ಭದ್ರಾವತಿಯಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರ ಜಾಗೃತ ವೇದಿಕೆ ಪ್ರಮುಖರು ಶನಿವಾರ ಶಾರದ ಅಪ್ಪಾಜಿಯವರಿಗೆ ಹೂವಿನ ಹಾರ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.
ಭದ್ರಾವತಿ, ಮೇ. ೬: ಕ್ಷೇತ್ರದಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರನ್ನು ಗುರುತಿಸಿ ಅವರ ಏಳಿಗೆಗಾಗಿ ಶ್ರಮಿಸಿದ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರನ್ನು ಎಂದಿಗೂ ಮೆರಯಲು ಸಾಧ್ಯವಿಲ್ಲ. ಪ್ರಸ್ತುತ ಚುನಾವಣೆಯಲ್ಲಿ ಅವರ ಪತ್ನಿ ಶಾರದ ಅಪ್ಪಾಜಿಯವರು ಸ್ಪರ್ಧಿಸಿದ್ದು, ಅವರಿಗೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಮತದಾರರ ಜಾಗೃತ ವೇದಿಕೆ ತಿಳಿಸಿದೆ.
ಇತ್ತೀಚಿನ ವರ್ಷಗಳಲ್ಲಿ ಆಡಳಿತಾರೂಢ ಯಾವುದೇ ರಾಜಕೀಯ ಪಕ್ಷಗಳು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯದ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಕೇವಲ ಓಟ್‌ಬ್ಯಾಂಕ್ ಓಲೈಕೆಯ ರಾಜಕಾರಣದಲ್ಲಿ ತೊಡಗಿರುವುದು ಜಗಜಾಹೀರವಾಗಿದೆ. ರಾಜಕೀಯ ಪಕ್ಷಗಳ ಇಂತಹ ನಿರ್ಲಕ್ಷ ಧೋರಣೆ ಒಂದೆಡೆಯಾದರೆ, ಶಾಸನಸಭೆಗೆ ಆರಿಸಿಹೋಗುವ ಜನಪ್ರತಿನಿಧಿಗಳು ಸಹ ತಮ್ಮ ವ್ಯಾಪ್ತಿಯಲ್ಲಿ ಈ ಸಮುದಾಯಗಳ ಬಗ್ಗೆ ಅಸಡ್ಡೆತನ ತೋರುತ್ತಿರುವುದು ಶೋಚನೀಯವಾದ ಸಂಗತಿಯಾಗಿದೆ. ಆಳುವ ಸರ್ಕಾರಗಳಿಗೆ ಎಚ್ಚರಿಸಲು, ಜನಪ್ರತಿನಿಧಿಗಳಿಗೆ ಚುರುಕು ಮುಟ್ಟಿಸಲು ಇದು ಸಕಾಲವಾಗಿದ್ದು, ಭವಿಷ್ಯದ ಹಿತದೃಷ್ಟಿಯಿಂದ ಯೋಚಿಸಿ ಮತಚಲಾಯಿಸಬೇಕಾಗಿದೆ.
ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿಪ್ರತಿಷ್ಠೆ ಕಣವಾಗಿರುವ ಕ್ಷೇತ್ರದಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತ ಸಮುದಾಯಗಳಿಗೆ ರಾಜಕೀಯವಾಗಿ ಪ್ರಾತಿನಿದ್ಯ ನೀಡಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿಯವರು ಕಳೆದ ೩೦ ವರ್ಷಗಳ ಅವಧಿಯಲ್ಲಿ ಗುರುತಿಸಿರುವುದು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.
ಕ್ಷೇತ್ರದಲ್ಲಿ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಹಲವು ಮಂದಿ ರಾಜಕೀಯ ಸ್ಥಾನಮಾನ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಮರಾಠ, ತಮಿಳು, ತೆಲುಗು, ನಾಯ್ಡು, ದೇವಾಂಗ, ಭಾವಸಾರ, ಉಪ್ಪಾರ, ಮಡಿವಾಳ, ಬಲಿಜ, ಶೆಟ್ಟಿ, ಕುಂಬಾರ, ಮೇದಾರ, ಗಂಗಾಮತಸ್ಥ, ಸವಿತಾ ಸಮಾಜ, ಭೋವಿ, ಲಂಬಾಣಿ, ವಿಶ್ವಕರ್ಮ, ಕಾಟಿಕ್ ಸಮಾಜ, ರಜಪೂತ್, ಆರ್ಯವೈಶ್ಯ, ಜೈನ ಸಮಾಜ, ಪರಿಶಿಷ್ಟ ಜಾತಿ/ಪಂಗಡ ಹಾಗು ಇತರೆ ೧೦೮ ಜಾತಿ, ವರ್ಗಗಳನ್ನು ಅಪ್ಪಾಜಿಯವರು ಗುರುತಿಸಿ ಬೆಳೆಸಿದ ಪರಿಣಾಮ ಶಾರದ ಅಪ್ಪಾಜಿಯವರಿಗೆ ಈ ಚುನಾವಣೆಯಲ್ಲಿ ಬೆಂಬಲ ಸೂಚಿಸುವ ಮೂಲಕ ಅವರ ಗೆಲುವಿಗೆ ಶ್ರಮಿಸುವುದಾಗಿ ವೇದಿಕೆ ಸಂಚಾಲಕರು ತಿಳಿಸಿದ್ದಾರೆ.
ವೇದಿಕೆ ಪ್ರಮುಖರು ಶನಿವಾರ ಶಾರದ ಅಪ್ಪಾಜಿಯವರಿಗೆ ಹೂವಿನ ಹಾರ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖರಾದ ಸುರೇಶ್, ಮಹಮದ್ ಸನ್ನಾವುಲ್ಲಾ, ಎಚ್.ಎಸ್ ಸಂಜೀವಕುಮಾರ್, ಕರಿಯಪ್ಪ, ಶಿವಾಜಿರಾವ್ ಗಾಯಕ್‌ವಾಡ್, ಎನ್ ಕೃಷ್ಣಪ್ಪ, ವಿಶ್ವೇಶ್ವರ ಗಾಯಕ್‌ವಾಡ್, ಡಿ.ಟಿ ಶ್ರೀಧರ, ಲೋಕೇಶ್ವರ್‌ರಾವ್, ಎನ್. ರಾಮಕೃಷ್ಣ, ವಿಜಯ, ವಿಶಾಲಾಕ್ಷಿ, ಬಸವರಾಜ ಬಿ ಆನೇಕೊಪ್ಪ, ಉದಯ್ ಕುಮಾರ್, ಆನಂದ್, ತ್ಯಾಗರಾಜ್, ಅಮೋಸ್, ಧರ್ಮರಾಜ್, ವಸಂತ, ವೆಂಕಟೇಶ್ ಉಜ್ಜನಿಪುರ, ಸುಬ್ಬಣ್ಣ, ಮಂಜುನಾಥ್, ಎ. ಮಸ್ತಾನ್, ಅಜ್ಮಲ್, ಸವೂದ್, ನಸರುಲ್ಲ, ತಬ್ರೇಸ್ ಖಾನ್, ಅಂತೋಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.