ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಜಿಲ್ಲಾ ಜಂಟಿ ನಿರ್ದೇಶಕರಿಗೆ ಮನವಿ
ಸರ್ಕಾರಿ ಪಡಿತರ ವಿತರಕರಿಗೆ ಹೆಚ್ಚುವರಿ ಕಮಿಷನ್ ಕ್ವಿಂಟಾಲ್‌ಗೆ ರು. ೨೪ ಮತ್ತು ಇಕೆವೈಸಿ ಹಣ ೨೦೧೮ ರಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಹಣ ಬಿಡುಗಡೆ ಮಾಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಹಾರ ಮತ್ತು ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಶಿವಮೊಗ್ಗ ಜಿಲ್ಲಾ ಜಂಟಿ ನಿರ್ದೇಶಕ ಆರ್. ಅವಿನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
ಭದ್ರಾವತಿ, ಜೂ. ೮: ಸರ್ಕಾರಿ ಪಡಿತರ ವಿತರಕರಿಗೆ ಹೆಚ್ಚುವರಿ ಕಮಿಷನ್ ಕ್ವಿಂಟಾಲ್‌ಗೆ ರು. ೨೪ ಮತ್ತು ಇಕೆವೈಸಿ ಹಣ ೨೦೧೮ ರಿಂದ ಇಲ್ಲಿಯವರೆಗೂ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಹಣ ಬಿಡುಗಡೆ ಮಾಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘ ಆಹಾರ ಮತ್ತು ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಜಂಟಿ ನಿರ್ದೇಶಕ ಆರ್. ಅವಿನ್ ಅವರಿಗೆ ಗುರುವಾರ ಮನವಿ ಸಲ್ಲಿಸಿದೆ.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್‌ಗೆ ಹೆಚ್ಚುವರಿ ಕಮಿಷನ್ ಹಣ ಏಪ್ರಿಲ್ ೨೦೨೨ರವರೆಗೆ ಬಿಡುಗಡೆ ಮಾಡಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳ ವಿತರಕರ ಖಾತೆಗೆ ಇದುವರೆಗೂ ಹಣ ಜಮಾ ಆಗಿಲ್ಲ. ಕೆಲವು ಜಿಲ್ಲೆಗಳ ವಿತರಕರಿಗೆ ಪೂರ್ತಿ ಹಣ ಖಾತೆಗೆ ಜಮಾ ಆಗಿರುತ್ತದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
೨೦೧೮ ರಿಂದ ಇಕೆವೈಸಿ ಪೂರ್ತಿ ಮಾಡಿದ್ದು, ಶೇ. ೯೫ ರಿಂದ ೯೮ರಷ್ಟು ಇಕೆವೈಸಿ ಮಾಡಿರುತ್ತೇವೆ. ಆದರೂ ಸಹ ಪದೇ ಪದೇ ಇಕೆವೈಸಿ ಬಾಕಿ ಇರುತ್ತದೆ ಎಂದು ನಮ್ಮ ಮೇಲೆ ಆರೋಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪಡಿತರ ಚೀಟಿದಾರರಿಗೆ ಇಲಾಖೆ ಪ್ರಕಟಣೆ ಹೊರಡಿಸಿ ಅಂತಿಮ ಗಡುವು ನಿಗದಿಪಡಿಸಿದರೆ ಹೆಚ್ಚಿನ ಅನುಕೂಲವಾಗುತ್ತದೆ. ಇಕೆವೈಸಿ ಮಾಡಿದ ಹಣ ಇದುವರೆವಿಗೂ ಬಿಡುಗಡೆ ಮಾಡಿರುವುದಿಲ್ಲ, ತಕ್ಷಣ ಹಣ ಬಿಡುಗಡೆ ಮಾಡುವಂತೆ ಕೋರಲಾಗಿದೆ.
ಅಂಗಡಿಗಳಿಗೆ ಶೇ.೫ರಷ್ಟು ಓಟಿಪಿ ವ್ಯವಸ್ಥೆಯಲ್ಲಿ ಪಡಿತರ ವಿತರಣೆ ಮಾಡಲು ಅವಕಾಶ ನೀಡಲಾಗಿದೆ. ಸರ್ವರ್ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ಬೇಸಿಗೆ ಹಿನ್ನಲೆಯಲ್ಲಿ ಪಡಿತರ ವಿತರಕರು ಸಾಲುಗಟ್ಟಿ ಅಂಗಡಿ ಮುಂದೆ ನಿಂತಿರುತ್ತಾರೆ. ವಯೋವೃದ್ದರಿಗೆ ಹೆಬ್ಬೆಟ್ಟು ಮತ್ತು ಕಣ್ಣು ಗುರುತು ಸರಿಯಾಗಿ ದೃಢೀಕರಣಗೊಳ್ಳುತ್ತಿಲ್ಲ. ಈ ಹಿನ್ನಲೆಯಲ್ಲಿ ಓಟಿಪಿ ಪ್ರಮಾಣ ಹೆಚ್ಚಿಸುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಪ್ರತಿ ತಿಂಗಳು ಅಕ್ಕಿ ಜೊತೆಯಲ್ಲಿ ರಾಗಿ, ಜೋಳ ಸಹ ನೀಡಬೇಕೆಂದು ಮನವಿ ಮಾಡಲಾಗಿದೆ.
ಬೇರೆ ಜಿಲ್ಲೆಯ ಪಡಿತರ ಚೀಟಿದಾರರಿಗೆ ಪಡಿತರ ನೀಡಿದಾಗ ಶೂನ್ಯ (ಜಿರೋ) ಮಾಡಿದರೂ ನಷ್ಟ (ಮೈನಸ್) ಆಗಿ ದಂಡ ಪಾವತಿಸಲಾಗಿರುತ್ತದೆ. ಕ್ಲೋಸರ್ ನೀಡದೆ ಪ್ರತಿ ತಿಂಗಳು ಎತ್ತುವಳಿ ಮಾಡುವ ಸಮಯದಲ್ಲಿ ಸ್ಥಳೀಯ ಕಛೇರಿ ಅಧಿಕಾರಿಗಳು ರಾಗಿ ಕ್ಲೋಸರ್ ಆಗಿರುವುದಿಲ್ಲ ಎಂದು ೮-೧೦ ದಿನಗಳ ನಂತರ ಕ್ಲೋಸರ್ ಕೊಡುತ್ತಾರೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಕ್ಲೋಸರ್ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ಜಿಲ್ಲಾಧ್ಯಕ್ಷ ಸಿದ್ದಲಿಂಗಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಮುರುಗೇಶ್, ಅಂಗಡಿ ಮಾಲೀಕರಾದ ಎನ್.ಎಸ್ ನಾಗರಾಜ್, ಆರ್. ಅನಿಲ್‌ಕುಮಾರ್, ವಿಜೇಶ್ ಮತ್ತು ಇಬ್ರಾಹಿಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.