Sunday, September 17, 2023

ಸೇವಾ ಪಾಕ್ಷಿಕ : ಬಿಜೆಪಿ ಯುವ ಮೋರ್ಚಾದಿಂದ ರಕ್ತದಾನ ಶಿಬಿರ

 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ಭದ್ರಾವತಿ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 73ನೇ ವರ್ಷದ ಜನ್ಮದಿನ ಸೇವಾ ಪಾಕ್ಷಿಕ ಪ್ರಯುಕ್ತ ನಗರದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಭಾನುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಶಿಬಿರ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ರಕ್ತದಾನ ಮಹಾದಾನವಾಗಿದ್ದು, ರಕ್ತದಾನ ದಾನ ಮಾಡುವ ಮೂಲಕ ಸೇವಾಕಾರ್ಯ ನಡೆಸಿದ ದಾನಿಗಳಿಗೆ ಅಭಿನಂದಿಸಿದರು.

    ಯುವ ಮೋರ್ಚಾ ಪ್ರಮುಖರಾದ ಗೋಕುಲ ಕೃಷ್ಣ, ಧನುಷ್ ಬೋಸ್ಲೆ, ಹೇಮಂತ್, ಪ್ರದೀಪ್ ಗೌಂಡರ್ ಹಾಗು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು.

ಗೌರಿ-ಗಣೇಶ ಹಬ್ಬದ ಆಚರಣೆಗೆ ಭರದ ಸಿದ್ಧತೆ

 ಕಲಾವಿದರಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ

ಭದ್ರಾವತಿ ಹಳೇನಗರದ ಹಿರಿಯ ಕಲಾವಿದ ಜಯರಾಂ ಅವರು ಈ ಬಾರಿ ಹಾಲಪ್ಪ ವೃತ್ತದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿಗೆ ಅಂತಿಮ ಸ್ಪರ್ಶ ನೀಡುತ್ತಿರುವುದು.

ಭದ್ರಾವತಿ: ನಗರದೆಲ್ಲೆಡೆ ಗೌರಿ-ಗಣೇಶ ಹಬ್ಬ ಆಚರಣೆಗೆ ಭರದ ಸಿದ್ದತೆಗಳು ನಡೆಯುತ್ತಿದ್ದು, ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಈ ಬಾರಿ ಸಹ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಈ ನಡುವೆ ಗಣೇಶ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದು, ಈಗಾಗಲೇ ಆಕರ್ಷಕವಾದ ವಿಭಿನ್ನ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ದಗೊಂಡಿವೆ.

ಹಳೇನಗರದ ಕುಂಬಾರಬೀದಿ ಗಣೇಶಮೂರ್ತಿ ತಯಾರಿಕೆಯ ಪ್ರಮುಖ ಸ್ಥಳವಾಗಿದ್ದು, ಈ ಬೀದಿಯಲ್ಲಿ ನೂರಾರು ಗಣೇಶಮೂರ್ತಿಗಳು ಪ್ರತಿಷ್ಠಾಪನೆಗಾಗಿ ತಯಾರುಗೊಂಡು ಕಂಗೊಳಿಸುತ್ತಿವೆ.



ಭದ್ರಾವತಿ ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ನಗರದ ಬಿ.ಎಚ್ ರಸ್ತೆ ಹಾಲಪ್ಪ ವೃತ್ತ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಪ್ರತಿಷ್ಠಾಪನೆಗೊಳ್ಳಲಿರುವ ಗಣೇಶ ಮೂರ್ತಿ ಹಿರಿಯ ಕಲಾವಿದ ಜಯರಾಂ ತಯಾರಿಸಿದ್ದು, ಮೂರ್ತಿ 9 ಅಡಿ ಎತ್ತರವಿದ್ದು, ಆಕರ್ಷಕವಾಗಿದೆ. ಈ ಬಾರಿ ಜಯರಾಂ ಅವರು ಆಕರ್ಷಕವಾದ ಸುಮಾರು 20 ಮೂರ್ತಿಗಳನ್ನು ತಯಾರಿಸಿದ್ದಾರೆ. ಇವರು ಸುಮಾರು 30 ವರ್ಷಗಳಿಗೂ ಅಧಿಕ ಕಾಲದಿಂದ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದು, ಕಲ್ಲಿನ ಮೂರ್ತಿ ಹಾಗು ಸಿಮೆಂಟ್ ಮೂರ್ತಿಗಳ ತಯಾರಿಕೆಯಲ್ಲೂ ಪರಿಣಿತರಾಗಿದ್ದಾರೆ.

    ಹೊಸಸೇತುವೆ ರಸ್ತೆ ಶ್ರೀ ಬನಶಂಕರಿ ದೇವಸ್ಥಾನದ ಬಳಿ ಕಲಾವಿದ ಸೋಮಶೇಖರ್ ಶ್ರೀನಿಧಿ ಕಲಾಕೇಂದ್ರದ ಹೆಸರಿನಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

    ಇವರ ಕೈಚಳಕದಲ್ಲಿ ಈ ಬಾರಿ 16 ಮೂರ್ತಿಗಳು ತಯಾರುಗೊಂಡಿವೆ. ಇವುಗಳಲ್ಲಿ ಕೃಷ್ಣ-ರಾಧೆ ಗಣಪ, ಈಶ್ವರ ಗಣಪ, ಆಂಜನೇಯ ಗಣಪ ವಿಶೇಷವಾಗಿ ಗಮನಸೆಳೆದಿವೆ.


ಭದ್ರಾವತಿ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆ ಹಿನ್ನಲೆಯಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

    ಮಹಾದ್ವಾರಗಳ ನಿರ್ಮಾಣ :

    ನಗರದ ಪ್ರಮುಖ ವಿನಾಯಕ ಸೇವಾ ಸಮಿತಿಗಳಲ್ಲಿ ಒಂದಾಗಿರುವ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಆಚರಣೆಗೆ ಭರದ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಅಂಬೇಡ್ಕರ್ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಆಕರ್ಷಕವಾದ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಸೆ.26ರಂದು ಬೃಹತ್ ರಾಜಬೀದಿ ಉತ್ಸವ ನಡೆಯಲಿದೆ.

Saturday, September 16, 2023

ಸೆ.20ರಂದು ಮ್ಯಾಮ್ಕೋಸ್ ವಾರ್ಷಿಕ ಮಹಾಸಭೆ


    ಭದ್ರಾವತಿ: ಮಲೆನಾಡು ಅಡಕೆ ಮಾರಾಟದ ಸಹಕಾರ ಸಂಘದ 83ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.20ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದ ಸಂಘದ ಕೇಂದ್ರ ಕಛೇರಿ ಆವರಣದಲ್ಲಿ ನಡೆಯಲಿದೆ.

    ಸಂಘದ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ಬೈಲಾ ತಿದ್ದುಪಡಿ ಸೇರಿದಂತೆ ಹಲವು ವಿಷಯಗಳು ಸಭೆಯಲ್ಲಿ ಚರ್ಚಿಸಲಾಗುವುದು. ಸರ್ವ ಸದಸ್ಯರು ತಪ್ಪದೇ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವೆ ಕೋರಿದ್ದಾರೆ.

ಅ.1ರಂದು ಸರ್ವ ಸದಸ್ಯರ ವಿಶೇಷ ಸಭೆ

ಬಿ. ಸಿದ್ದಬಸಪ್ಪ


    ಭದ್ರಾವತಿ : ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವ ಸದಸ್ಯರ ವಿಶೇಷ ಸಭೆ ಅ.1ರಂದು ಕೊಪ್ಪಳದಲ್ಲಿ ನಡೆಯಲಿದ್ದು, ಸಂಘದ ತಾಲೂಕಿನ ಸದಸ್ಯರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೆ ಸಹಕರಿಸುವಂತೆ ಸಂಘದ ತಾಲೂಕು ಅಧ್ಯಕ್ಷ ಬಿ. ಸಿದ್ದಬಸಪ್ಪ ಕೋರಿದ್ದಾರೆ.

    ಸಂಘದ ಬೈಲಾ ಉಪವಿಧಿಗಳು-2022ರ ಕೆಲವು ಉಪವಿಧಿಗಳಿಗೆ ತಿದ್ದುಪಡಿ ತರಲು ಸಂಘದ ಮಹಾಸಭೆಯನ್ನು ವಾಸ್ತವ/ವರ್ಚುವಲ್ ವಿಧಾನದ ಮೂಲಕ ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿರವರ ಅಧ್ಯಕ್ಷತೆಯಲ್ಲಿ ಅ.1ರಂದು ಕರೆಯಲಾಗಿದೆ. ಅಂದು ಬೆಳಿಗ್ಗೆ 11 ಗಂಟೆಗೆ ಕೊಪ್ಪಳದ ಹಿರೇಸಿಂದೋಗಿ ರಸ್ತೆಯ ಮಹಾವೀರ ಕಲ್ಯಾಣ ಮಂಟಪದಲ್ಲಿ ಸಭೆ ನಡೆಯಲಿದ್ದು, ತಾಲೂಕಿನ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.

    ವರ್ಚವಲ್ ವೇದಿಕೆ ಮೂಲಕ ಭಾಗವಹಿಸಲು ಸದಸ್ಯರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, https:/bit.ly/ksgeasplgbm ಲಿಂಕ್ ಅನ್ನು ಬಳಸಿ ಸಭೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಸಂಘದ ವ್ಯವಸ್ಥಾಪಕ ರಾಜು. ಆರ್(ಕುಮಾರ್) ಮೊ: 9481406239 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಬಿ. ಸಿದ್ದಬಸಪ್ಪ ತಿಳಿಸಿದ್ದಾರೆ.

ಡಿಎಸ್ಎಸ್ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನ

ಭದ್ರಾವತಿಯಲ್ಲಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ಭದ್ರಾವತಿ: ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ)ವತಿಯಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ನಗರದ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಜಾಪ್ರಭುತ್ವ ದಿನ ಆಚರಿಸಲಾಯಿತು.

    ಸಮಿತಿಯ ತಾಲೂಕು ಪ್ರಧಾನ ಸಂಚಾಲಕ ಎಸ್. ಪುಟ್ಟರಾಜು, ಮುಖಂಡರಾದ ಎಸ್.ಎನ್.ಶಿವಪ್ಪ, ಟಿ.ರುದ್ರೇಶ್, ಶಿವಪಾಟೀಲ್, ನವೀನ್ ಕುಮಾರ್, ನರಸಿಂಹ, ಎಸ್. ಜಮೀರ್ ಉಪಸ್ಥಿತರಿದ್ದರು.


ಸೆ.19ರಂದು ಸರ್ವ ಸದಸ್ಯರ ಸಭೆ


    ಭದ್ರಾವತಿ : ನಗರದ ಬಿ.ಎಚ್ ರಸ್ತೆ, ಟವನ್ ಭಾವಸಾರ ಕ್ಷತ್ರಿಯ ಕೋ-ಆಪರೇಟಿವ್ ಸೊಸೈಟಿ 91ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸೆ.19ರ ಮಂಗಳವಾರ ನಡೆಯಲಿದೆ.

    ತರೀಕೆರೆ ರಸ್ತೆಯ ಶ್ರೀ ಪಾಂಡುರಂಗ ಮಂದಿರದಲ್ಲಿ ಬೆಳಿಗ್ಗೆ 10 ಗಂಟೆಗೆ ಸಭೆ ನಡೆಯಲಿದ್ದು, ಸೊಸೈಟಿ ಅಧ್ಯಕ್ಷ ಟಿ.ಎಸ್ ದುಗ್ಗೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಸದಸ್ಯರು ಸಭೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಸೊಸೈಟಿ ಕಾರ್ಯದರ್ಶಿ ಕೋರಿದ್ದಾರೆ.

ಸೆ.20ರಂದು ರಕ್ತದಾನ, ನೇತ್ರ ತಪಾಸಣೆ ಶಿಬಿರ


    ಭದ್ರಾವತಿ: ಶಿವಮೊಗ್ಗ ಸುಬ್ಬಯ್ಯ ಮೆಡಿಕಲ್ ಕಾಲೇಜ್ ಆಸ್ಪತ್ರೆ, ಬಿ ಆರ್ ಪಿ ಲಯನ್ಸ್ ಕ್ಲಬ್, ಜಿಲ್ಲಾ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗು ಸಿಂಗನ ಮನೆ ಗ್ರಾಮ ಪಂಚಾಯಿತಿ ವತಿಯಿಂದ ಸೆ.20ರಂದು ಉಚಿತ ನೇತ್ರ ತಪಾಸಣೆ,  ನೇತ್ರ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಮಸೂರ  ಅಳವಡಿಕೆ ಶಿಬಿರ ಆಯೋಜಿಸಲಾಗಿದೆ.

    ಬಿ ಆರ್ ಪಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1 ಗಂಟೆವರೆಗೆ ಶಿಬಿರ ನಡೆಯಲಿದೆ.

     ಅಲ್ಲದೆ ಬಿ ಆರ್ ಪಿ ಒಕ್ಕಲಿಗರ ಸಂಘದಲ್ಲಿ ಬೆಳಗ್ಗೆ 9.30 ರಿಂದ  ಮಧ್ಯಾಹ್ನ 1 ಗಂಟೆವರೆಗೆ ರಕ್ತದಾನ ಶಿಬಿರ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಶ್ರೀನಿವಾಸ್, ಅಧ್ಯಕ್ಷರು, ಲಯನ್ಸ್ ಕ್ಲಬ್, ಮೊ: 9008742213, ಡಾ. ನವೀನ್ ನಾಗರಾಜ್ ಕೆ, ಕಾರ್ಯದರ್ಶಿ, ಮೊ: 6361316722, ಮಂಟಲಿಂಗಯ್ಯ, ಖಜಾಂಚಿ, ಮೊ: 8088381801 ಸಂಖ್ಯೆಗೆ ಕರೆ ಮಾಡಬಹುದಾಗಿದೆ.