ಜಿಲ್ಲಾ ಜನಜಾಗೃತಿ ವೇದಿಕೆ ಹೋರಾಟದ ಎಚ್ಚರಿಕೆ
ಭದ್ರಾವತಿ, ಆ. ೧೩: ವಿದ್ಯಾರ್ಥಿನಿ ಸೌಜನ್ಯ ಅಸಹಜ ಸಾವಿನ ಪ್ರಕರಣವನ್ನು ಕೆಲವರು ದಾಳವಾಗಿಟ್ಟುಕೊಂಡು ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಧರ್ಮವೇ ಬದುಕೆಂದು ಜೀವನ ಸಾಗಿಸುತ್ತಿರುವ ಧರ್ಮಾಧಿಕಾರಿಗಳ ಕುರಿತು ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಇದನ್ನು ಜಿಲ್ಲಾ ಜನಜಾಗೃತಿ ವೇದಿಕೆ ಖಂಡಿಸುತ್ತದೆ. ಅಲ್ಲದೆ ಇದೆ ರೀತಿ ಮುಂದುವರೆದ್ದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ವೇದಿಕೆ ಸದಸ್ಯರು ಎಚ್ಚರಿಸಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಎಂದಾಗ ಭಕ್ತರ ಮನೋಮಂದಿರದಲ್ಲಿ ಶ್ರೀ ಮಂಜುನಾಥಸ್ವಾಮಿ ಪ್ರತ್ಯಕ್ಷನಾಗುತ್ತಾನೆ. ಅಂತಹ ಸ್ವಾಮಿಯ ಸನ್ನಿಧಿಯಲ್ಲಿ ಇರುವ ಧರ್ಮಾಧಿಕಾರಿಗಳು ಅಭಯ, ಅನ್ನ, ಅಕ್ಷರ, ಆರೋಗ್ಯ ಎಂಬ ಚರ್ತುದಾನಗಳಿಂದ ಜನರನ್ನು ಹಾರೈಸಿದ್ದಾರೆ. ಪ್ರಾಚೀನ ಪರಂಪರೆಯಿಂದಲೂ ಪುಣ್ಯಕಾರ್ಯಗಳೊಂದಿಗೆ ನೊಂದ ಭಕ್ತರ ಮನಸ್ಸುಗಳ ಕಣ್ಣೀರು ಒರೆಸುವ ಅವರ ಕಾಯಕ ನಿಜವಾಗಿಯೂ ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.
ಪುಣ್ಯ ಕಾರ್ಯಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ಕೈಗೊಳ್ಳುತ್ತಿರುವ ಧರ್ಮಾಧಿಕಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವುದನ್ನು ದುಷ್ಟಶಕ್ತಿಗಳು ತಕ್ಷಣ ನಿಲ್ಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವೇದಿಕೆ ಸದಸ್ಯರಾದ ಜಿ.ಆನಂದ್ ಕುಮಾರ್, ಆರ್. ಕರುಣಾಮೂರ್ತಿ, ಜಯರಾಮ್ ಗೋಂದಿ ಮತ್ತು ಪಾರ್ವತಮ್ಮ, ಸೇರಿದಂತೆ ಇನ್ನಿತರರು ಎಚ್ಚರಿಸಿದ್ದಾರೆ.