Sunday, July 23, 2023

ದಲಿತ ಮುಖಂಡ ಬಿ. ರಮೇಶ್‌ ನಿಧನ

ಬಿ. ರಮೇಶ್‌
    ಭದ್ರಾವತಿ, ಜು. ೨೩: ನಗರದ ಬಿ.ಎಚ್‌ ರಸ್ತೆ ೪ನೇ ತಿರುವಿನ ನಿವಾಸಿ, ಪ್ರಜಾ ರಾಜ್ಯ ದಲಿತ ಸಂಘದ ರಾಜ್ಯಾಧ್ಯಕ್ಷ ಬಿ. ರಮೇಶ್‌(೫೪) ಭಾನುವಾರ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
    ಪತ್ನಿ, ಓರ್ವ ಪುತ್ರ ಇದ್ದಾರೆ. ಶಿವಮೊಗ್ಗಕ್ಕೆ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಅಪಘಾತ ಸಂಭವಿಸಿದ್ದು, ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ.
    ರಮೇಶ್‌ ದಲಿತ ಮುಖಂಡರಾಗಿದ್ದು, ಸ್ಟೀಲ್‌ ಟೌನ್‌ ಪತ್ರಿಕೆ ಸಂಪಾದಕರಾಗಿದ್ದರು. ಹಲವಾರು ದಲಿತಪರ ಹೋರಾಟಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದರು.
    ಬಿ. ರಮೇಶ್‌ ನಿಧನಕ್ಕೆ ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರುಣ್ಯ ಚಾರಿಟಬಲ್‌ ಟ್ರಸ್ಟ್‌, ಛಾಯಾ ಗ್ರಾಹಕರ ಸಂಘದ ಕಾರ್ಯದರ್ಶಿ ಸಂಜೀವರಾವ್‌ ಸಿಂಧ್ಯಾ ಸೇರಿದಂತೆ ಇನ್ನಿತರರು ಸಂತಾಪ ಸೂಚಿಸಿದ್ದಾರೆ.

ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ

ಆಹಾರ ತ್ಯಾಜ್ಯ ಸದ್ಬಳಕೆಗೆ ಮುಂದಾಗಿರುವ ನಗರಸಭೆ

ಭದ್ರಾವತಿ ಹೊಸಮನೆ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಬಳಸಿಕೊಳ್ಳಲು ಸಿದ್ದತೆಗಳನ್ನು ಕೈಗೊಂಡಿರುವುದು.

    * ಅನಂತಕುಮಾರ್‌
    ಭದ್ರಾವತಿ : ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್‌ಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಮುಂದಾಗುತ್ತಿದೆ. ನಗರದಲ್ಲಿ ೨ ಇಂದಿರಾ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದಾಗಿ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಇದೀಗ ಒಂದು ಇಂದಿರಾ ಕ್ಯಾಂಟಿನ್‌ನಲ್ಲಿ ಪರಿಸರ ಸ್ನೇಹಿ ಅನಿಲ(ಬಯೋ ಗ್ಯಾಸ್‌) ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ.
    ೩೫ ವಾರ್ಡ್‌ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಮಧ್ಯಮ ಹಾಗು ಬಡ ವರ್ಗದವರು ಹೆಚ್ಚಿನವರಾಗಿದ್ದಾರೆ. ಕೇವಲ ಎರಡು ಇಂದಿರಾ ಕ್ಯಾಂಟಿನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ನಗರದ ಖಾಸಗಿ ಬಸ್‌ ನಿಲ್ದಾಣದ ಬಳಿ  ಹಾಗು ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗಳಿಗೆ ಪ್ರತಿ ದಿನ ೧ ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಬರುವ ನಿರೀಕ್ಷೆ ಇದೆ.
    ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಆದ್ಯತೆ ನೀಡದ ಹಿನ್ನಲೆಯಲ್ಲಿ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ಸಹ ಕಡಿಮೆ ಇತ್ತು. ಅಲ್ಲದೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರ ಇಂದಿರಾ ಕ್ಯಾಂಟಿನ್‌ ಅಭಿವೃದ್ಧಿಗೆ ಮುಂದಾಗಿದ್ದು, ಇದಕ್ಕೆ ಪೂರಕವೆಂಬಂತೆ  ಸಂತೆ ಮೈದಾನದಲ್ಲಿ ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.



    ಆಹಾರ ತ್ಯಾಜ್ಯ ಬಳಸಿ ಅನಿಲ ಉತ್ಪಾದನೆ :
    ಇದೀಗ ಸಾಮಾನ್ಯ ಅಡುಗೆ ಅನಿಲ ಬಳಸಿ ಆಹಾರ ತಯಾರಿಸಲಾಗುತ್ತಿದ್ದು, ಹೆಚ್ಚಿನ ಹಣ ವ್ಯಯವಾಗುತ್ತಿದೆ. ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಂಡಲ್ಲಿ ಹೆಚ್ಚಿನ ಉಳಿತಾಯವಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಪೂರೈಕೆ ಮಾಡಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
    ಗ್ರೀನೆರಿಯಾ ರಿನ್ಯೂವಬಲ್‌ ಟೆಕ್ನೋಲಜಿಸ್‌ ಪ್ರೈವೇಟ್‌ ಲಿಮಿಟೆಡ್‌  ಗುತ್ತಿಗೆ ಪಡೆದುಕೊಂಡಿದ್ದು, ಈಗಾಗಲೇ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.
    ಆಹಾರ ತ್ಯಾಜ್ಯ ಬಳಸಿ ಪರಿಸರ ಸ್ನೇಹಿ ಅನಿಲ ಉತ್ಪಾದಿಸುವ ಉದ್ದೇಶ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ನಗರದ ಹೋಟೆಲ್‌ಗಳಲ್ಲಿ ಹಾಗು ಕಲ್ಯಾಣ ಮಂಟಪಗಳಲ್ಲಿ ಲಭ್ಯವಾಗುವ ಆಹಾರ ತ್ಯಾಜ್ಯ ಸಂಗ್ರಹಿಸಿ ಪೂರೈಸಬೇಕಾಗಿದೆ. ಒಂದೆಡೆ ನಗರಸಭೆಗೆ ಸ್ವಚ್ಛತೆ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ಮತ್ತೊಂದೆಡೆ ದಿನ ಕಳೆದಂತೆ ವಿಷವಾಗಿ ಮಾರ್ಪಾಡಾಗುವ ಆಹಾರ ತ್ಯಾಜ್ಯ ಅನಿಲವಾಗಿ ಪರಿವರ್ತನೆಗೊಂಡು ಪರಿಸರ ಸ್ನೇಹಿಯಾಗಲಿದೆ.  
    ನಗರಸಭೆ ವತಿಯಿಂದ ಈಗಾಗಲೇ ಒಣ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಕಡಿಮೆ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಉಳಿದಂತೆ ಆರ್‌ಆರ್‌ಆರ್‌(ಪುನರ್‌ ಬಳಸಬಹುದಾದ ತ್ಯಾಜ್ಯ) ಘಟಕಗಳನ್ನು ತೆರೆಯಲಾಗಿದ್ದು, ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಹಂತ ಹಂತವಾಗಿ ಸುಧಾರಣೆಗಳನ್ನು ಕಂಡು ಕೊಳ್ಳಲಾಗುತ್ತಿದೆ.
 
ಪರಿಸರ ಸ್ನೇಹಿ ಅನಿಲ ಉತ್ಪಾದನೆಗೆ ನಗರಸಭೆ ವತಿಯಿಂದ ಗುತ್ತಿಗೆ ನೀಡಲಾಗಿದ್ದು, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ ಬಳಿ ಹೆಚ್ಚಿನ ಸ್ಥಳವಕಾಶವಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಅನಿಲ ಉತ್ಪಾದನೆ ಇನ್ನೂ ಕಾರ್ಯಾರಂಭಗೊಂಡಿಲ್ಲ. ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದ್ದು, ಇದರಿಂದ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಅನುಕೂಲವಾಗಲಿದೆ.
          -ಎಚ್.ಎಂ ಮನುಕುಮಾರ್‌, ಪೌರಾಯುಕ್ತರು,  ನಗರಸಭೆ, ಭದ್ರಾವತಿ



Saturday, July 22, 2023

೨೩ರಂದು ಸಾಹಿತಿಗಳೊಂದಿಗೆ ಒಂದು ಸಂಜೆ ಆನ್‌ಲೈನ್‌ ಕಾರ್ಯಕ್ರಮ

ಕುಟುಂಬ ವೈದ್ಯ ಡಾ. ಕೃಷ್ಣ ಎಸ್. ಭಟ್‌
    ಭದ್ರಾವತಿ, ಜು. ೨೨: ಭಾರತೀಯ ವೈದ್ಯಕೀಯ ಸಂಘ, ಕರ್ನಾಟಕ ಶಾಖೆ, ಕನ್ನಡ ವೈದ್ಯ ಬರಹಗಾರರ ಸಮಿತಿ ಮತ್ತು ವಾಸವಿ ಸಾಹಿತ್ಯ ಕಲಾ ವೇದಿಕೆ ವತಿಯಿಂದ ಜು.೨೩ರ ಭಾನುವಾರ ಸಂಜೆ ೬.೩೦ರಿಂದ ೭.೩೦ರವರೆಗೆ ಸಾಹಿತಿಗಳೊಂದಿಗೆ ಒಂದು ಸಂಜೆ ೧೦೧ನೇ ಆನ್‌ಲೈನ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ನಗರದ ಕುಟುಂಬ ವೈದ್ಯ ಡಾ. ಕೃಷ್ಣ ಎಸ್. ಭಟ್‌ ಆರೋಗ್ಯದ ವಿವಿಧ ಆಯಾಮಗಳು ಕುರಿತು ಮಾಹಿತಿ ನೀಡಲಿದ್ದಾರೆ. ಭಾ.ವೈ.ಸಂ ರಾಜ್ಯಾಧ್ಯಕ್ಷ ಡಾ. ಶಿವಕುಮಾರ್‌ ಲಕ್ಕೋಳ್‌, ಕಾರ್ಯದರ್ಶಿ ಡಾ.ಬಿ.ಪಿ ಕರುಣಾಕರ, ಕನ್ನಡ ವೈದ್ಯ ಬರಹಗಾರರ ಸಮಿತಿ ಅಧ್ಯಕ್ಷ ಡಾ. ಶಿವಾನಂದ ಕುಬಸದ, ವಾಸವಿ ಸಾಹಿತ್ಯ ಕಲಾ ವೇದಿಕೆಯ ಡಾ. ವೀಣಾ ಎನ್‌ ಸುಳ್ಯ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದ್ದಾರೆ. ಆಸಕ್ತರು ಝೂಮ್‌ ಲಿಂಕ್‌ https://bit.ly/2UbE22Z ,  ಮೀಟಿಂಗ್‌ ಐಡಿ : ೫೯೪೦೭೬೫೭೭೪,  ಪಾಸ್‌ ಕೋಡ್‌ : imakab ಸಂಪರ್ಕಿಸಬಹುದಾಗಿದೆ.

ಬಿಎಸ್‌ವೈ ಗೌರವ ಡಾಕ್ಟರೇಟ್‌ : ಅಭಿನಂದಿಸಿ ಆಶೀರ್ವದಿಸಿದ ಶ್ರೀಗಳು

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಆಶೀರ್ವದಿಸಿದ್ದಾರೆ.
    ಭದ್ರಾವತಿ, ಜು. ೨೨ : ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರಿಗೆ ಗೌರವ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿರುವ ಹಿನ್ನಲೆಯಲ್ಲಿ ಜಿಲ್ಲೆಯ ಕೆಲವು ಮಠಾಧೀಶರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಆಶೀರ್ವದಿಸಿದ್ದಾರೆ.
    ಬಿಳಿಕಿ ಹಿರೇಮಠದ ಶ್ರೀರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಶಿಲಾಮಠದ ಶ್ರೀ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗು  ಶಂಕರ ದೇವರ ಮಠದ ಸ್ವಾಮೀಜಿಯವರು ಯಡಿಯೂರಪ್ಪನವರನ್ನು ಭೇಟಿ ಮಾಡಿ ಅಭಿನಂದಿಸುವ ಮೂಲಕ ಅಶೀರ್ವದಿಸಿದರು.  
    ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆಯಿಂದ  ಶಿವಮೊಗ್ಗ ವೀರಶೈವ ಸಾಂಸ್ಕೃತಿಕ  ಸಭಾಭವನದಲ್ಲಿ  ಜು. 26ರ  ಬುಧವಾರ ಬೆಳಗ್ಗೆ 10.30 ಕ್ಕೆ  ಹಮ್ಮಿಕೊಳ್ಳಲಾಗಿರುವ  ಸಮಾರಂಭಕ್ಕೆ ಆಮಂತ್ರಿಸಲಾಯಿತು.

Friday, July 21, 2023

ರೌಡಿಶೀಟರ್‌ ಮುಜಾಯಿದ್ದೀನ್‌ ಹತ್ಯೆ : ೫ ಮಂದಿ ಪೊಲೀಸರ ವಶಕ್ಕೆ

ಭದ್ರಾವತಿ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್‌.
    ಭದ್ರಾವತಿ, ಜು. ೨೨ : ರೌಡಿಶೀಟರ್‌ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್(32) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ೫ ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
    ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಜು.೨೦ರ ಮಧ್ಯರಾತ್ರಿ ಮನೆಯ ಮುಂಭಾಗ ಈತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.  ಘಟನಾ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ, ಹೆಚ್ಚುವರಿ ರಕ್ಷಣಾಧಿಕಾರಿ, ಹಿರಿಯ ಪೊಲೀಸ್‌ ಉಪಾಧೀಕ್ಷಕ ಸೇರಿದಂತೆ ಇನ್ನಿತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
    ಈ ಸಂಬಂಧ ಪೇಪರ್‌ಟೌನ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಘಟನೆ ನಡೆದ ೨೪ ಗಂಟೆಯೊಳಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ೫ ಜನರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮುಜ್ಜು ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

ಕುವೆಂಪು ವೈಚಾರಿಕ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಡಾ. ಟಿ.ಸಿ ಭಾರತಿ

ಭದ್ರಾವತಿ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ  ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ  ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರು, ಗಣ್ಯರು, ವಿದ್ಯಾರ್ಥಿಗಳು ಉದ್ಘಾಟಿಸಿದರು. 

    ಭದ್ರಾವತಿ, ಜು. ೨೧:  ವಿಶ್ವ ಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರು  ಪ್ರತಿಪಾದಿಸಿದ ವೈಚಾರಿಕ ತತ್ವಗಳನ್ನು ನಾವೆಲ್ಲರೂ ನಮ್ಮ ಬದುಕಿನಲ್ಲಿಅಳವಡಿಸಿಕೊಳ್ಳುವಂತಾಗಬೇಕೆಂದು ನ್ಯಾಮತಿ  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕಿ ಡಾ. ಟಿ.ಸಿ ಭಾರತಿ ಹೇಳಿದರು.  
    ಅವರು ಶುಕ್ರವಾರ ಹೊಸಮನೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂ ಎಸಿ ಸಹಯೋಗದಲ್ಲಿ  ಹಮ್ಮಿಕೊಳ್ಳಲಾಗಿದ್ದ ʻಕುವೆಂಪು ನಾಟಕಗಳು ಮತ್ತು ಸಾಮಾಜಿಕ ಶ್ರೇಣಿಕರಣ ವ್ಯವಸ್ಥೆʼ  ವಿಷಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಕುವೆಂಪು ಅವರ ವೈಚಾರಿಕ ತತ್ವಗಳು ಎಂದಿಗೂ ಪ್ರಸ್ತುತವಾಗಿವೆ. ಪ್ರತಿಯೊಬ್ಬರು ಇದರ  ಕುರಿತು ಹೆಚ್ಚಿನ ಅರಿವು ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಹೆಚ್ಚಿನ ಸಹಕಾರಿಯಾಗಿದೆ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಮಂಜುನಾಥ್ ಸಕಲೇಶ್ ಮಾತನಾಡಿ, ಕುವೆಂಪು ಸಾಹಿತ್ಯ ಮತ್ತು ವಿಚಾರಗಳು ಹಿಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿರುವುದರ ಕುರಿತು ವಿವರಿಸಿದರು.
  ಕನ್ನಡ ವಿಭಾಗದ ಮುಖ್ಯಸ್ಥ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.  ಕುಮಾರ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.   ಐಕ್ಯೂಎಸಿ ಸಂಚಾಲಕ ಡಾ. ಟಿ. ಪ್ರಸನ್ನ ಉಪಸ್ಥಿತರಿದ್ದರು.
    ವರ್ಷಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಶಾರದ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಶ್ವತ್  ವಂದಿಸಿದರು. ಸುಮಾರು 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.  

ರೌಡಿಶೀಟರ್‌ ಮುಜ್ಜು ಹತ್ಯೆ

ಭದ್ರಾವತಿ ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ಹತ್ಯೆಯಾದ ರೌಡಿಶೀಟರ್‌ ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್‌. 

    ಭದ್ರಾವತಿ, ಜು. ೨೧ : ನಗರಸಭೆ ವ್ಯಾಪ್ತಿಯ ಬೊಮ್ಮನಕಟ್ಟೆಯಲ್ಲಿ ರೌಡಿಶೀಟರ್‌ ಓರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 

ಮುಜ್ಜು ಅಲಿಯಾಸ್‌ ಮುಜಾಯಿದ್ದೀನ್(32)  ಹತ್ಯೆಯಾಗಿದ್ದು, ಈತನ ವಿರುದ್ಧ ಕೊಲೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು.   ಈತನಿಗೆ ಇಬ್ಬರು ಪತ್ನಿಯರಿದ್ದು, ಗುರುವಾರ ಮಧ್ಯ ರಾತ್ರಿ ಈತನ ಎರಡನೇ ಪತ್ನಿ ಮನೆ ಮುಂಭಾಗದಲ್ಲಿಯೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ. 

ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್‌, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್‌ಕುಮಾರ್‌ ಭೂಮರೆಡ್ಡಿ, ಹಿರಿಯ ಪೊಲೀಸ್‌ ಅಧೀಕ್ಷಕ ಜಿತೇಂದ್ರಕುಮಾರ್‌ ದಯಾಮ ಹಾಗು ಪೇಪರ್‌ಟೌನ್‌ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಶಿವಮೊಗ್ಗ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತದೇಹದ ಶವ ಪರೀಕ್ಷೆ ನಡೆಸಲಾಗಿದ್ದು, ಪೇಪರ್‌ಟೌನ್‌ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಹತ್ಯೆಗೊಳಗಾಗಿರುವ ಮುಜಾಯಿದ್ದೀನ್‌ ಸಹೋದರ(ತಮ್ಮ) ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈ ಗೊಂಡಿದ್ದಾರೆ. ಹತ್ಯೆಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.