Thursday, March 30, 2023

ಭದ್ರಾವತಿ ವಿಧಾನಸಭಾ ಕ್ಷೇತ್ರ : ಏ.೧೩ರಿಂದ ನಾಮಪತ್ರ ಸ್ವೀಕಾರ

ತಾಲುಕು ಕಛೇರಿಯಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ  ೩ ಗಂಟೆವರೆಗೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಮಾಹಿತಿ ನೀಡಿದರು. 
    ಭದ್ರಾವತಿ, ಮಾ. ೩೦ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಏ.೧೩ರಿಂದ ಚುನಾವಣಾಧಿಕಾರಿಗಳ ಕಛೇರಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ತಿಳಿಸಿದರು.
    ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಏ.೧೦ರಿಂದ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದ ನಾಮಪತ್ರ ಸ್ವೀಕರಿಸಲಾಗುವುದು. ವಿನಿ ವಿಧಾನಸೌಧ ತಾಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿಗಳ ಕಛೇರಿ ತೆರೆಯಲಾಗಿದ್ದು, ಇಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಏ.೨೦ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು.
    ಏ.೨೧ ನಾಮಪತ್ರ ಪರಿಶೀಲನೆ, ಏ.೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.೧೦ರಂದು ಮತದಾನ ನಡೆಯಲಿದ್ದು, ಮೇ.೧೩ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
    ಅಭ್ಯರ್ಥಿಗಳು ಚುನಾವಣಾ ಅಕ್ರಮಗಳು ನಡೆಸದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಚಾರ ಕಾರ್ಯ ಕೈಗೊಳ್ಳಲು, ಸಭೆ-ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಕರಪತ್ರ ಸೇರಿದಂತೆ ಪ್ರಚಾರ ಸಾಮಗ್ರಿಗಳ ಕುರಿತು ಸಹ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಗೊಂದಲಗಳು ಇದ್ದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
    ಈ ಸಂದರ್ಭದಲ್ಲಿ ವಿವಿಧ ಪಕ್ಷದ ಪ್ರಮುಖರು ಮಾತನಾಡಿ, ಚುನಾವಣಾ ಅಕ್ರಮಕ್ಕೆ ಕಾರಣರಾದವರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಂಬಂಧವಿಲ್ಲದವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಆಯೋಗ ಚುನಾವಣೆಗೆ ನಿಗದಿಪಡಿಸಿರುವ ವೆಚ್ಚ ಮೀರಿ ಹೆಚ್ಚಿನ ವೆಚ್ಚ ಮಾಡುವ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು, ದುರಸ್ತಿಪಡಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಮುಂದಾಗಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಬೇರೆ ಸ್ಥಳಕ್ಕೆ ನಿಯೋಜನೆಗೊಳಿಸಬೇಕೆಂದರು.
    ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಡಿ.ಸಿ ಮಾಯಣ್ಣ, ಆನಂದ್(ಮೆಡಿಕಲ್), ಟಿ. ಚಂದ್ರೇಗೌಡ, ಮೊಸಹಳ್ಳಿ ಸುರೇಶ್, ಲೋಕೇಶ್ವರ್ ರಾವ್, ಶಶಿಕುಮಾರ್ ಗೌಡ, ಸುರೇಶಪ್ಪ, ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಏ.೨ರಂದು ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಕಾರ್ಯಕ್ರಮ

    ಭದ್ರಾವತಿ, ಮಾ. ೩೦ : ನಗರದ ಅಪ್ಪರ್ ಹುತ್ತಾ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಏ.೨ರ ಭಾನುವಾರ ಬೆಳಿಗ್ಗೆ ೧೧ ಗಂಟೆಗೆ ಯುಕೆಜಿ ತರಗತಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಪದವಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಅನನ್ಯ ಎಜ್ಯುಕೇಷನ್ ಟ್ರಸ್ಟ್ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುಜಿಕೆ ಮಕ್ಕಳನ್ನು ಪ್ರೋತ್ಸಾಹಿಸಿ ಅವರ ಮುಂದಿನ ಶಿಕ್ಷಣಕ್ಕೆ ಮುನ್ನುಡಿ ಬರೆಯಲು ಪದವಿ ಪ್ರದಾನ ಆಯೋಜಿಸಿಕೊಂಡು ಬರುತ್ತಿದೆ. ಡಾ.ಬಿ.ಆರ್ ಅನಿಲ್ ಕಲ್ಲೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಟ್ರಸ್ಟ್ ಅಧ್ಯಕ್ಷ ಡಾ. ಕೆ. ನಾಗರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ.
    ಮಾ.೩೧ರಿಂದ ಬೇಸಿಗೆ ಶಿಬಿರ :
    ಅನನ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ಮಾ.೩೧ರಿಂದ ಏ.೧೪ರವರೆಗೆ ಶಾಲೆಯಲ್ಲಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ೫ ರಿಂದ ೧೧ ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಆಡಳಿತಾಧಿಕಾರಿ ವೇಣುಗೋಪಾಲ್, ಮೊ: ೯೪೪೯೭೩೯೦೭೦ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Wednesday, March 29, 2023

ಜನಪ್ರತಿನಿಧಿಗಳ ಭಾವಚಿತ್ರ, ನಾಮಫಲಕಗಳಿಗೆ ತಟ್ಟಿದ ಚುನಾವಣಾ ನೀತಿ ಸಂಹಿತೆ

ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆ ಭದ್ರಾವತಿ ವಿಧಾನಸಭಾ ಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನಗರಸಭೆ ಸಿಬ್ಬಂದಿಗಳು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳು, ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬಂದಿತು. 
    ಭದ್ರಾವತಿ, ಮಾ. ೨೯: ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸುತ್ತಿದ್ದಂತೆ ಕ್ಷೇತ್ರದಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿದ್ದು, ನಗರಸಭೆ ಸಿಬ್ಬಂದಿಗಳು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಜನಪ್ರತಿನಿಧಿಗಳ ಭಾವಚಿತ್ರಗಳು, ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಕ್ರಮ ಕೈಗೊಳ್ಳುತ್ತಿರುವುದು ಕಂಡು ಬಂದಿತು.
    ಸಾರ್ವಜನಿಕ ಕಟ್ಟಡಗಳು, ಸಮುದಾಯ ಭವನಗಳು, ಆಟೋ, ಟ್ಯಾಕ್ಸಿ ನಿಲ್ದಾಣಗಳು ಸೇರಿದಂತೆ ಹಲವೆಡೆ ಜನಪ್ರತಿನಿಧಿಗಳ ಭಾವಚಿತ್ರ ಹಾಗು ನಾಮಫಲಕಗಳು ಪ್ರದರ್ಶನಗೊಳ್ಳದಂತೆ ಮುಚ್ಚುವ ಕಾರ್ಯದಲ್ಲಿ ತೊಡಗಿದ್ದು, ಈ ಬಾರಿ  ನೀತಿ ಸಂಹಿತೆ ಮತ್ತುಷ್ಟು ಬಿಗಿಗೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ. ಈಗಾಗಲೇ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವ ಅಭ್ಯರ್ಥಿಗಳು ಕ್ಷೇತ್ರದಾದ್ಯಂತ ೩-೪ ಸುತ್ತಿನ ಪ್ರಚಾರ ಕಾರ್ಯ ಮುಕ್ತಾಯಗೊಳಿಸಿದ್ದು, ಮತದಾರರನ್ನು ಸೆಳೆಯಲು ನಾನಾ ರೀತಿಯ ಕಸರತ್ತು ಸಹ ನಡೆಸಿದ್ದಾರೆ. ಮುಂದಿನ ಪ್ರಚಾರದ ಕಾರ್ಯತಂತ್ರ ಯಾವ ರೀತಿ ಕೈಗೊಳ್ಳುತ್ತಾರೆಂಬುದನ್ನು ಕಾದು ನೋಡಬೇಕಾಗಿದೆ.

ಆಕಸ್ಮಿಕವಾಗಿ ಕೆಳಗೆ ಬಿದ್ದು ನಿವೃತ್ತ ಕಾರ್ಮಿಕ ಸಾವು


ಅರಬಿಂದೊ ಮಿತ್ರ
    ಭದ್ರಾವತಿ, ಮಾ. ೨೯ : ಪಶ್ಚಿಮ ಬಂಗಾಳದ ಬರ್ನ್ಪುರ ಉಕ್ಕು ಕಾರ್ಖಾನೆಯ ನಿವೃತ್ತ ಕಾರ್ಮಿಕ ಹಾಗು ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ ಅರಬಿಂದೊ ಮಿತ್ರ(೬೬) ನಗರದ ವಿಐಎಸ್‌ಎಲ್ ಅತಿಥಿ ಗೃಹದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಹೋರಾಟ ನಡೆಸುತ್ತಿರುವ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ಸೂಚಿಸಲು ಹಾಗು ವಿಐಎಸ್‌ಎಲ್ ನಿವೃತ್ತ ಕಾರ್ಮಿಕ ವಿಶೇಷ ಸಭೆಯಲ್ಲಿ ಭಾಗವಹಿಸಲು ಸೈಲ್ ನಿವೃತ್ತ ಕಾರ್ಮಿಕರ ಒಕ್ಕೂಟದ ಉನ್ನತದ ಮಟ್ಟದ ಸಮಿತಿಯೊಂದಿಗೆ ನಗರಕ್ಕೆ ಆಗಮಿಸಿದ್ದ ಅರಬಿಂದೊ ಮಿತ್ರ ಅತಿಥಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು.
    ಅತಿಥಿ ಗೃಹದ ಮಹಡಿಯಲ್ಲಿ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದಿದ್ದು, ಇದರಿಂದಾಗಿ ಗಂಭೀರವಾಗಿ ಗಾಯಗೊಂಡ ಇವರನ್ನು ತಕ್ಷಣ ವಿಐಎಸ್‌ಎಲ್ ಆಸ್ಪತ್ರೆಗೆ ದಾಖಲಿಸಲಾಯಿದಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶ್ರೀರಾಮನವಮಿ : ಮಾ.೩೦ರಂದು ಪ್ರಾಣಿವಧೆ, ಮಾಂಸ ಮಾರಾಟ ನಿಷೇಧ


ಭದ್ರಾವತಿ, ಮಾ. ೨೯: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಮಾ.೩೦ರ ಗುರುವಾರ ನಗರಸಭೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಲಾಗಿದೆ.
ಬಾರ್ & ರೆಸ್ಟೋರೆಂಟ್ ಹಾಗು ಮಾಂಸಹಾರಿ ಹೋಟಲ್‌ಗಳಲ್ಲಿ ಮಾಂಸಹಾರ ತಯಾರಿಸುವುದನ್ನು ಮತ್ತು ಕುರಿ/ಕೋಳಿ ಹಾಗು ಇತರೆ ಮಾಂಸ ಮಾರಾಟಗಾರರು ಮಾಂಸ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದ್ದಲ್ಲಿ  ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೌರಾಯುಕ್ತ ಮನುಕುಮಾರ್ ಎಚ್ಚರಿಸಿದ್ದಾರೆ.

ಮಾ.೩೧ರವರೆಗೆ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ : ಅಂತರ್ಜಾಲ ತಾಣ ಲೋಕಾರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಭದ್ರಾವತಿ ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಭದ್ರಾವತಿ, ಮಾ. ೨೯: ತಾಲೂಕಿನ ಪುರಾಣ ಪ್ರಸಿದ್ದ ಗಂಗೂರಿನ ಶ್ರೀ ಉದ್ದಾಂಜನೇಯ ಸ್ವಾಮಿ ದೇವಸ್ಥಾನ ಶ್ರೀ ಉದ್ದಾಮ ಕ್ಷೇತ್ರ ವಾರ್ಷಿಕ ಜಾತ್ರಾ ಮಹೋತ್ಸವ ಮಾ.೩೧ರವರೆಗೆ ನಡೆಯಲಿದೆ.
    ಬುಧವಾರ ಬೆಳಿಗ್ಗೆ ಕುಡಿಪೂಜೆ, ಧ್ವಜಾರೋಹಣ, ಉದ್ದಾಮನಿಗೆ ಪಂಚಾಮೃತ-ರುದ್ರಾಭಿಷೇಕ, ಗಣಪತಿ ಪುಣ್ಯಾಹ ನಾಂದಿ, ಮಹಾಸಂಕಲ್ಪ, ಅಷ್ಟದ್ರವ್ಯ ಮಹಾ ಗಣಪತಿ ಹೋಮ, ಪುರಸ್ಸರ ರುದ್ರಹೋಮ, ೧೦೮ ದಂಪತಿಗಳಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ, ಕೆಂಚಾಂಬಿಕ ಮೂಲಮಂತ್ರ ಹೋಮ, ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ಕಾರ್ಯಕ್ರಮಗಳು ಜರುಗಿದವು. ಸ್ವಾಮಿಗೆ ವಿವಿಧ ಹಣ್ಣುಗಳಿಂದ ಅಲಂಕಾರ ಕೈಗೊಳ್ಳಲಾಗಿತ್ತು.
    ಸಂಜೆ ಮಂಡಲಪೂಜೆ, ವಾಸ್ತುರಾಕ್ಷೋಘ್ನ ಸುದರ್ಶನ ಹೋಮ, ಲಕ್ಷ್ಮೀನೃಸಿಂಹ ಹೋಮ, ದಿಗ್ಬಲಿ, ಪ್ರಾಕೋತ್ಸವ, ಅಶ್ಥಾವಧಾನ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಮಾ.೩೦ರಂದು ಬೆಳಿಗ್ಗೆ ೬.೩೦ಕ್ಕೆ ಕುಂಭಾಭಿಷೇಕ ನಡೆಯಲಿದೆ. ೧೦೦೮ ಕಳಶಗಳ ಗಂಗಾ ಪೂಜೆ ಮತ್ತು ಗಂಗಾ ಕಳಶಗಳ ಮೆರವಣಿಗೆ, ಕುಂಭಾಭಿಷೇಕ, ಮೋದಕ ಅಥರ್ವಶೀರ್ಷ ಗಣಪತಿ ಹೋಮ, ರಾಮತಾರಕ ಹೋಮ, ಬನ್ನಿಮಹಾಕಾಳಿ ಹೋಮ ಹಾಗು ಮಧ್ಯಾಹ್ನ ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ.
    ಸಂಜೆ ೪ ಗಂಟೆಗೆ ಶ್ರೀ ರಾಮತಾರಕ ಜಪ, ಸಂಜೆ ೬ ಗಂಟೆಗೆ ಪಂಚದುರ್ಗಾ ದೀಪ ನಮಸ್ಕಾರ, ವನದುರ್ಗಾ ಹೋಮ, ವಿಜಯದುರ್ಗ ಹೋಮ, ಪ್ರಾಕಾರೋತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ಮಹಾಪ್ರಸಾದ ವಿನಿಯೋಗ ನಡೆಯಲಿದೆ. ಸ್ವಾಮಿಗೆ ವಿವಿಧ ಹೂವುಗಳಿಂದ ಅಲಂಕಾರ ನಡೆಯಲಿದೆ.
    ಮಾ.೩೧ರಂದು ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಬಾಲಾರ್ಕ ಗಣಪತಿ ಹೋಮಾರಂಭ, ಶನಿ ಶಾಂತಿ ಹೋಮ, ಸೂರ್ಯೋದಯಕ್ಕೆ ಸರಿಯಾಗಿ ಪೂರ್ಣಹುತಿ, ಸ್ವಾಮಿಗೆ ಪಂಚಾಮೃತ ಅಭಿಷೇಕ, ತುಪ್ಪ, ಜೇನು ತುಪ್ಪ, ಎಳನೀರು, ಕಬ್ಬಿನ ಹಾಲು ಮತ್ತು ರುದ್ರಾಭಿಷೇಕ, ಮಾರುತಿ ಮೂಲ ಮಂತ್ರ ಹೋಮ, ಕೆಂಚರಾಯ ಮೂಲ ಮಂತ್ರ ಹೋಮ, ನವಗ್ರಹ ಹೋಮ ನಡೆಯಲಿವೆ. ಸಂಜೆ ೬ ಗಂಟೆಗೆ ಆಶ್ಲೇಷ ಬಲಿ ಪೂಜೆ, ಶ್ರೀ ವಲ್ಲಿಸಹಿತ ಸುಬ್ರಹ್ಮಣ್ಯ ಶಕ್ತಿಧರ ಹೋಮ, ಆಶ್ಲೇಷ ಬಲಿ ಪೂಜೆ, ಮಹಾ ಮಂಗಳಾರತಿ ಮತ್ತು ಮಹಾಪ್ರಸಾದ ವಿನಿಯೋಗ ಜರುಗಲಿವೆ.
    ಅಂತರ್ಜಾಲ ತಾಣ(www.uddanaanjaneya.org) ಲೋಕಾರ್ಪಣೆ :
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯರಾದ ಡಾ. ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರದ ನೂತನ ಅಂತರ್ಜಾಲ ತಾಣ ಲೋಕಾರ್ಪಣೆಗೊಳಿಸಿದರು.
    ಶ್ರೀ ಉದ್ದಾಂಜನೇಯ ಸೇವಾ ಟ್ರಸ್ಟ್ ಪ್ರಮುಖರಾದ ಜಯಶಂಕರ್, ಹೊಸಹಳ್ಳಿ ತಾಂಡದ ರಮೇಶ್‌ನಾಯ್ಕ, ಮಂಜಾನಾಯ್ಕ, ಎಚ್.ಎಂ ರಾಮಚಂದ್ರಪ್ಪ, ಗಂಗೂರು ಎಸ್. ವಾಗೀಶ್‌ರಾವ್, ಶ್ರೀರಾಮನಗರ ಎಂ.ಕೆ ನಾರಾಯಣಸ್ವಾಮಿ, ಹೊಸಹಳ್ಳಿ ತಾಂಡದ ಎಸ್. ಗೋವಿಂದನಾಯ್ಕ, ಅಣ್ಣಪ್ಪನಾಯ್ಕ ಮತ್ತು ದೊಡ್ಡೇರಿ ಡಿ.ಸಿ ತಿಮ್ಮಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಏ.5ರಿಂದ ಬೇಸಿಗೆ ಶಿಬಿರ



ಭದ್ರಾವತಿ,  ಮಾ. 29: ನಗರದ ಜನ್ನಾಪುರ ಅಪರಂಜಿ ಅಭಿನಯ ಶಾಲೆ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿ ಸಹ ರಜಾ-ಮಜಾ 5 ದಿನಗಳ ಬೇಸಿಗೆ ಶಿಬಿರ ಏ.5ರಿಂದ ಆಯೋಜಿಸಲಾಗಿದೆ.
    ಮಕ್ಕಳಿಗೆ ರಂಗ ಕಲೆ ಮತ್ತು ಚಿತ್ರಕಲೆ ತರಬೇತಿ ನಡೆಯಲಿದೆ.  4 ರಿಂದ 15 ವರ್ಷದ ಮಕ್ಕಳು ಭಾಗವಹಿಸಬಹುದಾಗಿದೆ.  ಶಿಬಿರ ಬೆಳಿಗ್ಗೆ  10.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದೆ.
    ಹೆಚ್ಚಿನ ಮಾಹಿತಿಗೆ ಅಪರಂಜಿ ಶಿವರಾಜ್ ಮೊ: 9980534406 ಸಂಖ್ಯೆಗೆ ಕರೆ ಮಾಡಬಹುದಾಗಿದೆ.