ಭದ್ರಾವತಿ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ, ಅ. ೨೯: ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಅವರು ಶುಕ್ರವಾರ ಹಳೇನಗರದ ಕನಕಮಂಟಪ ಮೈದಾನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ ಅವರ ೬೦ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ನಮ್ಮ ಅಭಿಮಾನ ಸಂಗಮೇಶೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಹಾಗು ರಾಜ್ಯದಲ್ಲಿರುವ ಬಿಜೆಪಿ ಡಬ್ಬಲ್ ಇಂಜಿನ್ ಸರ್ಕಾರಗಳು ಜನವಿರೋಧಿ ಸರ್ಕಾರಗಳಾಗಿವೆ. ಈ ಸರ್ಕಾರಗಳಿಂದ ಜನರ ಕಲ್ಯಾಣ ಸಾಧ್ಯವಿಲ್ಲ ಎಂಬುದು ಇದೀಗ ಎಲ್ಲರಿಗೂ ಅರ್ಥವಾಗುತ್ತಿದೆ. ದೇಶ ಹಾಗು ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದ್ದು, ಬಡವರು, ರೈತರು, ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಿರುದ್ಯೋಗ ಹೆಚ್ಚಾಗಿದ್ದು, ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ಮಾರಕವಾಗಿವೆ. ಅಲ್ಲದೆ ಧರ್ಮ ಧರ್ಮಗಳ ನಡುವೆ ವಿಷಬೀಜ ಭಿತ್ತಿ ಜನರು ನೆಮ್ಮದಿಯಿಂದ ಬದುಕಲಾರದಂತಹ ವಾತಾವರಣ ನಿರ್ಮಾಣ ಮಾಡಲಾಗಿದೆ. ಈ ಎಲ್ಲಾ ಕಾರಣಗಳಿಂದ ಮುಂದಿನ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಅವರು ಪಕ್ಷ ನಿಷ್ಠೆ ಜೊತೆಗೆ ಜಾತ್ಯಾತೀತ ಮನೋಭಾವ ಹೊಂದಿದ್ದು, ಈ ಹಿಂದೆ ನಡೆದ ಒಂದೇ ಒಂದು ತಪ್ಪಿನ ಪರಿಣಾಮ ಅವರು ಒಂದು ಬಾರಿ ಸ್ಥಾನದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಯಿತು. ಇಲ್ಲವಾದಲ್ಲಿ ಅವರು ೪ ಬಾರಿ ಶಾಸಕರಾಗಿರುತ್ತಿದ್ದರು. ದೇವರು ಅವರಿಗೆ ಇನ್ನೂ ಆಯುರಾರೋಗ್ಯ ಕರುಣಿಸಲಿ ಎಂದು ಶುಭಾ ಹಾರೈಸುತ್ತೇನೆ ಎಂದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಭದ್ರಾವತಿ ವಿಧಾನಸಭಾ ಕ್ಷೇತಕ್ಕೆ ತನ್ನದೇ ಇತಿಹಾಸವಿದೆ. ಇದೊಂದು ಪುಣ್ಯದ ಭೂಮಿ. ಇಂತಹ ಭೂಮಿಯಲ್ಲಿ ಸಂಗಮೇಶ್ವರ್ ಅವರು ಎಲ್ಲಾ ಧರ್ಮದ, ಎಲ್ಲಾ ಜಾತಿಯ ಜನರ ಪ್ರೀತಿ ಸಂಪಾದಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಬಂದಿಲ್ಲ. ಇಲ್ಲಿನ ಜನರೊಂದಿಗೆ ಕಾಂಗ್ರೆಸ್ ಪಕ್ಷ ಸದಾ ಇರುತ್ತದೆ ಎಂದು ಭರವಸೆ ನೀಡಲು ಬಂದಿದ್ದೇನೆ. ರಾಜ್ಯಾದ್ಯಂತ ಬಿಜೆಪಿ ಅಲೆ ಇದ್ದ ಸಂದರ್ಭದಲ್ಲೂ ಇಲ್ಲಿನ ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸಿ ಸಂಗಮೇಶ್ವರ್ ಗೆಲುವಿಗೆ ಕಾರಣಕರ್ತರಾಗಿದ್ದಾರೆ. ಈ ಹಿನ್ನಲೆಯಲ್ಲಿ ಈ ನೆಲಕ್ಕೆ ಪುನಃ ವೈಭವ ತಂದು ಕೊಡಬೇಕಾದರೆ ಮತದಾರರು ಪುನಃ ಕಾಂಗ್ರೆಸ್ ಪಕ್ಷ ಬೆಂಬಲಿಸಬೇಕು. ಆ ಮೂಲಕ ಅಧಿಕಾರಕ್ಕೆ ಬರುವಂತಾಗಬೇಕು ಎಂದರು.
ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ನನ್ನ ೩೦ ವರ್ಷಗಳ ರಾಜಕಾರಣದಲ್ಲಿ ಕ್ಷೇತ್ರದ ಮತದಾರರು ನನಗೆ ನೀಡುತ್ತಿರುವ ಬೆಂಬಲ ಅಭೂತಪೂರ್ವವಾಗಿದೆ. ನನ್ನ ಸ್ವಂತ ಬುದ್ದಿವಂತಿಕೆ ಹಾಗು ಕಾಂಗ್ರೆಸ್ ಪಕ್ಷದ ನಾಯಕರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದೇನೆ. ಶೇ.೭೦ರಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ಹೊಂದಿದ್ದೇನೆ. ಮುಂದಿನ ದಿನಗಳಲ್ಲೂ ನನ್ನನ್ನು ಮತದಾರರು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ ಎಂದರು.
ವೇದಿಕೆಯಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಆರ್ ಸೀತಾರಾಮ್, ಶಾಸಕರಾದ ಭೈರತಿ ಸುರೇಶ್, ಲಕ್ಷ್ಮೀ ಹೆಬ್ಳಾಕರ್, ಚಿನ್ನರಾಜ್, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಕೆ.ಬಿ ಪ್ರಸನ್ನಕುಮಾರ್, ಜಿ.ಎಚ್ ಶ್ರೀನಿವಾಸ್, ಮಾಜಿ ಸಂಸದ ಧ್ರುವ ನಾರಾಯಣ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್ ಸುಂದರೇಶ್, ನಗರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕೆಪಿಸಿಸಿ ವಕ್ತಾರ ನಿಕಿತ್ ರಾಜ್ ಮೌರ್ಯ ಪ್ರಾಸ್ತಾವವಿಕ ನುಡಿಗಳನ್ನಾಡಿದರು. ನಗರಸಭೆ ಉಪಾಧ್ಯಕ್ಷ ಚನ್ನಪ್ಪ ಸ್ವಾಗತಿಸಿದರು.
ಶಾಸಕ ಬಿ.ಕೆ ಸಂಗಮೇಶ್ವರ್ ಅವರಿಗೆ ಈ ಹಿಂದೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿಸಿದ್ದು ನಾನೇ ಎಂಬುದು ಗೊತ್ತಿದ್ದರೂ ಸಹ ಅವರು ಎಂದಿಗೂ ನನ್ನ ಬಗ್ಗೆ ಸಿಟ್ಟು ಮಾಡಿಕೊಳ್ಳಲಿಲ್ಲ. ಅಲ್ಲದೆ ಪಕ್ಷವನ್ನು ತೊರೆಯದೆ ಇಂದಿಗೂ ಪಕ್ಷ ನಿಷ್ಠೆ ಕಾಯ್ದುಕೊಂಡು ಬಂದಿರುವುದು ಅವರ ದೊಡ್ಡತನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಂಪಿಎಂ ಕಾರ್ಖಾನೆ ಪುನಃ ಆರಂಭಿಸಲಾಗುವುದು. ಇದರಿಂದ ಸುಮಾರು ೨ ಸಾವಿರ ಮಂದಿಗೆ ಉದ್ಯೋಗ ಲಭಿಸಲಿದೆ.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ರಾಜ್ಯ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರವಾಗಿದ್ದು, ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಜೆ.ಎಚ್ ಪಟೇಲ್ ಸೇರಿದಂತೆ ಅನೇಕ ಮಹಾನ್ ನಾಯಕರು ಜಿಲ್ಲೆಯನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿಸಿದ್ದರು. ಯಡಿಯೂರಪ್ಪನವರು ಸಹ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಆದರೆ ಇಂದಿನ ಪರಿಸ್ಥಿತಿ ತೀರ ಹದಗೆಟ್ಟಿದೆ. ಜಿಲ್ಲೆಯಲ್ಲಿ ಕೋಮು ಗಲಭೆಗಳು ಹೆಚ್ಚಾಗುತ್ತಿವೆ. ಇಲ್ಲಿನ ಜನರು ಸದಾ ಭಯಭೀತಿಯಿಂದ ಬದುಕುವಂತಾಗಿದೆ. ಬಂಡವಾಳ ಶಾಹಿಗಳು ಜಿಲ್ಲೆಯಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ.
- ಡಿ.ಕೆ ಶಿವಕುಮಾರ್, ಅಧ್ಯಕ್ಷರು, ಕೆಪಿಸಿಸಿ