ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಹಳೇನಗರ ವಲಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಆರಕ್ಷಕ ಠಾಣೆ, ಪತ್ರಕರ್ತರ ಸಂಘ ಹಾಗು ನವಜೀವನ ಸಮಿತಿ ಮತ್ತು ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೧೪ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ ಮದ್ಯವರ್ಜನ ಶಿಬಿರ ಮಧ್ಯಮ ವರ್ಗದವರ ಕುಟುಂಬಗಳಿಗೆ ಹೆಚ್ಚಿನ ಸಹಕಾರಿಯಾಗಿದೆ ಎಂದು ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಹೇಳಿದರು.
ಅವರು ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಹಳೇನಗರ ವಲಯ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಆರಕ್ಷಕ ಠಾಣೆ, ಪತ್ರಕರ್ತರ ಸಂಘ ಹಾಗು ನವಜೀವನ ಸಮಿತಿ ಮತ್ತು ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಲೋಯರ್ ಹುತ್ತಾ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೧೬೦೪ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಬಹಳಷ್ಟು ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಹಿಳೆಯರೇ ಕುಟುಂಬದ ಹೆಚ್ಚಿನ ಜವಾಬ್ದಾರಿ ನಿಭಾಯಿಸುವಂತಾಗಿದೆ. ಅದರಲ್ಲೂ ಕೆಲವು ಕುಟುಂಬಗಳಲ್ಲಿ ಪುರುಷರು ಮದ್ಯವ್ಯಸನಕ್ಕೆ ಒಳಗಾಗುತ್ತಿರುವುದು ಮಹಿಳೆಯರನ್ನು ಹೆಚ್ಚಿನ ಸಂಕಷ್ಟಕ್ಕೆ ಒಳಗಾಗುವಂತೆ ಮಾಡುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ಈ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಮಹಿಳೆಯರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಈ ಯೋಜನೆಯಿಂದ ಪಡೆಯುವ ಸಾಲದ ಹಣ ದುರುಪಯೋಗವಾಗದಂತೆ ಎಚ್ಚರವಹಿಸಬೇಕು. ಮಹಿಳೆಯರಿಗೆ ಹಲವಾರು ಉದ್ಯೋಗಾವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗುವಂತೆ ಕರೆ ನೀಡಿದರು.
ನ್ಯಾಯವಾದಿ ಮಂಗೋಟೆ ರುದ್ರೇಶ್ ಮಾತನಾಡಿ, ಮದ್ಯವ್ಯಸನವೇ ಜೀವನವಲ್ಲ. ನಮ್ಮನ್ನು ನಂಬಿರುವ ಬಹಳಷ್ಟು ಮಂದಿ ನಮ್ಮೊಂದಿಗಿದ್ದಾರೆ. ಅವರ ಭವಿಷ್ಯದ ಬಗ್ಗೆ ಅಲೋಚಿಸುವ ಮೂಲಕ ನೆಮ್ಮದಿಕಂಡುಕೊಳ್ಳಬೇಕಾಗಿದೆ ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ನಗರಸಭೆ ಉಪಾಧ್ಯಕ್ಷ ಚನ್ನಪ್ಪ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ಆರ್. ಕರುಣಾಮೂರ್ತಿ, ಓ ಶಕ್ತಿ ಡೆವಲಪರ‍್ಸ್ ಅಶೋಕ್ ಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪಾಲಾಕ್ಷಪ್ಪ ಮತ್ತು ಜಯರಾಂ ಗೊಂದಿ, ಗೋಕುಲಕೃಷ್ಣ, ಎಂ. ರಾಜು ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಜಿ. ಅನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಯೋಜನಾಧಿಕಾರಿ ಪ್ರಕಾಶ್ ಸ್ವಾಗತಿಸಿದರು.