Sunday, September 24, 2023

ವಿವಿಧೆಡೆ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ

ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು.

    ಭದ್ರಾವತಿ : ಸಂಸದ ಬಿ.ವೈ ರಾಘವೇಂದ್ರ ಅವರು ಭಾನುವಾರ ಹೊಸಮನೆಯಲ್ಲಿ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದರು.

    ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

    ನಂತರ ಹಿಂದೂ ಮಹಾಸಭಾ, ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಶ್ರೀ ವಿನಾಯಕ ಮೂರ್ತಿ ದರ್ಶನ ಪಡೆದರು.

    ಬಿಜೆಪಿ ಪಕ್ಷದ ಯುವ ಮುಖಂಡರಾದ ಮಂಗೋಟೆ ರುದ್ರೇಶ್‌, ಜಿ. ಆನಂದಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ಭದ್ರಾವತಿ ನಗರಸಭೆ ವಾರ್ಡ್ ನಂ.27ರ ಆಂಜನೇಯ ಆಗ್ರಹಾರದ 2ನೇ ರಸ್ತೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ದರ್ಶನ ಪಡೆದ ಸಂಸದ ಬಿ.ವೈ ರಾಘವೇಂದ್ರ ಅವರು ದೀಪ ಬೆಳಗಿಸುವ ಮೂಲಕ ವಿನಾಯಕ ಸೇವಾ ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಗಳಿಗೆ ಚಾಲನೆ ನೀಡಿದರು. ಸಮಿತಿ ಪ್ರಮುಖರು ಹಾಗು ಸ್ಥಳೀಯರು ಸಂಸದರನ್ನು ಸನ್ಮಾನಿಸಿ ಗೌರವಿಸಿದರು.

ಡಿ. ಜಯಶ್ರೀ ನಿಧನ

ಡಿ. ಜಯಶ್ರೀ

ಭದ್ರಾವತಿ : ಜೇಡಿಕಟ್ಟೆ ಹೊಸೂರು ನಿವಾಸಿ ಡಿ. ಜಯಶ್ರೀ(42) ಅನಾರೋಗ್ಯದಿಂದ ಶನಿವಾರ ನಿಧನ ಹೊಂದಿದರು.

ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಸದಸ್ಯ, ಪತಿ ಎಲ್. ದೇವರಾಜ್ ಹಾಗು ಇಬ್ಬರು ಗಂಡು ಮಕ್ಕಳು ಇದ್ದರು. ಇವರ ಅಂತ್ಯಕ್ರಿಯೆ ಭಾನುವಾರ ಜೇಡಿಕಟ್ಟೆ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ನಗರಸಭೆ ಸದಸ್ಯೆ ರೇಖಾ ಪ್ರಕಾಶ್, ಶ್ರೀ ಮರುಳ ಸಿದ್ದೇಶ್ವರ ಜನ ಕಲ್ಯಾಣ ಧಾರ್ಮಿಕ ಟ್ರಸ್ಟ್ ಪ್ರಮುಖರಾದ ಸಿದ್ದಲಿಂಗಯ್ಯ, ಎಸ್. ವಾಗೀಶ್, ಪ್ರಕಾಶ್, ರಾಮಲಿಂಗಣ್ಣ, ಹೋಟೆಲ್ ಶಿವಣ್ಣ, ಜವರೇಲಿಂಗೇಗೌಡ್ರು, ನಂಜಪ್ಪ, ಶಾರದಾಬಾಯಿ ಸೇರಿದಂತೆ ಗ್ರಾಮಸ್ಥರು ಜಯಶ್ರೀ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸುಜಾನಮ್ಮ ನಿಧನ

ಸುಜಾನಮ್ಮ

    ಭದ್ರಾವತಿ: ನಗರದ ಕೂಲಿಬ್ಲಾಕ್ ಶೆಡ್, ಮಾರಿಯಮ್ಮ ದೇವಸ್ಥಾನ ಸಮೀಪದ ನಿವಾಸಿ ಸುಜಾನಮ್ಮ(72) ನಿಧನ ಹೊಂದಿದರು.

    ಕನ್ನಡ ಸಾಹಿತ್ಯ ಪರಿಷತ್ ಸದಸ್ಯ, ಕವಿ ಪೀಟರ್ ಸೇರಿದಂತೆ ಇಬ್ಬರು ಪುತ್ರರು ಹಾಗು ಪುತ್ರಿ ಇದ್ದರು. ಭಾನುವಾರ ಸಂಜೆ ನಗರದ ಮಿಲ್ಟ್ರಿಕ್ಯಾಂಪ್, ಬೈಪಾಸ್ ರಸ್ತೆ, ಕ್ರೈಸ್ತರ ಸಮಾಧಿಯಲ್ಲಿ ಇವರ ಅಂತ್ಯಕ್ರಿಯೆ ನೆರವೇರಿತು.

    ಸುಜಾನಮ್ಮ ದಿವಂಗತ ಸುಂದರ್ ರಾಜ್ ಅವರ ಪತ್ನಿಯಾಗಿದ್ದಾರೆ. ಇವರ ನಿಧನಕ್ಕೆ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ, ಜಾನಪದ ವೇದಿಕೆ ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮ್ಯಾನ್ ಸಾವು

ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಭದ್ರಾವತಿ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಭದ್ರಾವತಿ: ಕರ್ತವ್ಯ ನಿರ್ವಹಿಸುತ್ತಿದ್ದ ಲೈನ್ ಮ್ಯಾನ್ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಭಾನುವಾರ ನಡೆದಿದೆ.

    ಮಾಚೇನಹಳ್ಳಿ ಮೆಸ್ಕಾಂ ಘಟಕ –5ರ ಕಿರಣ್ (25) ಮೃತಪಟ್ಟ ಲೈನ್ ಮ್ಯಾನ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಚನ್ನಗಿರಿ ತಾಲೂಕಿನ ನಿವಾಸಿಯಾಗಿದ್ದು, ರಾಣೆಬೆನ್ನೂರು ಮೂಲದ ಸುನೀಲ್ (26) ಎಂಬುವರು ಗಾಯಗೊಂಡಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಇವರಿಬ್ಬರು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಮೊದಲನೇ ಕ್ರಾಸ್ ನಲ್ಲಿ ಭಾನುವಾರ ಬೆಳಗ್ಗೆ ನಿರ್ವಹಣೆ ಸಂಬಂಧ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದರು. 10.30ರ ವೇಳೆಗೆ ಕಂಬದಲ್ಲಿ ಏಕಾಏಕಿ ವಿದ್ಯುತ್ ಪ್ರವಹಿಸಿದ್ದು ಕಿರಣ್ ಮೃತಪಟ್ಟಿದ್ದು, ಸುನಿಲ್ ಗಾಯಗೊಂಡು ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ಮೆಸ್ಕಾಂ ಅಧಿಕಾರಿಗಳು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Saturday, September 23, 2023

ಸೆ.24ರಂದು ಕಾಗದನಗರ ಗಣಪತಿ ವಿಸರ್ಜನೆ

ಭದ್ರಾವತಿ ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ.

    ಭದ್ರಾವತಿ : ಕಾಗದ ನಗರದ ಕನ್ನಡ ಯುವಕರ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 51ನೇ ವರ್ಷದ ಗಣಪತಿ ಮೂರ್ತಿ ವಿಸರ್ಜನೆ ಸೆ.24ರ ಭಾನುವಾರ ನಡೆಯಲಿದೆ.

    ಕನ್ನಡ ಯುವಕರ ಸಂಘ ತನ್ನದೇ ಆದ ಇತಿಹಾಸ ಹೊಂದಿದ್ದು, ಎಂಪಿಎಂ ಕಾರ್ಖಾನೆಯ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗ ಹಾಗು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳ ನಿವಾಸಿಗಳೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಈ ಹಿಂದೆ ಪ್ರತಿ ವರ್ಷ ಗಣಪತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಈ ಭಾಗದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿತ್ತು. ಸಾವಿರಾರು ಮಂದಿ ಗಣಪತಿ ಮೂರ್ತಿ ವೀಕ್ಷಣೆಗೆ ಆಗಮಿಸುತ್ತಿದ್ದರು. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಹಾಗು ಮನರಂಜನೆ ಕಾರ್ಯಕ್ರಮಗಳು ಜರುಗುತ್ತಿದ್ದವು. ಸುಮಾರು 10 ರಿಂದ 15 ಸಾವಿರ ಮಂದಿ ಕಾರ್ಯಕ್ರಮ ವೀಕ್ಷಣೆಗಾಗಿ ಆಗಮಿಸುತ್ತಿದ್ದರು. ಅಲ್ಲದೆ ಲಾಟರಿ ಡ್ರಾ ಸಹ ಏರ್ಪಡಿಸಲಾಗುತ್ತಿತ್ತು. ಆದರೆ ಇದೀಗ ಎಲ್ಲವೂ ಇತಿಹಾಸದ ಪುಟದಲ್ಲಿ ಉಳಿದುಕೊಂಡಿವೆ.

    ಕಳೆದ ಸುಮಾರು 8 ವರ್ಷಗಳಿಂದ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಕಾರ್ಮಿಕರು ಕಾರ್ಖಾನೆಯ ವಸತಿ ಗೃಹಗಳನ್ನು ತೊರೆದಿದ್ದಾರೆ. ಇದರಿಂದಾಗಿ ಈ ಭಾಗದಲ್ಲಿ ಜನರಿಲ್ಲದೆ ವಸತಿ ಗೃಹಗಳು ಪಾಳು ಬಿದ್ದಿವೆ. ಖಾಲಿ ಜಾಗಗಳಲ್ಲಿ ಗಿಡಗಂಟಿಗಳು ಬೆಳೆದು ನಿಂತಿವೆ. ಜನಸಂದಣಿ ಇಲ್ಲವಾಗಿದೆ. ಆದರೂ ಕೆಲವು ಯುವಕರು ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದು, ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಮೂಲಕ ಪುನಃ ಹಿಂದಿನ ವೈಭವ ಮರುಕಳುಹಿಸುವ ಆಶಾಭಾವನೆ ಹೊಂದಿದ್ದಾರೆ.

    ಈ ಬಾರಿ 7 ದಿನಗಳ ಕಾಲ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿದ್ದು, ಕಾಗದನಗರದ ಪ್ರಮುಖ ರಸ್ತೆಗಳಲ್ಲಿ ಉತ್ಸವ ಮೆರವಣಿಗೆಯೊಂದಿಗೆ ಮೂರ್ತಿ ವಿಸರ್ಜನೆ ನಡೆಯಲಿದೆ.

ಸೆ.26ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ : ವಿವಿಧ ಧಾರ್ಮಿಕ ಆಚರಣೆ


ಭದ್ರಾವತಿಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿವತಿಯಿಂದ 51ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವ ಅಂಗವಾಗಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಶುಕ್ರವಾರ ಬಜರಂಗದಳ ವತಿಯಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಭದ್ರಾವತಿ : ನಗರದ ಹೊಸಮನೆ ಮುಖ್ಯ ರಸ್ತೆಯಲ್ಲಿ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀವಿನಾಯಕ ಸೇವಾ ಸಮಿತಿ ವತಿಯಿಂದ 51ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನೆ ಸೆ.26ರಂದು ನಡೆಯಲಿದೆ.

    ಪ್ರತಿ ವರ್ಷದಂತೆ ಈ ಬಾರಿ ಸಹ ವಿಸರ್ಜನೆಗೂ ಮೊದಲು ವೈಭವದ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದ್ದು, ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ವಯಸ್ಸಿನ ಮಿತಿ ಇಲ್ಲದೆ ಎಲ್ಲಾ ಜಾತಿಯ, ಧರ್ಮದ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆಯಿಂದ ಸಂಜೆವರೆಗೂ ಹಬ್ಬದ ವಾತಾವರಣ ಕಂಡು ಬರುತ್ತದೆ.

    ಮೆರವಣಿಗೆಗೆ ವಿನಾಯಕ ಸೇವಾ ಸಮಿತಿ ಈಗಾಗಲೇ ಸಿದ್ದತೆಗಳನ್ನು ಕೈಗೊಂಡಿದ್ದು, ಪೊಲೀಸ್ ಇಲಾಖೆ ಸಹ ಈ ಬಾರಿ ಹೆಚ್ಚಿನ ಬಿಗಿ ಬಂದೋಬಸ್ತ್ ಕೈಗೊಳ್ಳಲು ಮುಂದಾಗಿದೆ.



    ಪ್ರತಿದಿನ ಧಾರ್ಮಿಕ ಕಾರ್ಯಕ್ರಮ:

    ವಿನಾಯಕ ಮೂರ್ತಿ ಮಹೋತ್ಸವ ಅಂಗವಾಗಿ ಪ್ರತಿದಿನ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಶುಕ್ರವಾರ ಬಜರಂಗದಳ ವತಿಯಿಂದ ಸಾಮೂಹಿಕ ದೀಪ ಲಕ್ಷ್ಮೀ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

    ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ. ಕದಿರೇಶ್ ಹಾಗು ಪದಾಧಿಕಾರಿಗಳು, ಬಜರಂಗದಳ ಜಿಲ್ಲಾ ಸಂಯೋಜಕ ರಾಘವನ್ ವಡಿವೇಲು ಇನ್ನಿತರರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ವತಿಯಿಂದ ಅನಾಥ, ವೃದ್ದಾಶ್ರಮಕ್ಕೆ ಹಾಸಿಗೆ, ದಿಂಬು ವಿತರಣೆ

ಭದ್ರಾವತಿ ಹೊಸಸಿದ್ದಾಪುರ ಸುರಕ್ಷ ಅನಾಥ ಮತ್ತು ವೃದ್ದಾಶ್ರಮಕ್ಕೆ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಶನಿವಾರ ಮಲಗುವ ಹಾಸಿಗೆ ಮತ್ತು ದಿಂಬುಗಳನ್ನು ಉಚಿತವಾಗಿ ವಿತರಿಸಲಾಯಿತು.

    ಭದ್ರಾವತಿ : ನಗರದ ಹೊಸಸಿದ್ದಾಪುರ ಸುರಕ್ಷ ಅನಾಥ ಮತ್ತು ವೃದ್ದಾಶ್ರಮಕ್ಕೆ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಶನಿವಾರ ಮಲಗುವ ಹಾಸಿಗೆ ಮತ್ತು ದಿಂಬುಗಳನ್ನು ಉಚಿತವಾಗಿ ವಿತರಿಸಲಾಯಿತು.

    ವಿಭಿನ್ನ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಲಯನ್ಸ್ ಕ್ಲಬ್ ಶುಗರ್ ಟೌನ್ ವತಿಯಿಂದ ಸುಮಾರು 25 ಸಾವಿರ ರು. ಮೌಲ್ಯದ ಒಟ್ಟು ೧೨ ಹಾಸಿಗೆ ಮತ್ತು ದಿಂಬುಗಳನ್ನು ವಿತರಣೆ ಮಾಡಲಾಯಿತು. ಅನಾಥ ಮತ್ತು ವೃದ್ಧರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವಾ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ಲಬ್ ಬದ್ಧವಾಗಿದೆ ಎಂದು ಭರವಸೆ ನೀಡಲಾಯಿತು. ಸುರಕ್ಷ ಅನಾಥ ಮತ್ತು ವೃದ್ದಾಶ್ರಮದ ಅಧ್ಯಕ್ಷೆ ಜ್ಯೋತಿ ಸೋಮಶೇಖರ್ ಅಧ್ಯಕ್ಷತೆ ವಹಿಸಿ ಲಯನ್ಸ್ ಕ್ಲಬ್ ಸೇವಾ ಕಾರ್ಯವನ್ನು ಅಭಿನಂದಿಸಿದರು.

    ಲಯನ್ ಪ್ರಾಂತೀಯ ಅಧ್ಯಕ್ಷ ದೇವರಾಜ್, ಕ್ಲಬ್ ಅಧ್ಯಕ್ಷ ಟಿ. ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಎಚ್.ಡಿ ಕೃಷ್ಣ, ಲಯನ್ ಪ್ರಾಂತೀಯ ಮಾಜಿ ಅಧ್ಯಕ್ಷ ಅನಂತ ಕೃಷ್ಣ ನಾಯಕ್, ಡಾ. ನರೇಂದ್ರ ಭಟ್, ಡಾ. ವೃಂದಭಟ್, ಆರ್. ಉಮೇಶ್, ನಗರಸಭೆ ಮಾಜಿ ಉಪಾಧ್ಯಕ್ಷ ಚನ್ನಪ್ಪ ಸೇರಿದಂತೆ ಕ್ಲಬ್ ಸದಸ್ಯರು ಹಾಗು ಸುರಕ್ಷ ಅನಾಥ ಮತ್ತು ವೃದ್ದಾಶ್ರಮದ ಟ್ರಸ್ಟಿಗಳು ಹಾಗು ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.