![](https://blogger.googleusercontent.com/img/a/AVvXsEgAZHCl9VHUMvxHa-DyD916lYaBe5VJeZHrQERwyxEvxcvsvJAOBzHZJRvELQ-RunipnXf-qyNQXnDLFXMjra-IAI9NR4OWje4HV9zlyM6Y2ZEeqe3Crl79b9OVikfL6wCp0WvseI-zxQo7j51Z5J_iRkOK3lvEUk1eNU0ArMX8j334GJzTLyPTM4D-HQ=w400-h161-rw)
ಕೆಲವು ಕಿಡಿಗೇಡಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಭದ್ರಾವತಿಯಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಸೆ. ೨೮ : ಕೆಲವು ಕಿಡಿಗೇಡಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸುತ್ತಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಪೇಪರ್‌ಟೌನ್ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಹಾಗು ಜಿಲ್ಲಾ ಸಂಚಾಲಕ ಚಿನ್ನಯ್ಯ ನೇತೃತ್ವದಲ್ಲಿ ಠಾಣೆ ಮುಂಭಾಗ ಪ್ರತಿಭಟನೆ ನಡೆಸಲಾಗುತ್ತಿದ್ದು, ನ್ಯಾಯ ಲಭಿಸುವವರೆಗೂ ಹೋರಾಟ ನಡೆಸುವುದಾಗಿ ಎಚ್ಚರಿಸಲಾಯಿತು.
ಜಿಲ್ಲಾ ಸಂಚಾಲಕ ಚಿನ್ನಯ್ಯ ಮಾತನಾಡಿ, ಕೆ.ಟಿ ಪ್ರಸನ್ನ, ರವಿನಾಯ್ಕ ಸೇರಿದಂತೆ ಇನ್ನೂ ಕೆಲವು ವ್ಯಕ್ತಿಗಳು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ತಾಲೂಕಿನ ಹಿರಿಯೂರು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹಾಗು ಸದಸ್ಯರಿಗೆ ಬೆದರಿಕೆ ಹಾಕುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕಾಮಗಾರಿಗಳಲ್ಲಿ ಕಮಿಷನ್ ನೀಡುವಂತೆ ಪೀಡಿಸುತ್ತಿದ್ದಾರೆ. ಗ್ರಾಮಠಾಣಾ ಜಾಗಕ್ಕೆ ಸಂಬಂಧಿಸಿದಂತೆ ವಿನಾಕಾರಣ ಗ್ರಾಮದಲ್ಲಿ ಗೊಂದಲದ ವಾತಾವರಣ ಮೂಡಿಸುತ್ತಿದ್ದಾರೆ. ಇಷ್ಟೆ ಅಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗು ಸದಸ್ಯರ ವಿರುದ್ಧ ಜಾತಿನಿಂದನೆ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ಪ್ರೊ. ಬಿ ಕೃಷ್ಣಪ್ಪನವರು ಸ್ಥಾಪಿಸಿರುವ ಸಂಘಟನೆ ನಮ್ಮದ್ದಾಗಿದ್ದು, ನ್ಯಾಯಾಲಯದಲ್ಲಿ ಈ ಸಂಬಂಧ ಆದೇಶವಾಗಿದೆ ಎಂದು ಸುಳ್ಳು ಹೇಳಿಕೊಂಡು ಎಲ್ಲೆಡೆ ವಂಚಿಸಲಾಗುತ್ತಿದೆ. ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಎಂ. ಗುರುಮೂರ್ತಿ ಎಂಬುವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಈ ನಡುವೆಯೂ ಇದೀಗ ಹಿರಿಯೂರು ಗ್ರಾಮದಲ್ಲಿ ಸಂಘಟನೆ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸಂಘಟನೆಯ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡಲಾಗುತಿದೆ. ಇಂತಹವರನ್ನು ತಕ್ಷಣ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.
ಪ್ರಮುಖರಾದ ವಿ. ವಿನೋದ್, ಕೆ. ರಂಗನಾಥ್, ಕುಪೇಂದ್ರಪ್ಪ, ಜಿಂಕ್‌ಲೈನ್ ಮಣಿ, ಕಾಣಿಕ್‌ರಾಜ್, ಎನ್. ಗೋವಿಂದ ಹಾಗು ಹಿರಿಯೂರು ಗ್ರಾಮ ಮುಖಂಡರು ಹಾಗು ಡಿಎಸ್‌ಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.