Friday, May 19, 2023

ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಭದ್ರಾವತಿ ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಭರವಸೆ ನೀಡಿರುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ನೀಡಲೇಬೇಕೆಂದು ಸಂಗೊಳ್ಳಿ ರಾಯಣ್ಣ ಯುವಪಡೆ ಪ್ರಮುಖರು ಆಗ್ರಹಿಸಿದರು.
    ಭದ್ರಾವತಿ, ಮೇ. ೧೯: ಕ್ಷೇತ್ರದಲ್ಲಿ ಇದುವರೆಗೂ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಭರವಸೆ ನೀಡಿರುವಂತೆ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಈ ಬಾರಿ ಸಚಿವ ನೀಡಲೇಬೇಕೆಂದು ಸಂಗೊಳ್ಳಿ ರಾಯಣ್ಣ ಯುವಪಡೆ ಪ್ರಮುಖರು ಆಗ್ರಹಿಸಿದರು.
    ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ನಾಯಕರು ಹಾಗು ರಾಜಕೀಯ ಮುತ್ಸದ್ದಿಯಾಗಿರುವ ಸಿದ್ದರಾಮಯ್ಯನವರು ಶನಿವಾರ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದು ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
    ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್‌ರವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕು. ವಿಐಎಸ್‌ಎಲ್ ಮತ್ತು ಎಂಪಿಎಂ ಎರಡೂ ಕಾರ್ಖಾನೆಗಳು ಅಭಿವೃದ್ಧಿಯಾಗಬೇಕು. ಈಗಾಗಲೇ ಸಂಗಮೇಶ್ವರ್‌ರವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಎಂಪಿಎಂ ಕಾರ್ಖಾನೆ ಪುನರ್ ಆರಂಭಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಅವರಿಗೆ ಈ ಬಾರಿ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಯುವಪಡೆ ಪ್ರಮುಖರಾದ ದೊಡ್ಮನೆ ನಾಗಭೂಷಣ್, ಅಭಿಲಾಷ್, ಎಚ್. ರವಿಕುಮಾರ್, ನಗರಸಭಾ ಸದಸ್ಯರಾದ ಕಾಂತರಾಜ್, ಆರ್. ಶ್ರೇಯಸ್, ಶಿವಣ್ಣಗೌಡ, ಸುನಿಲ್‌ಕುಮಾರ್, ಶ್ರೀನಿವಾಸ್, ಗೋಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

Thursday, May 18, 2023

ಬಜರಂಗದಳದಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ಕೇರಳ ಸ್ಟೋರಿ ಉಚಿತ ಪ್ರದರ್ಶನ ವ್ಯವಸ್ಥೆ

ಭದ್ರಾವತಿ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಬಜರಂಗದಳ ವತಿಯಿಂದ ಕಾಲೇಜುವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
    ಭದ್ರಾವತಿ, ಮೇ. ೧೮ : ನಗರದ ಸಿ.ಎನ್ ರಸ್ತೆಯಲ್ಲಿರುವ ನೇತ್ರಾವತಿ ಚಿತ್ರಮಂದಿರದಲ್ಲಿ ಕೇರಳ ಸ್ಟೋರಿ ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದು, ಕಾಲೇಜುವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
    ಕೇರಳ ಸ್ಟೋರಿ ಚಲನಚಿತ್ರ ವೀಕ್ಷಣೆಗೆ ಹೆಚ್ಚಿನ ಜನರು ಆಗಮಿಸುತ್ತಿದ್ದು, ಬಜರಂಗದಳ ವತಿಯಿಂದ ಗುರುವಾರ ಮೊದಲ ಪ್ರದರ್ಶನದಲ್ಲಿ ವಿವಿಧ ಕಾಲೇಜುಗಳ ಸುಮಾರು ೧೫೦ ವಿದ್ಯಾರ್ಥಿನಿಯರಿಗೆ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
    ಮೇ.೧೨ರಿಂದ ಪ್ರತಿದಿನ ಚಲನಚಿತ್ರ ೪ ಪ್ರದರ್ಶನಗೊಳ್ಳುತ್ತಿದ್ದು, ಬಜರಂಗದಳ ವಿದ್ಯಾರ್ಥಿನಿಯರಿಗೆ ಚಲನಚಿತ್ರ ಮೂಲಕ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಸಿದ್ದರಾಮಯ್ಯ ೨ನೇ ಬಾರಿಗೆ ಮುಖ್ಯಮಂತ್ರಿ : ವೈ. ನಟರಾಜ್ ಸಂತಸ

ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವರಾಗಲಿ ಶಬರಿಮಲೆಯಲ್ಲಿ ಪ್ರಾರ್ಥನೆ

ಭದ್ರಾವತಿ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೈ. ನಟರಾಜ್ ವೈ. ನಟರಾಜ್‌ರವರು ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ  ಶಬರಿಮಲೆ ಪ್ರವಾಸ ಕೈಗೊಂಡು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿ ಹಾಗು ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್‌ರವರು ಸಚಿವರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
    ಭದ್ರಾವತಿ, ಮೇ. ೧೮ : ರಾಜ್ಯದ ಮುಖ್ಯಮಂತ್ರಿಯಾಗಿ ೨ನೇ ಬಾರಿಗೆ ಪದಗ್ರಹಣ ಸ್ವೀಕರಿಸುತ್ತಿರುವ ಹಿರಿಯ ರಾಜಕೀಯ ಮುತ್ಸದ್ದಿ ಸಿದ್ದರಾಮಯ್ಯನವರಿಗೆ ಶ್ರೀ ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕ ವೈ. ನಟರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
    ಸಿದ್ದರಾಮಯ್ಯನವರು ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರಾಗಿದ್ದು, ಮೊದಲ ಬಾರಿಗೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬಾರಿ ಸಹ ಉತ್ತಮ ಆಡಳಿತ ನೀಡುವ ಮೂಲಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ವೈ. ನಟರಾಜ್‌ರವರು ಚುನಾವಣಾ ಫಲಿತಾಂಶ ಪ್ರಕಟಗೊಂಡ ನಂತರ  ಶಬರಿಮಲೆ ಪ್ರವಾಸ ಕೈಗೊಂಡು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಲಿ ಹಾಗು ಕ್ಷೇತ್ರದ ಶಾಸಕರಾಗಿ ೪ನೇ ಬಾರಿಗೆ ಆಯ್ಕೆಯಾಗಿರುವ ಬಿ.ಕೆ ಸಂಗಮೇಶ್ವರ್‌ರವರು ಸಚಿವರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.
    ಸಿದ್ದರಾಮಯ್ಯನವರು ಮೇ.೨೦ರಂದು ಪದಗ್ರಹಣ ಸ್ವೀಕರಿಸುತ್ತಿದ್ದು, ಬಿ.ಕೆ ಸಂಗಮೇಶ್ವರ್‌ರವರು ಸಹ ಅಂದು ಸಚಿವರಾಗಿ ಪದಗ್ರಹಣ ಸ್ವೀಕರಿಸುವಂತಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಅಂತರಾಷ್ಟ್ರೀಯ ಯೋಗ ಸ್ಪರ್ಧೆ : ಡಿ. ನಾಗರಾಜ್ ಚಿನ್ನದ ಪದಕ

ದುಬೈ, ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್ ಅಂಡ್ ಸುಬ್ರ ಸ್ಕೂಲ್ ಆಫ್ ಯೋಗ ಸಹಯೋಗದೊಂದಿಗೆ ಹೋಟೆಲ್ ಅಡ್ಮಿರಲ್ ಪ್ಲಾಸದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ಭದ್ರಾವತಿ, ಮೇ. ೧೮ : ದುಬೈ, ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್ ಅಂಡ್ ಸುಬ್ರ ಸ್ಕೂಲ್ ಆಫ್ ಯೋಗ ಸಹಯೋಗದೊಂದಿಗೆ ಹೋಟೆಲ್ ಅಡ್ಮಿರಲ್ ಪ್ಲಾಸದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಡಿ. ನಾಗರಾಜ್ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.
    ೬೦ ಮರ್ಷ ಮೇಲ್ಪಟ್ಟ ವಿಭಾಗದಲ್ಲಿ ಚಿನ್ನದ ಪದಕ ಹಾಗು ಚಾಂಪಿಯನ್ ಆಫ್ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸುಬ್ರ ಸ್ಕೂಲ್ ಆಫ್ ಯೋಗ ಅಧ್ಯಕ್ಷ ಮುತ್ತುರಾಮಲಿಂಗಂ ಪ್ರಶಸ್ತಿ ವಿತರಿಸಿದರು.
    ಮೆಕ್ಸಿಕೋ ಪವರ್ ಯೋಗ ಸೆಂಟರ್ ಕೆ. ನಾರಾಯಣಸ್ವಾಮಿ, ಕೊಯಂಬತ್ತೂರಿನ ಪ್ರಾಣ ಯೋಗ ಕೇಂದ್ರದ ಬಾಲಕೃಷ್ಣ ಹಾಗು ಇಂಟರ್ ನ್ಯಾಷನಲ್ ಯೂತ್ ಯೋಗ ಫೆಡರೇಷನ್ ಅಧ್ಯಕ್ಷ ಎಸ್. ಆರ‍್ಮುಗಂ, ಕಾರ್ಯದರ್ಶಿ ಧನರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಯೋಗ ಸ್ಪರ್ಧೆಯಲ್ಲಿ ಮೆಕ್ಸಿಕೋ, ಸಿಂಗಪೂರ್, ಥೈರ್ಲ್ಯಾಂಡ್, ಮಲೇಷಿಯಾ, ಶ್ರೀಲಂಕಾ, ಇಂಡಿಯಾ ಮತ್ತು ಮಸ್ಕತ್ ದೇಶಗಳ ಒಟ್ಟು ೩೬೦ ಯೋಗ ಪಟುಗಳು ಭಾಗವಹಿಸಿದ್ದರು.
    ಕರ್ನಾಟಕ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ ಮತ್ತು ಕಾರ್ಯದರ್ಶಿ ಡಿ. ಪುಟ್ಟೇಗೌಡ ಸೇರಿದಂತೆ ಇನ್ನಿತರರು ಡಿ. ನಾಗರಾಜ್‌ರವರನ್ನು ಅಭಿನಂದಿಸಿದ್ದಾರೆ.

Wednesday, May 17, 2023

ಮೇ.೨೧ರಂದು ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ

    ಭದ್ರಾವತಿ, ಮೇ. ೧೭ : ವಿಶ್ವ ಹಿಂದು ಪರಿಷತ್, ವಿಶ್ವಭಾರತಿ ವಿಶ್ವಸ್ಥ ಮಂಡಳಿ ವತಿಯಿಂದ ಮೇ.೨೧ರ ಭಾನುವಾರ ಬೆಳಿಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೧ರವರೆಗೆ ಸಿದ್ದಾರೂಢನಗರದ ಕಾಳಿದಾಸ ಬಡಾವಣೆಯಲ್ಲಿರುವ ಧರ್ಮಶ್ರೀ ಸಭಾಭವನದಲ್ಲಿ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
    ಅರಕೆರೆ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಲಿದ್ದಾರೆ. ವಿಶ್ವ ಹಿಂದು ಪರಿಷತ್ ಅಧ್ಯಕ್ಷ ಪಿ. ವೆಂಕಟರಮಣಶೇಟ್ ಅಧ್ಯಕ್ಷತೆ ವಹಿಸಲಿದ್ದು, ನಗರಸಭೆ ಅಧ್ಯಕ್ಷೆ ಅನುಸುಧಾ ಮೋಹನ್ ಪಳನಿ, ನಗರಸಭೆ ಪೌರಾಯುಕ್ತ ಎಚ್.ಎಂ ಮನುಕುಮಾರ್, ಬಜರಂಗದಳ ಪ್ರಾಂತ ಸಂಯೋಜಕ ಕೆ.ಆರ್ ಸುನೀಲ್, ವಿಶ್ವ ಹಿಂದು ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಹಾ. ರಾಮಪ್ಪ, ಜಿಲ್ಲಾ ಕಾರ್ಯದರ್ಶಿ ನಾರಾಯಣ ಜಿ. ವರ್ಣೀಕರ್, ಗ್ರಾಮಾಂತರ ಅಧ್ಯಕ್ಷ ಎಸ್. ಮುತ್ತುರಾಮಲಿಂಗಮ್, ಮಾತೃಮಂಡಳಿ ಅಧ್ಯಕ್ಷೆ ಯಶೋಧ ವೀರಭದ್ರಪ್ಪ, ವೈದ್ಯ ಡಾ. ಟಿ. ನರೇಂದ್ರ ಭಟ್, ವಿಶ್ವಭಾರತಿ ವಿಶ್ವಸ್ಥ ಮಂಡಳಿ ಉಪಾಧ್ಯಕ್ಷ ಕೆ.ಎಚ್ ತೀರ್ಥಯ್ಯ, ವೇದಾವತಿ ಶಿವಮೂರ್ತಿ, ಡಿ. ನಂಜುಂಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿರುವರು.  
    ತಾಲೂಕಿನ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ಹಾಗು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ಭದ್ರಾವತಿಯಲ್ಲಿ ಜೂಜಾಟ, ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ

ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ

ಶಾರದ ಅಪ್ಪಾಜಿ
    ಭದ್ರಾವತಿ, ಮೇ. ೧೭ : ಕ್ಷೇತ್ರದಲ್ಲಿ ಇತ್ತೀಚೆಗೆ ಓ.ಸಿ, ಮಟ್ಕಾ, ಇಸ್ಪೀಟ್ ಸೇರಿದಂತೆ ಜೂಜಾಟ, ಅಕ್ರಮ ದಂಧೆಗಳು ಮಿತಿಮೀರಿವೆ. ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್ ಪಕ್ಷದ ಮುಖಂಡರಾದ ಶಾರದ ಅಪ್ಪಾಜಿ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
    ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳ ಅವನತಿಯಿಂದಾಗಿ ಬಡಕುಟುಂಬಗಳು ಬೀದಿ ಪಾಲಾಗಿವೆ. ನಿರುದ್ಯೋಗಿ ಯುವಕರಿಗೆ ಅಕ್ರಮ ದಂಧೆಗಳು ಕಸುಬಾಗಿ ಮಾರ್ಪಟ್ಟಿವೆ. ವಿಶೇಷವಾಗಿ ಅನೇಕ ಬಡಾವಣೆಗಳಲ್ಲಿ, ಮೊಹಲ್ಲಾಗಳಲ್ಲಿ ಗಾಂಜಾ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದಾಗಿ ನಾಗರೀಕರ ನೆಮ್ಮದಿ ಬದುಕಿಗೆ ಭಂಗ ಉಂಟು ಮಾಡುವ ಜೊತೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
    ಗಾಂಜಾದಂತಹ ಮಾದಕ ವಸ್ತುಗಳು ರಾಜಾರೋಷವಾಗಿ ಯುವಕರ, ವಿದ್ಯಾರ್ಥಿಗಳ ಕೈಗೆ ಸುಲಭವಾಗಿ ದೊರೆಯುತ್ತಿದ್ದು, ಕಾನೂನಿನ ಭಯ ಇಲ್ಲದಂತಾಗಿದೆ. ದುಶ್ಚಟಗಳಿಗೆ ಯುವ ಜನಾಂಗ ಬಲಿಯಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಈ ಹಿನ್ನಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.

ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸಿ ಡೆಂಗ್ಯೂ ರೋಗ ನಿಯಂತ್ರಿಸಿ : ಡಾ. ಎಂ.ವಿ ಅಶೋಕ್

ಭದ್ರಾವತಿ ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್  ಸಹಯೋಗದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಕಾಲೇಜಿನಲ್ಲಿ  ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಮೇ. ೧೭ : ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರವಹಿಸುವ ಮೂಲಕ ಡೆಂಗ್ಯೂ ರೋಗ ನಿಯಂತ್ರಣಕ್ಕೆ ಮುಂದಾಗಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ವಿ ಅಶೋಕ್ ಹೇಳಿದರು.
ಅವರು ಸೀಗೆಬಾಗಿ ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್  ಸಹಯೋಗದೊಂದಿಗೆ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸೊಳ್ಳೆಗಳ ನಿಯಂತ್ರಣದಿಂದ ಡೆಂಗ್ಯೂ ರೋಗ ಹರಡದಂತೆ ತಡೆಯಬಹುದು. ಈ ಹಿನ್ನಲೆಯಲ್ಲಿ ಸೊಳ್ಳೆಗಳು ಉತ್ಪತ್ತಿಯಾಗದಂತೆ ನೀರಿನ ಸಂಗ್ರಹಣೆಗಳನ್ನು ವಾರಕ್ಕೆರಡು ಬಾರಿ ತೊಳೆದು ಮುಚ್ಚಿಡಬೇಕು. ಘನತ್ಯಾಜ್ಯಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದರು.
    ಡಾ. ಅಚ್ಯುತ್ ಮಾತನಾಡಿ, ಡೆಂಗ್ಯೂ ಜ್ವರಕ್ಕೆ ಸೂಕ್ತ ಚಿಕಿತ್ಸೆ ಇಲ್ಲದಿರುವುದರಿಂದ ಹೆಚ್ಚು ದ್ರವ ಆಹಾರ ಸೇವನೆ ಮಾಡಬೇಕು. ಸೊಳ್ಳೆಪರದೆ ಬಳಸಿ ಆರೈಕೆಗೆ ಗಮನ ನೀಡಬೇಕೆಂದರು.
    ಆರೋಗ್ಯ ಶಿಕ್ಷಣಾಧಿಕಾರಿ ಕೆ. ಸುಶೀಲಬಾಯಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ಡಾ. ಬಿ.ಆರ್ ಅಂಬೇಡ್ಕರ್ ಪ್ಯಾರಾ ಮೆಡಿಕಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಗಣೇಶ್, ನಿರ್ದೇಶಕರಾದ ಜೋಬಿಲ್, ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.