ಭದ್ರಾವತಿ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಭದ್ರಾವತಿ, ನ. ೧೪: ಸಮಾಜದಲ್ಲಿ ಸೇವೆ ಮಾಡುವ ಗುಣ ಬೆಳೆಸಿಕೊಳ್ಳುವುದು ಗುರುಗಳಿಗೆ ನೀಡುವ ದೊಡ್ಡ ಗೌರವಾಗಿದೆ ಎಂದು ನಿವೃತ್ತ ಶಿಕ್ಷಕ ಎಸ್.ಬಿ ಹಿರೇಮಠ್ ಹೇಳಿದರು.
ಅವರು ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತದಲ್ಲಿರುವ ಭದ್ರಾ ಪ್ರೌಢಶಾಲೆಯಲ್ಲಿ ೧೯೮೭-೯೦ನೇ ಸಾಲಿನ ಹಳೇಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನೆ ಹಾಗು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುರುಗಳು ಹೇಳಿಕೊಡುವ ವಿದ್ಯೆಯಿಂದ ಉತ್ತಮ ವ್ಯಕ್ತಿತ್ವ ರೂಢಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಂಡಾಗ ಗುರುಗಳ ಬದುಕು ಸಾರ್ಥಕಗೊಳ್ಳುತ್ತದೆ. ಇಂದಿನ ಕಾಲಘಟ್ಟದಲ್ಲಿ ಹಳೇಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಕರೆತಂದು ಗುರು ವಂದನೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಈ ಬೆಳವಣಿಗೆ ಭವಿಷ್ಯದಲ್ಲಿ ತಮ್ಮ ಮಕ್ಕಳಿಗೂ ಸಹ ಸ್ಪೂರ್ತಿದಾಯಕವಾಗಬೇಕು. ಈ ಹಿನ್ನಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಸಹ ಕರೆತರಬೇಕೆಂದರು.
೧೯೮೭-೯೦ನೇ ಸಾಲಿನಲ್ಲಿ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿರುವ ಎಸ್.ಬಿ ಹಿರೇಮಠ್, ಜಿ.ಟಿ ರುದ್ರಪ್ಪ, ಕೆ.ಜಿ ಸೋಮಶೇಖರ್, ಟಿ. ಲೋಕೇಶ್, ಜಿ. ವಿಮಲಮ್ಮ ಮತ್ತು ಎನ್.ಎಂ ಸುನಂದ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಹಳೇವಿದ್ಯಾರ್ಥಿಗಳಾದ ಸುಧೀರ್, ಸ್ನೇಹಜೀವಿ ಪೊಲೀಸ್ ಉಮೇಶ್, ರವಿ, ಮಂಜುನಾಥ ಮೋರೆ, ರೂಪ, ಇಂದೂಮತಿ, ಮಂಜುನಾಥ್, ಮೇಘರಾಜ್, ಅಜಯ್, ಕೊಮಾರನಹಳ್ಳಿ ರವಿಕುಮಾರ್, ಸರೋಜಾ, ಜೋಸ್ನಾ, ಭವಾನಿ ದಂಪತಿ, ಪುಷ್ಪ, ಹಾಲಮ್ಮ, ರಾಘವೇಂದ್ರ ಹೆಗಡೆ, ರತ್ನಾಕರ್(ಎಎಸ್‌ಐ), ಕೂಡ್ಲಿಗೆರೆ ಸುರೇಖಾ, ಜನ್ನಾಪುರ ಲೋಕೇಶ್, ದೇವರಾಜ ಮತ್ತು ಜಿ. ಆನಂದಕುಮಾರ್ ಸೇರಿದಂತೆ ಸುಮಾರು ೫೦ ರಿಂದ ೬೦ ಹಳೇವಿದ್ಯಾರ್ಥಿಗಳು ಒಂದೆಡೆ ಸೇರಿ ತಮ್ಮ ಶಾಲಾ ದಿನದ ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಇದಕ್ಕೂ ಮೊದಲು ಹಾಲಪ್ಪವೃತ್ತದಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ಹಳೇಯ ವಿದ್ಯಾರ್ಥಿಗಳು ವಿಶೇಷ ಪೂಜೆ ಸಲ್ಲಿಸಿ ಪಟಾಕಿ ಸಿಡಿಸಿ, ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಗುರುಗಳನ್ನು ಕರೆ ತಂದರು. ಮೆರವಣಿಗೆಯಲ್ಲಿ ಹಳೇಯ ವಿದ್ಯಾರ್ಥಿಗಳು ಕುಣಿದು ಸಂಭ್ರಮಿಸಿದರು.