Friday, October 28, 2022

ಕ್ಷೇತ್ರದಾದ್ಯಂತ ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ ಆಚರಣೆ

ವಿವಿಧ ಸಂಘಟನೆಗಳಿಂದ ಹಲವು ಸೇವಾ ಕಾರ್ಯಗಳು

ಭದ್ರಾವತಿ ಜನ್ನಾಪುರ ಜಯಶ್ರೀ ವೃತ್ತದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿ ಬಳಿ ಕಲ್ಪವೃಕ್ಷ ಸೇವಾ ಟ್ರಸ್ಟ್ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಅವರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಪೌರಕಾರ್ಮಿಕರಿಗೆ ಸನ್ಮಾನ, ಮಹಿಳಾ ಕಾರ್ಮಿಕರಿಗೆ ಸೀರೆ ವಿತರಣೆ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಹಾಗೂ ಟ್ರಸ್ಟ್ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.
    ಭದ್ರಾವತಿ, ಅ. ೨೮: ಕ್ಷೇತ್ರದ ರಾಜಕಾರಣದಲ್ಲಿ ೩ ದಶಕಗಳಿಂದ ತಮ್ಮದೇ ವರ್ಚಸ್ಸನ್ನು ಕಾಯ್ದುಕೊಂಡು ಬರುವ ಮೂಲಕ ೩ ಬಾರಿ ಶಾಸಕರಾಗಿರುವ ಬಿ.ಕೆ ಸಂಗಮೇಶ್ವರ ಶುಕ್ರವಾರ ೬೦ ವಸಂತಗಳನ್ನು ಪೂರೈಸುವ ಮೂಲಕ ಅದ್ದೂರಿಯಾಗಿ ತಮ್ಮ ಜನ್ಮದಿನ ಆಚರಿಸಿಕೊಂಡರು.
      ಕ್ಷೇತ್ರದಾದ್ಯಂತ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು, ವಿವಿಧ ಸಂಘ-ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗು ಶಾಸಕರ ಕುಟುಂಬ ಸಂಬಂಧಿಗಳು ವಿಭಿನ್ನವಾಗಿ ಶಾಸಕರ ಹುಟ್ಟುಹಬ್ಬ ಆಚರಿಸುವ ಮೂಲಕ ಗಮನ ಸೆಳೆದರು.
      ೫-೬ ದಿನಗಳ ಹಿಂದೆಯೇ ಕ್ಷೇತ್ರದ ಎಲ್ಲೆಡೆ ಶಾಸಕರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.


      ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಶ್ರೀ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಜನಪ್ರತಿನಿಧಿಗಳು ಬೆಳಿಗ್ಗೆಯೇ ಶಾಸಕರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
      ಸಾಮಾಜಿಕ ಸೇವಾಕಾರ್ಯಗಳು :
      ಶಾಸಕರ ೬೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ವಿವಿಧ ಸಂಘ-ಸಂಸ್ಥೆಗಳಿಂದ ಆರೋಗ್ಯ ಶಿಬಿರ, ಪೌರಕಾರ್ಮಿಕರು ಹಾಗು ಹಿರಿಯ ನಾಗರೀಕರಿಗೆ ಸನ್ಮಾನ, ಮಹಿಳಾ ಕಾರ್ಮಿಕರಿಗೆ ಸೀರೆ ವಿತರಣೆ, ಕಟ್ಟಡ ಕಾರ್ಮಿಕರಿಗೆ ಟಿಫನ್ ಬಾಕ್ಸ್ ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳು ಜರುಗಿದವು.

ಎಪಿಎಂಸಿ ಮ್ಯಾಮ್ಕೋಸ್ ಕಟ್ಟಡದ ಬಳಿ ಕೊಲೆ ಪ್ರಕರಣ : ಇಬ್ಬರ ಸೆರೆ

ಭದ್ರಾವತಿ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಮ್ಯಾಮ್ಕೋಸ್ ಕಟ್ಟಡದ ಸಮೀಪ ಅ.೨೪ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
    ಭದ್ರಾವತಿ, ಅ. ೨೮ : ನಗರದ ಚನ್ನಗಿರಿ ರಸ್ತೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಮ್ಯಾಮ್ಕೋಸ್ ಕಟ್ಟಡದ ಸಮೀಪ ಅ.೨೪ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
      ಕಾಚಗೂಂಡನಹಳ್ಳಿ ನಿವಾಸಿ ಕುಶಾಲ್(೩೫) ಹಾಗೂ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ನಿವಾಸಿ ಸೋಮಶೇಖರ್ ಅಲಿಯಾಸ್ ಪುಟ್ಟ ಅಲಿಯಾಸ್ ಕಪ್ಪೆ(೩೩) ಬಂಧಿತರಾಗಿದ್ದಾರೆ.
      ಮ್ಯಾಮ್ಕೋಸ್ ಕಟ್ಟಡದ ಸಮೀಪ ಖಾಲಿ ಜಾಗದಲ್ಲಿ ರೂಪೇಶ್‌ಕುಮಾರ್(೪೫) ಎಂಬಾತನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹಳೇನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದರು. ಇದೀಗ ಕೃತ್ಯ ಬಯಲಾಗಿದ್ದು, ಬಂಧಿತ ಇಬ್ಬರು ರೂಪೇಶ್‌ಕುಮಾರ್ ಸ್ನೇಹಿತರು ಎನ್ನಲಾಗಿದೆ.
      ಶಿವಮೊಗ್ಗದಲ್ಲಿ ಆಟೋ ಚಾಲಕನಾಗಿದ್ದ ರೂಪೇಶ್‌ಕುಮಾರ್ ತಾಲೂಕಿನ ಹೊಳೆಹೂನ್ನೂರು ನಿವಾಸಿಯಾಗಿದ್ದು, ಈತನನ್ನು ಅಂದು ನಗರಕ್ಕೆ ಕರೆಸಿಕೊಂಡಿದ್ದ ಈ ಇಬ್ಬರು ಸ್ನೇಹಿತರು ಹಳೇದ್ವೇಷದ ಹಿನ್ನಲೆಯಲ್ಲಿ ಬಿದಿರಿನ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ.
      ಪೊಲೀಸ್ ನಗರವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ನೇತೃತ್ವದಲ್ಲಿ ಹಳೇನಗರ ಠಾಣಾಧಿಕಾರಿ ಹಾಗು ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿದ್ದು, ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ತಂಡವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.



Thursday, October 27, 2022

ವಿಜೃಂಭಣೆಯಿಂದ ಜರುಗಿದ ಶ್ರೀಮದ್ ರಂಭಾಪುರ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಗುರುವಾರ ಭದ್ರಾವತಿ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀರಂಗನಾಥ ಕೃಪಾ ನಿವಾಸದಲ್ಲಿ ನಡೆಯಿತು.
    ಭದ್ರಾವತಿ, ಅ. ೨೭ : ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಗುರುವಾರ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯ ಶ್ರೀರಂಗನಾಥ ಕೃಪಾ ನಿವಾಸದಲ್ಲಿ ನಡೆಯಿತು.
  ಶ್ರೀರಂಗನಾಥ ಗ್ಯಾಸ್ ಸರ್ವಿಸ್ ಸಂಸ್ಥಾಪಕ ದಿವಂಗತ ಬಿ.ಎಚ್ ಮಹಾದೇವಪ್ಪ ಕುಟುಂಬದವರು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ನಂತರ ನಡೆದ ಧರ್ಮಸಭೆಯಲ್ಲಿ ಶ್ರೀ ಜಗದ್ಗುರು ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನಿಧ್ಯವಹಿಸಿದ್ದರು. ಶಾಸಕ ಬಿ.ಕೆ ಸಂಗಮೇಶ್ವರ್ ಧರ್ಮಸಭೆ ಉದ್ಘಾಟಿಸಿದರು. ತೀರ್ಥಹಳ್ಳಿ ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು.  
    ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕೆ ಮೋಹನ್, ಗೀತಾ ರಾಜ್‌ಕುಮಾರ್, ಕೆ ಆರ್ ರಾಜು, ಎಸ್.ಎಸ್ ಜ್ಯೋತಿಪ್ರಕಾಶ್, ಮಹೇಶ್ವರಮೂರ್ತಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಹೆಬ್ಬಂಡಿ ಶಿವರುದ್ರಪ್ಪ ಲೋಕಣ್ಣ, ಗಿರಿರಾಜ್, ಶಿವಮೂರ್ತಿ, ಆರ್ ಮಹೇಶ್ ಕುಮಾರ್, ಅಡವಿಶಯ್ಯ, ಹಳೇನಗರ ಪೊಲೀಸ್ ಠಾಣಾಧಿಕಾರಿ ಕವಿತ, ನಗರಸಭೆ ಮಾಜಿ ಸದಸ್ಯ ಕೆ.ಎನ್ ಭೈರಪ್ಪಗೌಡ, ಉದ್ಯಮಿ ಬಿ.ಕೆ ಜಗನ್ನಾಥ, ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯ ಧೀರರಾಜ್‌ಹೊನ್ನವಿಲೆ, ಬಾಸಿಂಗ ರುದ್ರಪ್ಪ, ವೀರಗಾಸೆ ಕಲಾವಿದ ಶಿವಕುಮಾರ್ ಸೇರಿದಂತೆ ಭಕ್ತ ವೃಂದದವರು ಪಾಲ್ಗೊಂಡಿದ್ದರು. ಕತ್ತಲಗೆರೆ ತಿಮ್ಮಪ್ಪ ಕಾರ್ಯಕ್ರಮ ನಿರೂಪಿಸಿದರು.

Wednesday, October 26, 2022

ಬಲಿಪಾಡ್ಯಮಿ ಅಂಗವಾಗಿ ಶ್ರೀ ಮಲೆ ಮಾದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಭದ್ರಾವತಿ, ಅ. 26: ನಗರದ ಜೇಡಿಕಟ್ಟೆ  ಶ್ರೀ ಮರುಳಸಿದ್ದೇಶ್ವರ ಗದ್ದುಗೆ ಮಠದ ಪಕ್ಕದಲ್ಲಿರುವ ಆವರಣದಲ್ಲಿ  ಬಲಿಪಾಡ್ಯಮಿ ಅಂಗವಾಗಿ ಬುಧವಾರ ಶ್ರೀ ಮಲೆ ಮಾದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ  ಅದ್ಧೂರಿಯಾಗಿ ಜರುಗಿತು.
          ಶ್ರೀ ಮಲೆ ಮಾದೇಶ್ವರ ಗ್ಯಾಸ್ ಏಜೆನ್ಸಿಯ ಮಾದಯ್ಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮರುಳ ಸಿದ್ದೇಶ್ವರ ಟ್ರಸ್ಟ್  ಅಧ್ಯಕ್ಷ ಸಿದ್ಧಲಿಂಗಯ್ಯ, ವಾಗೀಶ್, ದೇವು, ಲಿಂಗೇಗೌಡರು, ಜುಂಜಯ್ಯ, ಕಾಳಪ್ಪ, ರಾಮಲಿಂಗಂ, ಮಾದಯ್ಯ, ಶಿವಣ್ಣ, ಮುರಳಿ, ರಾಮಕೃಷ್ಣ, ಧನರಾಜ, ಉಮೇಶಪ್ಪ, ಜಯಮ್ಮ, 
ಮೀನಾಕ್ಷಿ  ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು, ಭಕ್ತಾದಿಗಳು ಪಾಲ್ಗೊಂಡಿದ್ದರು.  

ಅ.27ರಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ


ಭದ್ರಾವತಿ, ಅ. 26:  ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳವರ ಇಷ್ಟಲಿಂಗ ಮಹಾಪೂಜೆ ಅ.27ರಂದು ಬೆಳಗ್ಗೆ 9 ಗಂಟೆಗೆ ನಗರದ ಬಿ.ಎಚ್ ರಸ್ತೆ ಲೋಯರ್ ಹುತ್ತಾ ಸಹ್ಯಾದ್ರಿ ಬಡಾವಣೆಯ  ಶ್ರೀರಂಗನಾಥ ಕೃಪಾ ನಿವಾಸದಲ್ಲಿ ನಡೆಯಲಿದೆ.
 ಶ್ರೀ ಜಗದ್ಗುರು  ಪ್ರಸನ್ನ ರೇಣುಕಾ ಡಾ. ವೀರ ಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮ ಉದ್ಘಾಟಿಸಲಿದ್ದು, ತೀರ್ಥಹಳ್ಳಿ ಮಳಲಿ ಮಠದ ಶ್ರೀ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ಶ್ರೀರಂಗನಾಥ ಗ್ಯಾಸ್ ಸರ್ವಿಸ್ ಎಂ. ಮನು ಉಪಸ್ಥಿತರಿರುವರು. 
 ಶಾಸಕ ಬಿ.ಕೆ ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕೆ ಮೋಹನ್, ಗೀತಾ ರಾಜಕುಮಾರ್, ಕೆ ಆರ್ ರಾಜು, ಎಸ್.ಎಸ್ ಜ್ಯೋತಿಪ್ರಕಾಶ್, ಮಹೇಶ್ವರಮೂರ್ತಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಹೆಬ್ಬಂಡಿ ಶಿವರುದ್ರಪ್ಪ ಲೋಕಣ್ಣ, ಗಿರಿರಾಜ್, ಯುವಮೂರ್ತಿ, ಆರ್ ಮಹೇಶ್ ಕುಮಾರ್, ಅಡವಿಶಯ್ಯ, ಕೂಡ್ಲಿಗೆರೆ ಹಾಲೇಶ್ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. 

Tuesday, October 25, 2022

ರಸ್ತೆ ಅಪಘಾತದಲ್ಲಿ ಮಹಿಳೆ ಮೃತ : ಅಂಗಾಂಗ ದಾನ


ಗಂಗಮ್ಮ
ಭದ್ರಾವತಿ, ಅ. ೨೫: ಆಕಸ್ಮಿಕವಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ದುಃಖದಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಮಂಗಳವಾರ ನಡೆದಿದೆ.
      ತಾಲೂಕಿನ ಉಕ್ಕುಂದ ವ್ಯಾಪ್ತಿಯ ರತ್ನಾಪುರ ಗ್ರಾಮದ ನಿವಾಸಿ ಗಂಗಮ್ಮ(೫೫) ಅವರ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಗಂಗಮ್ಮ ಅವರು ಪುತ್ರ ಶೇಖರ್ ಜೊತೆ ದ್ವಿಚಕ್ರ ವಾಹನದಲ್ಲಿ ನಗರಕ್ಕೆ ಆಗಮಿಸಿ ಪುನಃ ಹಿಂದಿರುಗಿ ಗ್ರಾಮಕ್ಕೆ ಮರಳುವಾಗ ತರೀಕೆರೆ ರಸ್ತೆಯ ರೈಲ್ವೆ ಮೇಲ್ಸೇತುವೆಯಲ್ಲಿ ರಸ್ತೆಗೆ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
      ಗಂಗಮ್ಮ ಅವರು ಪತಿ, ಪುತ್ರ ಹಾಗು ಪುತ್ರಿಯನ್ನು ಹೊಂದಿದ್ದರು. ಹಳೇನಗರದ ತಾಲೂಕು ಸಾರ್ವಜನಿಕರ ಸರ್ಕಾರಿ ಆಸ್ಪತ್ರೆಯಲ್ಲಿ ಇವರ ಅಂಗಾಂಗಗಳನ್ನು ದಾನ ಮಾಡಲಾಯಿತು.
      ಪಿಡಬ್ಲ್ಯೂಡಿ ಇಲಾಖೆ ನಿರ್ಲಕ್ಷ್ಯತನ ಸಾವಿಗೆ ಕಾರಣ :
      ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ದೊಡ್ಡ ಗಾತ್ರದ ಗುಂಡಿಯಾಗಿದ್ದು, ಈ ಗುಂಡಿಯನ್ನು ಮುಚ್ಚುವಂತೆ ಹಲವು ಬಾರಿ ಪಿಡಬ್ಲ್ಯೂಡಿ ಇಲಾಖೆ ಗಮನಕ್ಕೆ ತರಲಾಗಿದೆ. ಆದರೆ ಈ ಗುಂಡಿಯನ್ನು ಮುಚ್ಚುವಲ್ಲಿ ನಿರ್ಲಕ್ಷ್ಯತನ ವಹಿಸಿರುವ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಉಕ್ಕುಂದ ಗ್ರಾಮದ ನಿವಾಸಿ, ಸಾಮಾಜಿಕ ಹೋರಾಟಗಾರ ಶಿವಕುಮಾರ್ ಆರೋಪಿಸಿದ್ದಾರೆ.

ಅ.೨೮ರಂದು ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ ‘ನಮ್ಮ ಅಭಿಮಾನ’

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರ ಗಣ್ಯರ ಆಗಮನ

ಭದ್ರಾವತಿಯಲ್ಲಿ ಅ.೨೮ರಂದು ಹಮ್ಮಿಕೊಳ್ಳಲಾಗಿರುವ ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ಹುಟ್ಟುಹಬ್ಬ 'ನಮ್ಮ ಅಭಿಮಾನ' ಕಾರ್ಯಕ್ರಮ ಕುರಿತು ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ಮಾಹಿತಿ ನೀಡಿದರು.
    ಭದ್ರಾವತಿ, ಅ, ೨೫: ಶಾಸಕ ಬಿ.ಕೆ ಸಂಗಮೇಶ್ವರ್ ೬೦ನೇ ವರ್ಷದ ಹುಟ್ಟುಹಬ್ಬ 'ನಮ್ಮ ಅಭಿಮಾನ' ಅ.೨೮ರಂದು ಸಂಜೆ ೫ ಗಂಟೆಗೆ ಕನಕ ಮಂಟಪ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ನಗರ ಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್ ತಿಳಿಸಿದರು.
    ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಿ.ಕೆ ಸಂಗಮೇಶ್ವರ ಅಭಿಮಾನಿಗಳ ಬಳಗದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು ೩೦ ವರ್ಷದ ರಾಜಕೀಯ ಸೇವೆಯಲ್ಲಿ ಸಂಗಮೇಶ್ವರ್‌ರವರು ಎಲ್ಲಾ ಕ್ಷೇತ್ರದಲ್ಲೂ ಕೈಗೊಂಡಿರುವ ಜನಪರ ಕಾರ್ಯಗಳು ಅವಿಸ್ಮರಣೀಯವಾಗಿವೆ.  ಕ್ಷೇತ್ರದಲ್ಲಿ ಯಾವುದೇ ಜಾತಿ ಭೇದಭಾವವಿಲ್ಲದೆ ಎಲ್ಲರೂ ಶಾಂತಿ ನೆಮ್ಮದಿಯಿಂದ ಬದುಕುವಂತಹ ವಾತಾವರಣ ರೂಪಿಸಿ ಕೊಟ್ಟಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳ ಬಳಗದ ವತಿಯಿಂದ ಅವರ ಹುಟ್ಟುಹಬ್ಬ ಆಚರಿಸಲಾಗುತ್ತಿದೆ ಎಂದರು.
    ಹುಟ್ಟುಹಬ್ಬದ ಅಂಗವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದ ಸಮೀಪ, ಹಳೇನಗರದ ಬಸವೇಶ್ವರ ವೃತ್ತದ ಸಮೀಪದ ಅಕ್ಕಮಹಾದೇವಿ ಸಭಾಭವನ, ಶ್ರೀ ಹಳದಮ್ಮ ದೇವಸ್ಥಾನದ ಹತ್ತಿರ, ಬೊಮ್ಮನಕಟ್ಟೆ ಟ್ಯಾಂಕ್ ಹತ್ತಿರ, ಜನ್ನಾಪುರ ಜಯಶ್ರೀ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಕಚೇರಿ, ದೊಣಬಘಟ್ಟ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಅನ್ವರ್ ಕಾಲೋನಿ ಕುಬಾ ಮಸೀದಿ ಹತ್ತಿರ ಹಾಗು ಕಾಗದ ನಗರ ಶ್ರೀ ಚೌಡೇಶ್ವರಿ ದೇವಸ್ಥಾನದ ಮುಂಭಾಗ ಸೇರಿದಂತೆ   ನಗರದ ವಿವಿಧಡೆ ಬೆಳಗ್ಗೆ ೯:೩೦ ರಿಂದ ಮಧ್ಯಾಹ್ನ ೩ ಗಂಟೆವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
    ಇದೆ ರೀತಿ ಯುವ ಕಾಂಗ್ರೆಸ್ ವತಿಯಿಂದ ಅಂದು ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಕನಕಮಂಟಪ ಮೈದಾನದವರೆಗೂ ಬೈಕ್ ರ‍್ಯಾಲಿ ನಡೆಯಲಿದೆ. ರ‍್ಯಾಲಿಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಆಗಮಿಸಲಿದ್ದು, ಕಾರ್ಯಕ್ರಮದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಕುರಿತ ಪುಸ್ತಕ ಬಿಡುಗಡೆ ನಡೆಯಲಿದೆ ಎಂದರು.
    ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ಮುಖಂಡರ ಆಗಮನ :
    ೬೦ನೇ ವರ್ಷದ ಹುಟ್ಟುಹಬ್ಬ 'ನಮ್ಮ ಅಭಿಮಾನ' ಕಾರ್ಯಕ್ರಮಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ  ಬಿ.ವಿ ಶ್ರೀನಿವಾಸ್, ಮಾಜಿ ಸಚಿವ ಎಂ.ಆರ್ ಸೀತಾರಾಮ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಂದ್ರ, ಜಮೀರ್ ಅಹಮದ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಇನ್ನಿತರ ಮುಖಂಡರು ಆಗಮಿಸಲಿದ್ದಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಟಿ. ಚಂದ್ರೇಗೌಡ ಎಚ್.ಎಲ್  ಷಡಾಕ್ಷರಿ, ಅನುಸುಧಾ ಮೋಹನ್, ಚನ್ನಪ್ಪ, ಬಿ.ಟಿ ನಾಗರಾಜ್, ಬಿ. ಗಂಗಾಧರ್, ರಮೇಶ್ ಶಂಕರಘಟ್ಟ, ಕೃಷ್ಣಾನಾಯ್ಕ, ಅಮೀರ್ ಜಾನ್, ಎಸ್.ಎನ್ ಶಿವಪ್ಪ, ರಾಘವೇಂದ್ರ ಸರಾಟೆ, ಅಫ್ತಾಬ್ ಅಹಮದ್, ಟಿ.ಡಿ ಶಶಿಕುಮಾರ್, ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.