Tuesday, January 31, 2023

ನಗರಸಭೆಯಿಂದ ಕುರುಬ ಸಮಾಜದ ಸಿಬ್ಬಂದಿಗಳಿಗೆ ವಿನಾಕಾರಣ ಕಿರುಕುಳ ಆರೋಪ : ಪ್ರತಿಭಟನೆ

ಭದ್ರಾವತಿ ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಕುರುಬ ಸಮಾಜದ ಸಿಬ್ಬಂದಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.
    ಭದ್ರಾವತಿ, ಫೆ. ೧: ನಗರಸಭೆಯಲ್ಲಿ ಕೆಲಸ ಮಾಡುತ್ತಿರುವ ಕುರುಬ ಸಮಾಜದ ಸಿಬ್ಬಂದಿಗೆ ಅಧಿಕಾರಿಗಳು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ತಾಲೂಕು ಕುರುಬರ ಸಂಘದ ಪದಾಧಿಕಾರಿಗಳು ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ಮಾಡಿದರು.
    ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಕುರುಬ ಸಮಾಜದ ಸಿಬ್ಬಂದಿಯನ್ನು ಆಗಾಗ್ಗೆ ವರ್ಗಾವಣೆ ಮಾಡುವುದು, ಕೆಲಸದ ವೇಳೆ ಕಿರುಕುಳ ನೀಡಲಾಗುತ್ತಿದೆ. ಇದೀಗ ನಗರಸಭೆಯ ವಾಹನ ಚಾಲಕನನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ. ಪದೇಪದೆ ಇಂತಹ ವರ್ತನೆಯನ್ನು ಸಮಾಜ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
    ಸ್ಥಳಕ್ಕೆ ಆಗಮಿಸಿದ ಶಾಸಕ ಬಿ.ಕೆ.ಸಂಗಮೇಶ್ವರ್ ಕುರುಬ ಸಮುದಾಯದ ಮುಖಂಡರೊಂದಿಗೆ ಮಾತುಕತೆ ನಡೆಸಿ, ವಾಹನ ಚಾಲಕ ಸೋಮು ಅವರ ವರ್ಗಾವಣೆ ಹಿಂಪಡೆಯಲಾಗುತ್ತದೆ. ವಿಷಯವನ್ನು ದೊಡ್ಡದು ಮಾಡುವುದು ಬೇಡ, ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.
    ಇದೇ ಸಂದರ್ಭ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದಿಂದ ತಾತ್ಕಾಲಿಕ ವಿರಾಮ ನೀಡಿ ಹೊರಬಂದು ಕುರುಬರ ಸಂಘದ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದರು.
    ಕುರುಬರ ಸಂಘದ ಅಧ್ಯಕ್ಷ ಸಂತೋಷ್, ನಗರಸಭಾ ಸದಸ್ಯ ಕಾಂತರಾಜ್, ಮುಖಂಡರಾದ ಸಣ್ಣಯ್ಯ, ಹೇಮಾವತಿ, ಶಾರದಮ್ಮ, ಮಂಜುನಾಥ್(ಕೊಯ್ಲಿ), ಬಿ.ಎಸ್.ನಾರಾಯಣ, ರಾಜೇಶ್, ವಸಂತ, ನಟರಾಜ್, ಕೇಶವ, ವಿಲ್ಸನ್‌ಬಾಬು  ಇತರರಿದ್ದರು.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟ ೧೩ನೇ ದಿನಕ್ಕೆ

ಬಂಜಾರ ಸಮಾಜ, ವಿವಿಧ ಮುಖಂಡರಿಂದ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೧೩ನೇ ದಿನ ಪೂರೈಸಿತು. ಈ ನಡುವೆ ಹೋರಾಟಕ್ಕೆ ತಾಲೂಕು ಬಂಜಾರ ಸಮಾಜ ಬೆಂಬಲ ಸೂಚಿಸಿತು.
    ಭದ್ರಾವತಿ, ಜ. ೩೧ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೧೩ನೇ ದಿನ ಪೂರೈಸಿತು. ಈ ನಡುವೆ ಹೋರಾಟಕ್ಕೆ ತಾಲೂಕು ಬಂಜಾರ ಸಮಾಜ, ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಎಎಪಿ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮುಖಂಡರು ಬೆಂಬಲ ಸೂಚಿಸಿದ್ದಾರೆ.
    ಗುತ್ತಿಗೆ ಕಾರ್ಮಿಕರ ಎಲ್ಲಾ ರೀತಿಯ ಹೋರಾಟಕ್ಕೂ ಸಂಪೂರ್ಣ ಬೆಂಬಲ ನೀಡುವ ಜೊತೆಗೆ ತಕ್ಷಣ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯಬೇಕು. ಅಗತ್ಯವಿರುವ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸುವಂತೆ ಒತ್ತಾಯಿಸಲಾಯಿತು.
    ಬಂಜಾರ ರೈತರ ಸಂಘದ ರಾಜ್ಯಾಧ್ಯಕ್ಷ ಕೃಷ್ಣನಾಯ್ಕ, ಬಂಜಾರ ಸಮಾಜ ತಾಲೂಕು ಅಧ್ಯಕ್ಷ ಪ್ರೇಮ್‌ಕುಮಾರ್, ಪ್ರವೀಣ್‌ನಾಯ್ಕ, ನಾಗನಾಯ್ಕ, ಪ್ರವೀಣ್‌ಕುಮಾರ್, ಸಂಕ್ರಾನಾಯ್ಕ, ಹಾಲೇಶ್‌ನಾಯ್ಕ, ಶೋಭ್ಯಾನಾಯ್ಕ, ಉಮೇಶ್‌ನಾಯ್ಕ, ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ.ಎಚ್ ಕೃಷ್ಣ, ತರುಣ್‌ಕುಮಾರ್ ಹಾಗು ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗದಲ್ಲಿ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ಮಂಗಳವಾರ ೧೩ನೇ ದಿನ ಪೂರೈಸಿತು. ಮಾಜಿ ಉಪಮೇಯರ್ ಮಹಮದ್ ಸನ್ನಾವುಲ್ಲಾ, ಎಎಪಿ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮುಖಂಡರು ಬೆಂಬಲ ಸೂಚಿಸಿದ್ದಾರೆ.

ಬಿಜೆಪಿ ಪಕ್ಷದ ಮುಖಂಡರು, ಜನಪ್ರತಿನಿಧಿಗಳಿಗೆ ವಿಐಎಸ್‌ಎಲ್-ಎಂಪಿಎಂ ಕಾರ್ಖಾನೆಗಳ ಉಳಿವಿನ ಬಗ್ಗೆ ಆಸಕ್ತಿ ಇಲ್ಲ

ಶಾರದ ಅಪ್ಪಾಜಿ ಪತ್ರಿಕಾಗೋಷ್ಠಿಯಲ್ಲಿ ಆರೋಪ, ಫೆ.೩ರ ಹೋರಾಟ ಬೆಂಬಲಿಸಲು ಮನವಿ

ಭದ್ರಾವತಿ ಹಳೇನಗರದ ಪತ್ರಿಕಾಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಮಾತನಾಡಿದರು.
    ಭದ್ರಾವತಿ, ಜ. ೩೧:  ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಹಾಗು ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ ಪಕ್ಷದ ಚುನಾಯಿತ ಪ್ರತಿನಿಧಿಗಳು ಹಾಗೂ ಮುಖಂಡರುಗಳು ನಿರಾಸಕ್ತಿ ಹೊಂದಿದ್ದಾರೆ. ಅವರಿಗೆ ಕಾರ್ಮಿಕರ ಸಂಕಷ್ಟಗಳು ಅರಿವಿಗೆ ಬರುತ್ತಿಲ್ಲ. ಬದಲಾಗಿ ಈ ಎರಡು ಕಾರ್ಖಾನೆಗಳ ಸಮಸ್ಯೆಗಳನ್ನು ಇವರುಗಳು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ಪಕ್ಷದ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶಾರದ ಅಪ್ಪಾಜಿ ಆರೋಪಿಸಿದರು.
    ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಖಾನೆ ಉಳಿವಿನ ಬಗ್ಗೆ ಪಕ್ಷದ ನಿಲುವು ಹಾಗು ಹೋರಾಟಗಳ ಬಗ್ಗೆ ಮಾಹಿತಿ ನೀಡಿದರು. ನನ್ನ ಪತಿ ದಿವಂಗತ ಎಂ.ಜೆ ಅಪ್ಪಾಜಿಯವರು ಕಾರ್ಮಿಕರ ಪರವಾಗಿ ನಡೆಸಿದ ಹೋರಾಟಗಳು ಇಂದಿಗೂ ನೆನಪಿಗೆ ಬರುತ್ತಿವೆ. ಪ್ರಸ್ತುತ ಅವರು ನಡೆಸಿದ ಹೋರಾಟದಂತೆ ನಾನು ಸಹ ಹೋರಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಹೋರಾಟಕ್ಕೆ ಶಕ್ತಿ ತುಂಬಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಫೆ. ೩ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದರು.
    ನಾನು ಓರ್ವ ಕಾರ್ಮಿಕನ ಪತ್ನಿಯಾಗಿ ಕಾರ್ಮಿಕರು ಹಾಗೂ ಅವರ ಅವಲಂಬಿತರ ನೋವು, ಸಂಕಷ್ಟಗಳನ್ನು ಅರಿತುಕೊಂಡಿದ್ದೇನೆ. ಈ ಹೋರಾಟ ಕೇವಲ  ಕಾರ್ಮಿಕರ ಬದುಕಿನ ಪ್ರಶ್ನೆಯಲ್ಲ ಬದಲಾಗಿ ನಗರದ ಜನತೆಯ ಭವಿಷ್ಯದ ಪ್ರಶ್ನೆಯಾಗಿದೆ. ಹಾಗಾಗಿ ಈ ಅಳಿವು-ಉಳಿವಿನ ಹೋರಾಟದಲ್ಲಿ ನಗರದ ಎಲ್ಲಾ ಜನರು ಭಾವಹಿಸಿ ಬೆಂಬಲ ನೀಡಬೇಕೆಂದು ಕರೆ ನೀಡಿದರು.
    ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾ ಮೂರ್ತಿ ಮಾತನಾಡಿ, ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಗೊಳಿಸಲು ಪ್ರಯತ್ನಿಸಲಾಗಿ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆದರೂ ಸಹ ಯಾರೂ ಮುಂದೆ ಬರಲಿಲ್ಲ ಎಂಬ ಸಂಸದರ ಸ್ಪಷ್ಟನೆ ಸರಿಯಲ್ಲ. ಇದು ಬೇಜವಾಬ್ದಾರಿಯಿಂದ ಕೂಡಿದೆ. ಕಾರ್ಖಾನೆ ಹಾಗು ಕಾರ್ಮಿಕರ ಭವಿಷ್ಯದ ದೃಷ್ಟಿಯಿಂದ ತಾವು ಜಿಲ್ಲೆಯ ಜನಪ್ರತಿನಿಧಿಯಾಗಿ ಇದರ ಬಗ್ಗೆ ವಿಶೇಷ ಆಸಕ್ತಿಯನ್ನು ಹೊಂದಿ ಖಾಸಗಿ ಕಂಪನಿಯವರನ್ನು ಕರೆತಂದು ಕಾರ್ಖಾನೆ ನಡೆಸುವಂತೆ ಮಾಡುವುದು ಅವರ ಜವಾಬ್ದಾರಿಯಾಗಿದೆ ಎಂದರು.
    ನಗರಸಭೆ ಮಾಜಿ ಸದಸ್ಯ, ಹಿರಿಯ ಮುಖಂಡ ಕರಿಯಪ್ಪ ಮಾತನಾಡಿ, ತಾವು ಕಾರ್ಮಿಕರ ಪರ ಇದ್ದೇವೆ. ಇದರ ಬಗ್ಗೆ ಪ್ರಯತ್ನ ಮಾಡುತ್ತೇವೆ ಎಂದು ಹೇಳುವುದು. ಹಿಂದಿನ ಅವಧಿಯ ಸರ್ಕಾರಗಳು ಇದರ ಬಗ್ಗೆ ಸರಿಯಾದ ನಿಲುವುಗಳನ್ನು ತೆಗೆದುಕೊಳ್ಳಲಿಲ್ಲ ಎಂದು ಆರೋಪಿಸುವುದು ಹಾಗೂ ತಾವು ಈ ಬಾರಿ ಚುನಾವಣೆಯಲ್ಲಿ ಗೆದ್ದು ಮಂತ್ರಿಯಾಗಿ ಕಾರ್ಖಾನೆಯ ಪುರಾರಂಭಕ್ಕೆ ಪ್ರಯತ್ನಿಸುತ್ತೇನೆ ಎಂಬಿತ್ಯಾದಿ ಹೇಳಿಕೆಗಳನ್ನು ನೀಡುವುದನ್ನು ನೋಡಿದರೆ ಶಾಸಕ ಬಿ.ಕೆ ಸಂಗಮೇಶ್ವರ ಹಾಗೂ ಸಂಸದ ಬಿ.ವೈ ರಾಘವೇಂದ್ರರವರುಗಳ ರಾಜಕೀಯ ಜೀವನಕ್ಕೆ ಈ ಕಾರ್ಖಾನೆ ಸಮಸ್ಯೆ ಆಹಾರವಾಗಿದೆ. ಇದರ ಮೇಲೆ ಅವರು ರಾಜಕಾರಣ ಮಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ಫೆ.೩ ರಂದು ಹಮ್ಮಿಕೊಳ್ಳಲಾಗಿರುವ ಹೋರಾಟದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಭೋಜೇಗೌಡ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಪಾಲ್ಗೊಳ್ಳಲಿದ್ದು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರನ್ನು ಸಹ  ಕರೆತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖಂಡರುಗಳು ಮಾಹಿತಿ ನೀಡಿದರು.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ ಯೋಗೀಶ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್, ನಗರಸಭೆ ಸದಸ್ಯರಾದ ಉದಯ್‌ಕುಮಾರ್, ಮಂಜುಳಾ ಸುಬ್ಬಣ್ಣ, ಮಾಜಿ ಸದಸ್ಯರಾದ ಮುತುರ್ಜಾ ಖಾನ್, ಮೈಲಾರಪ್ಪ, ವಿಶಾಲಾಕ್ಷಿ, ಮುಖಂಡರಾದ ಡಿ.ಟಿ.ಶ್ರೀಧರ್, ಲೋಕೇಶ್ವರ ರಾವ್, ಲೋಕೇಶ್, ಆಹಮದ್, ಅಮೋಸ್, ಉಮೇಶ್, ಶ್ರೀಧರ್ ನಾಯ್ಕ್, ಭಾಗ್ಯಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಂಘದ ಉಪಾಧ್ಯಕ್ಷರಾಗಿ ಎ. ತಿಪ್ಪೇಸ್ವಾಮಿ ಅವಿರೋಧ ಆಯ್ಕೆ

ಭದ್ರಾವತಿ ತಾಲೂಕು ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಂಘ ನಿಯಮಿತದ ಉಪಾಧ್ಯಕ್ಷರಾಗಿ ಬೊಮ್ಮನಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಜ. ೩೧: ತಾಲೂಕು ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಂಘ ನಿಯಮಿತದ ಉಪಾಧ್ಯಕ್ಷರಾಗಿ ಬೊಮ್ಮನಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಎ. ತಿಪ್ಪೇಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
    ಎಸ್. ಸುಮಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಎ. ತಿಪ್ಪೇಸ್ವಾಮಿಯವರು ದಲಿತ ಸಂಘರ್ಷ ಸಮಿತಿ, ಭಗವಾನ ಬುದ್ಧ ವಿಹಾರ/ಮಂದಿರ ಸಂಬುದ್ಧ ಧಮ್ಮಾಂಕುರ ಟ್ರಸ್ಟ್, ಛಲವಾದಿ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಸರ್ಕಾರಿ ನೌಕರರ ಪ್ರಾಥಮಿಕ ಬಳಕೆದಾರರ ಸಂಘ ನಿಯಮಿತದ ಉಪಾಧ್ಯಕ್ಷರಾಗಿದ್ದು, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ ಸಿದ್ದಬಸಪ್ಪ, ತಾಲೂಕು ಸರ್ಕಾರಿ ನೌಕರರ ಸಂಘ ಕಾಯ೯ದಶಿ೯ ರಾಜಪ್ಪ ಮತ್ತು ಎಲ್ಲಾ ಪದಾಧಿಕಾರಿಗಳು ಹಾಗು ಬಳಕೆದಾರರ ಸಂಘದ ಅಧ್ಯಕ್ಷ ಸುಧೀಂದ್ರ ರೆಡ್ಡಿ ಮತ್ತು ನಿದೇ೯ಶಕರು ಸೇರಿದಂತೆ ಇನ್ನಿತರರು ಅಭಿನಂದಿಸಿದ್ದಾರೆ.

Monday, January 30, 2023

ವಿಐಎಸ್‌ಎಲ್ ಉಳಿಸಲು ನಿವೃತ್ತ ಕಾರ್ಮಿಕರಿಂದ ಜ.೩೧ರಂದು ದೆಹಲಿ ಜಾಥಾ


    ಭದ್ರಾವತಿ, ಜ. ೩೦: ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ನಿವೃತ್ತ ಕಾರ್ಮಿಕರು ಜ.೩೧ರಂದು ದೆಹಲಿ ಜಾಥಾ ನಡೆಸಲಿದ್ದಾರೆ.
    ರಾಜ್ಯದ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಒಂದಾಗಿರುವ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚಲು ತೆಗೆದುಕೊಂಡಿರುವ ನಿರ್ಧಾರ ದುರಾದೃಷ್ಟಕರ ಸಂಗತಿಯಾಗಿದ್ದು, ಈ ಬೆಳವಣಿಗೆಯನ್ನು ಖಂಡಿಸುವ ಜೊತೆಗೆ ಲಕ್ಷಾಂತರ ಜನರಿಗೆ ಅನ್ನ ನೀಡಿದ ಹಾಗು ಕ್ಷೇತ್ರದ ಉಸಿರಾಗಿರುವ ಈ ಕಾರ್ಖಾನೆಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರ ನಿಯೋಗ ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಅಧ್ಯಕ್ಷ ಬಿ.ಜಿ ರಾಮಲಿಂಗಯ್ಯ ನೇತೃತ್ವದಲ್ಲಿ ದೆಹಲಿ ಜಾಥಾ ನಡೆಸಲಿದೆ.
    ನಿಯೋಗ ಜ.೩೧ರಂದು ದೆಹಲಿಯಲ್ಲಿ ಸಂಬಂಧಪಟ್ಟ ಸಚಿವರು ಹಾಗು ರಾಜ್ಯದ ಎಲ್ಲಾ ಸಂಸದರನ್ನು ಭೇಟಿಯಾಗಿ ಕಾರ್ಖಾನೆಯನ್ನು ಯಾವುದೇ ಕಾರಣಕ್ಕೂ ಮುಚ್ಚದಂತೆ ಹಾಗು ಸೂಕ್ತ ಬಂಡವಾಳ ತೊಡಗಿಸಿ ಆಧುನೀಕರಣಗೊಳಿಸಿ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಲಿದೆ ಎಂದು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರದ ಪ್ರಧಾನ ಕಾರ್ಯದರ್ಶಿ ಬಿ.ಆರ್ ನಾಗರಾಜ ತಿಳಿಸಿದ್ದಾರೆ.

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಎಚ್‌ಡಿಕೆ ಬೆಂಬಲ : ಫೆ.೩ರಂದು ನಗರಕ್ಕೆ ಆಗಮನ

ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪಂಚರತ್ನ ಕಾರ್ಯಕ್ರಮದ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರನ್ನು ಭದ್ರಾವತಿ ಜೆಡಿಎಸ್ ಪಕ್ಷದ ಯುವ ಮುಖಂಡರು ಹಾಗು ಕಾರ್ಮಿಕ ಸಂಘಟನೆಗಳ ಪ್ರಮುಖರು ಭೇಟಿ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದರು.
    ಭದ್ರಾವತಿ, ಜ. ೩೦: ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಕಾರ್ಖಾನೆ ಮುಂಭಾಗ ಕಳೆದ ೧೨ ದಿನಗಳಿಂದ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಬೆಂಬಲ ಸೂಚಿಸಿದ್ದಾರೆ.
    ಪಕ್ಷದ ಯುವ ಘಟಕದ ಜಿಲ್ಲಾಧ್ಯಕ್ಷ ಮಧುಕುಮಾರ್, ತಾಲೂಕು ಘಟಕದ ಅಧ್ಯಕ್ಷ ಎಂ.ಎ ಅಜಿತ್, ವಿಐಎಸ್‌ಎಲ್ ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಹಾಗು ರಮೇಶ್, ಉಮೇಶ್ ಸುರಗಿತೋಪು, ಪರಮೇಶ್ ಸೇರಿದಂತೆ ಯುವ ಮುಖಂಡರು ಸೋಮವಾರ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಪಂಚರತ್ನ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಹೋರಾಟ ಬೆಂಬಲಿಸುವಂತೆ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ಫೆ.೩ರಂದು ಮಧ್ಯಾಹ್ನ ೩ ಗಂಟೆಗೆ ಹೋರಾಟ ಸ್ಥಳಕ್ಕೆ ಆಗಮಿಸಲಿದ್ದಾರೆ.
    ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು, ಕಾರ್ಮಿಕ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಚುನಾಯಿತ ಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಕ್ಷೇತ್ರದ ಸಮಸ್ತ ನಾಗರೀಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕ ಬೆಂಕಿ

ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಭದ್ರಾವತಿ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.
    ಭದ್ರಾವತಿ, ಜ. ೩೦ : ಚಲಿಸುತ್ತಿದ್ದ ಕಾರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ನಗರದ ಬೈಪಾಸ್ ರಸ್ತೆಯಲ್ಲಿ ಸೋಮವಾರ ನಡೆದಿದ್ದು, ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದೆ.


    ಉಜ್ಜನಿಪುರ ಆನೇಕೊಪ್ಪ ಎಂಪಿಎಂ ಬಡಾವಣೆ ಸಮೀಪ ಬೈಪಾಸ್ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ. ಹಳೇನಗರದ ನಿವಾಸಿ ಶ್ರೀಕಾಂತ್ ಎಂಬುವರಿಗೆ ಸೇರಿದ ಹೊಂಡ ಸಿಟಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಈ ಸಂಬಂಧ ಪೇಪರ್‌ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.