ಭದ್ರಾವತಿ ಹಳೇನಗರದ ಸರ್ಕಾರಿ ಸಂಚಿ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಮಾತನಾಡಿದರು.
ಭದ್ರಾವತಿ, ಜ. ೧೭ : ಇಂದಿನ ಬದುಕಿಗೂ, ೧೨ನೇ ಶತಮಾನದ ಬದುಕಿಗೂ ಸಾಕಷ್ಟು ವ್ಯತ್ಯಾಸಗಳಿವೆ. ವಚನಕಾರರ, ಶರಣರ ಬದುಕು ನಮ್ಮೆಲ್ಲರೂ ದಾರಿದೀಪವಾಗಿದೆ ಎಂದು ಶಿಕ್ಷಕ ಹಾಗು ಹವ್ಯಾಸಿ ಖಗೋಳ ಶಾಸ್ತ್ರಜ್ಞ ಹರೋನಹಳ್ಳಿ ಸ್ವಾಮಿ ಹೇಳಿದರು.
ಅವರು ಮಂಗಳವಾರ ಹಳೇನಗರದ ಸರ್ಕಾರಿ ಸಂಚಿಯ ಹೊನ್ನಮ್ಮ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಮೈಸೂರು ಹಾಗು ತಾಲೂಕು ಶಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೬೩೨ನೇ ವಚನ ಮಂಟಪ ಮತ್ತು ದತ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು 'ವಚನ ಸಾಹಿತ್ಯ-ವೈಚಾರಿಕತೆ' ವಿಷಯ ಕುರಿತು ಮಾತನಾಡಿದರು.
೧೨ನೇ ಶತಮಾನದ ಬದುಕು ವಚನಗಳಾಗಿವೆ. ಮೂಡನಂಬಿಕೆ, ಅಜ್ಞಾನ, ಅಸಮಾನತೆ ಸೇರಿದಂತೆ ಸಾಮಾಜಿಕ ಪಿಡುಗುಗಳ ವಿರುದ್ಧ ಜಾಗೃತಿ ಮೂಡಿಸಿ ಮೌಲ್ಯಯುತವಾದ ಸಮಾಜ ರೂಪುಗೊಳ್ಳುವಲ್ಲಿ ವಚನಕಾರರ ಕೊಡುಗೆ ಮಹತ್ವದಾಗಿದೆ. ವಚನಗಳು ಇಂದಿಗೂ ಪ್ರಸ್ತುತವಾಗಿವೆ. ಅಂದಿನ ಸಮಾಜಕ್ಕೂ, ಇಂದಿನ ಸಮಾಜಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ನಾವೆಲ್ಲರೂ ವಚನಕಾರರ, ಶರಣರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ. ಅದರಲ್ಲೂ ಇಂದಿನ ಯುವ ಪೀಳಿಗೆಗೆ ಆದರ್ಶ ಮತ್ತು ಗುರಿಗಳು ಬಹಳ ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ತಮ್ಮತನ ಮೈಗೂಡಿಸಿಕೊಂಡು ಸಾಧನೆ ದಾರಿಯಲ್ಲಿ ಸಾಗಬೇಕೆಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಎಸ್ ಸಿದ್ದಲಿಂಗಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎನ್ ಮಹಾರುದ್ರ ಕಾರ್ಯಕ್ರಮ ಉದ್ಘಾಟಿಸಿದರು. ಪರಿಷತ್ ತಾಲೂಕು ಕಾರ್ಯದರ್ಶಿ ನಂದಿನಿ ಮಲ್ಲಿಕಾರ್ಜುನ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಸವ ಕೇಂದ್ರದ ಅಧ್ಯಕ್ಷ ಜಗದೀಶ್ ಕವಿ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಮಲ್ಲಿಕಾಂಬ ವಿರೂಪಾಕ್ಷಪ್ಪ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕ ಬಿ. ಚೆನ್ನಯ್ಯ ನಿರೂಪಿಸಿದರು. ಕಾಲೇಜಿನ ವಿದ್ಯಾರ್ಥಿನಿಯರು ಹಾಗು ಕದಳಿ ಮಹಿಳಾ ವೇದಿಕೆ ಸದಸ್ಯರಿಂದ ವಚನ ಗಾಯನ ನಡೆಯಿತು.