Friday, March 31, 2023

ಸೈಬರ್ ಅಪರಾಧ ಕುರಿತು ತಿಳುವಳಿಕೆ ಹೊಂದಿ : ಸಂತೋಷ್ ಪಾಟೀಲ್


ಭದ್ರಾವತಿ ಬಿ.ಎಚ್ ರಸ್ತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಸಿ.ಇ.ಎನ್ ಮತ್ತು ಅಪರಾಧ (ಪಿಐ)ಪೊಲೀಸ್ ಠಾಣಾಧಿಕಾರಿ ಸಂತೋಷ್ ಪಾಟೀಲ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಮಾ. ೩೧ : ವಿದ್ಯಾರ್ಥಿಗಳು ಸೈಬರ್ ಅಪರಾಧಗಳ ಕುರಿತು ಹೆಚ್ಚಿನ ತಿಳುವಳಿಕೆ ಹೊಂದಬೇಕೆಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಸಿ.ಇ.ಎನ್ ಮತ್ತು ಅಪರಾಧ (ಪಿಐ)ಪೊಲೀಸ್ ಠಾಣಾಧಿಕಾರಿ ಸಂತೋಷ್ ಪಾಟೀಲ್ ಹೇಳಿದರು.
    ಅವರು ನಗರದ ಬಿ.ಎಚ್ ರಸ್ತೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಹಾಗು ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಆಯೋಜಿಸಲಾಗಿದ್ದ ವಿಶ್ವ ಗ್ರಾಹಕರ ದಿನಾಚರಣೆ ಹಾಗು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಇತ್ತೀಚಿಗೆ ಸೈಬರ್ ಅಪರಾಧಗಳು ಹೆಚ್ಚಾಗುತ್ತಿದ್ದು, ಇವುಗಳ ನಿಯಂತ್ರಣಕ್ಕೆ ಇಲಾಖೆ ಹೆಚ್ಚಿನ ಗಮನ ಹರಿಸುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳು ಸೈಬರ್ ತಿಳುವಳಿಕೆ ಜೊತೆಗೆ ಕಾನೂನು ಅರಿವು ಹೊಂದಬೇಕೆಂದರು.
    ಕಳೆದು ಹೋದ ಮೊಬೈಲ್ ಪತ್ತೆ ಮಾಡಲು ಹಾಗು ದೂರು ನೀಡಲು ಇಲಾಖೆ ವತಿಯಿಂದ ನೂತನವಾಗಿ ಸಿದ್ದಪಡಿಸಲಾಗಿರುವ ಸಿಇಐಆರ್ ಪೋರ್ಟಲ್ ಹಾಗು ಕೆಎಸ್‌ಪಿ ಅರ್ಜಿ ಕುರಿತು ಮಾಹಿತಿ ನೀಡಲಾಯಿತು.
    ಕೈಗಾರಿಕಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯ ಎಸ್.ಎನ್ ಚಂದ್ರಶೇಖರ್, ಡಿ. ಮಹಾಂತೇಶ್, ಸಹಾಯಕ ಪೊಲೀಸ್ ಠಾಣಾಧಿಕಾರಿ ವಿರೂಪಾಕ್ಷಪ್ಪ, ಸೂರ್ಯನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೈಗಾರಿಕಾ ತರಬೇತಿ ಸಂಸ್ಥೆಯ ಬೋಧಕ ಹಾಗು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಧಾನಸಭಾ ಚುನಾವಣೆ : ಬಿಜೆಪಿ ಕಾರ್ಯಾಲಯ ಉದ್ಘಾಟನೆ

ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿಜೆಪಿ ತಾಲೂಕು ಮಂಡಲ ಕಛೇರಿಯಲ್ಲಿ ಸೋಮವಾರ ವಿಧಾನಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು.
    ಭದ್ರಾವತಿ, ಮಾ. ೩೧ : ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಿಜೆಪಿ ತಾಲೂಕು ಮಂಡಲ ಕಛೇರಿಯಲ್ಲಿ ಸೋಮವಾರ ವಿಧಾನಸಭಾ ಚುನಾವಣಾ ಕಾರ್ಯಾಲಯ ಉದ್ಘಾಟಿಸಲಾಯಿತು.
    ಕಾರ್ಯಾಲಯದ ಉದ್ಘಾಟನೆ ಅಂಗವಾಗಿ ಧಾರ್ಮಿಕ ಆಚರಣೆಗಳು ಜರುಗಿದವು. ಈ ಹಿಂದೆ ಬಹಳ ವರ್ಷಗಳಿಂದ ಹಳೇನಗರದ ಬಸವೇಶ್ವರ ವೃತ್ತದಲ್ಲಿ ಬಾಡಿಗೆ ಕಟ್ಟಡದಲ್ಲಿ ಬಿಜೆಪಿ ತಾಲೂಕು ಮಂಡಲ ಕಛೇರಿ ಕಾರ್ಯ ನಿರ್ವಹಿಸುತ್ತಿತ್ತು. ಕಳೆದ ಕೆಲವು ತಿಂಗಳ ಹಿಂದೆ ಪಕ್ಷದ ಸ್ವಂತ ಜಾಗದಲ್ಲಿ ನೂತನ ಕಛೇರಿ ನಿರ್ಮಾಣಗೊಂಡಿದ್ದು, ಮೊದಲ ಬಾರಿಗೆ ನೂತನ ಕಛೇರಿಯಲ್ಲಿ ಚುನಾವಣಾ ಕಾರ್ಯಾಲಯ ಆರಂಭಿಸಲಾಗಿದೆ.
    ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ರಂಗಸ್ವಾಮಿ, ಚನ್ನೇಶ್, ಉಪಾಧ್ಯಕ್ಷರಾದ ಜಯರಾಮ್, ಮಣಿ,  ಅನ್ನಪೂರ್ಣ ಸಾವಂತ್,  ಗೌರಮ್ಮ, ಕಾರ್ಯದರ್ಶಿಗಳಾದ ಚಂದ್ರು ದೇವರನರಸೀಪುರ, ಸರಸ್ವತಿ, ಕವಿತಾ ಸುರೇಶ್, ನಗರಸಭಾ ಸದಸ್ಯೆ ಶಶಿಕಲಾ ನಾರಾಯಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್ ಕದಿರೇಶ್, ಪಕ್ಷದ ಪ್ರಮುಖರಾದ ಪವಿತ್ರ ರಾಮಯ್ಯ, ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಮಂಗೋಟೆ ರುದ್ರೇಶ್, ಕವಿತಾ ರಾವ್, ರಾಮನಾಥ್ ಬರ್ಗೆ ಹಾಗು ಪಕ್ಷದ ವಿವಿಧ ಮೋರ್ಚಾಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ರಾಷ್ಟ್ರಪತಿ, ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತ ದಾನಂ ಕರ್ತವ್ಯದಿಂದ ವಯೋನಿವೃತ್ತಿ

ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನ, ಬೀಳ್ಕೊಡುಗೆ

ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ(ಎಎಸ್‌ಐ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾನಂ ಶುಕ್ರವಾರ ನಿವೃತ್ತಿ ಹೊಂದಿದ್ದು, ಇವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು. 
    ಭದ್ರಾವತಿ, ಮಾ. ೩೧ : ನಗರದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯ ಸಹಾಯಕ ಠಾಣಾಧಿಕಾರಿ(ಎಎಸ್‌ಐ)ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ದಾನಂ ಶುಕ್ರವಾರ ನಿವೃತ್ತಿ ಹೊಂದಿದ್ದು, ಇವರನ್ನು ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
    ಕಾನ್ಸ್‌ಟೇಬಲ್ ಹುದ್ದೆಗೆ ನೇಮಕಗೊಂಡು ತೀರ್ಥಹಳ್ಳಿಯಲ್ಲಿ ವೃತ್ತಿ ಆರಂಭಿಸಿದ ದಾನಂರವರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಯಲ್ಲಿ ಹೆಚ್ಚಿನ ಅವಧಿ ೨೫ ವರ್ಷಗಳಿಂದ ಗಣಕ ಯಂತ್ರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
    ಇವರು ಉತ್ತಮವಾಗಿ ಕರ್ತವ್ಯ  ನಿರ್ವಹಿಸಿ ರಾಷ್ಟ್ರಪತಿ ಪದಕ ಮತ್ತು ಮುಖ್ಯಮಂತ್ರಿಗಳ ಪದಕ ಪಡೆದುಕೊಂಡಿದ್ದರು. ಕಳೆದ ಸುಮಾರು ೬ ವರ್ಷಗಳಿಂದ ಸಹಾಯಕ ಠಾಣಾಧಿಕಾರಿ ಹುದ್ದೆಗೆ ಮುಂಬಡ್ತಿ ಹೊಂದಿ ಶಿವಮೊಗ್ಗ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ ೩ ತಿಂಗಳಿನಿಂದ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದರು.
    ಇವರು ಕರ್ತವ್ಯದಿಂದ ವಯೋನಿವೃತ್ತಿ ಹೊಂದಿದ್ದು, ಇವರಿಗೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌ರವರು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿ ಬೀಳ್ಕೊಡುಗೆ ನೀಡಿದರು.
    ದಾನಂರವರು ಮೂಲತಃ ಭದ್ರಾವತಿಯವರಾಗಿದ್ದು, ಇಲ್ಲಿಯೇ ಹುಟ್ಟಿ ಬೆಳೆದು, ವಿದ್ಯಾಭ್ಯಾಸ ಪೂರೈಸಿದ್ದಾರೆ. ವಿದ್ಯಾಮಂದಿರದಲ್ಲಿ ವಾಸವಾಗಿದ್ದಾರೆ.

ವಿಐಎಸ್ಎಲ್ ಉಳಿವಿಗಾಗಿ ಗಣ ಹೋಮ

 


ಭದ್ರಾವತಿ, ಮಾ. ೩೧: ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಮುಚ್ಚುವ ಆದೇಶದ ವಿರುದ್ಧ ಗುತ್ತಿಗೆ ಕಾರ್ಮಿಕರ ಸಂಘ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಹೋರಾಟ ೭೨ನೇ ದಿನಕ್ಕೆ ಕಾಲಿಟ್ಟಿದೆ.  ಹೋರಾಟದ ಭಾಗವಾಗಿ ಶುಕ್ರವಾರ ಕಾರ್ಖಾನೆಯಲ್ಲಿರುವ ಶ್ರೀ ಚೌಡಮ್ಮ ದೇವಸ್ಥಾನದಲ್ಲಿ ಟ್ರಾಫಿಕ್ ಇಲಾಖೆ ಸಹಯೋಗದೊಂದಿಗೆ ಗುತ್ತಿಗೆ, ಕಾಯಂ ಕಾರ್ಮಿಕರು ಮತ್ತು ಅಧಿಕಾರಿಗಳಿಂದ ಗಣ ಹೋಮ ಧಾರ್ಮಿಕ ಆಚರಣೆ ನಡೆಸಲಾಯಿತು.  
    ಶ್ರೀ ಧರ್ಮಜಾಗರಣ ಅರ್ಚಕರ ಮಹಾಸಭಾ ವತಿಯಿಂದ ಗಣಹೋಮ ನಡೆಸಿಕೊಡಲಾಯಿತು. ಮಹಾಸಭಾ ಗೌರವಾಧ್ಯಕ್ಷರಾದ ವೇದಬ್ರಹ್ಮ ಶ್ರೀ ಕೃಷ್ಣಮೂರ್ತಿ ಸೋಮಯಾಜಿ ಮತ್ತು ಅಧ್ಯಕ್ಷ ಎಸ್.ವಿ ರಾಮಾನುಜ ಅಯ್ಯಂಗಾರ್ ನೇತೃತ್ವ ವಹಿಸಿದ್ದರು. 
ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಗುತ್ತಿಗೆ ಹಾಗು ಕಾಯಂ ಕಾರ್ಮಿಕರ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.



ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಶ್ರೀ  ಚೌಡಮ್ಮ ದೇವಸ್ಥಾನದಲ್ಲಿ ಟ್ರಾಫಿಕ್ ಇಲಾಖೆ ವತಿಯಿಂದ ಗುತ್ತಿಗೆ ಕಾಯಂ ಕಾರ್ಮಿಕರು ಮತ್ತು ಅಧಿಕಾರಿಗಳಿಂದ ಕಾರ್ಖಾನೆ ಉಳಿವಿಗಾಗಿ ಗಣ ಹೋಮ ಧಾರ್ಮಿಕ ಆಚರಣೆ ನಡೆಸಲಾಯಿತು.  

Thursday, March 30, 2023

ಚುನಾವಣೆ ನೀತಿ ಸಂಹಿತೆ ನಡುವೆ ವಿಜೃಂಭಣೆಯಿಂದ ಜರುಗಿದ ಶ್ರೀ ರಾಮನವಮಿ ಉತ್ಸವ

ಭದ್ರಾವತಿ ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಶ್ರೀ ರಾಮನವಮಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಚುನಾವಣೆ ನೀತಿ ಸಂಹಿತೆ ಧಾರ್ಮಿಕ ಆಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಉಂಟು ಮಾಡಲಿಲ್ಲ. 
    ಭದ್ರಾವತಿ, ಮಾ. ೩೦: ನಗರದ ವಿವಿಧ ದೇವಾಲಯಗಳಲ್ಲಿ ಗುರುವಾರ ಶ್ರೀ ರಾಮನವಮಿ ಉತ್ಸವ ವಿಜೃಂಭಣೆಯಿಂದ ಜರುಗಿತು. ಚುನಾವಣೆ ನೀತಿ ಸಂಹಿತೆ ಧಾರ್ಮಿಕ ಆಚರಣೆಗಳ ಮೇಲೆ ಯಾವುದೇ ರೀತಿ ಪರಿಣಾಮ ಉಂಟು ಮಾಡಲಿಲ್ಲ.
    ಬೆಳಿಗ್ಗೆಯಿಂದಲೇ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಧಾರ್ಮಿಕ ಆಚರಣೆಗಳು ಜರುಗಿದವು. ಮಧ್ಯಾಹ್ನ ಪಾನಕ, ಕೋಸಂಬರಿ ವಿತರಣೆ ನಡೆಯಿತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು.


    ಬಹುತೇಕ ದೇವಸ್ಥಾನಗಳ ಬಳಿ ಯಾವುದೇ ರೀತಿಯ ಫ್ಲೆಕ್ಸ್‌ಗಳು, ಬ್ಯಾನರ್‌ಗಳು, ಬಂಟಿಂಗ್ಸ್‌ಗಳು ಕಂಡು ಬರಲಿಲ್ಲ. ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು, ಸೇವಾಕರ್ತರು ಹೊರತುಪಡಿಸಿ ಯಾವುದೇ ರಾಜಕೀಯ ಪಕ್ಷಗಳ, ಜನಪ್ರತಿನಿಧಿಗಳು ಸುಳಿವು ಕಂಡು ಬರಲಿಲ್ಲ.

ವಿಐಎಸ್‌ಎಲ್ ನಿವೃತ್ತ ಉದ್ಯೋಗಿ ಪೆಂಡೆಂ ಪೊಗಲಯ್ಯ ನಿಧನ

ಪೆಂಡೆಂ ಪೊಗಲಯ್ಯ
    ಭದ್ರಾವತಿ, ಮಾ. ೩೦ : ಜನ್ನಾಪುರ ಗಣೇಶ್ ಕಾಲೋನಿ ನಿವಾಸಿ, ಜೆಡಿಎಸ್ ಜಿಲ್ಲಾ ಕ್ರೈಸ್ತ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಾರ್ವಿನ್‌ರವರ ತಂದೆ ಪೆಂಡೆಂ ಪೊಗಲಯ್ಯ(೭೩) ಬುಧವಾರ ನಿಧನ ಹೊಂದಿದರು.
    ಪತ್ನಿ ನಿವೃತ್ತ ಶಿಕ್ಷಕಿ ಶಾಂತಕುಮಾರಿ, ಪುತ್ರ ಡಾರ್ವಿನ್ ಹಾಗು ಇಬ್ಬರು ಪುತ್ರಿಯರು ಇದ್ದರು. ಪೆಂಡೆಂ ಪಗುಲಯ್ಯ ವಿಐಎಸ್‌ಎಲ್ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿದ್ದು, ಅಲ್ಲದೆ ನ್ಯೂಟೌನ್ ಸಿಎಸ್‌ಐ ವೇನ್ಸ್ ಸ್ಮಾರಕ ದೇವಾಲಯ ಸದಸ್ಯರಾಗಿದ್ದರು. ಇವರ ಅಂತ್ಯಕ್ರಿಯೆ ನಗರದ ಬೈಪಾಸ್ ರಸ್ತೆ ಮಿಲ್ಟ್ರಿಕ್ಯಾಂಪ್ ಸಮೀಪದ ಸಂಯುಕ್ತ ಕ್ರೈಸ್ತ ಸಮಾಧಿಯಲ್ಲಿ ಗುರುವಾರ ಸಂಜೆ ನೆರವೇರಿತು.
    ಇವರ ನಿಧನಕ್ಕೆ ವಿವಿಧ ಚರ್ಚ್ ಧರ್ಮಗಳು, ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ, ಆಲ್ ಇಂಡಿಯಾ ಕ್ಯಾಥೋಲಿಕ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಅಂತೋಣಿ ವಿಲ್ಸನ್, ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸೆಲ್ವರಾಜ್, ನಗರಸಭೆ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಕ್ರೈಸ್ತ ಸಮಾಜದ ಮುಖಂಡರು, ನಿವೃತ್ತ ಕಾರ್ಮಿಕರು ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಭದ್ರಾವತಿ ವಿಧಾನಸಭಾ ಕ್ಷೇತ್ರ : ಏ.೧೩ರಿಂದ ನಾಮಪತ್ರ ಸ್ವೀಕಾರ

ತಾಲುಕು ಕಛೇರಿಯಲ್ಲಿ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ  ೩ ಗಂಟೆವರೆಗೆ

ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸಭೆಯಲ್ಲಿ ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ಮಾಹಿತಿ ನೀಡಿದರು. 
    ಭದ್ರಾವತಿ, ಮಾ. ೩೦ : ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಏ.೧೩ರಿಂದ ಚುನಾವಣಾಧಿಕಾರಿಗಳ ಕಛೇರಿ ತಾಲೂಕು ಕಛೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುವುದು ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ರವಿಚಂದ್ರನಾಯಕ್ ತಿಳಿಸಿದರು.
    ಅವರು ಗುರುವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿ, ಏ.೧೦ರಿಂದ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಅಂದಿನಿಂದ ನಾಮಪತ್ರ ಸ್ವೀಕರಿಸಲಾಗುವುದು. ವಿನಿ ವಿಧಾನಸೌಧ ತಾಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿಗಳ ಕಛೇರಿ ತೆರೆಯಲಾಗಿದ್ದು, ಇಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೆ ಏ.೨೦ರವರೆಗೆ ನಾಮಪತ್ರ ಸ್ವೀಕರಿಸಲಾಗುವುದು.
    ಏ.೨೧ ನಾಮಪತ್ರ ಪರಿಶೀಲನೆ, ಏ.೨೪ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ.೧೦ರಂದು ಮತದಾನ ನಡೆಯಲಿದ್ದು, ಮೇ.೧೩ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂದರು.
    ಅಭ್ಯರ್ಥಿಗಳು ಚುನಾವಣಾ ಅಕ್ರಮಗಳು ನಡೆಸದಂತೆ ಎಚ್ಚರವಹಿಸಬೇಕು. ಇಲ್ಲವಾದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು. ಪ್ರಚಾರ ಕಾರ್ಯ ಕೈಗೊಳ್ಳಲು, ಸಭೆ-ಸಮಾರಂಭ ನಡೆಸಲು ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಕರಪತ್ರ ಸೇರಿದಂತೆ ಪ್ರಚಾರ ಸಾಮಗ್ರಿಗಳ ಕುರಿತು ಸಹ ಸಂಬಂಧಿಸಿದ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿ ಗೊಂದಲಗಳು ಇದ್ದಲ್ಲಿ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದರು.
    ಈ ಸಂದರ್ಭದಲ್ಲಿ ವಿವಿಧ ಪಕ್ಷದ ಪ್ರಮುಖರು ಮಾತನಾಡಿ, ಚುನಾವಣಾ ಅಕ್ರಮಕ್ಕೆ ಕಾರಣರಾದವರ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಬೇಕು. ವಿನಾಕಾರಣ ಸಂಬಂಧವಿಲ್ಲದವರ ಮೇಲೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಆಯೋಗ ಚುನಾವಣೆಗೆ ನಿಗದಿಪಡಿಸಿರುವ ವೆಚ್ಚ ಮೀರಿ ಹೆಚ್ಚಿನ ವೆಚ್ಚ ಮಾಡುವ ಅಭ್ಯರ್ಥಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಹಾಳಾಗಿದ್ದು, ದುರಸ್ತಿಪಡಿಸುವ ಮೂಲಕ ಚುನಾವಣಾ ಅಕ್ರಮಗಳನ್ನು ತಡೆಯಲು ಮುಂದಾಗಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳನ್ನು ಬೇರೆ ಸ್ಥಳಕ್ಕೆ ನಿಯೋಜನೆಗೊಳಿಸಬೇಕೆಂದರು.
    ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಮುಖರಾದ ಆರ್. ಕರುಣಾಮೂರ್ತಿ, ಡಿ.ಸಿ ಮಾಯಣ್ಣ, ಆನಂದ್(ಮೆಡಿಕಲ್), ಟಿ. ಚಂದ್ರೇಗೌಡ, ಮೊಸಹಳ್ಳಿ ಸುರೇಶ್, ಲೋಕೇಶ್ವರ್ ರಾವ್, ಶಶಿಕುಮಾರ್ ಗೌಡ, ಸುರೇಶಪ್ಪ, ಪಕ್ಷೇತರ ಅಭ್ಯರ್ಥಿ ಜಾನ್‌ಬೆನ್ನಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
    ತಹಸೀಲ್ದಾರ್ ಸುರೇಶ್ ಆಚಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಮೇಶ್, ನಗರಸಭೆ ಪೌರಾಯುಕ್ತ ಮನುಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.