Saturday, October 7, 2023

ಅ.೮ರಂದು ಓಂ ಹಿಂದೂ ಕೋಟೆ, ಮೀನುಗಾರರ ಬೀದಿ ಗಣಪತಿ ವಿಸರ್ಜನೆ

ಭದ್ರಾವತಿ ಹೊಸಮನೆ ಬಜರಂಗದಳ ಓಂ ಹಿಂದೂ ಕೋಟೆ ವತಿಯಿಂದ ೯ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಶಿರಡಿ ಸಾಯಿ ಬಾಬಾ ವೇಷಧಾರಿಯಾಗಿ ಮೂರ್ತಿ.
    ಭದ್ರಾವತಿ: ನಗರದ ಪ್ರಮುಖ ವಿನಾಯಕ ಸೇವಾ ಸಮಿತಿಗಳಲ್ಲಿ ಒಂದಾಗಿರುವ ಹೊಸಮನೆ ಬಜರಂಗದಳ ಓಂ ಹಿಂದೂ ಕೋಟೆ ವತಿಯಿಂದ ೯ನೇ ವರ್ಷದ ವಿನಾಯಕ ಮೂರ್ತಿ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಲಾಗಿರುವ ಗಣಪತಿ ಮೂರ್ತಿ ವಿಸರ್ಜನೆ ಅ.೮ರಂದು ನಡೆಯಲಿದೆ.
    ಪ್ರತಿ ವರ್ಷ ವಿಶೇಷವಾದ ಹಾಗು ಆಕರ್ಷಕವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಶಿರಡಿ ಸಾಯಿ ಬಾಬಾ ವೇಷಧಾರಿಯಾಗಿ ಮೂರ್ತಿ ಕಂಗೊಳಿಸುತ್ತಿದ್ದು, ಈ ಮೂರ್ತಿಯನ್ನು ನಗರದ ಹಿರಿಯ ಶಿಲ್ಪಿ ಜಯರಾಮ್ ತಯಾರಿಸಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ವಿಶೇಷ ದಾನಿಗಳಾಗಿದ್ದು, ತುಮಕೂರು ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಹಾಗು ನಗರದ ಅನ್ನದಾತ ಸರ್.ಎಂ ವಿಶ್ವೇಶ್ವರಾಯ ಅವರ ಸವಿನೆನಪಿನಲ್ಲಿ ಮಹೋತ್ಸವ ನಡೆಯುತ್ತಿದ್ದು, ವಿವಿಧ ಧಾರ್ಮಿಕ ಆಚರಣೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇದೀಗ ಮೂರ್ತಿ ವಿಸರ್ಜನೆಗೆ ಬರದ ಸಿದ್ದತೆಗಳು ನಡೆದಿವೆ. ಇದಕ್ಕೂ ಮೊದಲು ಬೆಳಿಗ್ಗೆ ಪ್ರಮುಖ ರಸ್ತೆಗಳಲ್ಲಿ ಕಲಾತಂಡಗಳೊಂದಿಗೆ ರಾಜಬೀದಿ ಉತ್ಸವ ಮೆರವಣಿಗೆ ನಡೆಯಲಿದೆ.
    ಮೀನುಗಾರರ ಬೀದಿ ಗಣಪತಿ:
    ನಗರದ ಬಿ.ಎಚ್ ರಸ್ತೆ, ದುರ್ಗಾ ನರ್ಸಿಂಗ್ ಹೋಂ ಬಳಿ ಮೀನುಗಾರರ ಬೀದಿಯಲ್ಲಿ ಪ್ರತಿವರ್ಷದಂತೆ ಈ ಬಾರಿ ಸಹ ಆಕರ್ಷಕವಾದ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದು, ಅ.೮ರಂದು ಮೂರ್ತಿ ವಿಸರ್ಜನೆ ನಡೆಯಲಿದೆ.
    ವಿನಾಯಕ ಗರುಡನ ಮೇಲೆ ಕುಳಿತು ಬಿಲ್ಲು ಬಾಣ ಹಿಡಿದು ರಾಕ್ಷಸ ಸಂಹಾರದಲ್ಲಿ ತೊಡಗಿರುವುದು ಭಕ್ತರ ಗಮನ ಸೆಳೆಯುತ್ತಿದೆ. ಶನಿವಾರ ಹೋಮ-ಹವನ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.


ಭದ್ರಾವತಿ ಬಿ.ಎಚ್ ರಸ್ತೆ, ದುರ್ಗಾ ನರ್ಸಿಂಗ್ ಹೋಂ ಬಳಿ ಮೀನುಗಾರರ ಬೀದಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಗರುಡನ ಮೇಲೆ ಕುಳಿತು ಬಿಲ್ಲು ಬಾಣ ಹಿಡಿದು ರಾಕ್ಷಸ ಸಂಹಾರದಲ್ಲಿ ತೊಡಗಿರುವುದು ಭಕ್ತರ ಗಮನ ಸೆಳೆಯುತ್ತಿದೆ.
         ಅಂಬೇಡ್ಕರ್ ನಗರ ಗಣಪತಿ:
    ನಗರದ ಬಿ.ಎಚ್ ರಸ್ತೆ ಅಂಡರ್ ಬಿಡ್ಜ್ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ನಗರದ ವಿನಾಯಕ ಸೇವಾ ಸಮಿತಿ ವತಿಯಿಂದ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದ್ದು, ಅ.೮ರಂದು ಮೂರ್ತಿ ವಿಸರ್ಜನೆ ನಡೆಯಲಿದೆ.
    ಶನಿವಾರ ವಿಶೇಷ ಪೂಜೆ, ಅನ್ನಸಂತರ್ಪಣೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.

೩೫೦ಕ್ಕೂ ಹೆಚ್ಚು ಮಂದಿಗೆ ನರರೋಗ, ಕೀಲು ಮೂಳೆ ಉಚಿತ ತಪಾಸಣೆ

ಭದ್ರಾವತಿ ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ನರರೋಗ ಮತ್ತು ಕೀಲು ಮೂಳೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಾದ ಡಾ. ಜಯಚಂದ್ರ ಮತ್ತು ಡಾ. ಗಿರೀಶ್ ಉದ್ಘಾಟಿಸಿದರು.
    ಭದ್ರಾವತಿ : ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ನರರೋಗ ಮತ್ತು ಕೀಲು ಮೂಳೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವೈದ್ಯರಾದ ಡಾ. ಜಯಚಂದ್ರ ಮತ್ತು ಡಾ. ಗಿರೀಶ್ ಉದ್ಘಾಟಿಸಿದರು. ಟ್ರಸ್ಟ್ ಪದಾಧಿಕಾರಿಗಳಾದ ಅಧ್ಯಕ್ಷ ಹೇಮಂತ್ ಕುಮಾರ್, ಕಾರ್ಯದರ್ಶಿ ಚರಣ್‌ರಾಜ್, ಗೌರವಾಧ್ಯಕ್ಷರಾದ ಸುರೇಶ್, ಕುಮಾರ್, ನಗರಸಭಾ ಸದಸ್ಯ ಆರ್. ಮೋಹನ್ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಭದ್ರಾವತಿ ನಗರದ ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದೊಂದಿಗೆ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ನರರೋಗ ಮತ್ತು ಕೀಲು ಮೂಳೆ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.
    ಶಿಬಿರದಲ್ಲಿ ಸುಮಾರು ೩೫೦ಕ್ಕೂ ಹೆಚ್ಚು ಮಂದಿಗೆ ಉಚಿತ ತಪಾಸಣೆ ನಡೆಸಲಾಯಿತು. ಆಸ್ಪತ್ರೆಯ ಒಟ್ಟು ೪ ವೈದ್ಯರು ಹಾಗು ೭ ಸಿಬ್ಬಂದಿಗಳನ್ನೊಳಗೊಂಡ ತಂಡ ಶಿಬಿರದಲ್ಲಿ ಪಾಲ್ಗೊಂಡಿತ್ತು.
    ಅಪ್ಪರ್ ಹುತ್ತಾ ಗೆಳೆಯರ ಬಳಗ ಟ್ರಸ್ಟ್ ವತಿಯಿಂದ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಹೆಚ್ಚಿನ ಕಾರ್ಯಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಉತ್ಸುಕವಾಗಿದ್ದು, ಜನರ ಸಹಕಾರ, ಪ್ರೋತ್ಸಾಹದ ನಿರೀಕ್ಷೆಯಲ್ಲಿದೆ.

ಕಾವೇರಿಗಾಗಿ ಕರವೇ ಮಹಿಳಾ ಘಟಕದಿಂದ ರಕ್ತ ಚಳುವಳಿ ಅಭಿಯಾನ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂಚೆ ಪತ್ರಗಳ ಮೂಲಕ ರಕ್ತ ಚಳುವಳಿ ಅಭಿಯಾನ ನಡೆಸಲಾಯಿತು.
    ಭದ್ರಾವತಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಧ್ಯ ಪ್ರವೇಶಿಸಿ ಕಾವೇರಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಂಚೆ ಪತ್ರಗಳ ಮೂಲಕ ರಕ್ತ ಚಳುವಳಿ ಅಭಿಯಾನ ನಡೆಸಲಾಯಿತು.
    ವೇದಿಕೆ ರಾಜ್ಯಾಧ್ಯಕ್ಷ ಟಿ.ಎ ನಾರಾಯಣಗೌಡರ ಆದೇಶದಂತೆ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಸೋಮಶೇಖರ್ ನೇತೃತ್ವದಲ್ಲಿ ಅಭಿಯಾನ ನಡೆಸಲಾಯಿತು. `ಕಾವೇರಿ ನಮ್ಮದು ರಕ್ತ ಕೊಟ್ಟೇವು ಕಾವೇರಿ ಬಿಡೇವು' ಎಂಬ ಘೋಷಣೆಗಳನ್ನು ಕೂಗುತ್ತಾ ಅಂಚೆ ಪತ್ರದಲ್ಲಿ `ಕಾವೇರಿ ನಮ್ಮದು' ಎಂದು ರಕ್ತದಲ್ಲಿ ಬರೆಯಲಾಯಿತು. ಅಂಚೆ ಪತ್ರಗಳನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುವ ಮೂಲಕ ಪ್ರಧಾನ ಮಂತ್ರಿಯವರಿಗೆ ಕಳುಹಿಸಲಾಯಿತು.
    ಅಭಿಯಾನದಲ್ಲಿ ವೇದಿಕೆ ಜಿಲ್ಲಾ ಕಾರ್ಯದರ್ಶಿ ಜಾಹ್ನವಿ, ಜಿಲ್ಲಾ ಸಾಂಸ್ಕೃತಿಕ ಘಟಕದ ಅಧ್ಯಕ್ಷರಾದ ಚೇತನ ಶೆಟ್ಟಿ, ನಗರ ಅಧ್ಯಕ್ಷರಾದ ಗೀತಾ ಭುವನ, ನಾಗರತ್ನ, ರೂಪ, ನಯನ, ಉಷಾ ಸೇರಿದಂತೆ ಮಹಿಳಾ ಕರವೇ ಪದಾಧಿಕಾರಿಗಳು ಭಾಗವಹಿಸಿದ್ದರು.

Friday, October 6, 2023

ಜ್ಞಾನದೀಪಿಕಾ ಶಾಲೆ ಖೋ ಖೋ ತಂಡ ದ್ವಿತೀಯ ಸ್ಥಾನ

4 ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆ

ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಭದ್ರಾವತಿ ತಾಲೂಕಿನ ಯರೇಹಳ್ಳಿ ಗ್ರಾಮದ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ ಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ.
    ಭದ್ರಾವತಿ: ಹಿರಿಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಯರೇಹಳ್ಳಿ ಗ್ರಾಮದ ಜ್ಞಾನದೀಪಿಕಾ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಬಾಲಕಿಯರ ಖೋ ಖೋ ತಂಡ ದ್ವಿತೀಯ ಸ್ಥಾನ ಪಡೆದಿದೆ.
    ವಿದ್ಯಾರ್ಥಿನಿಯರಾದ ಸಿ. ಅರ್ಪಿತ, ಟಿ.ಡಿ ದಿಶಾ, ಪಿ. ಸಿಂಚನ ಮತ್ತು ಸಿ. ಬೇಬಿಶ್ರೀ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿನಿಯರನ್ನು ವಿದ್ಯಾಸಂಸ್ಥೆ ಕಾರ್ಯದರ್ಶಿ ಮಂಜುಳಾ, ರಾಜಶೇಖರ್ ಹಾಗು ಮುಖ್ಯೋಪಾಧ್ಯಾಯರು, ತರಬೇತಿದಾರರು, ಶಿಕ್ಷಕರು ಹಾಗು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

1755ನೇ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆ

1755ನೇ ಮದ್ಯವರ್ಜನ ಶಿಬಿರ ಪೂರ್ವಭಾವಿ ಸಭೆ ಭದ್ರಾವತಿ ತಾಲೂಕಿನ ನಾಗತಿಬೆಳಗಲು ವಲಯದ ಶ್ರೀರಾಮನಗರ ಶ್ರಮಜೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಭೆಯನ್ನು ಪಾಲಾಕ್ಷಪ್ಪ, ಜಯರಾಂ ಗೊಂದಿ, ಸುಧಾಕರ ಶೆಟ್ಟಿ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.

    ಭದ್ರಾವತಿ: ಜಿಲ್ಲಾ ಜನಜಾಗೃತಿ ವೇದಿಕೆ ಹಾಗು ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುತ್ತಿದ್ದು, ನ.2 ರಿಂದ 9ರವರೆಗೆ 1755ನೇ ಮದ್ಯವರ್ಜನ ಶಿಬಿರ ಆಯೋಜಿಸಲಾಗುವುದು. ಈ ಸಂಬಂಧ ಸಮಿತಿ ರಚನೆ ಮಾಡಲಾಗಿದೆ ಎಂದು ಶಿಬಿರದ ಯೋಜನಾಧಿಕಾರಿ ನಾಗರಾಜ್ ತಿಳಿಸಿದರು.

    ಅವರು ತಾಲೂಕಿನ ನಾಗತಿಬೆಳಗಲು ವಲಯದ ಶ್ರೀರಾಮನಗರ ಶ್ರಮಜೀವಿ ಮರಿಸಿದ್ದಯ್ಯ ಶ್ರೀ ರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ದುಶ್ಚಟ ದುರಭ್ಯಾಸ ವಿರುದ್ಧ ಜನಜಾಗೃತಿ ಕಾರ್ಯಕ್ರಮ, ಮದ್ಯವರ್ಜನ ಶಿಬಿರಗಳು, ಶಾಲಾ-ಕಾಲೇಜುಗಳಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಿಗೆ ದುಶ್ಚಟ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು.

    1755ನೇ ಮದ್ಯವರ್ಜನ ಶಿಬಿರದ ಅಧ್ಯಕ್ಷರಾಗಿ ಯಶೋಧರಯ್ಯ, ಗೌರವ ಅಧ್ಯಕ್ಷರಾಗಿ ಸುಧಾಕರ ಶೆಟ್ಟಿ, ಉಪಾಧ್ಯಕ್ಷರಾಗಿ ಎಸ್.ಎಂ ರಮೇಶ್, ಬಷೀರ್ ಅಹಮದ್, ಕೃಷ್ಣಮೂರ್ತಿ ನಾಯ್ಡು, ಧರ್ಮೇಗೌಡ(ಕುಮ್ರಿ ಚಂದ್ರಣ್ಣ) ಮತ್ತು ನಿರಂಜನ್, ಕಾರ್ಯದರ್ಶಿಯಾಗಿ ಪಿ. ಶ್ರೀನಿವಾಸ್, ಜಿ.ಎಂ ನಿಂಗಪ್ಪ, ಕೋಶಾಧಿಕಾರಿಯಾಗಿ ಮಹೇಶ್ ಹಾಗು ಕಾರ್ಯಕಾರಿ ಮಂಡಳಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

    ಸಭೆಯಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕ ಜೆ. ಚಂದ್ರಶೇಖರ್, ಚನ್ನಪ್ಪ, ಅನಿತಾ ಮಲ್ಲೇಶ್, ಆರ್. ಕರುಣಾಮೂರ್ತಿ, ಜಯರಾಂ ಗೊಂದಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪಾಲಾಕ್ಷಪ್ಪ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಮಾಧವ ಸ್ವಾಗತಿಸಿ, ಕವಿತಾ ಪ್ರಾರ್ಥಿಸಿದರು.

Thursday, October 5, 2023

ಯೋಗಪಟು ಡಿ. ನಾಗರಾಜ್ 4 ದಶಕಗಳ ಸಾಧನೆ : ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ

ಭದ್ರಾವತಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಭದ್ರಾವತಿ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಛೇರ್ಮನ್, ಅಂತರರಾಷ್ಟ್ರೀಯ ಯೋಗಪಟು ಡಿ. ನಾಗರಾಜ್ ರವರಿಗೆ ವಿಶ್ವ ಹಿರಿಯ ನಾಗರಿಕರ ರಾಜ್ಯ ಪ್ರಶಸ್ತಿ ಲಭಿಸಿದೆ.

    ಕಳೆದ 4 ದಶಕಗಳಿಂದ ಯೋಗ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಾಗರಾಜ್ ರವರು ಇದುವರೆಗೂ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 31, ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ 54 ಹಾಗು ರಾಜ್ಯಮಟ್ಟದ ಯೋಗ ಸ್ಪರ್ಧೆಯಲ್ಲಿ 45 ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.

    ನಾಗರಾಜ್ ರವರು ರಾಜ್ಯಾದ್ಯಂತ ಪ್ರವಾಸ ಮಾಡಿ ಜೇಸೀಸ್, ರೋಟರಿ, ಲಯನ್ಸ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳ ನೆರವಿನೊಂದಿಗೆ 10 ದಿನಗಳ ಅವಧಿಯ 441 ಯೋಗ ಶಿಬಿರಗಳನ್ನು ಯಶಸ್ವಿಯಾಗಿ ನಡೆಸಿದ್ದು, ಅಲ್ಲದೆ ವಿದ್ಯಾರ್ಥಿಗಳಿಗೆ 1 ಗಂಟೆ ಅವಧಿಯ 720ಕ್ಕೂ ಹೆಚ್ಚು ಯೋಗ ಉಪನ್ಯಾಸ ಹಾಗು ಯೋಗ ಪ್ರದರ್ಶನ ನೀಡಿ ಯೋಗದ ಬಗ್ಗೆ ಅರಿವು ಮೂಡಿಸಿದ್ದಾರೆ. ಲಕ್ಷಾಂತರ ಜನರಿಗೆ ಆರೋಗ್ಯವಂತ ಹಾಗು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಿದ್ದಾರೆ. ಇವರು ಯೋಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ರಾಜ್ಯ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಿದೆ.

    ಬೆಂಗಳೂರಿನ ಕಲಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಡಿ.ನಾಗರಾಜ್ ರವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಸರ್ಕಾರದ ಕಾರ್ಯದರ್ಶಿ ಡಾ. ಜಿ.ಸಿ ಪ್ರಕಾಶ್ ಮತ್ತು ಇಲಾಖೆ ನಿರ್ದೇಶಕ ಎಂ. ಸಿದ್ದೇಶ್ವರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

    ಕರ್ನಾಟಕ ರಾಜ್ಯ ಯೋಗ ಸಂಸ್ಥೆ ಅಧ್ಯಕ್ಷ ಡಾ. ರಾಮಮೂರ್ತಿ, ಕಾರ್ಯದರ್ಶಿ ಡಾ. ಡಿ. ಪುಟ್ಟೇಗೌಡ ಹಾಗು ಯೋಗ ಪಟುಗಳು ಡಿ. ನಾಗರಾಜ್ ರವರನ್ನು ಅಭಿನಂದಿಸಿದ್ದಾರೆ.

ಮಾಳಮ್ಮ ನಿಧನ

ಮಾಳಮ್ಮ

    ಭದ್ರಾವತಿ : ತಾಲೂಕಿನ ಕಾರೇಹಳ್ಳಿ ಗ್ರಾಮದ ನಿವಾಸಿ ಮಾಳಮ್ಮ(90) ಗುರುವಾರ ಮಧ್ಯಾಹ್ನ ನಿಧನ ಹೊಂದಿದರು.

    ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನೇತ್ರಾಧಿಕಾರಿ ಶಂಕರ್ ಸೇರಿದಂತೆ 4 ಗಂಡು, 2 ಹೆಣ್ಣು ಹಾಗು 10 ಮೊಮ್ಮಕ್ಕಳಿದ್ದಾರೆ. ಇವರ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ನೆರವೇರಲಿದೆ. ಮಾಳಮ್ಮ ನಿಧನಕ್ಕೆ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ವರ್ಗದವರು, ತರೀಕೆರೆ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ನಿಲೇಶ್ ರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.