ಜೆಡಿಎಸ್ ಅಭ್ಯರ್ಥಿ ಶಾರದ ಅಪ್ಪಾಜಿ ಈಡೇರಿಸುವ ವಿಶ್ವಾಸ
ಭದ್ರಾವತಿಯಲ್ಲಿ ಜಾತ್ಯತೀತ ಜನತಾದಳ ವತಿಯಿಂದ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಹಲವು ಭರವಸೆಗಳ ಪ್ರಣಾಳಿಕೆ ಬಿಡುಗಡೆಗೊಳಿಸಲಾಯಿತು.
ಭದ್ರಾವತಿ, ಮೇ. ೬: ಸಾಧಿಸಿದ್ದೇವೆ ಸಾಕಷ್ಟು-ಮಾಡಬೇಕಾಗಿದೆ ಮತ್ತಷ್ಟು, ಈಡೇರಿಸಿದ್ದೇವೆ ನೂರಾರು-ಇನ್ನೂ ಉಳಿದಿದೆ ಹಲವಾರು. ಅಪ್ಪಾಜಿ ಅಭಿವೃದ್ಧಿಯ ಹಾದಿಯಲ್ಲಿ ಶಾರದ ಅಪ್ಪಾಜಿ ಮುಂದಡಿ ಎಂಬ ಶೀರ್ಷಿಕೆಯೊಂದಿಗೆ ಶನಿವಾರ ಜ್ಯಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಪೂರಕವಾಗಿವೆ ಎಂದರು.
ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಬಳಿ ಹೊಸಸೇತುವೆ(ಮುಳುಗು ಸೇತುವೆ)ಗೆ ಪರ್ಯಾಯವಾಗಿ ಸುಭದ್ರವಾದ ಸೇತುವೆ ನಿರ್ಮಿಸುವುದು. ಡಾ. ಬಿ.ಆರ್ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಯನ್ನು ಸುಮಾರು ೧೦ ಕೋ. ರು. ಅನುದಾನದಲ್ಲಿ ಸುಸಜ್ಜಿತ ಮೂಲ ಸೌಕರ್ಯ ಕಲ್ಪಿಸಿ ಪೂರ್ಣಗೊಳಿಸುವುದು. ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳ ಸಬಲೀಕರಣ, ಬಾಕಿಯರಿಗೆ ಸುಸಜ್ಜಿತ ಶೌಚಾಲಯ ಹಾಗು ವಿಶ್ರಾಂತಿ ಕೊಠಡಿಗಳ ನಿರ್ಮಾಣ. ನೆನೆಗುದಿಗೆ ಬಿದ್ದಿರುವ ದೊಣಬಘಟ್ಟ-ಕೆ.ಕೆ ಮಗ್ಗಿ ಸಂಪರ್ಕ ಸೇತುವೆ ನಿರ್ಮಾಣ ಯೋಜನೆ ಸಾಕಾರಗೊಳಿಸುವುದು ಹಾಗು ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಪುನಶ್ಚೇತನ, ಮಹಿಳೆಯರಿಗಾಗಿ ಗಾರ್ಮೆಂಟ್ಸ್ ಫ್ಯಾಕ್ಟರಿ ಸ್ಥಾಪನೆ, ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು ಸೇರಿದಂತೆ ಇನ್ನಿತರ ಭರವಸೆಗಳನ್ನು ನೀಡಲಾಗಿದೆ.
ಪಕ್ಷದ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ, ಪ್ರಮುಖರಾದ ಸುರೇಶ್, ಮಹಮದ್ ಸನ್ನಾವುಲ್ಲಾ, ಎಚ್.ಎಸ್ ಸಂಜೀವಕುಮಾರ್, ಕರಿಯಪ್ಪ, ಶಿವಾಜಿರಾವ್ ಗಾಯಕ್‌ವಾಡ್, ಎನ್ ಕೃಷ್ಣಪ್ಪ, ವಿಶ್ವೇಶ್ವರ ಗಾಯಕ್‌ವಾಡ್ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.