Friday, March 17, 2023

ಮಾ.೧೮ರಂದು ನಗರಕ್ಕೆ ವಿಜಯ ಸಂಕಲ್ಪ ಯಾತ್ರೆ


    ಭದ್ರಾವತಿ, ಮಾ. ೧೭: ವಿಜಯ ಸಂಕಲ್ಪ ಯಾತ್ರೆ ಮಾ.೧೮ರ ಶನಿವಾರ ಬೆಳಿಗ್ಗೆ ೮.೩೦ಕ್ಕೆ ನಗರದ ಲೋಯರ್ ಹುತ್ತಾ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಹೇಳಿದರು.
    ಅವರು ಈ ಕುರಿತು ಮಾಹಿತಿ ನೀಡಿ, ವಿಜಯ ಸಂಕಲ್ಪ ಯಾತ್ರೆಯಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಸುನಿಲ್‌ಕುಮಾರ್, ಸಂಸದ ಬಿ.ವೈ ರಾಘವೇಂದ್ರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ಹಿರಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.
    ಹುತ್ತಾ ಕಾಲೋನಿ ಬಸ್ ನಿಲ್ದಾಣದಿಂದ ಆರಂಭಗೊಳ್ಳುವ ಯಾತ್ರೆ ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ, ನಂತರ ಹೊಸಮನೆ ಶಿವಾಜಿ ಸರ್ಕಲ್‌ವರೆಗೂ ಸಾಗಲಿದೆ. ಸಂಕಲ್ಪ ಯಾತ್ರೆ ಕುರಿತು ಪಕ್ಷದ ಪ್ರಮುಖರು ಮಾತನಾಡಲಿದ್ದು, ಇಲ್ಲಿಯೇ ಮುಕ್ತಾಯಗೊಳ್ಳಲಿದೆ.
    ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಿದರು.

ಮಾ.೧೮ರಂದು ನಗರಸಭೆ ಸಾಮಾನ್ಯ ಸಭೆ

    ಭದ್ರಾವತಿ, ಮಾ. ೧೭ : ನಗರಸಭೆ ಸಾಮಾನ್ಯ ಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ ನೇತೃತ್ವದಲ್ಲಿ ಮಾ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
    ಸಾಮಾನ್ಯಸಭೆಗೆ ಸದಸ್ಯರು ಪಾಲ್ಗೊಳ್ಳುವ ಮೂಲಕ ಸಭೆ ಯಶಸ್ವಿಗೊಳಿಸಿ ಕೊಡುವಂತೆ ಪೌರಾಯುಕ್ತ ಮನು ಕುಮಾರ್ ಕೋರಿದ್ದಾರೆ. 

ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್

ಭದ್ರಾವತಿ ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್ ಶಂಕರಘಟ್ಟ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಭದ್ರಾವತಿ, ಮೇ. ೧೭: ತಾಲೂಕಿನ ಸಿಂಗನಮನೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಅಶ್ವಿನಿ ಶಶಿಕುಮಾರ್ ಶಂಕರಘಟ್ಟ ಶುಕ್ರವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.
    ಅಶ್ವಿನಿ ಶಶಿಕುಮಾರ್ ೧೬ ಮತಗಳು ಹಾಗು ಇವರ ಪ್ರತಿಸ್ಪರ್ಧಿ ಕವಿತಾ ಕವಿತಾ ಪುಟ್ಟೇಗೌಡ ೪ ಮತಗಳನ್ನು ಪಡೆದುಕೊಂಡರು. ೨೧ ಸದಸ್ಯ ಬಲ ಹೊಂದಿರುವ ಪಂಚಾಯಿತಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಒಪ್ಪಂದದಂತೆ ಆಂತರಿಕವಾಗಿ ಅಧಿಕಾರ ಹಂಚಿಕೆ ಮಾಡಿಕೊಂಡಿದ್ದು, ಉಪಾಧ್ಯಕ್ಷರಾಗಿದ್ದ ಕವಿತಾ ರುದ್ರೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಚುನಾವಣೆ ನಡೆಯಿತು. ಓರ್ವ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿಲ್ಲ. ಪಶುಸಂಗೋಪನಾ ಇಲಾಖೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಬಸವರಾಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.
    ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಹಿಂದುಳಿದ ವರ್ಗಗಳ ಗ್ರಾಮಾಂತರ ಅಧ್ಯಕ್ಷ ಎಂ. ರಮೇಶ್, ವಿಜಯ್ ಕುಮಾರ್, ಲೋಕೇಶ್, ಎಂ.ವಿ ಮುರುಗೇಶ್, ವೀರೇಶ್, ಶ್ರೀಕಾಂತ್ ಗ್ರಾಮದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ನೂತನ ಉಪಾಧ್ಯಕ್ಷ ಅಶ್ವಿನಿ ಶಶಿಕುಮಾರ್‌ರವರನ್ನು ಅಭಿನಂದಿಸಿದ್ದಾರೆ.

ಮಾ.೨೦ರಂದು ಎಸ್.ಸಿ ಮೋರ್ಚಾದಿಂದ “ನಮ್ಮ ನಡೆ ಭೀಮ ನಡೆ” ಬೃಹತ್ ಸಮಾವೇಶ

ಮಾ.೨೦ರಂದು ಜಿಲ್ಲಾ ಎಸ್.ಸಿ ಮೋರ್ಚಾದಿಂದ ಭದ್ರಾವತಿಯಲ್ಲಿ "ನಮ್ಮ ನಡೆ ಭೀಮ ನಡೆ" ಬೃಹತ್ ಸಮಾವೇಶ ಹಮ್ಮಿಕೊಂಡಿರುವ ಕುರಿತು ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಸೇರಿದಂತೆ ಪಕ್ಷದ ಪ್ರಮುಖರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
    ಭದ್ರಾವತಿ, ಮೇ. ೧೭ : ಶಿವಮೊಗ್ಗ ಜಿಲ್ಲಾ ಬಿಜೆಪಿ ಎಸ್.ಸಿ ಮೊರ್ಚಾ ನೇತೃತ್ವದಲ್ಲಿ ಜಿಲ್ಲಾಮಟ್ಟದ "ನಮ್ಮ ನಡೆ ಭೀಮ ನಡೆ" ಬೃಹತ್ ಸಮಾವೇಶ ಭದ್ರಾವತಿ ಮಂಡಲ ಬಿಜೆಪಿ ಕಛೇರಿ ಮುಂಭಾಗದ ಆವರಣದಲ್ಲಿ ಮಾ.೨೦ರ ಸೋಮವಾರ ಬೆಳಿಗ್ಗೆ ೧೧ ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್ ಹೇಳಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಮಾವೇಶದಲ್ಲಿ ಕರ್ನಾಟಕ ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ ರಾಘವೆಂದ್ರ, ಎಸ್.ಸಿ ಮೊರ್ಜಾ ರಾಜ್ಯಧ್ಯಕ್ಷ  ಛಲವಾದಿ ನಾರಯಣಸ್ವಾಮಿ  ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್ ಈಶ್ವರಪ್ಪ ಸೇರಿದಂತೆ ಪಕ್ಷದ ರಾಜ್ಯ, ಜಿಲ್ಲಾ ಮಟ್ಟದ ನಾಯಕರು, ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದರು.  
    ಎಸ್.ಸಿ ಮೊರ್ಚಾ ನೇತೃತ್ವದಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ ಜಿಲ್ಲೆಯಲ್ಲಿ ಸುಮಾರು ೫೦೦ಕ್ಕೂ ಹೆಚ್ಚು ಪಲಾನುಭವಿಗಳಿಗೆ ಅನುದಾನ ಮಂಜೂರಾತಿ ಮಾಡಿಸಿಕೊಡಲಾಗಿದೆ.  ಪಕ್ಷ ಸಂಘಟನೆ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಾವಿರಾರು ಮಂದಿ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಬೃಹತ್ ಸಸಿ ನೆಡುವ ಕಾರ್ಯಕ್ರಮ, ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪುಸ್ತಕ, ಬ್ಯಾಗ್, ಪೆನ್ ವಿತರಣೆ, ಗರ್ಭಿಣಿ ಮಹಿಳೆಯರಿಗೆ ಮತ್ತು ಕುಷ್ಠ ರೋಗಿಗಳಿಗೆ ಪೌಷ್ಠಿಕ ಆಹಾರ ವಿತರಣೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು  ಆಯೋಜಿಸಲಾಗಿದ್ದು, ಹೆಚ್ಚು ಕ್ರಿಯಾಶೀಲವಾಗಿ ಮುನ್ನಡೆಯುತ್ತಿದೆ ಎಂದರು.
    ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯವರಿಗೆ ಶೇ.೧೫ರಷ್ಟಿದ್ದ ಮಿಸಲಾತಿಯನ್ನು ಶೇ.೧೭ಕ್ಕೆ ಹೆಚ್ಚಳ ಮಾಡಿರುವುದು ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲೆ ಪರಿಶಿಷ್ಟ ಜಾತಿಯವರು ನಂಬಿಕೆ, ವಿಶ್ವಾಸ ಹೊಂದುವಂತಾಗಿದೆ. ಅಲ್ಲದೆ ಬಿಜೆಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳ್ಳುತ್ತಿದ್ದಾರೆ. ಬೃಹತ್ ಸಮಾವೇಶದಲ್ಲಿ ಪರಿಶಿಷ್ಟ ಜಾತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ಕೋರಿದರು.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್, ಜಯರಾಮ್ ನಾಯ್ಕ್, ಎಂ. ರಾಜು, ಜಿಲ್ಲಾ ಪ್ರಭಾರಿ ದೇವರಾಜ್ ಮಂಡೇನ್ ಕೊಪ್ಪ, ತಾಲೂಕು ಅಧ್ಯಕ್ಷ ಗಣೇಶ್ ರಾವ್, ಪ್ರಮುಖರಾದ ಜಿ. ಆನಂದಕುಮಾರ್, ಮಂಗೋಟೆ ರುದ್ರೇಶ್, ಚಂದ್ರ ದೇವರನರಸೀಪುರ, ಆರ್.ಎಸ್ ಶೋಭಾ, ಅನ್ನಪೂರ್ಣ, ರೇಖಾ ಪದ್ಮಾವತಿ ಸೇರಿದಂತೆ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಎಎಪಿ ಪಕ್ಷದ ರವಿಕುಮಾರ್, ರಮೇಶ್ ಕಾಂಗ್ರೆಸ್ ಸೇರ್ಪಡೆ

 ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಭದ್ರಾವತಿ ಎಚ್. ರವಿಕುಮಾರ್ ಹಾಗು ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್‌ರವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ಭದ್ರಾವತಿ, ಮಾ. ೧೭ : ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ(ಎಎಪಿ) ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್ ಹಾಗು ತಾಲೂಕು ಅಧ್ಯಕ್ಷ ಬಿ.ಕೆ ರಮೇಶ್‌ರವರು ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
    ನಗರಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಬಿ.ಕೆ ಮೋಹನ್ ಕಾಂಗ್ರೆಸ್ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಸ್ವಾಗತಿಸಿದರು. ಬಿ.ಕೆ ಮೋಹನ್ ಮಾತನಾಡಿ, ರವಿಕುಮಾರ್ ಹಾಗು ಅವರ ಬೆಂಬಲಿಗರು ಬಹಳಷ್ಟು ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.
    ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ರವಿಕುಮಾರ್ ಹಾಗು ಬೆಂಬಲಿಗರು ಮಾತನಾಡಿ, ಬಹಳಷ್ಟು ಭರವಸೆ, ವಿಶ್ವಾಸಗಳನ್ನು ಹೊಂದುವ ಮೂಲಕ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡು ಪಕ್ಷವನ್ನು ಸಂಘಟಿಸುವಲ್ಲಿ ಶ್ರಮಿಸಿದ್ದೇವೆ. ಆದರೆ ಇತ್ತೀಚಿಗೆ ಪಕ್ಷದಲ್ಲಿ ಪ್ರಾಮಾಣಿಕ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ. ಪಕ್ಷದ ರಾಜ್ಯಾಧ್ಯಕ್ಷರು ರಾಜ್ಯದೆಲ್ಲೆಡೆ ಹಣವಂತರಿಗೆ ಮಣೆ ಹಾಕುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕ ಕಾರ್ಯಕರ್ತರು ಪಕ್ಷದಿಂದ ಹೊರಬರುವಂತಾಗಿದೆ. ರಾಜ್ಯದಲ್ಲಿ ಎಎಪಿ ಪಕ್ಷಕ್ಕೆ ಮತ ಹಾಕುವುದು ಬಿಜೆಪಿ ಪಕ್ಷಕ್ಕೆ ಮತ ಚಲಾಯಿಸಿದಂತಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಎಎಪಿ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳಲಾಗುತ್ತಿದೆ ಎಂದರು.
    ಜೆಡಿಎಸ್ ಪಕ್ಷದ ಮಹಿಳಾ ಮುಖಂಡರಾದ ರೇಷ್ಮಬಾನುರವರು ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ರೇಷ್ಮಬಾನು ಸಹ ಈ ಹಿಂದೆ ಬಹಳ ವರ್ಷಗಳಿಂದ ಎಎಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.


    ಪಕ್ಷದ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ಉಪಾಧ್ಯಕ್ಷೆ ಸರ್ವಮಂಗಳ ಭೈರಪ್ಪ, ಮಾಜಿ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಸದಸ್ಯರಾದ ಲತಾ ಚಂದ್ರಶೇಖರ್, ಶೃತಿ ವಸಂತ್, ಕಾಂತರಾಜ್, ಮುಖಂಡರಾದ ಅಮೀರ್‌ಜಾನ್, ಶ್ರೀನಿವಾಸ್, ತಬ್ರೇಸ್ ಖಾನ್, ವರುಣ್‌ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಐಎಸ್‌ಎಲ್ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ : ಬಸರಾಜ ಬೊಮ್ಮಾಯಿ ಭರವಸೆ

ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ ಗುತ್ತಿಗೆ ಕಾರ್ಮಿಕರು ಶುಕ್ರವಾರ ಶಿರಾಳಕೊಪ್ಪದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
    ಭದ್ರಾವತಿ, ಮಾ. ೧೭ : ನಗರದ ವಿಐಎಸ್‌ಎಲ್ ಕಾರ್ಖಾನೆ ಮುಚ್ಚುವ ತೀರ್ಮಾ ಕೈಬಿಡಬೇಕೆಂದು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉಕ್ಕು ಸಚಿವ ಜೋತ್ಯಿರಾದಿತ್ಯ ಸಿಂಧಿಯಾರವರ ಜೊತೆ  ಮಾತನಾಡಲಾಗಿದೆ. ಕಾರ್ಖಾನೆ ಯಾವುದೇ ಕಾರಣಕ್ಕೂ ಮುಚುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆಯನ್ನು ನೀಡಿದರು.
    ಗುತ್ತಿಗೆ ಕಾರ್ಮಿಕರು ಶುಕ್ರವಾರ ಶಿರಾಳಕೊಪ್ಪದಲ್ಲಿ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಹೋರಾಟ ಹಾಗು ಬೆಳವಣಿಗೆ ಕುರಿತು ವಿವರಿಸಿದರು.  ಕಾರ್ಖಾನೆಯಲ್ಲಿ ಮುಚ್ಚುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅಡಳಿತವರ್ಗ ಈಗಾಗಲೇ ಹಲವಾರು ಇಲಾಖೆಗಳ ಉತ್ಪಾದನೆ ಸ್ಥಗಿತಗೊಳಿಸಿ ಅಲ್ಲಿರುವ ಸಾಮಾಗ್ರಿಗಳನ್ನು ಬೇರೆಡೆಗೆ ಸಾಗಿಸಲು ಸಿದ್ದತೆ ಕೈಗೊಂಡಿದ್ದಾರೆ. ಇದರಿಂದಾಗಿ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆಂದು ಅಳಲು ತೋರ್ಪಡಿಸಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇದಕ್ಕೆ ಪೂರಕವಾಗಿ ಸ್ಪಂದಿಸಿ ಭರವಸೆ ನೀಡಿದರು ಎಂದು ಗುತ್ತಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಕೇಶ್ ತಿಳಿಸಿದ್ದಾರೆ.
    ಉಕ್ಕು ಪ್ರಾಧಿಕಾರ ಮಾ.೩೧ರಿಂದ ಕಾರ್ಖಾನೆಯಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಆಡಳಿತ ಮಂಡಳಿಗೆ ಈಗಾಗಲೇ ಸೂಚಿಸಿದೆ ಎನ್ನಲಾಗಿದೆ. ಅಲ್ಲದೆ ಕಾರ್ಖಾನೆ ಮುಚ್ಚುವ ಕುರಿತು ಕೇಂದ್ರ ಸಚಿವರು ಸಹ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಒಂದೆಡೆ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ತೆರೆಮರೆಯಲ್ಲಿ ಹಂತ ಹಂತವಾಗಿ ನಡೆಯುತ್ತಿದ್ದು, ಮತ್ತೊಂದೆಡ ಗುತ್ತಿಗೆ ಕಾರ್ಮಿಕರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟಕ್ಕೆ ವ್ಯಾಪಕ ಬೆಂಬಲ ಸಹ ವ್ಯಕ್ತವಾಗುತ್ತಿದೆ. ಈ ನಡುವೆ ಚುನಾವಣೆ ಸಹ ಸಮೀಪಿಸುತ್ತಿದ್ದು, ಕಾರ್ಮಿಕರು ಹಾಗು ಕುಟುಂಬ ವರ್ಗದವರಲ್ಲಿ ದಿನದಿಂದ ದಿನಕ್ಕೆ ಆತಂಕ ಹೆಚ್ಚಾಗುತ್ತಿದೆ.

Thursday, March 16, 2023

ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಹೋರಾಟಕ್ಕೆ ಕಾರುಣ್ಯ ಚಾರಿಟಬಲ್ ಟ್ರಸ್ಟ್ ಬೆಂಬಲ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೫೭ನೇ ದಿನದ ಹೋರಾಟಕ್ಕೆ  ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾಯಿತು.
    ಭದ್ರಾವತಿ, ಮೇ. ೧೬ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರು ಕಾರ್ಖಾನೆ ಮುಂಭಾಗದಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ೫೭ನೇ ದಿನದ ಹೋರಾಟಕ್ಕೆ  ಕಾರುಣ್ಯ ಚಾರಿಟಬಲ್ ಟ್ರಸ್ಟ್ ವತಿಯಿಂದ ಗುರುವಾರ ಬೆಂಬಲ ಸೂಚಿಸಲಾಯಿತು.
    ಸಂಜೆ ಜನ್ನಾಪುರ ಪ್ರಮುಖ ರಸ್ತೆಗಳಲ್ಲಿ ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ಸಂಬಂಧ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಹಾಕುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಗಳ ವಿರುದ್ಧ ಪ್ರತಿಭಟಿಸಲಾಯಿತು.  ನಂತರ ಮೇಣದ ಬತ್ತಿ ಬೆಳಗಿಸಿ ಬೆಂಬಲ ವ್ಯಕ್ತ ಪಡಿಸಲಾಯಿತು.
      ಟ್ರಸ್ಟ್  ಪದಾದಿಕಾರಿಗಳಾದ ಕೆ. ನಾಗರಾಜ್, ಸುರೇಶ್ ಕುಮಾರ್, ಟಿ. ಬಾಸ್ಕರ್, ಎನ್. ನಾಗವೇಣಿ, ಆರ್. ಮಂಜುಳಾ,  ಜೆ. ಕಾಂತಾ, ಕಾರ್ತಿಕ್, ವಿಲ್ಸನ್ ಬಾಬು  ಸೆಬಾಸ್ಟಿಯನ್, ಕವಿತಾ, ಸಂಜೀವಿನಿ ಹಿರಿಯ ನಾಗರೀಕರ ಆರೈಕೆ ಕೇಂದ್ರದ ಸವಿತಾ, ಗುತ್ತಿಗೆ ಕಾರ್ಮಿಕರ ಸಂಘದ ಪ್ರಮುಖರಾದ ಸುರೇಶ್, ಎಂ. ನಾರಾಯಣ, ಆರ್. ಸ್ಪೂರ್ತಿ, ಸರವಣ, ಪ್ರಶಾಂತ್, ರಮೇಶ್ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.