ಆಹಾರ ತ್ಯಾಜ್ಯ ಸದ್ಬಳಕೆಗೆ ಮುಂದಾಗಿರುವ ನಗರಸಭೆ
![](https://blogger.googleusercontent.com/img/a/AVvXsEici8K1SvPAPjzXN7KbueNtM98k_X0sgMXHQmRFfy526CEtJqetx41X9N1jzvlwOvcPJNMQjn0ycjvH6un5g75L4cGngpu4uMeRAUiDUv9qvR6ozC77nZjKan7cUKx3IHZIL1ItWDxaqfeNcm-r0SOAtjCgNVGCFgtxvWbUqnZL5KbrAjHHD-AWHTTnsQQ6=w400-h235-rw)
ಭದ್ರಾವತಿ ಹೊಸಮನೆ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಬಳಸಿಕೊಳ್ಳಲು ಸಿದ್ದತೆಗಳನ್ನು ಕೈಗೊಂಡಿರುವುದು. * ಅನಂತಕುಮಾರ್
ಭದ್ರಾವತಿ : ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್‌ಗಳನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಹೆಚ್ಚಿನ ಗುಣಮಟ್ಟದ ಸೇವೆ ನೀಡಲು ಮುಂದಾಗುತ್ತಿದೆ. ನಗರದಲ್ಲಿ ೨ ಇಂದಿರಾ ಕ್ಯಾಂಟಿನ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇದರಿಂದಾಗಿ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಇದೀಗ ಒಂದು ಇಂದಿರಾ ಕ್ಯಾಂಟಿನ್‌ನಲ್ಲಿ ಪರಿಸರ ಸ್ನೇಹಿ ಅನಿಲ(ಬಯೋ ಗ್ಯಾಸ್) ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮುಂದಾಗಿದೆ.
೩೫ ವಾರ್ಡ್‌ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಮಧ್ಯಮ ಹಾಗು ಬಡ ವರ್ಗದವರು ಹೆಚ್ಚಿನವರಾಗಿದ್ದಾರೆ. ಕೇವಲ ಎರಡು ಇಂದಿರಾ ಕ್ಯಾಂಟಿನ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ನಗರದ ಖಾಸಗಿ ಬಸ್ ನಿಲ್ದಾಣದ ಬಳಿ ಹಾಗು ಹೊಸಮನೆ ಮುಖ್ಯರಸ್ತೆ, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗಳಿಗೆ ಪ್ರತಿ ದಿನ ೧ ಸಾವಿರಕ್ಕೂ ಹೆಚ್ಚು ಮಂದಿ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಂದಿ ಬರುವ ನಿರೀಕ್ಷೆ ಇದೆ.
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಆದ್ಯತೆ ನೀಡದ ಹಿನ್ನಲೆಯಲ್ಲಿ ಕ್ಯಾಂಟಿನ್‌ಗೆ ಬರುವವರ ಸಂಖ್ಯೆ ಸಹ ಕಡಿಮೆ ಇತ್ತು. ಅಲ್ಲದೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟಿನ್ ಅಭಿವೃದ್ಧಿಗೆ ಮುಂದಾಗಿದ್ದು, ಇದಕ್ಕೆ ಪೂರಕವೆಂಬಂತೆ ಸಂತೆ ಮೈದಾನದಲ್ಲಿ ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಳ್ಳಲು ಮುಂದಾಗಿದೆ.
ಆಹಾರ ತ್ಯಾಜ್ಯ ಬಳಸಿ ಅನಿಲ ಉತ್ಪಾದನೆ :
ಇದೀಗ ಸಾಮಾನ್ಯ ಅಡುಗೆ ಅನಿಲ ಬಳಸಿ ಆಹಾರ ತಯಾರಿಸಲಾಗುತ್ತಿದ್ದು, ಹೆಚ್ಚಿನ ಹಣ ವ್ಯಯವಾಗುತ್ತಿದೆ. ಪರಿಸರ ಸ್ನೇಹಿ ಅನಿಲ ಬಳಕೆ ಮಾಡಿಕೊಂಡಲ್ಲಿ ಹೆಚ್ಚಿನ ಉಳಿತಾಯವಾಗಲಿದೆ. ಈ ಹಿನ್ನಲೆಯಲ್ಲಿ ನಗರಸಭೆ ವತಿಯಿಂದ ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್‌ಗೆ ಪರಿಸರ ಸ್ನೇಹಿ ಅನಿಲ ಪೂರೈಕೆ ಮಾಡಲು ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ಗ್ರೀನೆರಿಯಾ ರಿನ್ಯೂವಬಲ್ ಟೆಕ್ನೋಲಜಿಸ್ ಪ್ರೈವೇಟ್ ಲಿಮಿಟೆಡ್ ಗುತ್ತಿಗೆ ಪಡೆದುಕೊಂಡಿದ್ದು, ಈಗಾಗಲೇ ಉತ್ಪಾದನೆಗೆ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾರಂಭಗೊಳ್ಳುವ ನಿರೀಕ್ಷೆ ಇದೆ.
ಆಹಾರ ತ್ಯಾಜ್ಯ ಬಳಸಿ ಪರಿಸರ ಸ್ನೇಹಿ ಅನಿಲ ಉತ್ಪಾದಿಸುವ ಉದ್ದೇಶ ಹೊಂದಲಾಗಿದ್ದು, ಇದಕ್ಕೆ ತಕ್ಕಂತೆ ನಗರದ ಹೋಟೆಲ್‌ಗಳಲ್ಲಿ ಹಾಗು ಕಲ್ಯಾಣ ಮಂಟಪಗಳಲ್ಲಿ ಲಭ್ಯವಾಗುವ ಆಹಾರ ತ್ಯಾಜ್ಯ ಸಂಗ್ರಹಿಸಿ ಪೂರೈಸಬೇಕಾಗಿದೆ. ಒಂದೆಡೆ ನಗರಸಭೆಗೆ ಸ್ವಚ್ಛತೆ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಲಿದ್ದು, ಮತ್ತೊಂದೆಡೆ ದಿನ ಕಳೆದಂತೆ ವಿಷವಾಗಿ ಮಾರ್ಪಾಡಾಗುವ ಆಹಾರ ತ್ಯಾಜ್ಯ ಅನಿಲವಾಗಿ ಪರಿವರ್ತನೆಗೊಂಡು ಪರಿಸರ ಸ್ನೇಹಿಯಾಗಲಿದೆ.
ನಗರಸಭೆ ವತಿಯಿಂದ ಈಗಾಗಲೇ ಒಣ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸಲಾಗುತ್ತಿದ್ದು, ಕಡಿಮೆ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ. ಉಳಿದಂತೆ ಆರ್‌ಆರ್‌ಆರ್(ಪುನರ್ ಬಳಸಬಹುದಾದ ತ್ಯಾಜ್ಯ) ಘಟಕಗಳನ್ನು ತೆರೆಯಲಾಗಿದ್ದು, ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಒಟ್ಟಾರೆ ನಗರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಯಲ್ಲಿ ಹಂತ ಹಂತವಾಗಿ ಸುಧಾರಣೆಗಳನ್ನು ಕಂಡು ಕೊಳ್ಳಲಾಗುತ್ತಿದೆ.
ಪರಿಸರ ಸ್ನೇಹಿ ಅನಿಲ ಉತ್ಪಾದನೆಗೆ ನಗರಸಭೆ ವತಿಯಿಂದ ಗುತ್ತಿಗೆ ನೀಡಲಾಗಿದ್ದು, ಸಂತೆ ಮೈದಾನದಲ್ಲಿರುವ ಇಂದಿರಾ ಕ್ಯಾಂಟಿನ್ ಬಳಿ ಹೆಚ್ಚಿನ ಸ್ಥಳವಕಾಶವಿದೆ. ಈ ಹಿನ್ನಲೆಯಲ್ಲಿ ಇಲ್ಲಿ ಮಾತ್ರ ಅವಕಾಶ ನೀಡಲಾಗಿದೆ. ಅನಿಲ ಉತ್ಪಾದನೆ ಇನ್ನೂ ಕಾರ್ಯಾರಂಭಗೊಂಡಿಲ್ಲ. ಶೀಘ್ರದಲ್ಲಿಯೇ ಕಾರ್ಯಾರಂಭಗೊಳ್ಳಲಿದ್ದು, ಇದರಿಂದ ಇಂದಿರಾ ಕ್ಯಾಂಟಿನ್‌ಗೆ ಹೆಚ್ಚಿನ ಅನುಕೂಲವಾಗಲಿದೆ.
-ಎಚ್.ಎಂ ಮನುಕುಮಾರ್, ಪೌರಾಯುಕ್ತರು, ನಗರಸಭೆ, ಭದ್ರಾವತಿ