Saturday, November 25, 2023

ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಅನಾವರಣ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಅನಾವರಣಗೊಳಿಸಿದರು.
    ಭದ್ರಾವತಿ: ನಗರದ ನ್ಯೂಟೌನ್ ವಿಐಎಸ್‌ಎಲ್ ಆಸ್ಪತ್ರೆ ಸಮೀಪ ಪ್ರತಿಕ್ಷಣ ಚಾರಿಟಬಲ್ ಟ್ರಸ್ಟ್ ನಾಮಫಲಕ ಬಿಳಿಕಿ ಹಿರೇಮಠದ ಪೀಠಾಧ್ಯಕ್ಷರಾದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಅನಾವರಣಗೊಳಿಸಿದರು.
    ಕಳೆದ ೨ ವರ್ಷಗಳ ಹಿಂದೆ ದಿವಂಗತ ಲಕ್ಷ್ಮಮ್ಮನವರ ೨ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಆರಂಭಗೊಂಡ ಟ್ರಸ್ಟ್ ಈಗಾಗಲೇ ಕೆಲವು ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದು, ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಕೈಗೊಳ್ಳಬೇಕೆಂಬ ಉದ್ದೇಶ ಹೊಂದಿದೆ ಎಂದು ಟ್ರಸ್ಟ್ ಪ್ರಮುಖರು, ಪತ್ರಕರ್ತ ಅನಂತಕುಮಾರ್ ಹೇಳಿದರು.
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ, ಸದಸ್ಯ ಚನ್ನಪ್ಪ, ಪ್ರಮುಖರಾದ ಎಸ್.ಎಸ್ ಭೈರಪ್ಪ, ಟಿ. ರಾಜೇಂದ್ರ, ವೈ. ನಟರಾಜ್, ಪ್ರಕಾಶ್‌ಕಾರಂತ್, ಮರಿಯಪ್ಪ, ಜಯಲಕ್ಷ್ಮೀ, ಎಚ್.ಆರ್ ಮಮತ, ಚಂದ್ರಶೇಖರ್, ಟಿ.ಎಚ್ ಸಂತೋಷ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಲಕ್ಷ್ಮೀ ಪೂಜೆ ನೆರವೇರಿಸಿ ಸಸಿಗಳನ್ನು ವಿತರಿಸಿ ಟ್ರಸ್ಟ್ ಮುಂದಿನ ಕಾರ್ಯಗಳಿಗೆ ಸಹಕಾರ ಕೋರಲಾಯಿತು.

Thursday, November 23, 2023

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೊನೆಗೊಳಿಸಿಕೊಳ್ಳಲು ಅವಕಾಶ


    ಭದ್ರಾವತಿ : ಶಿವಮೊಗ್ಗ ಜಿಲ್ಲಾ ಸ್ಮಾರ್ಟ್ ಸಿಟಿ ಹಾಗೂ ಜಿಲ್ಲಾ ಪೋಲಿಸ್ ಇಲಾಖೆ ವತಿಯಿಂದ ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಕಳುಹಿಸಿದ ನೋಟಿಸ್ ಪ್ರಕರಣಗಳನ್ನು ಇಲ್ಲಿನ ಸಂಚಾರಿ ಪೊಲೀಸ್ ಠಾಣೆಯಲ್ಲೂ ಪ್ರಕರಣ ಕೊನೆಗೊಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
    ವಾಹನ ಸವಾರರು ನಗರದ ನ್ಯೂಟೌನ್ ಸಂಚಾರಿ ಠಾಣೆಗೆ ಭೇಟಿ ನೀಡಿ ಹಣ ಪಾವತಿಸಿ ಪ್ರಕರಣ ಮುಕ್ತಾಯ ಮಾಡಿಕೊಳ್ಳಬಹುದಾಗಿರುತ್ತದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ಠಾಣಾಧಿಕಾರಿ ಶಾಂತಲ ಕೋರಿದ್ದಾರೆ.  

ವಿವಿಧ ಸೇವಾ ಕಾರ್ಯಗಳು, ಧಾರ್ಮಿಕ ಆಚರಣೆಗಳೊಂದಿಗೆ ವಿಜೃಂಭಣೆಯಿಂದ ಜರುಗಿದ ಶ್ರೀ ಸತ್ಯಸಾಯಿಬಾಬಾ ಜನ್ಮದಿನ

ಭದ್ರಾವತಿಯಲ್ಲಿ ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೯೮ನೇ ಜನ್ಮದಿನೋತ್ಸವ ಆಚರಿಸಲಾಯಿತು. ನ್ಯೂಟೌನ್ ಭಾಗದ ಪ್ರಮುಖ ರಸ್ತೆಗಳಲ್ಲಿ ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ ನಡೆಯಿತು.
    ಭದ್ರಾವತಿ: ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳು, ಪ್ರಶಾಂತಿ ಸೇವಾ ಟ್ರಸ್ಟ್ ಹಾಗು ಶ್ರೀ ಸತ್ಯ ಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ವತಿಯಿಂದ ಗುರುವಾರ ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ೯೮ನೇ ಜನ್ಮದಿನೋತ್ಸವ ಆಚರಿಸಲಾಯಿತು.
    ನ್ಯೂಟೌನ್ ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಓಂಕಾರ, ಜ್ಯೋತಿರ್ಧಾನ, ಸುಪ್ರಭಾತ, ನಗರಸಂಕೀರ್ತನೆ, ಪ್ರಶಾಂತಿ ಧ್ವಜಾರೋಹಣ, ಉಚಿತ ಪಶು ಚಿಕಿತ್ಸಾ ಶಿಬಿರ , ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಉಚಿತ ರಕ್ತದಾನ ಶಿಬಿರ, ಶ್ರೀ ಸತ್ಯ ಸಾಯಿ ಬಾಬಾರವರ ಪಲ್ಲಕ್ಕಿ ಉತ್ಸವ, ಶಾಲಾ ಮಕ್ಕಳಿಗೆ ಮಹಾಪ್ರಸಾದ ವಿನಿಯೋಗ (ನಾರಾಯಣ ಸೇವೆ), ಶ್ರೀ ಸತ್ಯ ಸಾಯಿ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ, ನಾರಾಯಣರಿಗೆ ವಸ್ತ್ರದಾನ ಮತ್ತು ನಾರಾಯಣ ಸೇವೆ ಹಾಗೂ ಭಕ್ತಾಧಿಗಳಿಗೆ ಮಹಾಪ್ರಸಾದ ವಿನಿಯೋಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
    ಪ್ರಶಾಂತಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಬೀರಯ್ಯ, ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆಗಳ ಸಂಚಾಲಕರು, ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರುಗಳು ಮತ್ತು ಬೋಧಕ, ಬೋಧಕೇತರವರ್ಗ ಹಾಗೂ ವಿದ್ಯಾರ್ಥಿವೃಂದ ಪಾಲ್ಗೊಂಡಿದ್ದರು.

ಪದವೀಧರ-ಶಿಕ್ಷಕರ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ : ತಹಶೀಲ್ದಾರ್ ಕೆ.ಆರ್.ನಾಗರಾಜ್

ಭದ್ರಾವತಿ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ತಹಸೀಲ್ದಾರ್ ಕೆ.ಆರ್ ನಾಗರಾಜ್ ಗುರುವಾರ ಮಾಹಿತಿ ನೀಡಿದರು.
    ಭದ್ರಾವತಿ: ನೈರುತ್ಯ ಪದವೀಧರ ಹಾಗು ಶಿಕ್ಷಕರ ಕ್ಷೇತ್ರದ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಆರಂಭಗೊಂಡಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆಗಳಿದ್ದಲ್ಲಿ ಡಿ.೯ರೊಳಗಾಗಿ ಸಲ್ಲಿಸುವಂತೆ ತಹಶೀಲ್ದಾರ್ ಕೆ.ಆರ್ ನಾಗರಾಜ್ ತಿಳಿಸಿದರು.
    ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನೈರುತ್ಯ ಪದವೀಧರ ಹಾಗು ಶಿಕ್ಷಕರ ಕರಡು ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದರು.
    ಶಿಕ್ಷಕರ ಕ್ಷೇತ್ರದ ಮತದಾನಕ್ಕಾಗಿ ಕಡ್ಡಾಯವಾಗಿ ೩ ವರ್ಷ ಸೇವೆ ಸಲ್ಲಿಸಿರಬೇಕು. ಪ್ರಸ್ತುತ ಮತಕ್ಷೇತ್ರದಲ್ಲಿ ೨೨೫ ಪುರುಷ ಹಾಗು ೧೮೫ ಮಹಿಳಾ ಮತದಾರರು ಸೇರಿದಂತೆ ಒಟ್ಟು ೪೧೦ ಮತದಾರರಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ೧,೫೦೫ ಪುರುಷ ಹಾಗು ೧,೩೦೭ ಮಹಿಳಾ ಮತದಾರರು, ಇತರೆ ೧ ಸೇರಿದಂತೆ ಒಟ್ಟು ೨೮೧೩ ಮತದಾರರಿದ್ದಾರೆ.  ಕ್ಷೇತ್ರದಲ್ಲಿ ೫ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಹೊಳೆಹೊನ್ನೂರಿನಲ್ಲಿ ೧, ಬಿ.ಆರ್.ಪಿ ೧ ಹಾಗು  ನಗರ ವ್ಯಾಪ್ತಿಯಲ್ಲಿ ಮೂರು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
    ಚುನಾವಣೆ ಸಂಬಂಧ ಈಗಾಗಲೇ ರಾಜಕೀಯ ಪಕ್ಷಗಳ ಮುಖಂಡರಿಗೆ ಮಾಹಿತಿ ನೀಡಲಾಗಿದೆ. ಇದೀಗ ಮತದಾರರಿಗೆ ಗುರುತಿನ ಚೀಟಿಗಳನ್ನು ಅಂಚೆ ಮೂಲಕ ರವಾನಿಸಲಾಗುತ್ತಿದೆ. ಡಿ. ೯ರವರೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಹಾಗು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.  
    ಉಪ ತಹಶೀಲ್ದಾರ್ ರಾಧಕೃಷ್ಣ ಭಟ್, ಚುನಾವಣಾ ಶಿರಸ್ತೇದಾರ್ ಎನ್.ಎಂ ಬಸವರಾಜ್, ಚುನಾವಣಾ ಶಾಖೆ ಸಿಬ್ಬಂದಿ ರವಿ, ಸೌಜನ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Wednesday, November 22, 2023

ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ವಿಜಯದಾಸರ ಆರಾಧನೆ

ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಶಾಖೆ ವತಿಯಿಂದ ಬುಧವಾರ ಸುಳಾದಿದಾಸರೆಂದೇ ಖ್ಯಾತರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು. ಆರಾಧನಾ ಮಹೋತ್ಸವ ಅಂಗವಾಗಿ ನಗರಸಂಕೀರ್ತನೆ ನಡೆಯಿತು.
    ಭದ್ರಾವತಿ : ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಶಾಖೆ ವತಿಯಿಂದ ಬುಧವಾರ ಸುಳಾದಿದಾಸರೆಂದೇ ಖ್ಯಾತರಾದ ಶ್ರೀ ವಿಜಯದಾಸರ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
    ಆರಾಧನಾ ಮಹೋತ್ಸವ ಅಂಗವಾಗಿ ನಗರಸಂಕೀರ್ತನೆ ನಡೆಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪಂಡಿತ್ ಮೃತ್ತಿಕಾ ಗುರುರಾಜಾಚಾರ್ ಅವರಿಂದ ವಿಜಯದಾಸರ ಕೃತಿಗಳ ಕುರಿತು ಪ್ರವಚನ ಜರುಗಿತು.  
    ಮಠದಲ್ಲಿರುವ ಬೃಂದಾವನಗಳಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಅಖಿಲ ಭಾರತ ಮಾಧ್ವ ಮಹಾ ಮಂಡಳಿ ತಾಲೂಕು ಅಧ್ಯಕ್ಷ ಜಯತೀರ್ಥ, ಪ್ರಮುಖರಾದ ವೆಂಕಟೇಶ ರಾವ್, ಗೋಪಾಲಾಚಾರ್, ಶ್ರೀನಿವಾಸಚಾರ್, ರಮಾಕಾಂತ್, ಕಲ್ಲಾಪುರ ರಾಮಚಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ : ಹಿಮೋಗ್ಲೋಬಿನ್ ತಪಾಸಣೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಭದ್ರಾವತಿ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಅಂಗವಾಗಿ  ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ: ೬ ತಿಂಗಳ ಮಗುವಿನಿಂದ ಹಿಡಿದು ಹದಿಹರೆಯದವರು, ಗರ್ಭಿಣಿ, ಬಾಣಂತಿ ಸೇರಿದಂತೆ ಎಲ್ಲರನ್ನೂ ರಕ್ತಹೀನತೆಯಿಂದ ಮುಕ್ತಗೊಳಿಸುವುದು ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಯೋಜನೆ ಗುರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್ ಹೇಳಿದರು.
    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ತಾಲೂಕು ಆರೋಗ್ಯ ಇಲಾಖೆ ವತಿಯಿಂದ ನ್ಯೂಟೌನ್ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ರಕ್ತಹೀನತೆ ಮುಕ್ತ ಪೌಷ್ಠಿಕ ಕರ್ನಾಟಕ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಹಿಮೋಗ್ಲೋಬಿನ್ ತಪಾಸಣಾ ಶಿಬಿರದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
    ರಕ್ತಹೀನತೆ ಕುರಿತು ಜಾಗೃತಿ ಮೂಡಿಸುವುದು, ಆಹಾರ ಸೇವನೆ ಕುರಿತು ಆರೋಗ್ಯ ಶಿಕ್ಷಣ ನೀಡುವುದು ಹಾಗು ಚಿಕಿತ್ಸೆ ನೀಡಿ ತಡೆಗಟ್ಟುವುದು ಶಿಬಿರದ ಉದ್ದೇಶವಾಗಿದೆ. ಎಲ್ಲರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು.  
    ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಶಿಬಿರ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಿ.ಎಫ್ ಕುಟ್ರಿ ಅಧ್ಯಕ್ಷತೆ ವಹಿಸಿದ್ದರು.   ವೇದಿಕೆಯಲ್ಲಿ ನಗರಸಭೆ ಸದಸ್ಯ ಕಾಂತರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಅಂಬೇಡ್ಕರ್ ಜಾನಪದ ತಂಡದಿಂದ ಜಾಗೃತಿ ಗೀತೆಗಳನ್ನು ಹಾಡಲಾಯಿತು. ವೈದ್ಯ ಡಾ. ದತ್ತಾತ್ರೇಯ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಬಾಯಿ ನಿರೂಪಿಸಿದರು. ಆನಂದ ಮೂರ್ತಿ ವಂದಿಸಿದರು.

ಭದ್ರಾವತಿ-ಲಕ್ಕವಳ್ಳಿ ಸರ್ಕಾರಿ ಬಸ್ ಸಂಚಾರಕ್ಕೆ ಚಾಲನೆ

ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಎಚ್ ಶ್ರೀನಿವಾಸ್‌ರವರ ಪ್ರಯತ್ನದ ಫಲವಾಗಿ ಭದ್ರಾವತಿ ಮತ್ತು ಲಕ್ಕವಳ್ಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೂತನವಾಗಿ ಸರ್ಕಾರಿ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
    ಭದ್ರಾವತಿ: ಶಾಸಕರಾದ ಬಿ.ಕೆ ಸಂಗಮೇಶ್ವರ್ ಮತ್ತು ಜಿ.ಎಚ್ ಶ್ರೀನಿವಾಸ್‌ರವರ ಪ್ರಯತ್ನದ ಫಲವಾಗಿ ಭದ್ರಾವತಿ ಮತ್ತು ಲಕ್ಕವಳ್ಳಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನೂತನವಾಗಿ ಸರ್ಕಾರಿ ಬಸ್ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
    ನಗರದ ಹೊಸಸೇತುವೆ ರಸ್ತೆಯಲ್ಲಿರುವ ಕೆಎಸ್‌ಆರ್‌ಟಿಸಿ ಬಸ್ ಘಟಕದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಶೃತಿ ಸಿ. ವಸಂತಕುಮಾರ್ ಕೆ.ಜಿ ಅವರು ಹಸಿರು ಟೇಪ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.
    ಪ್ರಮುಖರು ಮಾತನಾಡಿ, ಈ ಮಾರ್ಗದಲ್ಲಿ ಸರ್ಕಾರಿ ಬಸ್ ಸಂಚಾರಕ್ಕೆ ಬಹಳ ದಿನಗಳಿಂದ ಹೆಚ್ಚಿನ ಬೇಡಿಕೆ ಇದೆ. ಇದನ್ನು ಅರಿತು ಇದೀಗ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರಿದರು.
    ನಗರಸಭೆ ಸದಸ್ಯರಾದ ಬಿ.ಕೆ ಮೋಹನ್, ಕೆ. ಸುದೀಪ್‌ಕುಮಾರ್, ಕಾಂತರಾಜ್, ಲತಾ ಚಂದ್ರಶೇಖರ್, ಟಿಪ್ಪುಸುಲ್ತಾನ್, ಮುಖಂಡರಾದ ಬಿ.ಕೆ ಶಿವಕುಮಾರ್, ಕೃಷ್ಣನಾಯ್ಕ  ಹಾಗು ಕೆಎಸ್‌ಆರ್‌ಟಿಸಿ ಬಸ್ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.