲೇಶ್ ರಾವ್, ಪರಶುರಾಮ್ ರಾವ್, ಜಗನ್ನಾಥ ರಾವ್, ಕೃಷ್ಣೋಜಿರಾವ್, ರಾಮಚಂದ್ರ ರಾವ್, ಚಂದ್ರೋಜಿರಾವ್, ಶಂಕರ್‌ರಾವ್ ಸೇರಿದಂತೆ ಇನ್ನಿತರರು ಶ್ರೀಮಂತ್ ಪಾಟೀಲ್ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಆಗ್ರಹಿಸಲಾಗಿದೆ.
    ಅ.೧೧ರಂದು ವಾರ್ಷಿಕ ಮಹಾಸಭೆ: 
ಶ್ರೀ ಛತ್ರಪತಿ ಶಿವಾಜಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಅ.೧೧ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದ್ದು, ಸದಸ್ಯರು ತಪ್ಪದೇ ಭಾಗವಹಿಸಿ ಯಶಸ್ವಿಗೊಳಿಸುವಂತೆ ಸಚಿನ್ ಎಸ್. ಸಿಂಧ್ಯಾ ಕೋರಿದ್ದಾರೆ. 

Monday, September 26, 2022

ಬೆಂಕಿಪುರ ಭದ್ರಾವತಿಯಾಗಿ ರೂಪುಗೊಳ್ಳಲು ಮೈಸೂರು ಸಂಸ್ಥಾನದ ಕೊಡುಗೆ ಅಪಾರ : ಡಿ.ಸಿ ಮಾಯಣ್ಣ

ನಗರಸಭೆ ವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಚಾಲನೆ

ಭದ್ರಾವತಿ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ಸೋಮವಾರ ಚಾಲನೆ ನೀಡಿದರು.
    ಭದ್ರಾವತಿ, ಸೆ. ೨೬ : ಬೆಂಕಿಪುರ ನಗರವನ್ನು ಭದ್ರಾವತಿವನ್ನಾಗಿಸಿದ ಹಿರಿಮೆ ಮೈಸೂರು ಸಂಸ್ಥಾನಕ್ಕೆ ಲಭಿಸುತ್ತದೆ ಎಂದು ಹಿರಿಯ ಕಾರ್ಮಿಕ ಹೋರಾಟ ಡಿ.ಸಿ ಮಾಯಣ್ಣ ಹೇಳಿದರು.
    ಅವರು ಸೋಮವಾರ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ೧೦ ದಿನಗಳ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮೈಸೂರು ಸಂಸ್ಥಾನದ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಚಿಂತನೆಗಳು ಹಾಗು ಭಾರತರತ್ನ ಸರ್.ಎಂ ವಿಶ್ವೇಶ್ವರಾಯ ಅವರ ಶ್ರಮದ ಫಲವಾಗಿ ಮೈಸೂರು ಸಂಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳು ಬೆಳವಣಿಗೆ ಹೊಂದಿದವು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಈ ಭಾಗದಲ್ಲಿ ಜಲವಿದ್ಯುತ್ ಯೋಜನೆಯನ್ನು ಆರಂಭಿಸಲಾಯಿತು. ಕೆಮ್ಮಣ್ಣು ಗುಂಡಿಯಲ್ಲಿ ಅದಿರು ನಿಕ್ಷೇಪವಿರುವುದನ್ನು ಪತ್ತೆಹಚ್ಚುವ ಮೂಲಕ ಕಬ್ಬಿಣದ ಅದಿರು ಕಾರ್ಖಾನೆಯನ್ನು ಪ್ರಾರಂಭಿಸಲಾಯಿತು. ನಂತರ ಕಾಗದ ಕಾರ್ಖಾನೆ ಸಹ ಆರಂಭಿಸಲಾಯಿತು. ಆರಂಭದಲ್ಲಿ ಎರಡು ಕಾರ್ಖಾನೆಗಳನ್ನು ನಂಬಿ ಸುಮಾರು ೨೦ ಸಾವಿರಕ್ಕೂ ಹೆಚ್ಚಿನ ಕಾರ್ಮಿಕ ಕುಟುಂಬಗಳು ಬದುಕು ರೂಪಿಸಿಕೊಂಡಿದ್ದವು. ಇವೆಲ್ಲದರ ಪರಿಣಾಮ ಬೆಂಕಿಪುರ ಭದ್ರಾವತಿಯಾಗಿ ವಿಶ್ವದ ಭೂಪಟದಲ್ಲಿ ಗುರುತಿಸಿ ಸಾಧ್ಯವಾಯಿತು ಎಂದರು.
    ಪ್ರಸ್ತುತ ಎರಡು ಕಾರ್ಖಾನೆಗಳು ಅವನತಿ ದಾರಿಯಲ್ಲಿ ಸಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಇದುವರೆಗೂ ಯಾವುದೇ ಸರ್ಕಾರ ಈ ಎರಡು ಕಾರ್ಖಾನೆಗಳ ಅಭಿವೃದ್ಧಿಗೆ ಇಚ್ಛಾಶಕ್ತಿ ತೋರಿಸಿಲ್ಲ. ಮುಂಬರುವ ಸರ್ಕಾರಗಳು ಈ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸುವಂತಾಗಲಿ ಎಂದು ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಪ್ರಸ್ತುತ ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಸರ್ಕಾರದಲ್ಲಿ ಸಚಿವನಾಗುವುದು ಖಚಿತ. ಈ ಎರಡು ಕಾರ್ಖಾನೆಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಮುಂದಿನ ಗುರಿಯಾಗಿದೆ ಎಂದರು.
    ವೇದಿಕೆಯಲ್ಲಿ ನಗರಸಭೆ ನೂತನ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್‌ಕುಮಾರ್, ವಿವಿಧ ಸಮಿತಿ ಅಧ್ಯಕ್ಷರುಗಳಾದ ವಿ. ಕದಿರೇಶ್, ಲತಾ ಚಂದ್ರಶೇಖರ್, ಆರ್. ಶ್ರೇಯಸ್(ಚಿಟ್ಟೆ), ಜಾರ್ಜ್, ಕಾಂತರಾಜು, ಕೋಟೇಶ್ವರರಾವ್, ಮಾಜಿ ಅಧ್ಯಕ್ಷರಾದ ಗೀತಾ ರಾಜ್‌ಕುಮಾರ್, ಬಿ.ಟಿ ನಾಗರಾಜ್, ಡಾ.ಎಸ್.ಎಸ್ ವಿಜಯದೇವಿ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಧನಲಕ್ಷ್ಮಿ ಪ್ರಾರ್ಥಿಸಿದರು. ಉಪಾಧ್ಯಕ್ಷ ಚನ್ನಪ್ಪ ಸ್ವಾಗತಿಸಿದರು. ಸಮುದಾಯ ಸಂಘಟನಾ ಅಧಿಕಾರಿ ಸುವಾಸಿನಿ ವಂದಿಸಿದರು.
    ಇದಕ್ಕೂ ಮೊದಲು ಮಾಧವಚಾರ್ ವೃತ್ತದಿಂದ ಡಿ.ಸಿ ಮಾಯಣ್ಣ ಅವರನ್ನು ಮಂಗಳ ವಾದ್ಯಗಳೊಂದಿಗೆ ಮೆರವಣಿಯಲ್ಲಿ ಕರೆ ತರಲಾಯಿತು. ನಂತರ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
    ನಗರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಪೌರಸೇವಾ ನೌಕರರ ಸೇವಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಪೌರಕಾರ್ಮಿಕರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಭದ್ರಾವತಿ ನಗರಸಭೆವತಿಯಿಂದ ಹಮ್ಮಿಕೊಳ್ಳಲಾಗಿರುವ ನಾಡಹಬ್ಬ ದಸರಾ ಆಚರಣೆ ಉದ್ಘಾಟಿಸಲು ಆಗಮಿಸಿದ ಡಿ.ಸಿ ಮಾಯಣ್ಣ ಅವರನ್ನು ಮಾಧವಚಾರ್ ವೃತ್ತದಿಂದ ಮಂಗಳ ವಾದ್ಯಗಳೊಂದಿಗೆ ಮೆರವಣಿಯಲ್ಲಿ ಕರೆ ತರಲಾಯಿತು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಅಮಾನತುಗೊಂಡಿರುವ ನ್ಯಾಯಾಬೆಲೆ ಅಂಗಡಿಗಳನ್ನು ವಜಾಗೊಳಿಸುವುದು, ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ಭದ್ರಾವತಿ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
    ಭದ್ರಾವತಿ, ಸೆ. ೨೬: ಅಮಾನತುಗೊಂಡಿರುವ ನ್ಯಾಯಾಬೆಲೆ ಅಂಗಡಿಗಳನ್ನು ವಜಾಗೊಳಿಸುವುದು, ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಮುಂಭಾಗ ಧರಣಿ ಸತ್ಯಾಗ್ರಹ ಆರಂಭಗೊಂಡಿದೆ.
    ಸರ್ಕಾರದ ಆದೇಶದ ಪ್ರಕಾರ ನ್ಯಾಯಬೆಲೆ ಅಂಗಡಿಗಳು ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆವರೆಗೆ ಹಾಗು ಸಂಜೆ ೪ ರಿಂದ ರಾತ್ರಿ ೮ ಗಂಟೆವರೆಗೆ ಕಾರ್ಯ ನಿರ್ವಹಿಸಬೇಕು. ಮಂಗಳವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಕಡ್ಡಾಯವಾಗಿ ತೆರೆದಿರಬೇಕು ಹಾಗು ಅಂಗಡಿ ಮುಂಭಾಗದಲ್ಲಿ ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳ ದೂರವಾಣಿ ಸಂಖ್ಯೆ, ಜಾಗೃತಿ ಸಮಿತಿ ಸದಸ್ಯರ ಹೆಸರು, ಸಂಖ್ಯೆ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾರ್ಯ ನಿರ್ವಹಿಸುವ ಸಮಯ ಮತ್ತು ರಜಾ ದಿನದ ಬಗ್ಗೆ ಕಪ್ಪು ಹಲಗೆಯ ಮೇಲೆ ನಮೂದಿಸಬೇಕು. ಆದರೆ ಸ್ಥಳೀಯ ಅಧಿಕಾರಿಗಳ ಕುಮ್ಮಕ್ಕಿನಿಂದ ಸರ್ಕಾರದ ಆದೇಶಗಳನ್ನು ನ್ಯಾಯಬೆಲೆ ಅಂಗಡಿಗಳು ಪಾಲಿಸುತ್ತಿಲ್ಲ ಎಂದು ಆರೋಪಿಸಲಾಯಿತು.
    ಕಳೆದ ೩ ವರ್ಷಗಳಿಂದ ಈ ಸಂಬಂಧ ಹಲವು ಬಾರಿ ಮನವಿ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ. ಈ ಹಿನ್ನಲೆಯಲ್ಲಿ ಕರ್ತವ್ಯ ಲೋಪವೆಸಗಿರುವ ಆಹಾರ ಇಲಾಖೆಯ ನಗರ ಮತ್ತು ಗ್ರಾಮಾಂತರ ಭಾಗದ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸುವುದು. ಅಮಾನತುಗೊಂಡಿರುವ ನಗರದ ೭ ನ್ಯಾಯಬೆಲೆ ಅಂಗಡಿಗಳನ್ನು ವಜಾಗೊಳಿಸುವುದು ಹಾಗು ಕೆಎಫ್‌ಎಸ್‌ಸಿಎಸ್ ಗೋದಾಮು ಭ್ರಷ್ಟಾಚಾರ ನಿಯಂತ್ರಿಸಬೇಕೆಂದು ಆಗ್ರಹಿಸಲಾಯಿತು.
    ಜನತಾದಳ(ಸಂಯುಕ್ತ) ಕರ್ನಾಟಕ ವತಿಯಿಂದ ನಗರದ ಮಾನವ ಹಕ್ಕುಗಳ ಹೋರಾಟ ಸಮಿತಿ ಹಾಗು ಕೆಆರ್‌ಎಸ್ ಪಕ್ಷ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿರುವ ಧರಣಿ ಸತ್ಯಾಗ್ರಹದಲ್ಲಿ ಪ್ರಮುಖರಾದ eಡಿಯು ರಾಜ್ಯ ಕಾರ್ಯದರ್ಶಿ ಶಶಿಕುಮಾರ್ ಗೌಡ, ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ರಘು ಸಂಕ್ಲಿಪುರ, ಬಾಬುದೀಪಕ್‌ಕುಮಾರ್ ಹಾಗು ಕೆಆರ್‌ಎಸ್ ಪಕ್ಷದ ಪ್ರಮುಖರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.